ಉತ್ತರ ಪ್ರದೇಶದಲ್ಲಿ ಪ್ರಜ್ವಲಿಸಿರುವುದು ‘ಮೋದಿ ಬ್ರಾಂಡ್’, 2019ರಲ್ಲಿ ನರೇಂದ್ರ ಪುನರಾಗಮನದ ಮೇಲೆ ಕವಿದ ಶಂಕೆ ಈಗ ಡೆಡ್!

ಡಿಜಿಟಲ್ ಕನ್ನಡ ಟೀಮ್:

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಮೋಘ ಗೆಲುವನ್ನು ಪ್ರಾರಂಭಿಕ ಟ್ರೆಂಡ್ ಗಳು ಸ್ಪಷ್ಟಪಡಿಸಿವೆ. ಈಗಿನ ಮುನ್ನಡೆಗಳು ಮುಂದುವರೆದಿದ್ದೇ ಆದರೆ ಬಿಜೆಪಿ 280ರಿಂದ 300 ಸ್ಥಾನಗಳನ್ನು ಗಳಿಸಿ ಬಹುಮತದ ಸರ್ಕಾರ ರಚಿಸುತ್ತದೆ.

ಅದೆಂಥದೇ ಪ್ರತಿಪಕ್ಷ ಒಗ್ಗಟ್ಟು, ವಿರೋಧಿ ಧ್ವನಿಗಳ ಸಮ್ಮೇಳನವಾಗಿದ್ದರೂ ‘ಮೋದಿ ಬ್ರಾಂಡ್’ ಒಂಚೂರೂ ಮುಕ್ಕಾಗಿಲ್ಲ ಎಂಬುದು ಉತ್ತರ ಪ್ರದೇಶದಂಥ ಜಾತಿ ಸಂಕೀರ್ಣ ವ್ಯಾಪಕ ಜನಸಂಖ್ಯೆಯ ರಾಜ್ಯದಲ್ಲಿ ಸಾಬೀತಾಗಿಹೋಗಿದೆ.

ಯಾವ ರಾಜ್ಯದಲ್ಲಿ 80ರ ಪೈಕಿ 73 ಸಂಸದರು ಬಿಜೆಪಿ ಮೈತ್ರಿಗೆ ಒಲಿದಿದ್ದರೋ, ಅದಾಗಿ ಎರಡೂವರೆ ವರ್ಷದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲೂ ಅದೇ ಮೆರಗು ಉಳಿಸಿಕೊಂಡಿದೆ. ಇಲ್ಲೂ ಕೆಲಸ ಮಾಡಿರುವುದು ಮೋದಿ ವರ್ಚಸ್ಸು ಹಾಗೂ ಅಮಿತ್ ಶಾ ನೇತೃತ್ವದ ಸಂಘಟನೆ ಶಕ್ತಿ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇನೂ ಬಿಜೆಪಿ ಬಿಂಬಿಸಿರಲಿಲ್ಲ. ಚುನಾವಣೆಯುದ್ದಕ್ಕೂ ಚರ್ಚೆಯಾಗಿದ್ದು ಭ್ರಷ್ಟಾಚಾರ, ನೋಚು ಅಮಾನ್ಯ, ವಿಕಾಸ. ನಿಜ, ಬೇಕಾದಲ್ಲೆಲ್ಲ ಕೋಮು ಧ್ರುವೀಕರಣವೂ ಇತ್ತು.

ಬಹುತೇಕ ಸಮೀಕ್ಷೆಗಳೆಲ್ಲ ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಎಂದಿದ್ದವಾದರೂ ಈ ಮಟ್ಟದ ಬಹುಮತವನ್ನು ನಿರೀಕ್ಷಿಸಿರಲಿಲ್ಲ. ಬಹುಮತಕ್ಕೆ ಸ್ವಲ್ಪ ಸೀಟು ಕಡಿಮೆಯಾಗಬಹುದು ಎಂಬುದೇ ಎಲ್ಲರ ಎಣಿಕೆಯಾಗಿತ್ತು, ಇಂಡಿಯಾ ಟುಡೆ- ಎಕ್ಸಿಸ್ ಸಮೀಕ್ಷೆ ಹೊರತುಪಡಿಸಿದರೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ಸಿನಲ್ಲಿ ಯಾವ ಸತ್ವವೂ ಇಲ್ಲ ಎಂಬುದು ಬಹುತೇಕರಿಗೆ ಯಾವತ್ತೋ ಗ್ರಹಿಕೆಗೆ ನಿಲುಕಿದ್ದ ವಿಷಯ. ಆದರೆ ಲ್ಯಾಪ್ಟಾಪು, ಗೋಮತಿ ನದಿ ಸ್ವಚ್ಛತೆ ಇತ್ಯಾದಿಗಳ ಇಮೇಜಿನಲ್ಲಿ ಅಖಿಲೇಶ್ ಸೃಷ್ಟಿಸಿದ್ದ ಯುವ ಹವಾ ಸಹ ಸತ್ವ ಇಲ್ಲದ್ದು ಅಂತಾಗಿಬಿಟ್ಟಿದೆ.

ಇನ್ನು, ಎಸ್ಸಿ-ಎಸ್ಟಿ ಮತವನ್ನು ಮುಖ್ಯವಾಗಿ ನಂಬಿಕೊಂಡಿದ್ದ ಮಾಯಾವತಿಯ ತೀವ್ರ ಕುಸಿತ ನೋಡಿದರೆ ಇನ್ನೊಂದು ಕತೆಯೂ ಬಿಚ್ಚಿಕೊಳ್ಳುತ್ತದೆ. ಪರಿಶಿಷ್ಟರು ಹಾಗೂ ಹಿಂದುಳಿದವರ ಪಾಲಿಗೆ ಸಹ ನರೇಂದ್ರ ಮೋದಿ ಭವಿಷ್ಯದ ಆಕರ್ಷಣೆಯಾಗಿದ್ದಾರೆ. ಹೀಗೆ ಉತ್ತರ ಪ್ರದೇಶದಲ್ಲಿ ಹಲವು ಜಾತಿ ವರ್ಗಗಳ ಸಮೀಕರಣಗಳ ನಡುವೆ ಯುವ ಮತದಾರರು, ಒಳ್ಳೆ ದಿನಗಳ ಕನಸಿನವರೆಲ್ಲರ ಮತಗಳನ್ನು ಮೋದಿ ಇಡಿ ಇಡಿಯಾಗಿ ಸೆಳೆದುಕೊಂಡಿರುವುದು ‘ಮೋದಿ ಬ್ರಾಂಡ್’ನ ಶಕ್ತಿ.

ಇದರ ಮುಖ್ಯಾಂಶವೇನೆಂದರೆ ಮೋದಿ ವಿರೋಧಿಗಳು, ತಥಾಕಥಿತ ಸೆಕ್ಯುಲರ್ ಶಕ್ತಿಗಳು ಏನೇ ಹಾರಾಡಿದರೂ 2019ರ ಕೇಂದ್ರದ ಫಲಿತಾಂಶ ಹೆಚ್ಚು- ಕಡಿಮೆ ಪಕ್ಕಾ ಆಗಿದೆ. ಪಂಜಾಬಿನಲ್ಲಿ ಕಾಂಗ್ರೆಸ್ ಮರಳಿರಬಹುದು, ಗೋವಾದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದಿರಬಹುದು, ಮಣಿಪುರದಲ್ಲೂ ಕಾಂಗ್ರೆಸ್ ಮುಂದಿದೆ ಹೌದು. ಆದರೆ ಇವ್ಯಾವುದೂ ರಾಷ್ಟ್ರೀಯ ಭಾವನೆಗೆ ಸ್ಪಷ್ಟ ಕನ್ನಡಿ ಆಗುವುದಿಲ್ಲ. ಏಕೆಂದರೆ ಇಲ್ಲಿ ಗೆದ್ದಿರುವ ಯಾರೂ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರೋಧಿ ವ್ಯಾಖ್ಯಾನ ಮುನ್ನಡೆಸುವಂಥವರಲ್ಲ. ಉದಾಹರಣೆಗೆ ಪಂಜಾಬಿನಲ್ಲಿ ಗೆದ್ದಿರುವ ಕಾಂಗ್ರೆಸ್ ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಲ್ಲಿಗೆ ಮಾತ್ರ ಪ್ರಸ್ತುತ. ಗೋವಾ ಮತ್ತು ಪಂಜಾಬುಗಳಲ್ಲಿ ಆಪ್ ಏನಾದರೂ ಗೆದ್ದಿದ್ದರೆ ಮೋದಿಗೆ ಅರವಿಂದ ಕೇಜ್ರಿವಾಲ್ ಅವರು ಪರ್ಯಾಯ ನಾಯಕರು ಎನ್ನಬಹುದಾಗಿತ್ತು. ಹಾಗಾಗಿಲ್ಲ.

ಫಲಿತಾಂಶದ ಟ್ರೆಂಡ್ ಹೊರಬರುತ್ತಿದ್ದಂತೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದು- ‘2019 ಮರೆತುಬಿಡಿ. ಪ್ರತಿಪಕ್ಷಗಳು ಸಿದ್ಧವಾಗಿರಬೇಕಿರುವುದು 2024ನೇ ಇಸ್ವಿಗೆ. ಏಕೆಂದರೆ ಈಗಂತೂ ಪೂರ್ತಿ ಭಾರತಕ್ಕೆ ಅನ್ವಯವಾಗುವಂತೆ ಮೋದಿಗೆ ಪರ್ಯಾಯ ನಾಯಕತ್ವ ಇಲ್ಲ.’

ನೋಟು ಅಮಾನ್ಯ, ಒಳ್ಳೆ ದಿನ ಸಾಕ್ಷಾತ್ಕಾರ ಆಗಿಲ್ಲವೆಂಬ ಭಾವನೆ… ಇವೆಲ್ಲದರಿಂದ 2019ರಲ್ಲಿ ಮೋದಿಗೆ ಸುಲಭ ಇಲ್ಲ ನೋಡಿ ಅಂತ ಹಲವರು ಅದಾಗಲೇ ವಿಶ್ಲೇಷಣೆ ಶುರು ಮಾಡಿದರು. ಈ ವಿಶ್ಲೇಷಣೆಗಳು ಇನ್ನೂ ಮುಂದುವರೆಯುತ್ತವಾದರೂ ಜನ ಅದರಲ್ಲಿ ಹೆಚ್ಚಿನ ಆಸಕ್ತಿ ಇರಿಸಿಕೊಳ್ಳುವುದಿಲ್ಲ.

ಬಿಜೆಪಿಯ ಸೆಮಿಫೈನಲ್ ವಿಜಯ 2019ರ ಅದರ ಫೈನಲ್ ಗೆಲುವನ್ನು ಹೆಚ್ಚು ಕಡಿಮೆ ಖಾತ್ರಿಗೊಳಿಸಿದೆ.

Leave a Reply