ಆರೋಗ್ಯದ ವಿಷಯದಲ್ಲೂ ವೈಯಕ್ತಿಕ ದಾಳಿ ಬೇಕೆ? ಸೋನಿಯಾ ಕುರಿತು ಸಿಟಿ ರವಿ ಟ್ವೀಟ್ ಹುಟ್ಟುಹಾಕಿರುವ ವಿವಾದ, ಖಾಸಗಿ ವಸತಿ ಶಾಲೆಗೆ ಆರೋಗ್ಯ ಇಲಾಖೆ ಅನುಮತಿ ಅಗತ್ಯ: ಸಚಿವ ಆಂಜನೇಯ, ವಿಜಯ್ ಮಲ್ಯ ಸಾಲ ಚೌಕಾಶಿ

ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ನಡೆಸಲಾದ ಇ-ಆರೋಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ನಗರಾಭಿವೃದ್ಧಿ ಹಾಗೂ ವಕ್ಫ್ ಸಚಿವ ರೋಶನ್ ಬೇಗ್, ಬಿಬಿಎಂಪಿ ಮೇಯರ್ ಪದ್ಮಾವತಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್.

ಡಿಜಿಟಲ್ ಕನ್ನಡ ಟೀಮ್:

ಸೋನಿಯಾ ಕುರಿತು ಸಿಟಿ ರವಿ

ವಿದೇಶಿ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿಯವರ ಚಿಕಿತ್ಸೆಯ ವಿಷಯದಲ್ಲಿ ಬಿಜೆಪಿಯ ಸಿ ಟಿ ರವಿ ಮಾಡಿರುವ ಟ್ವೀಟುಗಳೀಗ ವಿವಾದಕ್ಕೆ ಗುರಿಯಾಗಿವೆ. ಸಿಟಿ ರವಿ ತಮ್ಮ ಸರಣಿ ಟ್ವೀಟುಗಳಲ್ಲಿ ಹೀಗೆಲ್ಲ ಹೇಳಿದ್ದಾರೆ…

– ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿರುವುದು ಚಿಕಿತ್ಸೆಗೋ ಅಥವಾ ಈಗಿರುವ ಖಾತೆಗಳಿಂದ ಹಣವನ್ನು ಸುರಕ್ಷಿತ ಜಾಗಕ್ಕೆ ವರ್ಗಾಯಿಸುವುದಕ್ಕೋ ಅಂತ ಆಶ್ಚರ್ಯವಾಗುತ್ತಿದೆ.

– ಆರು ದಶಕಗಳ ಕಾಲ ಭಾರತವನ್ನು ಆಳಿದ ಗಾಂಧಿಗಳು ಸೋನಿಯಾ ಗಾಂಧಿಗೆ ಚಿಕಿತ್ಸೆ ಕೊಡಬಹುದಾದ ಮಟ್ಟದಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸದಿರುವುದು ನಾಚಿಕೆಗೇಡು.

– ಅದೇಕೆ ರಾಹುಲ್ ಗಾಂಧಿ ತಮ್ಮ ತಾಯಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಬಾರದು? ಕರ್ನಾಟಕದ ಮುಖ್ಯಮಂತ್ರಿಗಳು ಖಂಡಿತ ಅವರ ಕ್ಷೇಮ ನೋಡಿಕೊಳ್ಳುತ್ತಿದ್ದರು.

ಈ ಎಲ್ಲ ಟ್ವೀಟುಗಳಿಗೆ ಕರ್ನಾಟಕ ಕಾಂಗ್ರೆಸ್ ‘ಬಿಜೆಪಿಯ ಕೊಳಕು ಮನಸ್ಥಿತಿಗೆ ಇದು ದೊಡ್ಡ ನಿದರ್ಶನ’ ಎಂದು ಹರಿಹಾಯ್ದಿದೆ.

‘ವಿದೇಶಕ್ಕೆ ಹೋಗಲೇ ಬಾರದಾ? ಚಿಕಿತ್ಸೆಗೆ ವಿದೇಶಕ್ಕೆ ಹೋದರೆ ತಪ್ಪೇನು? ಬಿಜೆಪಿಯವರು ಅತ್ಯಂತ ಬೇಜವಾಬ್ದಾರಿ ಮನುಷ್ಯರು’ ಎಂದು ಪ್ರತಿಕ್ರಿಯಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಧಾನಪರಿಷತ್ ಸದಸ್ಯ ರಿಜ್ವಾನ್ ಆರ್ಷದ್ ಹೇಳಿಕೆ ನೀಡಿ, ಈ ಹಿಂದೆ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಮಗೆ ಮಾಡಿದ ಸಹಾಯವನ್ನು ವಾಜಪೇಯಿ ನೆನಪಿಸಿಕೊಂಡಿರುವುದನ್ನು ಗಮನಿಸಿದ್ದರೆ ರವಿ ಇಂತಹ ಮಾತುಗಳನ್ನು ಆಡುತ್ತಿರಲಿಲ್ಲ. ಆರೋಗ್ಯದ ವಿಷಯದಲ್ಲಿ ಒಬ್ಬರು ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ಹೀಗಿತ್ತು-  ‘ವೈಯಕ್ತಿಕ ವಿಚಾರಗಳನ್ನು ಪ್ರಶ್ನೆ ಮಾಡೋದು ಹೇಸಿಗೆ ತರುವ ವಿಚಾರ. ಇದು ಪ್ರಚಾರದ ಗಿಮಿಕ್ ಅನ್ನಿಸುತ್ತದೆ.  ಇಂತಹ ಚರ್ಚೆಗಳು ಸಾರ್ವಜನಿಕ ಜೀವನದಲ್ಲಿ ಆಗಬಾರದು. ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಸರ್ಜರಿ ಮಾಡೋಕೆ ವಿದೇಶಿ ವೈದ್ಯರು ಬಂದಿದ್ದರು. ಯಾಕೆ ನಮ್ಮದೇಶದಲ್ಲಿ ವೈದ್ಯರು ಇರಲಿಲ್ಲವೇ? ಮಹಿಳೆಯರ ಬಗ್ಗೆ ಗೌರವವಿದೆ ಎನ್ನುತ್ತ ಜೈ ಶ್ರೀರಾಮ್,  ಭಾರತ್ ಮಾತಾಕಿ ಜೈ ಎನ್ನುವವರ ಮುಖವಾಡ ಈಗ ಗೊತ್ತಾಗಿದೆ’

ಖಾಸಗಿ ವಸತಿ ಶಾಲೆಗಳಿಗೆ ಆರೋಗ್ಯ ಇಲಾಖೆ ಅನುಮತಿ ಅಗತ್ಯ

ಇನ್ನುಮುಂದೆ ಖಾಸಗಿ ವಸತಿ ಶಾಲೆ ನಡೆಸುವವರು ಕಡ್ಡಾಯವಾಗಿ ಆರೋಗ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ ಎಂದಿದ್ದಾರೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ. ಇದೇ ವೇಳೆ ಬಡತನ ರೇಖೆಗಿಂತ ಕೆಳಗಿನ ಕುಟುಂಬ ವರ್ಗದಲ್ಲಿನ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಶಿಕ್ಷಣಕ್ಕಾಗಿ ಪಡೆದಿರುವ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಖಾಸಗಿ ಶವಸತಿ ಶಾಲೆ ನಡೆಸುವವರು ಆರೋಗ್ಯ ಇಲಾಖೆ ಅನುಮತಿ ಪಡೆಯುವ ಜೊತೆಗೆ ಅಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸದಿದ್ದರೆ, ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು. ಇದೇ ಮಾದರಿಯಲ್ಲಿ ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆಗಳಲ್ಲೂ ಜಾರಿಗೊಳಿಸಲಾಗುವುದು. ಇನ್ನು ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಮಾಡಿರುವ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದರು.

ಒಂದೇ ಬಾರಿ ಸಾಲ ಮರುಪಾವತಿಗೆ ಮಲ್ಯ ಮನವಿ

ಸಾವಿರಾರು ಕೋಟಿ ಸಾಲ ಮಾಡಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಈಗ ಮತ್ತೆ ಸದ್ದು ಮಾಡಿದ್ದಾರೆ. ತಮ್ಮ ಟ್ವಿಟರ್ ನಲ್ಲಿ ಸಾಲ ಮರುಪಾವತಿ ಮಾಡುವ ಇಂಗಿತ ವ್ಯಕ್ತಪಡಿಸಿರುವ ವಿಜಯ್ ಮಲ್ಯ, ಒಂದು ಬಾರಿಗೆ ಸಾಲ ಮರುಪಾವತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿರುವುದು ಹೀಗೆ…

‘ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದು ಬಾರಿ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕೆಲವು ಯೋಜನೆಗಳನ್ನು ಹೊಂದಿವೆ. ನೂರಾರು ಸಾಲಗಳು ಇದೇ ರೀತಿ ಪಾವತಿಯಾಗಿವೆ. ಆದರೆ ಈ ಅವಕಾಶವನ್ನು ನಮಗೆ ಮಾತ್ರ ನೀಡುತ್ತಿಲ್ಲವೇಕೆ? ಈ ಕುರಿತ ನನ್ನ ಮನವಿಯನ್ನು ಪರಿಗಣಿಸದೇ ತಿರಸ್ಕರಿಸಲಾಗಿದೆ. ಈ ಕುರಿತು ಮಾತುಕತೆ ನಡೆಸಿ ಸಾಲ ಮರುಪಾವತಿ ಮಾಡಲು ನಾನು ಸಿದ್ಧ. ಈ ವಿಚಾರದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಬ್ಯಾಂಕುಗಳು ನಮ್ಮ ಜತೆ ಕೂತು ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಮಾಡಲು ನೆರವಾಗಬೇಕು. ನಾವು ಇದಕ್ಕೆ ಸಿದ್ಧ.’

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ರಾಜ್ಯದಲ್ಲಿ ಬಸ್ಸು, ಲಾರಿ ಹಾಗೂ ಭಾರೀ ವಾಹನಗಳಿಗೆ ಮಾತ್ರ ವೇಗ ನಿಯಂತ್ರಕ ಅಳವಡಿಕೆ ಮಾಡಲು ಆದೇಶ ನೀಡಲಾಗಿದೆ. ಉಳಿದ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
  • ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕಗಳಿಗೆ ಇನ್ನು ಆರು ತಿಂಗಳಲ್ಲಿ ಟೆಲಿಮಿಡಿಷನ್ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲೂ ಟೆಲಿಮೆಡಿಷನ್ ಸೌಲಭ್ಯ ಕಲ್ಪಿಸುವುದರಿಂದ ಬಡ ರೋಗಿಗಳ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಇಂದಿಲ್ಲಿ ಹೇಳಿದ್ದಾರೆ.
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಟೀಕೆ ಮಾಡಿದ್ದಾರೆ. ‘ಮಾಜಿ ಮುಖ್ಯಮಂತ್ರಿ ಎಂದರೆ ಗೌರವ ಇರಬೇಕು. ಅವರ ಮಾತುಗಳಿಗೆ ಬೆಲೆ ಇರಬೇಕು. ಏನು ಹೇಳುತ್ತಿದ್ದೇನೆ ಎಂಬ ಭಯ ಇರಬೇಕು. ಆದರೆ ಯಡಿಯೂರಪ್ಪ ಅವರ ಮಾತುಗಳು ಕಾಮಿಡಿ ಶೋ ತರ ಆಗಿದೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಬೇಕು ಎನ್ನಿಸುವುದಿಲ್ಲ. ದಿನಕ್ಕೊಂದು ಆರೋಪ, ಹಗುರವಾದ ಹೇಳಿಕೆಗಳು ನಗೆಪಾಟಲಿಗೆ ಈಡಾಗಿವೆ’ ಎಂದಿದ್ದಾರೆ.

Leave a Reply