ಧ್ರುವಪ್ರದೇಶಗಳಲ್ಲಿ ಪ್ರಕೃತಿಯ ರಂಗಿನಾಟ-ಮನಸೂರೆಗೊಳ್ಳುವ ನೋಟ-ಅರೋರ

 

author-ananthramuಆಕಾಶದಲ್ಲಿ ಕಾಮನಬಿಲ್ಲನ್ನು ಕಂಡಾಗ ಜನಸಾಮಾನ್ಯರೂ ಕವಿಭಾವ ತಳೆಯುತ್ತಾರೆ. ಚಂದ್ರನ ಸುತ್ತ ಬಿಳಿ ಬಳೆ ಗೋಚರಿಸಿದಾಗ ವಿಸ್ಮಯವೆನ್ನುವಂತೆ ನೋಡುತ್ತಾರೆ, ಗಾಢವಾಗಿ ಮಿಂಚು ಕೋರೈಸಿದಾಗ ನಮ್ಮ ಕಣ್ಣುಗಳು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ನಿಸರ್ಗದ ಈ ವಿದ್ಯಮಾನಗಳಿಗೆ ಹಿಂದೆ ಮನುಷ್ಯ ಹೆದರಿದ್ದ, ಈಗ ಅವೇ ಸಂಶೋಧನೆಯ ವಸ್ತುಗಳಾಗುತ್ತಿವೆ.

ಭೂಮಿಯ ದಕ್ಷಿಣ ತುದಿಯಲ್ಲಿ ದಕ್ಷಿಣ ಧ್ರುವವಿದೆ; ಇದಿರುವುದು ಅಂಟಾರ್ಕ್‍ಟಿಕ ಖಂಡದಲ್ಲಿ. ಭೂಮಿ ತನ್ನ ಅಕ್ಷದ ಮೇಲೆ ಗಿರಿಕಿ ಹೊಡೆಯುತ್ತದೆನ್ನುವುದು ಈಗ ವಿಸ್ಮಯವಲ್ಲ. ಆ ಅಕ್ಷ ಎನ್ನುವುದು ಕೂಡ ಊಹಾರೇಖೆಯೇ. ಅಂಥ ಅಕ್ಷದ ದಕ್ಷಿಣ ತುದಿಯಲ್ಲಿ ಈಗ ಬೋರ್ಡ್ ಹಾಕಿದ್ದಾರೆ `ಭೌಗೋಳಿಕ ದಕ್ಷಿಣ ಧ್ರುವ’ ಎಂದು. ಇದನ್ನು ಮುಟ್ಟಲು ಜಗತ್ತೇ ಪೈಪೋಟಿಗಿಳಿದಿತ್ತು. ಸಾಹಸಕ್ಕೆ ಇಂದಿಗೂ ಪಂಥಾಹ್ವಾನ ನೀಡುತ್ತದೆ. ಮೂರು ಕಿಲೋ ಮೀಟರ್ ದಪ್ಪದ ಮಂಜುಗಡ್ಡೆಯ ಸ್ತರಗಳು ಇಲ್ಲಿ ಹಾಸಿಗೆಯಂತೆ ಒಂದರ ಮೇಲೊಂದು ಪೇರಿಕೆಯಾಗಿವೆ. ನಿಜವಾದ ನೆಲ ಕಾಣುವುದು ತೀರ ದುಸ್ತರ. ರಷ್ಯದ ಸಂಶೋಧನ ಕೇಂದ್ರ `ವೋಸ್ತಾಕ್’ ಎಂಬಲ್ಲಿ ಮೈನಸ್ 89 ಡಿಗ್ರಿ ಶೈತ್ಯ ದಾಖಲಾಗಿತ್ತು. ಮೊದಲ ಮಹಾಯುದ್ಧ ಪ್ರಾರಂಭವಾಗುವುದಕ್ಕೆ ಮುನ್ನ ಭೌಗೋಳಿಕ ದಕ್ಷಿಣ ಧ್ರುವ ತಲಪಲು ಭಾರಿ ಪೈಪೋಟಿ ಮಾಡಿದ್ದು ಬ್ರಿಟನ್ ಮತ್ತು ನಾರ್ವೆ. ಇಂಗ್ಲೆಂಡಿನ ರಾಬರ್ಟ್ ಫಾಲ್ಕನ್ ಸ್ಕಾಟ್, ತನ್ನ ತಂಡದೊಡನೆ ತಲಪಿದಾಗ ಅದು ಜೀವನ್ಮರಣದ ಪ್ರಶ್ನೆಯಾಗಿತ್ತು. ನಾಯಿ ಗಾಡಿಗಳು, ಕುದುರೆಗಳು, ಮರಗಟ್ಟುವ ಶೈತ್ಯ, ಪರ್ವತ-ಕಣಿವೆಗಳ ಏರಿಳಿತ ಎಲ್ಲ ಭಯಂಕರ ಸನ್ನಿವೇಶಗಳನ್ನು ಎದುರಿಸಿ ದಕ್ಷಿಣ ಧ್ರುವ ಮೆಟ್ಟಿದಾಗ (1913 ಜನವರಿ) ಅವನಿಗೆ ಉತ್ಸಾಹದ ಬದಲು ನಿರಾಶೆ ಕಾದಿತ್ತು. ನಾರ್ವೆಯ ಅಮುಂಡ್‍ಸನ್ ಒಂದು ತಿಂಗಳು ಮೊದಲೇ ತಲಪಿ ಅವನ ದೇಶದ ರಾಷ್ಟ್ರಧ್ವಜವನ್ನು ಹಾರಿಸಿ, ಯಾವ ಸಾವುನೋವು ಮಾಡಿಕೊಳ್ಳದೆ ತಂಡ ಹಿಂತಿರುಗಿತ್ತು. ಫಾಲ್ಕನ್ ಸ್ಕಾಟ್ ಹಿಂತಿರುಗುವಾಗ ತಾನೇ ತಂದಿದ್ದ ಕುದುರೆಗಳನ್ನು ಗುಂಡಿಕ್ಕಿ ಕೊಲ್ಲಬೇಕಾಯಿತು. ಹಸಿವು, ಚಳಿ ತಂಡವನ್ನು ಬಾಧಿಸಿದವು. ಕಾಲುಗಳು ಹಿಮದ ಕಡಿತಕ್ಕೆ ಬಲಿಯಾದವು. ಈ ಎಲ್ಲ ಯಾತನೆಗಳನ್ನು ಡೈರಿಯಲ್ಲಿ ಬರೆದಿಟ್ಟು ಸತ್ತ. ಈಗ ಅಮುಂಡ್‍ಸನ್-ಸ್ಕಾಟ್ ಹೆಸರಿನ ಸಂಶೋಧನ ಕೇಂದ್ರವನ್ನು ಅಮೆರಿಕ ದಕ್ಷಿಣ ಧ್ರುವಭಾಗದಲ್ಲಿ ನಿರ್ವಹಿಸುತ್ತಿದೆ. 57 ರಾಷ್ಟ್ರಗಳು ಅಂಟಾರ್ಕ್‍ಟಿಕ ಒಪ್ಪಂದಕ್ಕೆ ಸಹಿ ಹಾಕಿ, ಆ ಖಂಡ ವಿಜ್ಞಾನಕ್ಕಷ್ಟೇ ಸೀಮಿತವಾಗಿರಬೇಕೆಂದು ಘೋಷಿಸಿವೆ. ಇದರಲ್ಲಿ ಭಾರತವೂ ಒಂದು.

ನ್ಯಾಷನಲ್ ಸೈನ್ಸ್ ಫೌಂಡೇಶನ್, ಅಮೆರಿಕದ ಅಂಟಾರ್ಕ್‍ಟಿಕ ಯೋಜನೆಯನ್ನು ನಿರ್ವಹಿಸುತ್ತಿದೆ. ಭವ್ಯವಾದ ಈ ಸಂಶೋಧನ ಕೇಂದ್ರದಲ್ಲಿ ಎಲ್ಲ ಅನುಕೂಲತೆಗಳೂ ಇವೆ. ಆಹಾರ, ಮನೋರಂಜನೆಗಾಗಿ ಟಿ.ವಿ, ಪವರ್ ಹೌಸ್, ಲೈಬ್ರರಿ, ಒಳಾಂಗಣ ಆಟದ ಮೈದಾನ ಇನ್ನೂ ಏನೆಲ್ಲ. ಇಡೀ ಸಂಶೋಧನ ಕೇಂದ್ರ ನೆಲೆಯಾಗಿರುವುದು ಚಲಿಸುವ ಹಿಮದ ಸ್ತರದ ಮೇಲೆ. ಪ್ರತಿವರ್ಷವೂ ಸುಮಾರು ಹತ್ತು ಮೀಟರಿನಷ್ಟು ಇಡೀ ಸಂಶೋಧನ ಕೇಂದ್ರವೇ ಜಾರಿಹೋಗುತ್ತಿದೆ. ಮತ್ತೆ ಮತ್ತೆ ದುರಸ್ತಿಮಾಡಬೇಕು. ಒಮ್ಮೆ ಮೂರು ಮಂದಿ ಏಕಕಾಲಕ್ಕೆ ಸಂಶೋಧನೆ ಮಾಡಲು ಅನುಕೂಲವಿದೆ. ವೈಜ್ಞಾನಿಕ ಉಪಕರಣಗಳಿವೆ. ಈ ಪೈಕಿ ಬಹು ದೊಡ್ಡ ದೂರದರ್ಶಕವೂ ಒಂದು. ಅಂಟಾರ್ಕ್‍ಟಿಕದ ಬಾನು ತುಂಬ ನಿಚ್ಚಳ, ಮಾಲಿನ್ಯವಾದುದಲ್ಲ. ವಿಶ್ವದ ಹಲವು ವಿದ್ಯಮಾನಗಳನ್ನು ಕುರಿತು ಉದಾಹರಣೆಗೆ ಅಗೋಚರ ದ್ರವ್ಯ, ಅಗೋಚರ ಶಕ್ತಿ(Dark energy: ದೇವರು ಎಂದು ತಪ್ಪಾಗಿ ಓದಬೇಡಿ) ಸಂಶೋಧನೆಗೆ ಇಲ್ಲಿ ಪ್ರಾಮುಖ್ಯ. ಆದರೆ ಅಂಟಾರ್ಕ್‍ಟಿಕಕ್ಕೆ ಸಂಶೋಧನೆಗೆಂದು ಹೋದವರಿಗೆ ನಿಸರ್ಗದ ಇನ್ನೊಂದು ವಿದ್ಯಮಾನವೂ ಪುಲಕಗೊಳಿಸುತ್ತದೆ. ಅದು ದಕ್ಷಿಣ ಧ್ರುವ ಪ್ರಭೆ (Aurora Australis). ಇದರ ಸಂಗಾತಿ ಉತ್ತರ ಧ್ರುವದ ಮೇಲೆ ಕಾಣುವ ಪ್ರಭೆ (Aurora Borealis). ಈ ಹೆಸರು ಕೊಟ್ಟದ್ದು ಇಟಲಿಯ ಗೆಲಿಲಿಯೋ ಗೆಲಿಲಿ (1619ರಲ್ಲಿ).

ದಕ್ಷಿಣ ಧ್ರುವ ಪ್ರಭೆ ಇರುಳಿನಲ್ಲಿ ಅತ್ಯಂತ ಸೌಂದರ್ಯ ಕೊಡುವ ಇಡೀ ಬಾನಿಗೆ ರಂಗು ಚೆಲ್ಲಿರುವಂತೆ ಕಾಣುವ ಮೋಹಕ ದೃಶ್ಯ. ಹೆಚ್ಚಿನ ಪಾಲು ಹಸುರು ಪರದೆ ಹಾಕಿರುವಂತೆ ಆಕಾಶ ಕಾಣುತ್ತದೆ. ಪ್ರತಿವರ್ಷವೂ ಅತ್ಯಂತ ಆಸ್ಥೆಯಿಂದ ಸಂಶೋಧಕರು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಅಮುಂಡ್‍ಸನ್-ಸ್ಕಾಟ್ ಶಿಬಿರ ದಕ್ಷಿಣ ಧ್ರುವದ ಬಳಿಯೇ ಇರುವುದರಿಂದ ಉಳಿದ ಕೇಂದ್ರಗಳಿಗಿಂತ ಧ್ರುವಪ್ರಭೆಯ ಆಕರ್ಷಣೆ ಇಲ್ಲಿ ಹೆಚ್ಚು. ಭೂಮಧ್ಯ ರೇಖೆಯಲ್ಲಿ ಧ್ರುವಪ್ರಭೆ ಕಾಣುವುದಿಲ್ಲ. ನಿಸರ್ಗ ಧ್ರುವಪ್ರದೇಶಗಳನ್ನೇ ಆರಿಸಿಕೊಂಡಿದೆ. ಇದಕ್ಕೊಂದು ಕಾರಣವುಂಟು. ಭೂಗರ್ಭದಲ್ಲಿ ಹುಟ್ಟುವ ಭೂಕಾಂತಕ್ಷೇತ್ರ (magnetic field). ಭೂಮಿಯ ಮೇಲೂ ಕೊಡೆ ಹಿಡಿದಂತೆ ಹಲವು ಸಾವಿರ ಕಿಲೋ ಮೀಟರ್ ಹಬ್ಬಿದೆ. ಸೂರ್ಯನಿಂದ ಹೊರಹೊಮ್ಮುವ ಆವಿಷ್ಟ ಕಣಗಳು (Charged particles) ಈ ಕಾಂತಕೊಡೆಯ ಮೇಲೆ ಬಿದ್ದಂತೆ ಅವು ಉರುಳಿಹೋಗುತ್ತವೆ. ಮುಖ್ಯವಾಗಿ ಆವಿಷ್ಟ ಕಣಗಳು ಬೇರೆ ಏನೂ ಅಲ್ಲ-ಎಲೆಕ್ಟ್ರಾನು ಮತ್ತು ಪ್ರೋಟಾನು. ವಾಯುಗೋಳದಲ್ಲಿರುವ ಅನಿಲಗಳ ಮೇಲೆ ಅವು ವರ್ತಿಸಿದಾಗ (ಆಕ್ಸಿಜನ್, ನೈಟ್ರೋಜನ್) ರಂಗುರಂಗಿನ ಧ್ರುವಪ್ರಭೆ ಉಂಟಾಗುತ್ತದೆ. ಸಾಮಾನ್ಯವಾಗಿ ಅರೋರ ಎಂದು ಕರೆಯುವುದುಂಟು. ಹಸಿರಲ್ಲದೆ ಬೇರೆ ಬೇರೆ ರಂಗು ಮೂಡಬಹುದು. ಇಡೀ ಆಗಸದಲ್ಲಿ ಹಸಿರು ಪರದೆಯಂತೆ ಕಂಡರೆ, ಆವಿಷ್ಟ ಕಣಗಳು ಆಕ್ಸಿಜನ್ನನ್ನು ಉದ್ರೇಕಿಸಿವೆ ಎಂದರ್ಥ. ನೋಡಲು ಧ್ರುವಪ್ರಭೆ ನೆಲವನ್ನೇ ತಬ್ಬಿದೆ ಎನಿಸಿದರೂ ವಾಸ್ತವವಾಗಿ ಧ್ರುವಗಳ ಮೇಲೆ 90 ಕಿಲೋ ಮೀಟರ್ ಎತ್ತರದಲ್ಲಿ ಪಸರಿಸಿರುತ್ತವೆ.

magneto-sphere

ಒಂದುವೇಳೆ ನಮಗೆ ರಕ್ಷಣಾಗೋಳವಿಲ್ಲದಿದ್ದರೆ ನೇರವಾಗಿ ಜೀವಕೋಟಿಯನ್ನು ಈ ಆವಿಷ್ಟ ಕಣಗಳು ಬಾಧಿಸುತ್ತಿದ್ದವು, ಅಂತಿಮವಾಗಿ ಹೊಸಕಿ ಹಾಕುತ್ತಿದ್ದವು. ಚಂದ್ರನಲ್ಲಿ ವಾಯುಗೋಳ ಇಲ್ಲದಿರುವುದರಿಂದಲೇ ಗಗನಯಾನಿಗಳು ಈ ಕಣಗಳಿಂದ ರಕ್ಷಣೆ ಪಡೆಯಲು ಸ್ಪೇಸ್ ಸೂಟ್-ಹೆಲ್ಮೆಟ್ ಹಾಕಲೇಬೇಕು. ಮಂಗಳ ಗ್ರಹಕ್ಕೆ ಯಾನಮಾಡುವ ಗಗನಯಾನಿಗಳಿಗೆ ಈ ಕಣಗಳು ಎರಗಿ ಮುಂದೆ ಅವರು ರಕ್ತಕ್ಯಾನ್ಸರ್‍ಗೂ ಬಲಿಯಾಗಬಹುದೆಂದು ಈ ತಿಂಗಳೇ ಪ್ರಮುಖ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳು ಎಚ್ಚರಿಸಿವೆ. ಇನ್ನೊಂದೆಡೆ ಕಳೆದ 200 ವರ್ಷಗಳಿಂದ ಭೂಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ ಎಂಬ ಆತಂಕಕಾರಿ ವರದಿಗಳೂ ಬರುತ್ತಿವೆ. ಭೂಮಿಯಷ್ಟೇ ಅಲ್ಲ, ಗುರು ಮತ್ತು ಶನಿ ಗ್ರಹಗಳ ಧ್ರುವಪ್ರದೇಶಗಳಲ್ಲೂ ಭೂಮಿಗಿಂತಲೂ ಹೆಚ್ಚು ತೀವ್ರವಾದ ಧ್ರುವಪ್ರಭೆಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಮನುಷ್ಯ ನೇರವಾಗಿ ನೋಡಲಾಗದಿದ್ದರೂ `ಹಬಲ್ ವ್ಯೋಮ ದೂರದರ್ಶಕ’ ನಿಚ್ಚಳವಾಗಿ ನೋಡಿ ಆ ದೃಶ್ಯಗಳನ್ನು ರವಾನಿಸಿದೆ.

Leave a Reply