ಬಾಲಿವುಡ್ಡಿನ ಪುರುಷ ಅಹಂಕಾರಕ್ಕೆ ಕಂಗನಾ ರಣಾವತ್ ಸವಾಲ್!

author-ssreedhra-murthyಸಾಲು ಸಾಲು ರಾಷ್ಟ್ರಪ್ರಶಸ್ತಿಗಳನ್ನು ಪಡೆದಂತೇ ಸೂಪರ್ ಹಿಟ್ ಸಿನಿಮಾಗಳನ್ನೂ ನೀಡಿದ ಕಂಗನಾ ರಣಾವತ್ ಬಾಲಿವುಡ್ ನಾಯಕಿಯರ ಚಿತ್ರಣದಲ್ಲಿನ ಸ್ಟಿರಿಯೋ ಟೈಪ್ ಮಾದರಿಯನ್ನು ಮುರಿದವರು ಎನ್ನುವ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅದೇ ರೀತಿಯಲ್ಲಿ ತಮ್ಮ ವಿವಾದಗಳಿಂದಲೂ ಪ್ರಸಿದ್ದರಾಗಿದ್ದಾರೆ. ಇತ್ತೀಚಿಗೆ ಕರಣ್ ಜೋಹರ್ ಅವರ ಜೊತೆ ತಿಕ್ಕಾಟಕ್ಕೆ ಇಳಿದಿದ್ದಾರೆ ‘ಕಾಫಿ ವಿತ್ ಕರಣ್‍’ನಲ್ಲಿ ಕರಣ್ ಅವರನ್ನು ‘ಫ್ಲಾಗ್ ಬೇರರ್ ಆಫ್ ನೆಪೋಟಿಸಮ್’ ಎಂದು ಕರೆದಿದ್ದಲ್ಲದೆ ‘ಒಂದೊಮ್ಮೆ ಆತ್ಮ ಚರಿತ್ರೆ ಬರೆದರೆ ಬಾಲಿವುಡ್‍’ನ ಶೋಷಣೆಯ ಚಿತ್ರಣವನ್ನು ಬಿಚ್ಚಿಡುವೆ ಎಂದೂ ಹೇಳಿದ್ದಾರೆ. ಅವರ ಈ ಮಾತುಗಳ ಹಿಂದೆ ವಾಸ್ತವ ಎಷ್ಟಿದೆ, ಇದೂ ಒಂದು ಪ್ರಚಾರದ ತಂತ್ರವೇ? ಬಹು ನಿರೀಕ್ಷೆಯ ‘ರಂಗೂನ್’ ಸೋತಿದ್ದರ ಹತಾಶೆಯೇ ಹೀಗೆ ಬಾಲಿವುಡ್‍ನಲ್ಲಿ ಚರ್ಚೆಗಳು ನಡೆಯತ್ತಿವೆ. ಕರಣ್ ತಮ್ಮ ‘ಅನ್ ಸೂಟಬಲ್ ಬಾಯ್‍’ ಪುಸ್ತಕದಲ್ಲಿ ‘ಎಲ್ಲಾ ನಟಿಯರೂ ಪ್ರೆಸೆನ್ಸ್ ನಿಂದ ಮುಖ್ಯವಾದರೆ ಕಂಗನಾ ಅಬ್ಸೆನ್ಸ್ ನಿಂದ ಮುಖ್ಯವಾಗುತ್ತಾರೆ’ ಎಂದು ಗೇಲಿ ಮಾಡಿದ್ದರು ಅದಕ್ಕೆ ಕಂಗನಾ ಸೇಡು ತೀರಿಸಿಕೊಂಡಿದ್ದಾರೆಯೇ ಎನ್ನುವ ವಿಶ್ಲೇಷಣೆಯೂ ಕೇಳಿ ಬಂದಿದೆ.

ಈ ಎಲ್ಲಾ ನೆಲೆಗಳನ್ನು ಗಮನಿಸುವ ಮೊದಲು ಕಂಗನಾ ಬದುಕಿನ ಕೆಲವು ಬಿರುಕುಗಳನ್ನು ಗಮನಿಸಬೇಕು. ಕಂಗನಾ ಬೆಳೆದಿದ್ದು ಒಟ್ಟು ಕುಟುಂಬದಲ್ಲಿ. ಬಾಲ್ಯದಿಂದಲೂ ಗಂಡು-ಹೆಣ್ಣು ಮಕ್ಕಳ ನಡುವೆ ಹಿರಿಯರು ತೋರಿಸುತ್ತಿದ್ದ ಬೇಧ ಅವರನ್ನು ಕುಪಿತರನ್ನಾಗಿಸುತ್ತಿತ್ತು. ತಂದೆ ತಮ್ಮನಿಗೆ  ಪ್ಲಾಸ್ಟಿಕ್ ಗನ್ ಮತ್ತು ತನಗೆ ಗೊಂಬೆ ತಂದು ಕೊಟ್ಟಾಗ ಪ್ರತಿಭಟಿಸಿ ಎರಡು ದಿನಗಳ ಕಾಲ ಉಪವಾಸ ಮಾಡಿದ್ದರು. ವೈದ್ಯಳಾಗಬೇಕು ಎಂದು ಪ್ರಯತ್ನಿಸಿದಾಗ ಹುಡುಗಿಯರಿಗೇಕೆ ಓದು ಎನ್ನುವ ತಾತ್ಸರದ ಮಾತುಗಳು ಬಂದವು. ಹದಿನಾಲ್ಕನೇ ವಯಸ್ಸಿಗೇ ಮನೆ ಬಿಟ್ಟರು. ಬದುಕಿಗಾಗಿ ಅಸ್ಮಿತಾ ರಂಗ ತಂಡವನ್ನು ಸೇರಿದರು. ಮರಾಠಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕದಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಇದೇ ವೇಳೆಗೆ ಇನ್ನೊಂದು ಕಹಿ ಘಟನೆ ನಡೆಯಿತು ಅವರ ಅಕ್ಕ ರಂಗೋಲಿ ಆಸಿಡ್ ದಾಳಿಗೆ ಒಳಗಾದರು. ಕಂಗನಾ ಇನ್ನಷ್ಟು ಪುರುಷ ದ್ವೇಷಿಯಾದರು.

‘ಐ ಲವ್ ಮೈ ಬಾಸ್’ ಚಿತ್ರದಲ್ಲಿ ಅಭಿನಯಿಸಿದಾಗ ಅವರಿಗೆ ಹದಿನೈದು ವರ್ಷ. ‘ಗ್ಯಾಂಗ್ ಸ್ಟರ್’ ಅವರನ್ನು ಗಮನಿಸುವಂತೆ ಮಾಡಿದ ಚಿತ್ರ. ಈ ಚಿತ್ರದಲ್ಲೂ ಅವರು ಮೊದಲ ಆಯ್ಕೆಯಾಗಿರಲಿಲ್ಲ. ಮೊದಲ ಅಡಿಷನ್‍ನಲ್ಲಿ ಅವರನ್ನು ತಿರಸ್ಕರಿಸಲಾಗಿತ್ತು ಚಿತ್ರಂಗದಾ ಸೇನ್ ಈ ಪಾತ್ರಕ್ಕೆ ಆಯ್ಕೆಯಾಗಿದ್ದರು. ಅವರು ಬೇರೆ ಚಿತ್ರದಲ್ಲಿ ಬ್ಯೂಸಿಯಾದ ಕಾರಣ ಮತ್ತೆ ಕಂಗನಾ ಪಾಲಿಗೆ ಪಾತ್ರ ಬಂದಿತು ಅಲ್ಲೂ ದೊರಕಿದ್ದು ಅಲ್ಕೋಹಾಲಿಕ್ ಮಹಿಳೆಯ ಸಂಕೀರ್ಣ ಪಾತ್ರ. ಗೆಲ್ಲಲೇಬೇಕು ಎನ್ನುವ ಹಠ ಕಂಗನಾ ಅವರಿಂದ ಉತ್ತಮ ಅಭಿನಯ ಹೊರತಂದಿತ್ತು. ಫಿಲಂ ಫೇರ್ ಪುರಸ್ಕಾರ ಕೂಡ ಅವರಿಗೆ ಈ ಪಾತ್ರಕ್ಕಾಗಿ ದೊರಕಿತ್ತು. ಆದರೆ ಅವರಿಗೆ ಬಾಲಿವುಡ್‍ನಲ್ಲಿ ಸ್ವಾಗತವೇನು ದೊರಕಲಿಲ್ಲ. ಹಲವು ಕುಹಕದ ಮಾತುಗಳೇ ದೊರಕಿದ್ದು. ಅವರ ಇಂಗ್ಲೀಷ್ ಉಚ್ಚಾರಣೆ ಕೂಡ ಈ ಹಂತದಲ್ಲಿ ಲೇವಡಿ ವಸ್ತುವಾಗಿತ್ತು. ಮಧು ಭಂಡಾರ್ಕರ್ ಅವರ ‘ಫ್ಯಾಷನ್’ ಚಿತ್ರ ಕಂಗನಾ ಅವರ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಅವರಿಗೆ ಈ ಚಿತ್ರ ಉತ್ತಮ ಪೋಷಕ ನಟಿ ರಾಷ್ಟ್ರಪ್ರಶಸ್ತಿಯನ್ನು ಕೂಡ ತಂದು ಕೊಟ್ಟಿತು. ಈ ಹಂತದಲ್ಲಿ ಅವರಿಗೆ ಬೆಂಬಲವಾಗಿ ನಿಂತವರು  ಆದಿತ್ಯ ಪಂಚೋಲಿ. ಮುಂದೆ ಪಂಚೋಲಿ ವಿರುದ್ದವೇ ಕಂಗನಾ ಪೋಲೀಸ್ ಕೇಸ್ ದಾಖಲಿಸಿದರು. ಇಲ್ಲಿಯೇ ಅವರ ದಿಟ್ಟತನದ ಮೊದಲ ಅನುಭವ ಬಾಲಿವುಡ್‍ಗೆ ಆಗಿದ್ದು. ಕಂಗನಾ ಬಳಿ ತನ್ನ ಹಣವಿದೆ ಎಂದು ಪಂಚೋಲಿ ಅಹವಾಲು ಮಂಡಿಸಿದಾಗ ಅದೇನು ಬಿಟ್ಟಿಯಾಗಿ ಬಂದ ಹಣವಲ್ಲ ಎಂದು ಕಂಗನಾ ಸಿಡಿದಿದ್ದರು. ಅವರ ಬದುಕಿನ ನೋವು ಕಹಿ ಬೆಂಬಿಡದೆ ಇಲ್ಲೆಲ್ಲ ಹಿಂಬಾಲಸುತ್ತಲೇ ಇತ್ತು. ಮುಂದೆ ‘ರಾಜ್ ದ ಮಿಸ್ರ್ರಿ ಮ್ಯಾನ್‍’ನ ನಾಯಕ ಸುಮನ್ ಜೊತೆ ಅವರ ಹೆಸರು ತಳಕು ಹಾಕಿಕೊಂಡಿತು. ಇಲ್ಲಿಯೂ ಕಂಗನಾ ವಿವಾದದ ಮೂಲಕವೇ ಸಂಬಂಧವನ್ನು ಮುರಿದುಕೊಂಡರು.

ಒಂದು ಕಡೆ ವಿವಾದಗಳು ಬೆನ್ನಟ್ಟಿದ್ದರೆ ಇನ್ನೊಂದು ಕಡೆ ಕಂಗನಾ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಿದ್ದರು. ತನು ವೆಡ್ಸ್ ಮನು, ಕ್ರಿಷ್-3, ಕ್ವೀನ್ ಹೀಗೆ ಸಾಲು ಸಾಲು ಚಿತ್ರಗಳು ಗೆದ್ದರೆ ಎರಡು ರಾಷ್ಟ್ರಪ್ರಶಸ್ತಿಗಳೂ ದೊರಕಿದವು. ವೈದ್ಯ ನಿಕೋಲಸ್ ಜೊತೆಗೆ ಒಂದಿಷ್ಟು ದಿನ ಅವರ ಓಡಾಟ ನಡೆದಿತ್ತು. ನಂತರ ಕ್ರಿಷ್-3 ನಾಯಕ ಹೃತಿಕ್ ರೋಷನ್ ಜೊತೆ ಅವರ ಹೆಸರು ತಳಕು ಹಾಕಿಕೊಂಡಿತು. ಕೊನೆಗೆ ಹೃತಿಕ್, ಕಂಗನಾ ವಿರುದ್ದವೇ ಸೈಬರ್ ಕೇಸ್ ದಾಖಲಿಸಿದರು. ಅದನ್ನು ದಿಟ್ಟವಾಗಿಯೇ ಕಂಗನಾ ಎದುರಿಸಿದರು. ಇಬ್ಬರ ವಾಗ್ವಾದಗಳು ಪತ್ರಿಕೆಗಳಿಗೆ ರಂಜನೀಯ ಆಹಾರವಾದವು. ಈಗ ಕರಣ್ ಜೊತೆ ಕಂಗನಾ ವಾದಕ್ಕಿಳಿದಿದ್ದಾರೆ. ಕರಣ್ ಅಂತೂ ‘ಕಂಗನಾ ಪದೇ ಪದೇ ಬಲಿಪಶು ಎನ್ನುವ ವುಮೆನ್ ಕಾರ್ಡ್ ಬಳಸುತ್ತಿದ್ದಾರೆ. ಅಷ್ಟು ಕಷ್ಟವಾಗಿದ್ದರೆ ಬಾಲಿವುಡ್‍ ಬಿಟ್ಟು ಹೋಗಲಿ’ ಎನ್ನುವ ಉಪದೇಶವನ್ನು ಮಾಡಿದ್ದಾರೆ. ಹೀಗೆ ಹೇಳಲು ಅವರೇನು ಬಾಲಿವುಡ್‍ನ ಅಧಿಪತಿಯೇ ಎನ್ನುವ ಮಾತಿನಿಂದ ಹಿಡಿದು ‘ಏ ದಿಲ್ ಹೇ ಮುಷ್ಕಿಲ್‍’ ಬಿಡುಗಡೆ ಸಂದರ್ಭದಲ್ಲಿ ರಾಜ್ ಠಾಕ್ರೆಯವರ ಬೆದರಿಕೆಗೆ ಮಣಿದಾಗ ಈ ಸ್ವಾಭಿಮಾನವನ್ನು ಕರಣ್ ಎಲ್ಲಿ ಅಡ ಇಟ್ಟಿದ್ದರು ಎನ್ನುವ ಪ್ರಶ್ನೆಯೂ ಬಂದಿದೆ. ಕಂಗನ್ ಅವರೇ ‘ವುಮೆನ್ ಕಾರ್ಡ್ ಎನ್ನುವುದು ಸಿಟಿ ಬಸ್‍ನಲ್ಲಿ ಸೀಟ್ ಹಿಡಿಯಲು ನೆರವಾಗಬಹುದು’ ಅಂದು ಇದರ ತೀವ್ರತೆಯನ್ನು ಹೆಚ್ಚಿಸಿದ್ದಾರೆ. ಕಂಗನಾ ಅವರ ವಾದವನ್ನು  ಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಎಲ್ಲೋ ಅವರು ಬಾಲಿವುಡ್ ನ ಪುರುಷ ಅಹಂಕಾರಕ್ಕೆ ನಿರಂತರವಾಗಿ ಪ್ರಶ್ನೆಗಳನ್ನು ಹಾಕುತ್ತಾ ಬರುತ್ತಿರುವುದುನ್ನು ಮೆಚ್ಚಿಕೊಳ್ಳದೆ ಇರಲಾಗುವುದಿಲ್ಲ. ಬಾಲಿವುಡ್ ನ ಆತ್ಮಸಾಕ್ಷಿಯನ್ನು ಅವರು ಈ ಮೂಲಕ ಕೆಣಕತ್ತಿದ್ದಾರೆ ಎನ್ನುವುದು ಗಮನಿಸಲೇಬೇಕಾದ ವಾಸ್ತವ.

Leave a Reply