ಬಿಜೆಪಿಯ ರಾಜ್ಯಸಭೆ ಸಾಮರ್ಥ್ಯ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ ವಿಧಾನಸಭೆಗಳಲ್ಲಿನ ಪ್ರಚಂಡ ಯಶಸ್ಸು!

ಡಿಜಿಟಲ್ ಕನ್ನಡ ಟೀಮ್:

ಪಂಚ ರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಪ್ರಚಂಡ ಗೆಲುವು ಹಾಗೂ ಗೋವಾ ಮತ್ತು ಮಣಿಪುರಗಳಲ್ಲಿ ಸ್ಥಳೀಯ ಪಕ್ಷಗಳ ಜತೆಗಿನ ಮೈತ್ರಿಯೊಂದಿಗೆ ಬಿಜೆಪಿ ಅಧಿಕಾರ ನಡೆಸಲು ಮುಂದಾಗಿರುವುದು ಗೊತ್ತಿರುವ ವಿಚಾರ. ಈ ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡುವುದರ ಜತೆಗೆ ಬಿಜೆಪಿಗೆ ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಚುನಾವಣಾ ಫಲಿತಾಂಶ ಕಲ್ಪಿಸಿಕೊಟ್ಟಿದೆ.

ಸದ್ಯ 243 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿ 56, ಕಾಂಗ್ರೆಸ್ 59 ಸದಸ್ಯರನ್ನು ಹೊಂದಿವೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಭರ್ಜರಿ ಜಯ ಪಡೆದಿರುವ ಬಿಜೆಪಿ ಮುಂದಿನ ವರ್ಷ ಜೂನ್ ವೇಳೆಗೆ ಈ ಎರಡು ರಾಜ್ಯಗಳಿಂದ 12 ಸ್ಥಾನಗಳನ್ನು ಪಡೆದುಕೊಳ್ಳುವ ಅವಕಾಶವಿದೆ. ಆ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯೆ 68ಕ್ಕೆ ಹೆಚ್ಚಲಿದೆ. ಇನ್ನು ಎನ್ಡಿಎ ಮೈತ್ರಿಕೂಟದ ಸಾಮರ್ಥ್ಯ ಕನಿಷ್ಠ 98ಕ್ಕೆ ಏರುವ ನಿರೀಕ್ಷೆ ಇದೆ. ಇದೇ ವೇಳೆ ಮುಂದಿನ ತಿಂಗಳುಗಳಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನಗೊಂಡಿದ್ದ ರಾಜ್ಯಸಭಾ ಸಂಸದರು ನಿವೃತ್ತಿ ಪಡೆಯಲಿದ್ದು, ಕಾಂಗ್ರೆಸ್ ಸಾಮರ್ಥ್ಯ 51ಕ್ಕೆ ಕುಸಿಯುಲಿದೆ.

ರಾಜ್ಯ ಸಭೆಯಲ್ಲಿನ ಈ ಅಂಕಿ ಅಂಶಗಳು ಬಿಜೆಪಿ ಪಾಲಿಗೆ ಏಕೆ ಇಷ್ಟು ಮಹತ್ವ ಎಂಬುದನ್ನು ನೋಡುವುದಾದರೆ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ಅಧಿಕಾರಕ್ಕೆ ಬಂದಿತ್ತಾದರೂ, ರಾಜ್ಯಸಭೆಯಲ್ಲಿನ ಸಂಖ್ಯಾಬಲದ ಹಿನ್ನಡೆಯಿಂದ ತಾನು ನಿರೀಕ್ಷಿಸಿದ ವೇಗದಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಗಳಿಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲು ಪರದಾಟ ನಡೆಸುವಂತಾಗಿದೆ. ಇದರ ಜತೆಗೆ ಮುಂಬರುವ ರಾಷ್ಟ್ರಪತಿ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ರಾಜ್ಯಸಭೆ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವುದು ಪ್ರಮುಖವಾಗಲಿದೆ.

ಉತ್ತರ ಪ್ರದೇಶದಿಂದ ಆಯ್ಕೆಯಾಗಿದ್ದ ಬಿಎಸ್ಪಿ ಅಧಿನಾಯಕಿ ಮಾಯಾವತಿ ಹಾಗೂ ಮುಂಕ್ವದ್ ಅಲಿ ಅವರ ರಾಜ್ಯಸಭೆ ಅವಧಿ ಮುಂದಿನ ವರ್ಷ ಅಂತ್ಯವಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕೇವಲ 20ರ ಆಸುಪಾಸಿನ ಸ್ಥಾನಗಳನ್ನು ಗೆದ್ದಿರುವ ಬಿಎಸ್ಪಿ ಮತ್ತೆ ಈ ಎರಡು ರಾಜ್ಯ ಸಭೆ ಸ್ಥಾನಗಳನ್ನು ಉಳಿಸಿಕೊಳ್ಳುವುದು ಕಷ್ಟ. ಈ ಎರಡು ಸ್ಥಾನಗಳ ಜತೆಗೆ ಉತ್ತರ ಪ್ರದೇಶದಿಂದಲೇ ಆಯ್ಕೆಯಾಗಿದ್ದ ಎಸ್ಪಿ ಹಾಗೂ ಕಾಂಗ್ರೆಸ್ ನ 8 ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಒಟ್ಟು ಈ ರಾಜ್ಯದಿಂದ 10 ಸ್ಥಾನಗಳು ಖಾಲಿಯಾಗಲಿವೆ. ಹೀಗಾಗಿ ಉತ್ತರ ಪ್ರದೇಶದಲ್ಲಿ 300ಕ್ಕೂ ಹೆಚ್ಚಿನ ಶಾಸಕರ ಬಲ ಹೊಂದಿರುವ ಬಿಜೆಪಿ ಈ ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸುಲಭವಾಗಲಿದೆ.

ಇನ್ನು ಈ ವರ್ಷ ಜುಲೈನಲ್ಲಿ ಗೋವಾದಿಂದ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿದ್ದ ಶಾಂತರಾಮ್ ನಾಯಕ್ ಅವರ ಅವಧಿ ಮುಕ್ತಾಯವಾಗಲಿದೆ. ಇನ್ನು ಗುಜರಾತಿನ 3, ಪಶ್ಚಿಮ ಬಂಗಾಳದ 6 ಸದಸ್ಯರ ಅವಧಿ ಮುಂಬರುವ ಆಗಸ್ಟ್ ನಲ್ಲಿ ಅಂತ್ಯವಾಗಲಿದೆ. ಹೀಗೆ ಮುಂದಿನ 13 ತಿಂಗಳ ಅವಧಿಯಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 72 ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿವೆ. ಈ ಸ್ಥಾನಗಳಲ್ಲಿ ಹೆಚ್ಚಿನ ಪ್ರಮಾಣ ಬಿಜೆಪಿ ಪಾಲಾಗುವ ನಿರೀಕ್ಷೆ ಇದೆ.

Leave a Reply