ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನಕ್ಕೆ ಅಡ್ಡಗಾಲಾದ ಅಮರಿಂದರ್ ಸಿಂಗ್

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಕ್ತ ಭಾರತ ಮಾಡುವ ಅಭಿಯಾನ ನಡೆಸುತ್ತಾ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹಂತ ಹಂತವಾಗಿ ಹೀನಾಯ ಸೋಲು ಅನುಭವಿಸುತ್ತಾ ಕಾಂಗ್ರೆಸ್ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಪಂಜಾಬ್ ನಲ್ಲಿ 10 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕೀರ್ತಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಸಲ್ಲಬೇಕು.

ಪಂಜಾಬಿನಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಈ ಗೆಲುವಿನ ಶ್ರೇಯಸ್ಸು ಹೈಕಮಾಂಡಿಗೆ ಸಲ್ಲಬೇಕು ಎಂದು ಕೆಲವು ಮುಖಂಡರು ಸಮರ್ಥಿಸಿಕೊಂಡಿದ್ದರೂ ವಾಸ್ತವವಾಗಿ ಈ ಜಯದಲ್ಲಿ ಅಮರಿಂದರ್ ಸಿಂಗ್ ಅವರ ಪಾತ್ರ ನಿಜಕ್ಕೂ ಮಹತ್ವದ್ದು.

ಮಣಿಪುರದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್ ಪಾಲಿಗೆ ಅದು ಬೆನ್ನು ತಟ್ಟಿಕೊಳ್ಳುವಂತಹ ಸಾಧನೆಯಾಗಲಿಲ್ಲ. ಮಣಿಪುರದ ರಾಜಕೀಯ ಇತಿಹಾಸದಲ್ಲಿ ಸದ್ದು ಮಾಡದ ಬಿಜೆಪಿ ಈಗ 20ಕ್ಕೂ ಹೆಚ್ಚು ಸ್ಥಾನ ಪಡೆದು ಇತರರ ಬೆಂಬಲದೊಂದಿಗೆ ಅಧಿಕಾರ ನಡೆಸಲು ಮುಂದಾಗಿರುವುದು ಕಾಂಗ್ರೆಸ್ ಪಾಲಿಗೆ ಹಿನ್ನಡೆಯೇ ಸರಿ. ಇನ್ನು ಗೋವಾ ವಿಷಯದಲ್ಲಿ ಎಂದಿನಂತೆ ಈ ಬಾರಿಯೂ 2-3 ಸ್ಥಾನಗಳ ಅಂತರ ಮುಂದುವರಿದಿದ್ದು, ಅಲ್ಲಿಯೂ ಬಿಜೆಪಿ ಸ್ಥಳೀಯ ಪಕ್ಷಗಳ ಸಾಥ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಅಧಿಕಾರದ ಸೂತ್ರ ಹಿಡಿದಿರುವ ರಾಜ್ಯ ಪಂಜಾಬ್ ಮಾತ್ರ.

ಆಡಳಿತ ವಿರೋಧಿ ಅಲೆ ಇದ್ದ ಪಂಜಾಬಿನಲ್ಲಿ ಕಾಂಗ್ರೆಸ್ ನ ಜಯದ ಅಧ್ಯಾಯ ಬರೆದವರು ಅಮರಿಂದರ್ ಸಿಂಗ್. ತಮ್ಮ ಹುಟ್ಟುಹಬ್ಬದ ದಿನದಂದೇ ಅಮರಿಂದರ್ ಸಿಂಗ್ ಪಂಜಾಬ್ ಜನತೆಯಿಂದ ಈ ಗೆಲುವಿನ ಉಡುಗೊರೆಯನ್ನು ಪಡೆದಿದ್ದಾರೆ. ಈ ಹೊತ್ತಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಮೇಲೆತ್ತಲು ಅಮರಿಂದರ್ ಸಿಂಗ್ ನಡೆದು ಬಂದ ಹಾದಿಯನ್ನೊಮ್ಮೆ ನೋಡೋಣ.

2007ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅಮ್ರಿಂದರ್ ಸಿಂಗ್ ಅವರ ರಾಜ್ಯ ರಾಜಕೀಯ ಭವಿಷ್ಯಕ್ಕೆ ತೆರೆ ಬಿದ್ದಿತು ಎಂದೇ ಪರಿಗಣಿಸಲಾಗಿತ್ತು. ಈ ಸೋಲಿನ ನಂತರ ಕಾಂಗ್ರೆಸ್ ಹೈ ಕಮಾಂಡ್ ಅಮ್ರಿಂದರ್ ಸಿಂಗ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯುವ ಪ್ರಯತ್ನ ಮಾಡಿತು. ಅದರ ಭಾಗವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಅಮರಿಂದರ್ ಅವರನ್ನು ಕಣಕ್ಕಿಳಿಸಿತ್ತು. ಇಲ್ಲಿ ಅಮರಿಂದರ್ ಸಿಂಗ್ ಬಿಜೆಪಿಯ ಪ್ರಬಲ ಅಭ್ಯರ್ಥಿ ಅರುಣ್ ಜೇಟ್ಲಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು. ಈ ಅದ್ವಿತಿಯ ಜಯಯದ ಹೊರತಾಗಿಯೂ ಅಮರಿಂದರ್ ಸಿಂಗ್ ಅವರಿಗೆ ರಾಷ್ಟ್ರ ರಾಜಕಾರಣದ ಮೇಲೆ ಆಸಕ್ತಿ ಬರಲೇ ಇಲ್ಲ. ತಮ್ಮ ರಾಜ್ಯದಲ್ಲಿ ಬಿಟ್ಟುಹೋದ ಅಧಿಕಾರವನ್ನು ಮತ್ತೆ ಪಡೆಯಬೇಕು. ತಾನು ರಾಜಕೀಯ ನಿವೃತ್ತಿ ಪಡೆಯುವ ಮುನ್ನ ಒಂದು ಬಾರಿಯಾದರೂ ಪಂಜಾಬ್ ನಲ್ಲಿ ಮತ್ತೆ ಅಧಿಕಾರ ನಡೆಸಬೇಕೆಂಬ ಹಠ ಅಮರಿಂದರ್ ಸಿಂಗ್ ಅವರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತ್ತು.

ತಮ್ಮ ಈ ಆಸೆಯನ್ನು ಬಹಿರಂಗವಾಗಿಯೇ ತಿಳಿಸಿದ್ದ ಅಮರಿಂದರ್ ಸಿಂಗ್, ‘ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಕಡೇಯ ಬಾರಿ ನನಗೊಂದು ಅವಕಾಶ ನೀಡಿ’ ಎಂದು ಪಂಜಾಬ್ ಜನರಿಗೆ ಮನವಿ ಮಾಡಿಕೊಂಡಿದ್ದರು. ಅಮರಿಂದರ್ ಸಿಂಗ್ ಅವರ ರಾಜ್ಯ ರಾಜಕೀಯದ ಬಗೆಗಿನ ಆಸಕ್ತಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಆರಂಭದಲ್ಲಿ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಅಮರಿಂದರ್ ಸಿಂಗ್ ಹಾಗೂ ಅವರ ಬೆಂಬಲಿಗರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಹೈಕಮಾಂಡ್ ಅವರನ್ನು ಮತ್ತೆ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಅವಕಾಶ ನೀಡಿ 2015ರ ನವೆಂಬರ್ 27ರಂದು ಪಂಜಾಬಿನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಅಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಅಮರಿಂದರ್ ಸಿಂಗ್, ಜನರ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ಮೂಲಕ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಂಪಾದಿಸುವಲ್ಲಿ ಯಶಸ್ವಿಯಾದರು.

ಅಮರಿಂದರ್ ಸಿಂಗ್ ಅವರು ರಾಜಕೀಯ ಪ್ರವೇಶಿಸುವ ಮುನ್ನ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. 1963ರಲ್ಲೇ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದ ನಂತರ ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾದರು. 1965 ರಲ್ಲಿ ಸೇನೆಗೆ ರಾಜಿನಾಮೆ ನೀಡಿದ್ದ ಅಮರಿಂದರ್ ಸಿಂಗ್, ಕೆಲ ಕಾಲದಲ್ಲೇ 1965ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಎದುರಾದಾಗ ಮತ್ತೆ ಕ್ಯಾಪ್ಟನ್ ಆಗಿ ಸೇನೆಗೆ ಮರುಸೇರ್ಪಡೆಯಾಗಿದ್ದರು.

Leave a Reply