ಪರ್ಯಾಯ ಶಕ್ತಿಯಾಗುವ ನಿರೀಕ್ಷೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ ಠುಸ್, ಮಣಿಪುರದ ಚುನಾವಣೆಯಲ್ಲಿ ಕೆಲಸಕ್ಕೆ ಬರಲಿಲ್ಲ ಶರ್ಮಿಳಾ ಉಕ್ಕಿನ ವರ್ಚಸ್ಸು

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟಗೊಂಡಿದೆ. ಈ ಬಾರಿ ಐದು ರಾಜ್ಯಗಳ ಪೈಕಿ ಪಂಜಾಬ್ ಹಾಗೂ ಗೋವಾದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಆಮ್ ಆದ್ಮಿ ಪಕ್ಷ ತ್ರಿಕೋನ ಸ್ಪರ್ಧೆ ಒಡ್ಡಲಿದೆ, ಆ ಮೂಲಕ ಎಎಪಿ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬೆಲ್ಲಾ ಚರ್ಚೆಯಾಗಿದ್ದವು. ಆದರೆ ಗೋವಾದಲ್ಲಿ ಪಕ್ಷಕ್ಕೆ ಖಾತೆಯನ್ನೇ ತೆರೆಯಲಾಗಲಿಲ್ಲ. ಪಂಜಾಬಿನಲ್ಲಿ ಎರಡನೇ ಸ್ಥಾನದಲ್ಲಿ ಬಂತು. ಆದರೆ ನಾಲ್ವರು ಸಂಸದರನ್ನು ಹೊಂದಿ, ಸೃಷ್ಟಿಸಿದ್ದ ಹವಾಕ್ಕೆ ಹೋಲಿಸಿದರೆ ಅದು ಗೆಲುವಿನ ಸಮೀಪ ಸುಳಿಯದಿರುವುದು ಹಿನ್ನಡೆಯೇ.

ಚುನಾವಣಾ ಸಮೀಕ್ಷೆಗಳ ಪ್ರಕಾರ ಎಎಪಿ ಪಕ್ಷ ಪಂಜಾಬಿನಲ್ಲಿ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಬಿಂಬಿತವಾಗಿತ್ತು. ಆದರೆ ಆಪ್ ನಾಯಕರು ಮಾತ್ರ ತಾವು 75ಕ್ಕೂ ಹೆಚ್ಚು ಸ್ಥಾನ ಪಡೆಯುವದಾಗಿ ಭವಿಷ್ಯ ನುಡಿಯುತ್ತಿದ್ದರು. ಚುನಾವಣಾ ಸಮೀಕ್ಷೆಯಲ್ಲಿ ಎಎಪಿ ಪಕ್ಷ ಬಹುಮತ ಪಡೆಯಲಿದೆ ಎಂಬ ಅಂಕಿಅಂಶಗಳು ಪ್ರಕಟವಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನವನ್ನು ಎಎಪಿ ಪಕ್ಷದಲ್ಲಿ ಯಾರು ಅಲಂಕರಿಸಬಹುದು ಎಂಬ ಚರ್ಚೆಗಳು ಆರಂಭವಾಗುವ ಮಟ್ಟಿಗೆ ಆಮ್ ಆದ್ಮಿ ಪಕ್ಷ ಹವಾ ಸೃಷ್ಟಿಸಿತ್ತು. ಆದರೆ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿ ಕಾಂಗ್ರೆಸ್ ಭರ್ಜರಿ ಜಯದೊಂದಿಗೆ ಅಧಿಕಾರ ಹಿಡಿಯುತ್ತಿದೆ. ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಎರಡನೇ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸವಾಲು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಇನ್ನು ಗೋವಾದಲ್ಲಿಯೂ ಎಎಪಿ ಪರಿಸ್ಥಿತಿ ಇದೇ ಆಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ 40 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳ ಫಲಿತಾಂಶಗಳ ಪ್ರಕಾರ ಬಿಜೆಪಿ 8, ಕಾಂಗ್ರೆಸ್ 11 ಹಾಗೂ ಇತರೆ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು. ಆದರೆ ಎಎಪಿ ಪಕ್ಷ ಒಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸದೇ ಪರದಾಡುತ್ತಿದೆ. ಆ ಮೂಲಕ ತನ್ನ ಖಾತೆಯನ್ನೇ ತೆರೆಯಲು ಸಾಧ್ಯವಾಗದೇ ಕಂಗೆಟ್ಟ ಪರಿಸ್ಥಿತಿಗೆ ಎಎಪಿ ಬಂದು ನಿಂತಿದೆ.

ಇನ್ನು ಮಣಿಪುರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಐರೋಮ್ ಶರ್ಮಿಳಾ ಮತ್ತೊಂದು ಪರ್ಯಾಯ ಶಕ್ತಿಯಾಗಿ ಬೆಳೆಯುವ ನಿರೀಕ್ಷೆ ಇತ್ತು. ಆದರೆ ಶರ್ಮಿಳಾ ಅವರು ತಮ್ಮ ಕ್ಷೇತ್ರ ಥೌಂಬಲ್ ನಲ್ಲೇ ಸೋಲನುಭವಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

ಈ ಬಾರಿಯ ಪಂಚರಾಜ್ಯ ಚುನಾವಣೆಯ ಬೆಳವಣಿಗೆಗಳೂ ಕೇವಲ ಆಡಳಿತ ವಿರೋಧಿ ಅಲೆಯನ್ನಷ್ಟೇ ಬಿಂಬಿಸುತ್ತಿಲ್ಲ, ಪರ್ಯಾಯ ಶಕ್ತಿ ಎಂದು ಬಿಂಬಿಸಿಕೊಂಡವರು ಸಹ ನೆಲಕಚ್ಚಿರುವುದಕ್ಕೆ ಸಾಕ್ಷಿಯಾಗಿದೆ.

Leave a Reply