ಮದುವೆಯಾಗಿ 10 ವರ್ಷವಾದ್ರೂ ದೈಹಿಕ ಸಂಪರ್ಕ– ತಾಯ್ತನದ ಅವಕಾಶ ನೀಡದ ಗಂಡನಿಗೆ ಈಕೆ ಮಾಡಿದ್ದೇನು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಮದುವೆಯಾಗಿ 10 ವರ್ಷವಾದರೂ ದೈಹಿಕವಾಗಿ ಸಂಬಂಧ ಬೆಳೆಸಿಕೊಳ್ಳದೇ ತಾಯಿಯಾಗುವ ಅವಕಾಶವನ್ನೇ ನೀಡದದ ಪತಿಯ ವಿರುದ್ಧ ಸಿಟ್ಟಾದ ಮಹಿಳೆ ಆತನ ಮರ್ಮಾಂಗವನ್ನೇ ಕತ್ತರಿಸಿರುವ ಘಟನೆ ಘಾಜಿಯಾಬಾದಿನಲ್ಲಿ ನಡೆದಿದೆ.

ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು ಈಕೆಯನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ‘ಬುಲಂದಶಹರ್ ಮೂಲದ ಈ ದಂಪತಿಗಳು ಮದುವೆಯಾಗಿ 10 ವರ್ಷವಾಗಿದ್ದು, ಈವರೆಗೂ ಇವರಿಗೆ ಮಕ್ಕಳಾಗಿಲ್ಲ. ಕಳೆದ 8 ವರ್ಷಗಳಿಂದ ಇವರು ಗಾಜಿಯಾಬಾದಿನಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ಪೊಲೀಸರ ವಶದಲ್ಲಿರುವ ಈಕೆ ತನ್ನ ಈ ಕೃತ್ಯದ ಕುರಿತು ನೀಡಿರುವ ಹೇಳಿಕೆ ಹೀಗಿದೆ…

‘ನನ್ನ ಗಂಡ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಬೇಕಂತಲೇ ನನಗೆ ಮಕ್ಕಳು ಆಗಬಾರದು ಎಂಬ ಕಾರಣಕ್ಕೆ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದ. ತನ್ನ ಪುರುಷತ್ವದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ನನ್ನ ಗಂಡ, ಬೇರೆ ಮಹಿಳೆಯರ ಜತೆ ಮಕ್ಕಳನ್ನು ಹೊಂದುತ್ತೇನೆ ಹೊರತು ನಿನ್ನ ಜತೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ. ಇಂತಹ ಮೂದಲಿಕೆಯ ಮಾತುಗಳನ್ನು ಹಲವು ವರ್ಷಗಳಿಂದ ಸಹಿಸಿಕೊಂಡು ಬಂದೆ. 2006 ರಲ್ಲಿ ನಾವಿಬ್ಬರೂ ಮದುವೆಯಾದೆವು. ಅಲ್ಲಿಂದ ಇಲ್ಲಿಯವರೆಗೂ ನನ್ನ ಹಾಗೂ ನನ್ನ ಸಹೋದರಿಯನ್ನು ನಿಂದಿಸುತ್ತಲೇ ಇದ್ದ. ಆತ ನನ್ನನ್ನು ಏಕೆ ಅಷ್ಟರ ಮಟ್ಟಿಗೆ ದ್ವೇಷಿಸುತ್ತಿದ್ದ ಎಂಬುದು ಗೊತ್ತಿಲ್ಲ. ಆಗಾಗ್ಗೆ ನನ್ನನ್ನು ಬಿಟ್ಟು ಹೋಗು ಎಂದೂ ಪೀಡಿಸುತ್ತಿದ್ದ. ನಾವು ಮಕ್ಕಳು ಮಾಡಿಕೊಳ್ಳಬೇಕು ಎಂದು ಸಾಕಷ್ಟು ಬಾರಿ ಮನವೊಲಿಸುವ ಪ್ರಯತ್ನ ನಡೆಸಿದೆ. ಆದರೆ ಆತ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಳ್ಳಲು ಒಪ್ಪಲೇ ಇಲ್ಲ. ನನ್ನ ಸಂಬಂಧಿಕರು ನಿಮಗೆ ಮಕ್ಕಳಾಗಿಲ್ಲ ಏಕೆ? ಎಂದು ಕೇಳಿದಾಗ ಅವರಿಗೆ ಉತ್ತರಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇದೇ ವಿಷಯಕ್ಕಾಗಿ ನಾವು ಸಾಕಷ್ಟು ಬಾರಿ ಜಗಳ ಆಡಿದ್ದೆವು. ಬುಧವಾರ ರಾತ್ರಿ ಕೂಡ ಇದೇ ಕಾರಣಕ್ಕೆ ವಾಗ್ವಾದ ನಡೆದಿತ್ತು. ಇದರಿಂದ ಬೇಸರವಾಗಿ ಆತ ಸ್ನಾನದ ಕೋಣೆಯಿಂದ ಆಚೆ ಬಂದಾಗ ಅಡಿಗೆ ಮನೆಯಲ್ಲಿದ್ದ ಚಾಕುವಿನಿಂದ ದಾಳಿ ಮಾಡಿ ಈ ಕೃತ್ಯ ನಡೆಸಿದೆ. ತನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ ಗಂಡನಿಗೆ ಈ ರೀತಿಯಾಗಿ ಶಿಕ್ಷೆ ನೀಡದೆ ನನ್ನ ಮುಂದೆ ಬೇರೆ ಯಾವುದೇ ದಾರಿ ಇರಲಿಲ್ಲ. ನಾನು ಆತನಿಂದ ಸಾಕಷ್ಟು ನೋವು ಅನುಭವಿಸಿದ್ದು, ಈ ಕೃತ್ಯ ಮಾಡಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ.’

ಈ ಪ್ರಕರಣದಲ್ಲಿ ಈಕೆ ಕಾನೂನನ್ನು ತನ್ನ ಕೈಗೆ ತೆಗೆದುಕೊಂಡಿರುವುದು ತಪ್ಪೊ ಸರಿಯೋ ಎಂಬುದನ್ನು ನ್ಯಾಯಾಲಯದಲ್ಲಿ ತೀರ್ಮಾನವಾಗುತ್ತದೆ. ಆದರೆ, ತಾಯ್ತನವನ್ನು ಅನುಭವಿಸಬೇಕೆಂಬ ಆಸೆ ಪ್ರತಿಯೊಬ್ಬ ಹೆಣ್ಣಿನದು. ಆದರೆ ತನ್ನ ಜೀವನದ ಸಂಗಾತಿ ಈ ವಿಚಾರದಲ್ಲಿ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿದರೆ ಆಕೆ ಎಷ್ಟರ ಮಟ್ಟಿಗೆ ಕುಗ್ಗುತ್ತಾಳೆ ಎಂಬುದು ಈ ಮಹಿಳೆಯ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

1 COMMENT

Leave a Reply