ಗೋವಾ, ಮಣಿಪುರಗಳಲ್ಲೂ ಬಿಜೆಪಿ ಸರ್ಕಾರ ರಚನೆ, ರಕ್ಷಣಾ ಖಾತೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಮರಳಿದ ಮನೋಹರ ಪಾರಿಕರ್

ಡಿಜಿಟಲ್ ಕನ್ನಡ ಟೀಮ್:

(ಅಪ್ಡೇಟ್ ಮಾಹಿತಿ- ಗೋವಾದಲ್ಲಿ ಸರ್ಕಾರ ರಚಿಸಲು ಸಜ್ಜಾಗಿರುವ ಮನೋಹರ ಪಾರಿಕರ್ ಅವರು ಸೋಮವಾರ ಕೇಂದ್ರ ರಕ್ಷಣಾ ಖಾತೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನಿನ್ನೆ ಪಾರಿಕರ್ ಅವರು ರಾಜ್ಯಪಾಲರಾದ ಮೃಿದುಲಾ ಸಿನ್ಹಾ ಅವರನ್ನು ಭೇಟಿ ಮಾಡಿ, ತಮಗೆ ಸರ್ಕಾರ ರಚಿಸಲು ಬಹುಮತವಿದ್ದು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಇಂದು ರಾಜ್ಯಪಾಲರು ಪಾರಿಕರ್ ಅವರ ಮನವಿಗೆ ಒಪ್ಪಿಗೆ ನೀಡಿದ್ದು, ನಾಳೆ ಸಂಜೆ 5 ಗಂಟೆಗೆ ಪಾರಿಕರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕಾರ ವಹಿಸಿಕೊಂಡ 15 ದಿನಗಳ ಒಳಗಾಗಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಮಣಿಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿರುವ ರಾಮ ಮಾಧವ್ ಸಹ ಬಿಜೆಪಿ ಮೈತ್ರಿ ಸರ್ಕಾರ ರಚನೆಗೊಳ್ಳುವುದು ಅಂತಿಮವಾಗಿದೆ ಎಂದಿದ್ದಾರೆ.)

ದೆಹಲಿಯಲ್ಲಿ ಬಿಜೆಪಿ ರೋಡ್ ಶೋಗೆ ಕಾರ್ಯಕರ್ತರು ಘಟಾನುಘಟಿಗಳೆಲ್ಲ  ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಖ್ಯ ಆಕರ್ಷಣೆಯಾಗಿರುವ ರೋಡ್ ಶೋ, ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಾಂಡದಲ್ಲಿ ಬಿಜೆಪಿ ವಿಜಯವನ್ನು ಸಂಭ್ರಮಿಸಲಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಮುಂತಾದವರೆಲ್ಲ ರೋಡ್ ಶೋಗೆ ಸೇರಿಕೊಳ್ಳುತ್ತಿದ್ದಾರೆ.

ಇತ್ತ ದೆಹಲಿಯಲ್ಲಿ ಈ ಸಂಭ್ರಮ ನಡೆಯುತ್ತಿರುವಾಗಲೇ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ವಿಫಲವಾಗಿರುವ ಎರಡು ರಾಜ್ಯಗಳಲ್ಲೂ ಅಧಿಕಾರವನ್ನು ಇದೇ ಹಿಡಿಯುವ ಲಕ್ಷಣ ಕಾಣಿಸುತ್ತಿದೆ. ಅವೆಂದರೆ ಗೋವಾ ಮತ್ತು ಮಣಿಪುರ.

ಗೋವಾದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಹೊಂದಿಲ್ಲ. 40 ಸಂಖ್ಯಾಬಲದ ಗೋವಾದಲ್ಲಿ ಬಿಜೆಪಿ 13 ಹಾಗೂ ಕಾಂಗ್ರೆಸ್ 17 ಸ್ಥಾನಗಳನ್ನು ಗಳಿಸಿದ್ದರೆ, ಇತರರ ಕೈಯಲ್ಲಿ 10 ಸ್ಥಾನಗಳಿವೆ. ಈ ಪೈಕಿ ಮಹಾರಾಷ್ಟ್ರ ಗೋಮಾಂತಕ ಪಾರ್ಟಿ ಈಗ ಹೇಳಿಕೆ ನೀಡಿರುವ ಪ್ರಕಾರ, ‘ಮನೋಹರ ಪಾರಿಕರ್ ಮುಖ್ಯಮಂತ್ರಿ ಆಗುವುದಾದರೆ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ.’ ಗೋವಾದಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಪರ್ಸೇಕರ್ ಸೋಲಿನ ನಂತರ ಖುದ್ದು ಗೋವಾ ಬಿಜೆಪಿಯಲ್ಲೇ ಹೀಗೊಂದು ಧ್ವನಿ ಎದ್ದಿದೆ. ಆದರೆ ರಕ್ಷಣಾ ಸಚಿವರಾಗಿರುವ ಪರಿಕರ್ ಅವರನ್ನು ಈ ಉದ್ದೇಶಕ್ಕಾಗಿ ಗೋವಾಕ್ಕೆ ಮರಳುವಂತೆ ಮಾಡಲಾಗುವುದೇ? ಗೋಮಾಂತಕ ಪಾರ್ಟಿ ಬೆಂಬಲದ ನಂತರವೂ 20ರ ಸಂಖ್ಯೆ ತಲುಪಲು ಬಿಜೆಪಿಗೆ ಗೋವಾ ಪಾರ್ವರ್ಡ್ ಪಾರ್ಟಿ ಮತ್ತು ಸ್ವಂತಂತ್ರ ಅಭ್ಯರ್ಥಿಗಳ ಬೆಂಬಲ ಬೇಕಾಗುತ್ತದೆ. ಆದರೆ ಶನಿವಾರದ ಪತ್ರಿಕಾಗೋಷ್ಟಿಯಲ್ಲಿ ಅಮಿತ್ ಶಾ ಸಹ ಗೋವಾದಲ್ಲಿ ಬಿಜೆಪಿ ತನ್ನ ಹಕ್ಕು ಮಂಡಿಸಲಿದೆ ಎಂದಿರುವುದರಿಂದ ಈ ನಿಟ್ಟಿನಲ್ಲಿ ಬಿಜೆಪಿ ಗಂಭೀರವಾಗಿರುವುದು ಸ್ಪಷ್ಟ.

ಇನ್ನೊಂದೆಡೆ 60 ಸ್ಥಾನದ ಮಣಿಪುರದಲ್ಲೂ ಕಾಂಗ್ರೆಸ್ಸಿಗೆ ಒಲಿದಿರುವುದು ಇದೇ ಸಂಕಟ. ಕಾಂಗ್ರೆಸ್ಸಿಗೆ 28 ಹಾಗೂ ಬಿಜೆಪಿಗೆ 21 ಸ್ಥಾನಗಳು ದೊರೆತಿವೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಇತರರು ಗಳಿಸಿರುವ 11 ಸ್ಥಾನಗಳು ಮುಖ್ಯವಾಗುತ್ತವೆ. ಈಶಾನ್ಯ ಭಾರತದಲ್ಲಿ ಬಿಜೆಪಿ ತಳ ಊರುವುದಕ್ಕೆ ಮುಖ್ಯಪಾತ್ರ ನಿರ್ವಹಿಸುತ್ತಿರುವವರಲ್ಲೊಬ್ಬರಾದ ರಾಮ ಮಾಧವ್ ಅವರು ಹೇಳಿರುವುದು- ‘ನಾವು ಅತಿದೊಡ್ಡ ಪಕ್ಷವಾಗದಿದ್ದರೂ ಅಧಿಕಾರ ಹಿಡಿಯುವ ಭರವಸೆ ಇದೆ. ಏಕೆಂದರೆ ಇದು ಕಾಂಗ್ರೆಸ್ ವಿರೋಧಿ ಜನಮತ. ಕಣದಲ್ಲಿರುವ ಉಳಿದವರೆಲ್ಲ ಕಾಂಗ್ರೆಸ್ ವಿರೋಧಿಗಳು. ಹೀಗಾಗಿ ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲೇ ನಮಗೆ ಪೂರಕ ಉತ್ತರ ಸಿಗಲಿದೆ’ ಎಂದಿದ್ದಾರೆ.

ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಈಶಾನ್ಯ ರಾಜ್ಯಗಳ ರಾಜಕೀಯ ಪಕ್ಷಗಳು ಯಾವತ್ತೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನೇ ಬೆಂಬಲಿಸುತ್ತ ಬಂದಿವೆ. ಅಲ್ಲದೇ ಒಂದು ಸ್ಥಾನ ಗೆದ್ದಿರುವ ಎಲ್ಜೆಪಿ ಅದಾಗಲೇ ಎನ್ಡಿಎ ಕೂಟದಲ್ಲಿರುವುದರಿಂದ ಬಿಜೆಪಿಗೆ ಬೆಂಬಲ ಸೂಚಿಸಿದೆ. 4 ಸ್ಥಾನ ಗೆದ್ದಿರುವ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಜತೆಗಿದ್ದರೂ ರಾಜ್ಯದಲ್ಲಿ ಪ್ರತ್ಯೇಕವಾಗಿ ಸೆಣೆಸಿತ್ತು. ಕಾಂಗ್ರೆಸ್ ಅಥವಾ ಬಿಜೆಪಿ ಎಂಬ ಪ್ರಶ್ನೆ ಬಂದಾಗ ಬಿಜೆಪಿ ಜತೆಗೆ ಕೈಜೋಡಿಸುವ ಪ್ರಮೇಯವೇ ಹೆಚ್ಚು. ನಾಗಾ ಪೀಪಲ್ಸ್ ಫ್ರಂಟ್ ಸಹ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ತೃಣಮೂಲದ ಒಬ್ಬ ಶಾಸಕ ಹಾಗೂ ಸ್ವತಂತ್ರ ಸ್ಪರ್ಧೆಯ ಶಾಸಕರೊಬ್ಬರನ್ನು ಸೆಳೆಯುವಲ್ಲಿ ಸಫಲವಾದಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ.

ಹಿಂದಿನ ವಿಧಾನಸಭೆಯಲ್ಲಿ ಒಂದೂ ಸ್ಥಾನವಿಲ್ಲದಿದ್ದ ಬಿಜೆಪಿ ಈಗಿನ ಚುನಾವಣೆಯಲ್ಲಿ ಬರೋಬ್ಬರಿ 21 ಸ್ಥಾನಗಳನ್ನು ಹೊಂದಿ ಮಣಿಪುರದಲ್ಲಿ ಗುರುತು ನಿರ್ಮಿಸುವುದಕ್ಕೆ ವ್ಯಾಪಕ ಕಾರ್ಯತಂತ್ರ ಹೆಣೆದಿತ್ತು. ಆ ಪೈಕಿ ಕಾಂಗ್ರೆಸ್ ವಿರೋಧಿಗಳನ್ನೆಲ್ಲ ಒಗ್ಗೂಡಿಸಿ ಟಿಕೆಟ್ ನೀಡಿ ಗೆಲ್ಲಿಸಿರುವುದೂ ಒಂದು. ಹೀಗಾಗಿ ಈಗ ಸ್ಥಾನ ಗಳಿಸಿಕೊಂಡಿರುವವರನ್ನು ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಸೆಳೆದುಕೊಳ್ಳುವುದು ಬಿಜೆಪಿಗೆ ಕಷ್ಟವಾಗಲಾರದು.

Leave a Reply