ಪಂಚರಾಜ್ಯ ಫಲಿತಾಂಶದ ಚಿತ್ರಣ, ಉ.ಪ್ರ ಚುನಾವಣೆ ಫಲಿತಾಂಶಕ್ಕೆ ಸಿದ್ದರಾಮಯ್ಯ-ಯಡಿಯೂರಪ್ಪ-ದೇವೇಗೌಡ್ರ ಪ್ರತಿಕ್ರಿಯೆ ಏನು?, ಮತಯಂತ್ರದ ಮೇಲೆ ಮಾಯಾವತಿ ಆರೋಪ, ಛತ್ತೀಸಗಡದಲ್ಲಿ ನಕ್ಸಲರದಾಳಿಗೆ 12 ಯೋಧರು ಹುತಾತ್ಮ

ಏಪ್ರಿಲ್ 28ರಿಂದ ಮೂರು ದಿನಗಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಯವ ಪದಾರ್ಥಗಳು ಮತ್ತು ಸಿರಿಧಾನ್ಯ ವ್ಯಾಪಾರ ಮೇಳ ಆಯೋಜಿಸಲಾಗಿದ್ದು, ಇಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಮೇಳದ ಲೋಗೋ ಹಾಗೂ ಕೈಪಿಡಿ ಬಿಡುಗಡೆ ಮಾಡಿದರು.

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ನಾಯಕರ ಪ್ರತಿಕ್ರಿಯೆ

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಎಂದಿನಂತೆ ಬಿಜೆಪಿ ಹಿಂದೂ ಕಾರ್ಡ್ ಬಳಸಿ ಜಯ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾದಿಸಿದ್ದು, ಅಧಿಕಾರ ವಿರೋಧಿ ಅಲೆ ಹಾಗೂ ಮೋದಿ ಪ್ರಭಾವ ಸಾಬೀತಾಗಿದೆ ಎಂದು ದೇವೇಗೌಡರು ತಿಳಿಸಿದ್ದಾರೆ. ರಾಜ್ಯದ ನಾಯಕರು ಈ ಬಗ್ಗೆ ನೀಡಿರುವ ಹೇಳಿಕೆ ಹೀಗಿವೆ…

  • ಸಿದ್ದರಾಮಯ್ಯ: ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದೂ ಅಸ್ತ್ರ ಪ್ರಯೋಗ ಮಾಡಿ ಗೆಲುವು ಸಾಧಿಸಿದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಅಲ್ಲ. ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಕೆಲಸ ಮಾಡಿರುವುದೇ ಆದರೆ, ಪಂಜಾಬ್ ನಲ್ಲಿ ಆ ಅಲೆ ಏಕೆ ಕೆಲಸ ಮಾಡಿಲ್ಲ? ಪ್ರಜಾಪ್ರಭುತ್ವದಲ್ಲಿ ಸೋಲು ಗೆಲವು ಇದ್ದೇ ಇರುತ್ತದೆ. ಜನ ಕೊಟ್ಟಿರುವ ತೀರ್ಪು ಒಪ್ಪಬೇಕಾಗುತ್ತದೆ. ಈ ಐದು ರಾಜ್ಯಗಳ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದರೂ ಕರ್ನಾಟಕದಲ್ಲಿ ಈ ಪರಿಸ್ಥಿತಿ ಎದುರಾಗುವುದಿಲ್ಲ. 2018ರ ಚುನಾವಣೆಯಲ್ಲಿ ಗೆದ್ದು ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ.’
  • ಬಿ.ಎಸ್ ಯಡಿಯೂರಪ್ಪ: ’26 ವರ್ಷಗಳ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಉತ್ತರಾಖಂಡದಲ್ಲೂ ನಮಗೆ ಬಹುಮತ ಸಿಕ್ಕಿದೆ. ಈ ಎರಡು ರಾಜ್ಯದ ಜನರು ನೋಟು ಅಮಾನ್ಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಉದ್ದೇಶಕ್ಕೆ ಬೆಂಬಲ ನೀಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರ ಹೋರಾಟಕ್ಕೆ ಗೆಲವು ಸಿಕ್ಕಿದೆ. ದೇಶದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರ ಪರಿಣಾಮ ರಾಜ್ಯದ ಮೇಲೂ ಬೀರುತ್ತದೆ. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲೂ ನಾವು ಗೆಲ್ಲುತ್ತೇವೆ. ಹಣ ಬಲ, ಹೆಂಡದ ಬಲ, ಹೆಂಡದ ಬಲ, ತೋಳ್ಬಲದ ಮೂಲಕ ಗೆಲ್ಲುತ್ತೇವೆ ಎಂಬ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜನ ಪಾಠ ಕಲಿಸಲಿದ್ದಾರೆ.’
  • ಎಚ್.ಡಿ ದೇವೇಗೌಡ: ‘ದೇಶದ ಪಂಚ ರಾಜ್ಯ ಚುನಾವಣೆ ಫಲಿತಾಂಶ ಅಧಿಕಾರ ವಿರೋಧಿ ಅಲೆ ತೋರಿಸುತ್ತದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಏಕ ವ್ಯಕ್ತಿ ಪ್ರದರ್ಶನ ಕೆಲಸ ಮಾಡಿರುವುದನ್ನು ಸಾಬೀತುಪಡಿಸಿದೆ. ಮೋದಿ ಅವರು ಚುನಾವಣೆ ಪ್ರಚಾರದ ವೇಳೆ ಘೋಷಣೆ ಮಾಡಿದಂತೆ ರೈತರ ಸಾಲ ಮನ್ನಾ ಮಾಡಬೇಕು. ಮೋದಿ ಅವರು ನೀಡಿರುವ ಎಲ್ಲಾ ಆಶ್ವಾಸನೆ ಈಡೇರಿಸಿದರೆ 2019ರ ಲೋಕಸಭೆ ಚುನಾವಣೆಯಲ್ಲೂ ಅವರಿಗೆ ಅನುಕೂಲವಾಗಬಹುದು. ಈ ಫಲಿತಾಂಶದಿಂದ ಬಿಜೆಪಿ ರಾಷ್ಟ್ರೀಯ ನಾಯಕರು 2018ರ ರಾಜ್ಯ ವಿಧಾನ ಸಭೆಯಲ್ಲಿ ಅಧಿಕಾರಕ್ಕಾಗಿ ಸರ್ವ ಪ್ರಯತ್ನ ಮಾಡುತ್ತಾರೆ ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರನ್ನು ಆಕರ್ಷಿಸಲು ಯಾವ ಘೋಷಣೆ ಮಾಡುತ್ತಾರೋ ನೋಡೋಣ.’

ಸೋಲಿಗೆ ಮತಯಂತ್ರ ಕಾರಣ: ಮಾಯಾವತಿ

ಉತ್ತರ ಪ್ರದೇಶದಲ್ಲಿನ ಹೀನಾಯ ಸೋಲಿಗೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಮತಯಂತ್ರಗಳ ದೋಷ ಕಾರಣ ಎಂದು ದೂರಿದ್ದಾರೆ. ‘ಭಾರತೀಯ ಜನತಾ ಪಾರ್ಟಿ ಎಲೆಕ್ಟಾನಿಕ್ ವೊಟಿಂಗ್ ಮಷಿನ್ ನಲ್ಲಿ ಮೋಸ ಮಾಡಿದ್ದು, ಹೆಚ್ಚು ಮತಗಳು ತಮಗೆ ಬರುವಂತೆ ಮಾಡಿಕೊಂಡಿದೆ. ರಾಜ್ಯದಲ್ಲಿನ ಈ ಫಲಿತಾಂಶ ನಿಜಕ್ಕೂ ಆಶ್ಚರ್ಯಕರ. ಮುಸ್ಲಿಂ ಪ್ರದೇಶಗಳಲ್ಲೂ ಬಿಜೆಪಿಗೆ ಬಹುಮತ ಬರಲು ಹೇಗೆ ಸಾಧ್ಯ? ಇದರಿಂದ ಮತಯಂತ್ರದ ಮೂಲಕ ಮತಗಳನ್ನು ತಮ್ಮತ್ತ ಪಡೆಯುವಂತೆ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದು, ದೂರು ದಾಖಲಿಸಿದ್ದಾರೆ.

ಫಲಿತಾಂಶ ಸಂಜೆ ಚಿತ್ರಣ

ಸಂಜೆ 5.30ರ ವರೆಗೆ ಸಿಕ್ಕ ಪಂಚರಾಜ್ಯ ಚುನಾವಣಾ ಫಲಿತಾಂಶದ ಅಂಕಿ ಅಂಶ ಹೀಗಿವೆ…

ಉತ್ತರ ಪ್ರದೇಶ  399/403

ಬಿಜೆಪಿ 320

ಎಸ್ಪಿ+ಕಾಂಗ್ರೆಸ್        54

ಬಿಎಸ್ಪಿ 19

ಇತರೆ  05

ಉತ್ತರಾಖಂಡ  69/70

ಬಿಜೆಪಿ 55

ಕಾಂಗ್ರೆಸ್      11

ಬಿಎಸ್ಪಿ 00

ಇತರೆ   02

ಪಂಜಾಬ್       116/117

ಅಕಾಲಿ+ಬಿಜೆಪಿ 18

ಕಾಂಗ್ರೆಸ್         76

ಎಎಪಿ  22

ಇತರೆ   00

ಗೋವಾ         39/40

ಬಿಜೆಪಿ  13

ಕಾಂಗ್ರೆಸ್         15

ಎಎಪಿ  00

ಇತರೆ   10

ಮಣಿಪುರ        57/60

ಕಾಂಗ್ರೆಸ್         24

ಬಿಜೆಪಿ  21

ಎನ್ಪಿಎಫ್          00

ಇತರೆ   12

ನಕ್ಸಲರ ಅಟ್ಟಹಾಸ 12 ಯೋಧರು ಹುತಾತ್ಮ

ಇಂದು ಇಡೀ ದೇಶವೇ ಪಂಚ ರಾಜ್ಯ ಚುನಾವಣೆಗಳ ಫಲಿತಾಂಶದಲ್ಲಿ ಮುಳುಗಿರುವ ಸಂದರ್ಭದಲ್ಲೇ ಛತ್ತೀಸಗಡದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಶನಿವಾರ ಬೆಳಗ್ಗೆ ಸುಕ್ಮಾ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲೆ ದಾಳಿ ಮಾಡಿದ್ದು, 12 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ.

ಛತ್ತೀಸಗಡ ರಾಜ್ಯ ಸರ್ಕಾರ ಡೊರ್ನಪಲ್ ಮತ್ತು ಜಗರ್ಗುಂಡ ಪ್ರದೇಶದವರೆಗೂ ಸುಮಾರು 58 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಕಾಮಗಾರಿಗೆ ಭದ್ರತೆ ನೀಡಲು ಸಿಆರ್ಪಿಎಫ್ ನ 219ನೇ ಬೆಟಾಲಿಯನ್ ಪಡೆಯ 120 ಯೋಧರು ನಿಯೋಜನೆಗೊಂಡಿದ್ದರು. ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಈ ಕಾಮಗಾರಿಗೆ ಭದ್ರತೆ ನೀಡಲು ಬಂದಿದ್ದ ಯೋಧರ ಮೇಲೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 12 ಮಂದಿ ಯೋಧರು ಹುತಾತ್ಮರಾದರೆ 3 ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

Leave a Reply