ಉ.ಪ್ರ ಗೆಲುವಿನ ಹೊರತಾಗಿಯೂ ರಾಜನಾಥ ಸಿಂಗ್ ಹೋಳಿ ಆಡಲ್ಲ ಏಕಂದ್ರೆ..

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಮೋಘ ಗೆಲುವು ಭಾನುವಾರದ ಬಣ್ಣದ ಹಬ್ಬ ಹೋಳಿಗೆ ಉತ್ಸುಕತೆ ತುಂಬಬೇಕಿತ್ತು. ಸಂಸದರಾಗಿ ಉತ್ತರ ಪ್ರದೇಶದ ಲಕ್ನೊ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿರುವ ಇವರ ಹೆಸರು ಮುಖ್ಯಮಂತ್ರಿ ಗಾದಿಗೂ ಕೇಳಿಬಂದಿದೆ ಹಲವು ವಿಶ್ಲೇಷಣೆಗಳಲ್ಲಿ. ಆ ಸಾಧ್ಯತೆ ವಿರಳವೇ ಎಂದಿಟ್ಟುಕೊಂಡರೂ ರಾಜನಾಥ ಸಿಂಗ್ ಅವರಿಗೆ ಉಪ್ರ ಗೆಲುವು ಹರ್ಷಾಚರಣೆ ಸಂದರ್ಭವೇ.

ಆದರೆ ಹಲವು ಜಾಲತಾಣಗಳು ವರದಿ ಮಾಡಿರುವಂತೆ ರಾಜನಾಥ ಸಿಂಗ್ ಭಾನುವಾರ ಹೋಳಿ ಆಚರಿಸುತ್ತಿಲ್ಲ. ಕಾರಣ, ಶನಿವಾರ ಛತ್ತೀಸ್ ಗಢದ ಸುಕ್ಮಾದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ ನಕ್ಸಲರು 12 ಮಂದಿ ಭದ್ರತಾ ಸಿಬ್ಬದಿಯನ್ನು ಹತ್ಯೆ ಮಾಡಿದ್ದಾರೆ. ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದಿದ್ದಾರೆ.

‘ನಮ್ಮ ಭದ್ರತಾ ಪಡೆಯ ಸಿಬ್ಬಂದಿ ಬಲಿದಾನವನ್ನು ವ್ಯರ್ಥವಾಗಲು ಬಿಡೆವು’ ಎಂದಿದ್ದಾರೆ ಗೃಹ ಸಚಿವ ರಾಜನಾಥ ಸಿಂಗ್. ಪ್ರಧಾನಿ ನರೇಂದ್ರ ಮೋದಿ ಸಹ ಈ ಬಗ್ಗೆ ಟ್ವೀಟ್ ಮಾಡಿ ಹುತಾತ್ಮ ಯೋಧರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅತ್ತ ಉತ್ತರ ಪ್ರದೇಶದಲ್ಲಿ ವಿಜಯ ದುಂಧುಬಿ ಮೊಳಗುತ್ತಿದ್ದರೆ ಗೃಹ ಸಚಿವ ರಾಜನಾಥ ಸಿಂಗ್ ಶನಿವಾರ ರಾಯಪುರದಲ್ಲಿದ್ದರು. ಹುತಾತ್ಮ ಯೋಧರಿಗೆ ಅಂತಿಮ ನಮನದಲ್ಲಿ ಪಾಲ್ಗೊಂಡರು. ಮೃತ ಯೋಧರ ಕುಟುಂಬಗಳಿಗೆ ತಲಾ 1 ಕೋಟಿ ರುಪಾಯಿಗಳ ಪರಿಹಾರ ಸಲ್ಲಿಕೆಯಾಗಲಿದೆ ಎಂದಿದ್ದಾರೆ.

ನಕ್ಸಲ್ ಹಿಂಸಾಕೃತ್ಯದ ಬಗ್ಗೆ ಅವರು ಹೇಳಿರುವುದಿಷ್ಟು- ‘ದೇಶದಲ್ಲಿ ಮಾವೋವಾದಿ ಹಿಂಸಾಚಾರ ಕಡಿಮೆಯಾಗುತ್ತ ಬರುತ್ತಿದೆ. ಆದರೆ ಇದೊಂದು ಆಘಾತಕಾರಿ ಬೆಳವಣಿಗೆ. ನಕ್ಸಲರ ಹತಾಶ ಹಾಗೂ ಹೇಡಿ ಕೃತ್ಯವಿದು. ದೊಡ್ಡ ರಸ್ತೆ ಯೋಜನೆಯೊಂದು ಮುಕ್ತಾಯದ ಹಂತದಲ್ಲಿತ್ತು. ಅದರ ನಿಗಾಕ್ಕೆ ಗಸ್ತು ತಿರುಗುತ್ತಿದ್ದ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ನಮ್ಮ ಯೋಧರ ಈ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತೇವೆ.’

Leave a Reply