ಎರಡನೇ ಹೆಣ್ಣು ಮಗುವನ್ನು ನಿರೀಕ್ಷಿಸುತ್ತಿರುವ ಫೇಸ್ಬುಕ್ ಯಜಮಾನ ಜುಕರ್ ಬರ್ಗ್ ಟಿಪ್ಪಣಿ ಮನ ಮುಟ್ಟಿರುವುದೇಕೆ ಗೊತ್ತೆ?

ತಮ್ಮ ಫೇಸ್ ಬುಕ್ ಪೇಜಿನಲ್ಲಿ ಸಹೋದರಿಯರ ಜತೆಗಿನ ಫೋಟೊ ಹಂಚಿಕೊಂಡಿರುವ ಜುಕರ್ ಬರ್ಗ್…

ಡಿಜಿಟಲ್ ಕನ್ನಡ ಟೀಮ್:

ಫೇಸ್ ಬುಕ್ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಗ್ ಈಗ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಜುಕರ್ ಬರ್ಗ್ ಈಗ ಮತ್ತೊಂದು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿರುವುದು. ಈಗಾಗಲೇ 15 ತಿಂಗಳ ಮ್ಯಾಕ್ಸ್ ಎಂಬ ಹೆಣ್ಣು ಮಗು ಹೊಂದಿರುವ ಜುಕರ್ ಬರ್ಗ್ ಹಾಗೂ ಪ್ರಿಸಿಲ್ಲಾ ದಂಪತಿ ಈಗ ಎರಡನೇ ಮಗುವಿನ ಆಗಮನಕ್ಕಾಗಿ ಕಾತುರಗೊಂಡಿದ್ದಾರೆ.

ನಿನ್ನೆ ರಾತ್ರಿ ಈ ಸಂತೋಷದ ವಿಷಯವನ್ನು ತಮ್ಮ ಫೇಸ್ ಬುಕ್ ಮೂಲಕ ಹಂಚಿಕೊಂಡಿರುವ ಜುಕರ್ ಬರ್ಗ್ ತಮಗೆ ಮತ್ತೊಂದು ಹೆಣ್ಣು ಮಗುಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಮೂರು ಬಾರಿ ಗರ್ಭಪಾತವಾದ ನಂತರ ಈ ದಂಪತಿಗಳು ಮ್ಯಾಕ್ಸ್ ಗೆ ಜನ್ಮ ನೀಡಿದ್ದರು. ಮೊದಲನೆಯ ಮಗು ಹೆಣ್ಣಾಗಿದ್ದರೂ ಜುಕರ್ ಬರ್ಗ್ ದಂಪತಿಗೆ ಎರಡನೇಯ ಮಗುವೂ ಹೆಣ್ಣಾಗಬೇಕೆಂಬ ಆಸೆ ಇದೆ. ಈ ಬಗ್ಗೆ ಜುಕರ್ ಬರ್ಗ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅವರಿಗೆ ಇಷ್ಟು ಪ್ರೀತಿ ಇರುವುದು ಏಕೆ ಎಂಬುದು ಅವರ ಮಾತುಗಳೇ ಬಿಂಬಿಸುತ್ತವೆ.

ಹಾಗಾದರೆ ಜುಕರ್ ಬರ್ಗ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಏನು ಬರೆದುಕೊಂಡಿದ್ದಾರೆ ನೋಡೋಣ ಬನ್ನಿ…

‘ಪ್ರಿಸಿಲ್ಲಾ ಹಾಗೂ ನಾನು ಮತ್ತೊಂದು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ಅಂಶವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇವೆ.’

‘ನಮ್ಮ ಮೊದಲ ಮಗು ಮ್ಯಾಕ್ಸ್ ಳನ್ನು ಪಡೆಯುವ ಮುನ್ನ ನಾವು ಅನುಭವಿಸಿದ ನೋವು ನಿಜಕ್ಕೂ ಬೇಸರ ತಂದಿತ್ತು. ನಾವು ಮತ್ತೆ ಮಗುವಿಗೆ ಜನ್ಮ ನೀಡಿ ತಂದೆ-ತಾಯಿಯಾಗುವ ಭರವಸೆ ಕಳೆದುಕೊಂಡಿದ್ದೆವು. ಪ್ರಿಸಿಲ್ಲಾ ಮತ್ತೆ ಗರ್ಭಧರಿಸಿರುವ ಸುದ್ದಿ ತಿಳಿದಾಗ ಮಗು ಆರೋಗ್ಯವಾಗಿ ಬೆಳೆಯಲಿ ಎಂಬುದು ನಮ್ಮ ಮೊದಲ ಪ್ರಾರ್ಥನೆಯಾಗಿತ್ತು. ನಂತರ ಹೆಣ್ಣು ಮಗುವಾಗಬೇಕು ಎಂಬ ಆಸೆ ಹುಟ್ಟಿಕೊಂಡಿತು. ನಮ್ಮ ಜೀವನದಲ್ಲಿ ಸಹೋದರಿಯನ್ನು ಹೊಂದುವುದೇ ನಮಗೆ ಸಿಗುವ ದೊಡ್ಡ ಉಡುಗೊರೆ. ನನ್ನ ಮಗಳು ಮ್ಯಾಕ್ಸ್ ಗೂ ಒಬ್ಬ ಸಹೋದರಿ ಬರಲಿ ಎಂಬುದು ನಮ್ಮ ಬಯಕೆ.’

‘ನಾನು ಚಿಕ್ಕ ವಯಸ್ಸಿನಲ್ಲಿ ಬೆಳೆದಿದ್ದು, ಮೂವರು ಸಹೋದರಿಯರ ಜತೆ. ನನ್ನ ಸಹೋದರಿಯರು ಧೈರ್ಯವಂತ ಹೆಣ್ಣುಮಕ್ಕಳು. ನನಗೆ ಜೀವನದ ಎಲ್ಲ ಪಾಠ ಕಲಿಸಿ ಬೆಳೆಸಿದವರು ಅವರೇ. ಅವರು ಕೇವಲ ಸಹೋದರಿಯಾಗಿರಲಿಲ್ಲ ಉತ್ತಮ ಸ್ನೇಹಿತೆಯಾಗಿದ್ದರು. ಪುಸ್ತಕ ಬರವಣಿಗೆ, ಸಂಗೀತ, ಕ್ರೀಡೆ, ಅಡುಗೆಯಂತಹ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜತೆಗೆ ನನಗೂ ಇತರರ ಜತೆ ಹೇಗೆ ಸ್ಪರ್ಧಿಸಬೇಕು ಎಂಬುದನ್ನು ಕಲಿಸಿದರು. ನನ್ನೊಂದಿಗೆ ಆನಂದದ ಕ್ಷಣಗಳನ್ನು ಕಳೆದರು.’

‘ಇನ್ನು ಪ್ರಿಸಿಲ್ಲಾ ಸಹ ಇಬ್ಬರು ಸಹೋದರಿಯೊಟ್ಟಿಗೆ ಬೆಳೆದವಳು. ಆಕೆಯ ಸಹೋದರಿಯರು ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕು, ಬೇರೆಯವರ ಬಗ್ಗೆ ಹೇಗೆ ಕಾಳಜಿ ವಹಿಸಬೇಕು, ಪರಿಶ್ರಮದ ಮಹತ್ವ ಹೀಗೆ ಹಲವು ವಿಷಯಗಳನ್ನು ಕಲಿಸಿದರು. ಅವರು ವೈದ್ಯಕೀಯ ಹಾಗೂ ವ್ಯವಹಾರ ವೃತ್ತಿಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದರೂ ಸಹೋದರಿಯರಾಗಿ ಬೆರೆತು ಸಾಕಷ್ಟು ಆನಂದದ ಕ್ಷಣಗಳನ್ನು ಅನುಭವಿಸಿದ್ದಾರೆ.’

‘ನಾವು ಇಂದು ಉತ್ತಮ ಮನುಷ್ಯರಾಗಿ ಬೆಳೆಯಲು ಕಾರಣ, ನಮ್ಮ ಜೀವನದಲ್ಲಿ ತಾಯಿ, ಅಕ್ಕ, ತಂಗಿ, ಸ್ನೇಹಿತೆಯರ ರೂಪದಲ್ಲಿ ಬರುವ ಧೈರ್ಯವಂತ ಮಹಿಳೆಯರು. ನಮ್ಮ ಮನೆಗೆ ಬರುತ್ತಿರುವ ಹೊಸ ಸದಸ್ಯನನ್ನು ಸ್ವಾಗತಿಸಲು ಕಾತುರಗೊಂಡಿದ್ದೇವೆ, ಈಕೆಯನ್ನು ಶಕ್ತಿಶಾಲಿ ಮಹಿಳೆಯಾಗಿ ಬೆಳೆಸಲು ನಮ್ಮಿಂದಾಗುವ ಎಲ್ಲಾ ಪ್ರಯತ್ನ ಹಾಕುತ್ತೇವೆ.’

ಮಹಿಳೆಯರ ಸಮಾನತೆ, ಸಬಲೀಕರಣ, ಏಳಿಗೆಯಂತಹ ವಿಷಯಗಳ ಕುರಿತು ಸಾಕಷ್ಟು ಚರ್ಚೆಯಾಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಜುಕರ್ ಬರ್ಗ್ ಅವರ ಈ ಮಾತುಗಳು ಹೆಣ್ಣಿನ ಮಹತ್ವವನ್ನು ಸಾರುತ್ತಿವೆ.

Leave a Reply