ವಿಜಯದ ಸಂಭ್ರಮದಲ್ಲಿ ಪ್ರಧಾನಿ ಮೋದಿಯ ವಿನಮ್ರ ‘ನವಭಾರತ’ ಗಾನ, 2019ಕ್ಕೆ ಇದೇನಾ ಬಿಜೆಪಿ ವ್ಯಾಖ್ಯಾನ?

ಡಿಜಿಟಲ್ ಕನ್ನಡ ಟೀಮ್:

‘ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗುವುದು ಸುಲಭ. ಆದರೆ ವಿಕಾಸವೆಂಬ ಭಾವುಕತೆ ರಹಿತ ವಿಚಾರ ಇಟ್ಟುಕೊಂಡು ಪಂಚರಾಜ್ಯಗಳ ಚುನಾವಣೆಗೆ ಹೋದೆವು. ಇಷ್ಟು ದೊಡ್ಡಮಟ್ಟದಲ್ಲಿ ಮತದಾನವಾಗಿರುವುದು ಬಿಜೆಪಿಗೆ ವಿಜಯ ಪ್ರಾಪ್ತವಾಗಿರುವುದು ರಾಜಕೀಯ ಪಂಡಿತರೆಲ್ಲ ಯೋಚಿಸಬೇಕಾದ ಅನಿವಾರ್ಯತೆಯನ್ನು ತಂದಿದೆ. ಈಗ ನಮ್ಮ ಕಣ್ಣೆದುರಿಗೆ ಕಾಣುತ್ತಿರುವುದು ಜಾಗರೂಕ ಸ್ವಪ್ನಗಳ ಹೊಸ ಭಾರತವನ್ನು..’

ಹೀಗೆಂದು ದೆಹಲಿಯ ಬಿಜೆಪಿ ಮುಖ್ಯ ಕಚೇರಿ ಎದುರಿನ ವಿಜಯೋತ್ಸವ ಸಮಾರಂಭದಲ್ಲಿ ಮಾತು ಆರಂಭಿಸಿದ ಪ್ರಧಾನಿ, ರಾಜಕೀಯ ಎದುರಾಳಿಗಳ ವಿರುದ್ಧ ಒಂದು ಮಾತನ್ನೂ ಆಡದೇ, ಜನರಿಗೆ ತಟ್ಟಬಹುದಾದ ವ್ಯಾಖ್ಯಾನ ನಿರ್ಮಾಣವೊಂದರಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಸೆಕ್ಯುಲರ್- ಕಮ್ಯುನಲ್, ಆ ಪಂಥ- ಈಪಂಥ ಎಂಬೆಲ್ಲ ಸಾಂಪ್ರದಾಯಿಕ ವಾದಗಳೆಲ್ಲ ಅಪ್ರಸ್ತುತವಾಗಿವೆ, ಮುಂದಿನ ವಿಚಾರಯುದ್ಧವೇನಿದ್ದರೂ ಬದುಕನ್ನು ಉತ್ತಮಪಡಿಸಿಕೊಳ್ಳುವ ಜನರ ಆಕಾಂಕ್ಷೆಗಳ ಭೂಮಿಕೆಯಲ್ಲಿ, ಹೀಗಾಗಿ ಆ ಬಗ್ಗೆ ಚರ್ಚೆಗೆ ತಯಾರಾಗಿ ಎಂಬಂತೆ ಪರೋಕ್ಷ ಒತ್ತಡವನ್ನೇ ರಾಜಕೀಯ ಎದುರಾಳಿಗಳ ಮೇಲೆ ನಿರ್ಮಿಸಿದಂತಿದೆ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಹೀಗೊಂದು ನವ ಭಾರತ ಗಾನವನ್ನು ಹಾಡುತ್ತಿರುವುದಕ್ಕೆ ಪೂರಕ ಅಂಶವೂ ಇದೆ. ಅದೆಂದರೆ, ಉತ್ತರ ಪ್ರದೇಶದಲ್ಲಿ 325 ಸ್ಥಾನಗಳನ್ನು ಪಡೆಯುವುದಕ್ಕೆ ಮಾಮೂಲಿ ಜಾತಿ ಲೆಕ್ಕಾಚಾರಗಳೆಲ್ಲ ಕೆಲಸಕ್ಕೆ ಬರುವುದಿಲ್ಲ ಎಂಬುದನ್ನು ಹೆಚ್ಚಿನವರೆಲ್ಲ ಒಪ್ಪುತ್ತಿದ್ದಾರೆ. ಬಿಜೆಪಿಗೆ ಎಲ್ಲ ವರ್ಗಗಳಿಂದಲೂ ಮತ ಬಂದರೆ ಮಾತ್ರವೇ ಈಗ ಕಾಣುತ್ತಿರುವ ವಿಜಯ ಸಾಧ್ಯವೆಂಬುದು ಎಲ್ಲರಿಗೂ ಪಕ್ಕಾ ಆಗಿದೆ.

ಹಾಗೆಂದೇ ಈ ಹೊಸ ಭಾರತದ ಬಿಂಬವನ್ನು ಬ್ರಾಂಡ್ ಆಗಿಸುವ ಮಾತುಗಳನ್ನು ವಿಜಯದ ವೇದಿಕೆ ಮೇಲೆ ಮೋದಿ ಕಟ್ಟಿದರು. ‘ಈ ಹೊಸ ಭಾರತದಲ್ಲಿ ಬಡವನು ಕೊಡುಗೆಗಳಿಗಾಗಿ ಕೈಚಾಚುತ್ತಿಲ್ಲ. ನನಗೆ ಸೂಕ್ತ ಅವಕಾಶ ನೀಡಿ, ಶ್ರಮ ಪಡುವುದಕ್ಕೆ ನಾನು ತಯಾರಿದ್ದೇನೆ ಎಂಬ ಸಂದೇಶ ರವಾನಿಸಿದ್ದಾನೆ’ ಎನ್ನುವುದರ ಮೂಲಕ ಪ್ರಧಾನಿ ಮೋದಿ, ಈವರೆಗೆ ರಾಜಕಾರಣವು ಪಾಲಿಸಿಕೊಂಡುಬಂದಿರುವ ಬಿಟ್ಟಿಭಾಗ್ಯಗಳ ವ್ಯಾಖ್ಯಾನಕ್ಕೆ ತಾನು ಸಿಲುಕುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಚುನಾವಣೆಗಳ ದೃಷ್ಟಿಯಿಂದ ತಾವು ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಮೋದಿ ಹೇಳಿದರು. ಆದಾಗ್ಯೂ ಚುನಾವಣಾ ಕಣದಲ್ಲಿ ತನ್ನ ಮತಬ್ಯಾಂಕ್ ಯಾವುದಾಗಿರುತ್ತದೆ ಎಂಬ ಸುಳಿವನ್ನೂ ಸಂಶಯಕ್ಕೆಡೆಯಿಲ್ಲದಂತೆ ಇಂದಿನ ಭಾಷಣದಲ್ಲಿ ಮೋದಿ ಬಿಚ್ಚಿಟ್ಟಿದ್ದಾರೆ. ಎಲ್ಲ ಸಮುದಾಯ ವರ್ಗಗಳ ಬಡ ಮತ್ತು ಮಧ್ಯಮವರ್ಗವನ್ನು ಆಶ್ರಯಿಸುವ ಸಮೀಕರಣವೊಂದು ಮೋದಿ ಮಾತಲ್ಲಿ ರೂಪುಗೊಂಡಂತಿತ್ತು. ‘ಬಡವನಿಗೆ ಅವಕಾಶಗಳು ಸಿಗುತ್ತ ಹೋದಂತೆ, ಈಗ ಮಧ್ಯಮ ವರ್ಗದವರ ಹೆಗಲ ಮೇಲಿರುವ ಭಾರಗಳು ಕಡಿಮೆ ಆಗುತ್ತವೆ. ಹೀಗೆ ಬಡವರು ಮತ್ತು ಮಧ್ಯಮವರ್ಗ ಕೇಂದ್ರಿತ ಆರ್ಥಿಕ ದೃಷ್ಟಿ ರೂಢಿಸಿಕೊಂಡರೆ ಜಗತ್ತಿನಲ್ಲಿ ನಮ್ಮ ಎತ್ತರದ ಸ್ಥಾನ ಪಡೆಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎನ್ನುತ್ತ ಹೊಸ ಭಾರತದ ಕನಸು ಬಿತ್ತಿದರು ಮೋದಿ.

ಸಾಮಾನ್ಯವಾಗಿ ವಿಜಯದ ಭಾಷಣಗಳಲ್ಲಿ ರಾಜಕೀಯ ವಿರೋಧಿಗಳಿಗೆ ಹೇಳುವ ಮಾತೂ ಸೇರಿರುತ್ತದೆ. ಆದರೆ ಮೋದಿ ಅದಕ್ಕೆ ಆಸ್ಪದವನ್ನೇ ಕೊಡಲಿಲ್ಲ. ‘ಯಾರನ್ನು ಸೋಲಿಸಿದೆವು ಎಂಬುದೆಲ್ಲ ಮುಖ್ಯವಲ್ಲ. ಅಧಿಕಾರವೆಂಬುದು ಜನತಾ ಜನಾರ್ದನನ ಪವಿತ್ರ ಆದೇಶ. ಫಲ ಬಿಟ್ಟಾಗ ಮರವು ಬಾಗುತ್ತದೆ. ಬಿಜೆಪಿ ಸಹ ಹಾಗೆಯೇ’ ಎಂಬ ವಿನಮ್ರತೆಯ ಮಾತನಾಡಿದ ಪ್ರಧಾನಿ, ಬಿಜೆಪಿ ಎಂಬ ವಟವೃಕ್ಷ ಸುಮ್ಮನೇ ಬೆಳೆದು ನಿಂತಿದ್ದಲ್ಲ, ಇದಕ್ಕೆ ನಾಲ್ಕು ಪೀಳಿಗೆಯ ಕೊಡುಗೆ ಇದೆ ಎನ್ನುವ ಮೂಲಕ ನೆರೆದಿದ್ದ ಕಾರ್ಯಕರ್ತರಲ್ಲಿ ಸಾರ್ಥಕ ಭಾವವನ್ನೂ ಚಿಮ್ಮಿಸಿದರು. ಅಟಲ್, ಆಡ್ವಾಣಿ, ಕುಶ್ಬಾವು ಹೀಗೆ ಹಳೆ ತಲೆಮಾರಿನ ನಾಯಕರನ್ನು ನೆನೆದು ಕಾರ್ಯಕರ್ತರಲ್ಲಿ ಕೃತಜ್ಞತಾ ಭಾವ ತುಂಬಿದರು.

ವಿಶ್ವದ ಅತಿದೊಡ್ಡ ಸಂಘಟನೆಯನ್ನಾಗಿ ಬಿಜೆಪಿಯನ್ನು ಬೆಳೆಸಿರುವುದರಲ್ಲಿ ಅಮಿತ್ ಶಾ ಮತ್ತವರ ತಂಡದ ದೊಡ್ಡ ಕೊಡುಗೆ ಇದೆ ಎಂದು ವೇದಿಕೆಯಲ್ಲಿ ಕೊಂಡಾಡಿದರು ಮೋದಿ.

ನಮಗೆ ಮತ ಹಾಕಿದವರು, ಹಾಕದವರು, ಜತೆಗಿದ್ದವರು, ಎದುರಿಗಿದ್ದವರು… ಇವೆಲ್ಲ ಚುನಾವಣೆಗೆ ಪ್ರಸ್ತುತವೇ ಹೊರತು ಸರ್ಕಾರಕ್ಕಲ್ಲ. ರಚನೆಯಾಗುವ ಸರ್ಕಾರ ಎಲ್ಲರದ್ದು ಎಂದರು ಮೋದಿ.

ಎಲ್ಲರನ್ನೂ ಒಳಗೊಳ್ಳುವ ಭಾವ ಬಲಪಡಿಸುವ ಹೊಸ ಭಾರತ ವ್ಯಾಖ್ಯಾನ ಮೋದಿ ವಿಜಯಭಾಷಣದಲ್ಲಿ ಹೊಮ್ಮಿದ ಮುಖ್ಯಾಂಶ.

Leave a Reply