ಬಿಜೆಪಿಯತ್ತ ಕೃಷ್ಣ, ಕಾಂಗ್ರೆಸ್ ಮುಕ್ತ ಭಾರತ ಯಾನದ ಸಂಕೇತ

author-thyagaraj-4ತಿಂಗಳ ಹಿಂದೆ ಕಾಂಗ್ರೆಸ್ ತೊರೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಒಂದೆರಡು ದಿನಗಳಲ್ಲಿ ಬಿಜೆಪಿ ಸೇರುತ್ತಿದ್ದಾರೆ. ನಾನಾ ಪದವಿ, ಗೌರವ ತಂದುಕೊಟ್ಟ ಕಾಂಗ್ರೆಸ್ಸನ್ನು ಕೃಷ್ಣ ತೊರೆಯಬಾರದಿತ್ತು, ತೊರೆದರೂ ಈ ವಯಸ್ಸಿನಲ್ಲಿ ಬಿಜೆಪಿ ಸೇರಬಾರದಿತ್ತು, ಅವರು ಕೃತಘ್ನರು, ಅವರ ಪರಿತ್ಯಾಗದಿಂದ ಪಕ್ಷಕ್ಕೆ ಏನೂ ನಷ್ಟವಿಲ್ಲ ಎಂದೆಲ್ಲ ಕಾಂಗ್ರೆಸ್ ನಿಷ್ಠರು ಗಾನ ಬಜಾಯಿಸುತ್ತಿದ್ದಾರೆ. ಆದರೆ ವಿಷಯ ಅವರು ಅಂದುಕೊಂಡಷ್ಟು ಸರಳವೂ ಇಲ್ಲ, ಸುಲಭದ್ದೂ ಅಲ್ಲ.

ಸುಮಾರು ನಾಲ್ಕೂವರೆ ದಶಕಗಳ ಕಾಲ ಕಾಂಗ್ರೆಸ್ಸಿನಲ್ಲೇ ರಾಜಕಾರಣದ ಒಳ, ಹೊರ ಮಗ್ಗಲುಗಳನ್ನು ತಿರುವಿ ಹಾಕಿ ಮುತ್ಸದ್ದಿ ಪಟ್ಟ ಗಿಟ್ಟಿಸಿರುವ ಕೃಷ್ಣ ಅವರಿಗೆ ಇಳಿವಯಸ್ಸಿನಲ್ಲಿ ಇಂಥದೊಂದು ತೀರ್ಮಾನ ತೆಗೆದುಕೊಂಡರೆ ಏನೆಲ್ಲ ಆಪಾದನೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಇರದಿರಲಾರದು. ಒಂದು ವಾಕ್ಯ ಉಚ್ಚರಿಸಬೇಕಾದರೆ ಹತ್ತುಬಾರಿ ಯೋಚಿಸುವ ಅವರು ಈ ನಿರ್ಧಾರದ ಎಲ್ಲ ಆಯಾಮಗಳನ್ನು ಪರಾಮರ್ಶಿಸದೆ ಇರುತ್ತಾರೆಯೇ? ಖಂಡಿತವಾಗಿಯೂ ಮಾಡಿರುತ್ತಾರೆ. ಆದರೂ ಅವರು ಬಿಜೆಪಿಗೆ ಹೋಗುತ್ತಿದ್ದಾರೆ. ಅಂದಮೇಲೆ ಅದರ ಹಿಂದೆ ಪ್ರಬಲ ಕಾರಣ, ಮರ್ಮ, ತಂತ್ರಗಾರಿಕೆ ಇರಲೇಬೇಕಲ್ಲವೇ?

ಹಾಗಾದರೆ ಏನದು?!

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಪ್ರಬಲ ನಾಯಕತ್ವ ಪಕ್ಕಕ್ಕಿರಲಿ, ನಾಯಕತ್ವವೇ ಇಲ್ಲ. ಅನಾರೋಗ್ಯ ಪೀಡಿತರಾಗಿರುವ ಸೋನಿಯಾ ಗಾಂಧಿ ಪಕ್ಷದ ನೇತೃತ್ವವನ್ನು ಪುತ್ರ ರಾಹುಲ್ ಗಾಂಧಿ ಕೈಗೆ ಒಪ್ಪಿಸುವ ಮೂಲಕ ಬಹುದೊಡ್ಡ ಅನಾಹುತ ಸೃಷ್ಟಿಸಿಟ್ಟಿದ್ದಾರೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ನಂತರ ರಾಹುಲ್ ಗಾಂಧಿ ‘ಟೈಮ್ಸ್ ನೌ’ ಟಿವಿ ಚಾನೆಲ್ ಗೆ ಕೊಟ್ಟ ಮೊದಲ ಸಂದರ್ಶನದಲ್ಲಿ ಬಾಯಿಬಿಟ್ಟಾಗ ಪಕ್ಷಕ್ಕೆ ಆದ ಬಣ್ಣಗೇಡು ಇವತ್ತಿಗೂ ಸರಿ ಹೋಗಿಲ್ಲ. ಅವರ ಮಾತುಗಳಲ್ಲಿ ಅರ್ಥಕ್ಕಿಂಥ ಬರೀ ಅನರ್ಥಗಳೇ ತುಂಬಿದವು, ಜೋಕುಗಳು ತುಳುಕಿದವು. ಅವರು ಬಾಯಿ ಬಿಡದಿದ್ದರೆ ಸಾಕು ಎನ್ನುವಷ್ಟರ ಮಟ್ಟಿಗೆ ಪಕ್ಷದ ನಾಯಕರು ನಡುಗಿ ಹೋಗಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಿತ್ರಪಕ್ಷ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಯಾವ ಪರಿ ಹೆದರಿದ್ದರೆಂದರೆ ರಾಹುಲ್ ಗಾಂಧಿಗೆ ಮೈಕ್ ಸಿಗದಂತೆ ಎಚ್ಚರ ವಹಿಸಿದ್ದರು. ರಾಹುಲ್ ಬಲವಂತ ಮೌನವ್ರತಕ್ಕೆ ಶರಣಾಗಿದ್ದರು. ಆದರೂ ಇಬ್ಬರ ಪಕ್ಷವೂ ಮೇಲೇಳಲಿಲ್ಲ ಎಂಬುದು ಬೇರೆ ಮಾತು.

ರಾಹುಲ್ ಗಾಂಧಿ ತಾವೂ ನಾಯಕರಾಗಿ ಬೆಳೆಯಲಿಲ್ಲ. ಬೇರೆಯವರನ್ನೂ ಬೆಳೆಯಲು ಬಿಡಲಿಲ್ಲ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಅನೇಕ ಮುಖಂಡರನ್ನು ಕೈಗೊಂಬೆಯಾಗಿ ಕಂಡರು. ಅನುಭವ, ಅರ್ಹತೆ ಇರುವವರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ. ವಯಸ್ಸಿಗೂ ಮರ್ಯಾದೆ ಕೊಡಲಿಲ್ಲ. ಇದಕ್ಕೊಂದು ಸಣ್ಣ ಉದಾಹರಣೆ ಇಲ್ಲಿದೆ. ರಾಹುಲ್ ಗಾಂಧಿ ಉಪಾಧ್ಯಕ್ಷರಾದಾಗ ಕೃಷ್ಣ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. ಸೌಜನ್ಯಕ್ಕಾಗಿ ರಾಹುಲ್ ಅವರನ್ನು ಅಭಿನಂದಿಸಲು ಅವರ ಕಚೇರಿಗೆ ಹೋಗಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಮುಳುಗಿದ್ದ ರಾಹುಲ್ ಗಾಂಧಿ ಅವರು ಕೃಷ್ಣ ಅವರನ್ನು ತುದಿಗಣ್ಣಲ್ಲೇ ನೋಡಿ, ‘ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರಿಗೆ ನೀವು ಚುನಾವಣೆ ಪ್ರಚಾರ ಮಾಡಿದ್ದರಂತೇ? ಆದರೆ ಇಲ್ಲಿ ನಾನೇ ನಿಮ್ಮ ನಾಯಕ’ ಎಂದು ಕಿಚಾಯಿಸಿ ಕಳುಹಿಸಿದ್ದಾರೆ. ಕೃಷ್ಣ ಅವರ ರಾಜಕೀಯ ಅನುಭವದಷ್ಟು ವಯಸ್ಸು ರಾಹುಲ್‌ಗೆ ಆಗಿಲ್ಲ. ಅವರ ವಯೋಮಾನಕ್ಕಾದರೂ ಗೌರವ ಕೊಡಬೇಕೆಂಬ ಅಲ್ಪ ಪ್ರಜ್ಞೆಯೂ ಅವರಿಗಿಲ್ಲ. ಬೇರೆ ಹಲವು ಹಿರಿಯ ಮುಖಂಡರಿಗೂ ಇಂಥದೇ ಅನೇಕ ಅನುಭವಗಳಾಗಿವೆ. ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಸಿನಿಂದ ನಿರ್ಗಮಿಸುವ ಮುನ್ನ ತಮಗೆ ಹೈಕಮಾಂಡ್ ಮತ್ತು ಕರ್ನಾಟಕ ಎರಡೂ ಕಡೆ ಸಿಗಬೇಕಿದ್ದ ಗೌರವ ಸಿಕ್ಕಿಲ್ಲ ಎಂದು ಕೃಷ್ಣ ಅವರೇ ಹೇಳಿಕೊಂಡಿದ್ದಾರೆ.

ಹಾಗೇ ನೋಡಿದರೆ ಒಂದೂವರೇ ದಶಕದಿಂದಲೂ ಕಾಂಗ್ರೆಸ್ ಮನಸುಗಳು ಸೋನಿಯಾ, ರಾಹುಲ್ ಅವರಿಗಿಂತ ಪ್ರಿಯಾಂಕ ಅವರಲ್ಲಿ ನಾಯಕತ್ವ ಕಂಡುಕೊಳ್ಳಲು ಹಪಹಪಿಸಿದವು. ನೋಡಲು  ಅಜ್ಜಿಯನ್ನು ಹೋಲುವ ಪ್ರಿಯಾಂಕ ಅವರಲ್ಲಿಯೇ ಇಂದಿರಾಗಾಂಧಿ ಅವರನ್ನು ಕಾಣಲು ಬಯಸಿದವು. ಆದರೆ ಕುಟುಂಬದೊಳಗಿನ ರಾಜಕೀಯ ಪ್ರಿಯಾಂಕ ಅವರಿಗೆ ರಾಹುಲ್ ಗಾಂಧಿ ಅವರನ್ನು ಮೀರಿ ಬೆಳೆಯಲು ಬಿಡಲಿಲ್ಲ. ಒಂದೊಮ್ಮೆ ಅವರು ನಾಯಕಿಯಾಗಿದ್ದರೆ ಏನು ಸಾಧಿಸುತ್ತಿದ್ದರೋ, ಬಿಡುತ್ತಿದ್ದರೋ ಅದು ಬೇರೆ ಪ್ರಶ್ನೆ. ಆದರೆ ಸಕಾಲದಲ್ಲಿ ಅದಕ್ಕೆ ಆಸ್ಪದ ಸಿಗಲಿಲ್ಲ. ಇತ್ತೀಚೆಗೆ ರಾಹುಲ್ ಜತೆಜತೆಗೆ ಬಿಂಬಿಸಲು ಯತ್ನಗಳು ನಡೆದಿವೆ. ಆದರೆ ಕಾಲ ಮಿಂಚಿ ಹೋಗಿದೆ.

ಹೀಗೆ ದುರ್ಬಲ ನಾಯಕತ್ವದಿಂದ ನಲುಗುತ್ತಿರುವ ಕಾಂಗ್ರೆಸ್ ಹೆಡೆಮುರಿ ಕಟ್ಟಲು ಬಿಜೆಪಿ ಪರಮೋಚ್ಚ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ತಂತ್ರವೊಂದನ್ನು ಹೆಣೆದಿದೆ. ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದ ತಂತ್ರಗಾರಿಕೆ ಭಾಗವಾಗಿ ದೇಶಾದ್ಯಂತ ಹಿರಿಯ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಸೆಳೆಯಲು ಹೊರಟಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ರೀಟಾ ಬಹುಗುಣ, ಅಲ್ಲಿನ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ, ಕೇಂದ್ರದ ಮಾಜಿ ಸಚಿವ ಕರಣ್‌ಸಿಂಗ್, ಕೇಂದ್ರದ ಮಾಜಿ ಸಚಿವ ಬೂಟಾಸಿಂಗ್ ಪುತ್ರ ಅರವಿಂದರ್ ಸಿಂಗ್, ಉತ್ತರಾಖಂಡದ ಮಾಜಿ ಸಚಿವ ಯಶಪಾಲ್ ಆರ್ಯ, ಅಸ್ಸಾಂನ ಕ್ಯಾಪ್ಟನ್ ರಾಬಿನ್ ಬೋರ್ಡೊಲೆ, ಮಣಿಪುರದ ಯುಮ್‌ಕಮ್ ಎರ್ಬೋಟ್, ಹರ್ಯಾಣದ ಜೌಧುರಿ ವೀರೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಪ್ರದೀಪ್ ಘೋಶ್ – ಹೀಗೆ ದೇಶದ ನಾನಾ ಭಾಗಗಳಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಸೆಳೆಯಲಾಗಿದೆ. ಅದರ ಮುಂದುವರಿದ ಭಾಗವೇ ಎಸ್.ಎಂ. ಕೃಷ್ಣ. ಮಾಜಿ ಸಚಿವರಾದ ಶ್ರೀನಿವಾಸ ಪ್ರಸಾದ್, ಜಯಪ್ರಕಾಶ್ ಹೆಗ್ಡೆ, ಕುಮಾರ್ ಬಂಗಾರಪ್ಪ ಈಗಾಗಲೇ ಸೇರ್ಪಡೆ ಆಗಿದ್ದಾರೆ.

ಸಮರ್ಥರಿದ್ದರೂ ಕಾಂಗ್ರೆಸ್ಸಿನಲ್ಲಿ ನಿರುದ್ಯೋಗಿಗಳಾಗಿರುವವರು, ದ್ವೇಷಾಸೂಯೆಗೆ ಬಲಿ ಆಗಿರುವವರು, ಸುಖಾಸುಮ್ಮನೆ ಮೂಲೆಗುಂಪಾಗಿರುವವರಿಗೆ ಬಿಜೆಪಿ ಬಲೆ ಬೀಸಿದೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆವ ತಂತ್ರ. ಇಂಥವರ ಆಗಮನದಿಂದ ಬಿಜೆಪಿಗೂ ಅನುಕೂಲ ಆಗಬೇಕು. ಅದೇ ಕಾಲಕ್ಕೆ ಅವರನ್ನು ಕಳೆದುಕೊಂಡ ಕಾಂಗ್ರೆಸ್ಸಿಗೂ ಅನಾಹುತ ಆಗಬೇಕು. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಚುನಾವಣೆಗೆ ಮೊದಲು ಬಿಜೆಪಿ ಅನುಸರಿಸಿದ ಈ ತಂತ್ರ ಫಲ ನೀಡಿದೆ. ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಪ್ರಚಂಡ ಜಯ, ಮಣಿಪುರದಲ್ಲಿ 1 ರಿಂದ 21 ಸ್ಥಾನಗಳಿಗೆ ಜಿಗಿತದ ಹಿಂದೆ ಮೋದಿ ಅಲೆ ಪ್ರಮುಖವಾಗಿ ಕೆಲಸ ಮಾಡಿದ್ದರೂ, ಅದರ ಜತೆಜತೆಗೆ ಈ ಒಳತಂತ್ರಗಳೂ ಸ್ವಲ್ಪ ಮಟ್ಟಿನ ಕಾಣಿಕೆ ನೀಡಿವೆ. ಇದೇ ತಂತ್ರಕ್ಕೆ ಇನ್ನಷ್ಟು ವಿಸ್ತೃತ ರೂಪ ಕೊಡುವ ಯೋಜನೆ ಬಿಜೆಪಿಯದ್ದು. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ ಒಂದೊಂದೇ ಕಾಂಗ್ರೆಸ್ ರಾಜ್ಯಗಳನ್ನು ಕಬಳಿಸುತ್ತಾ ಸಾಗಿರುವ ಬಿಜೆಪಿ ಈಶಾನ್ಯ ರಾಜ್ಯಗಳಿಗೂ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದೆ. ಹಿರಿಯ ಕಾಂಗ್ರೆಸ್ಸಿಗರನ್ನು ಸೆಳೆಯುವ ಯೋಜನೆ ಚಾಲ್ತಿಯಲ್ಲಿದೆ.

ನಿಜ, ಮೋದಿ ಮತ್ತು ಅಮಿತ್ ಶಾ ಅವರ ಮುಂದಿನ ಗುರಿ ಕರ್ನಾಟಕ. ಕಾಂಗ್ರೆಸ್ ಮುಕ್ತ ಭಾರತ ಹಾದಿಯ ಮತ್ತೊಂದು ಸವಾಲು. ಕರ್ನಾಟಕದಲ್ಲಿ ಈಗಾಗಲೇ ಸಹಜ ಆಡಳಿತ ವಿರೋಧಿ ಅಲೆ ಇದೆ. ಅದರ ಜತೆಗೆ ಹೈಕಮಾಂಡ್‌ಗೆ ಕಪ್ಪದ ಡೈರಿ, ಸ್ಟೀಲ್ ಬ್ರಿಡ್ಜ್ ಲಂಚ ಆರೋಪ, ಸರಕಾರದ ಅಸಡ್ಡೆ ಮತ್ತು ನಿರ್ವೀಕಾರ ಧೋರಣೆಯನ್ನು ಬಿಜೆಪಿ ಪರ ತಿರುಗಿಸಿಕೊಳ್ಳುವ ತವಕ ಅವರದ್ದು. ಸರಕಾರದ ಕಳಂಕಗಳನ್ನು ಜನರ ಬಳಿ ಕೊಂಡೊಯ್ಯುವುದರ ಜತೆಜತೆಗೆ ಆ ಪಕ್ಷದ ಹಿರಿಯ ನಾಯಕರನ್ನು ಸೆಳೆದುಕೊಂಡರೆ ಗುರಿ ಸಾಧನೆ ಸುಲಭ ಎಂಬ ಉಪಾಯ ಅವರದು. ‘ಅಹಿಂದ’ ಮಂತ್ರದೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಮೊದಲಿಂದಲೂ ತಮ್ಮ ಬಗ್ಗೆ ಅನಾದಾರ ಧೋರಣೆ ರೂಢಿಸಿಕೊಂಡಿದೆ ಎಂಬ ದೂರು ಮೇಲ್ವರ್ಗದ್ದು. ಕಾಲ ಕಳೆದಂತೆ ಅದರ ಬಿಸಿ ‘ಅಹಿಂದ’ದ ಬೇರೆಬೇರೆ ವರ್ಗಗಳಿಗೂ ತಟ್ಟಿದೆ. ಇದರ ಸದ್ಬಳಕೆ ಪ್ರತೀಕವೇ ಕಾಂಗ್ರೆಸ್ ಮುನಿದ ಮನಸುಗಳ ಸೆಳೆಯುವಿಕೆ.

ಪ್ರಬಲ ಲಿಂಗಾಯತ ಸಮುದಾಯದ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಮತ್ತೊಂದು ಪ್ರಬಲ ಒಕ್ಕಲಿಗ ಸಮುದಾಯದ ಆರ್.ಆಶೋಕ್, ಸಿ.ಟಿ.ರವಿ ಪಕ್ಷದಲ್ಲಿದ್ದಾರೆ. ಎಸ್.ಎಂ. ಕೃಷ್ಣ ಆಗಮನದಿಂದ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿಗೆ ವರ್ಗಾವಣೆ ಆಗುತ್ತವೆ. ಕಾಂಗ್ರೆಸ್ ಮಟ್ಟಿಗೆ ಕೃಷ್ಣ ಅವರೇ ಒಕ್ಕಲಿಗ ನಾಯಕ. ಒಕ್ಕಲಿಗ ಸಮುದಾಯಕ್ಕೆ ದೇವೇಗೌಡರ ನಂತರದ ಮುಖಂಡ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಕೃಷ್ಣಾಗಮನ ಬಿಜೆಪಿಗೆ ಲಾಭಕರವೇ. ಇಲ್ಲಿ ಬಿಜೆಪಿಗೆ ಆಗುವ ಲಾಭ ಕಾಂಗ್ರೆಸ್ಸಿನ ನಷ್ಟ. ಕಾಂಗ್ರೆಸ್ ಕಳೆದುಕೊಂಡದ್ದು ಬಿಜೆಪಿ ಖಾತೆಗೆ ಜಮಾವಣೆ.

ಮತ್ತೊಂದು ವಿಚಾರ. ಕೃಷ್ಣ ಸರಕಾರವಿದ್ದಾಗ ಬೆಂಗಳೂರು ನಗರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು. ಬೆಂಗಳೂರನ್ನು ಸಿಂಗಾಪುರ ಮಾಡದಿದ್ದರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಶ್ವಭೂಪಟದಲ್ಲಿ ಬೆಂಗಳೂರಿಗೆ ಸ್ಥಾನ ತಂದುಕೊಟ್ಟದ್ದು ಸುಳ್ಳಲ್ಲ. ಹೀಗಾಗಿ ಬೆಂಗಳೂರಿಗರಿಗೆ ಕೃಷ್ಣ ಬಗ್ಗೆ ಆದರವಿದೆ. ಬೆಂಗಳೂರಲ್ಲಿ ಬಿಜೆಪಿ ಪಾರಮ್ಯ ವೃದ್ಧಿಗೆ ಇದೂ ಒಂದು ಪ್ಲಸ್ ಪಾಯಿಂಟ್.

ಇದು ಪಕ್ಷದ ಮಾತಾಯಿತು. ಇನ್ನು ಕೃಷ್ಣ ಅವರು ಸುಖಾಸುಮ್ಮನೆ ಬಿಜೆಪಿಗೆ ಹೋಗುತ್ತಿದ್ದಾ ರೆಯೇ? ಅವರಿಗೆ ಯಾವುದೇ ಅಭೀಪ್ಸೆಗಳಿಲ್ಲವೇ? ತಮಗೆ ಅಗೌರವ ತೋರಿದ ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕು ಎಂಬ ಒಂದೇ ಕಾರಣಕ್ಕೆ ಹೋಗುತ್ತಿದ್ದಾರೆಯೇ? – ಇವೇ ಮೊದಲಾದ ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಸಿಎಂ ಸ್ಧಾನದಿಂದ ರಾಜ್ಯಪಾಲ ಹುದ್ದೆವರೆಗೂ ಅನೇಕ ಹುದ್ದೆಗಳನ್ನು ಅಲಂಕರಿಸಿರುವ ಕೃಷ್ಣ ಅವರಿಗೆ ಈ ವಯಸ್ಸಿನಲ್ಲಿ ಅಧಿಕಾರದ ವಾಂಛೆ ಉಳಿದಿರುತ್ತದೆ ಎಂದೆನಿಸುವುದಿಲ್ಲ. ಆದರೆ ದ್ವಿತೀಯ ಪುತ್ರಿ ಶಾಂಭವಿ ಅವರನ್ನು ರಾಜಕೀಯಕ್ಕೆ ತಂದು ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಸಬೇಕೆಂಬ ಆಕಾಂಕ್ಷೆ ಇರುವಂತಿದೆ. ಅಳಿಯ ಸಿದ್ದಾರ್ಥ ಅವರನ್ನು ರಾಜ್ಯಸಭೆಗೆ ಕಳುಹಿಸಲು ಯೋಜಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಸಿದ್ದಾರ್ಥ ಅವರು ಮೊದಲಿಂದಲೂ ಅಧಿಕಾರ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಈ ಎರಡರಲ್ಲಿ ಯಾವುದು ಅನುಷ್ಠಾನಕ್ಕೆ ಬರುತ್ತದೋ ನೋಡಬೇಕು.

ಮತ್ತೆ ಮೋದಿ ಮತ್ತು ಅಮಿತ್ ಶಾ ಜೋಡಿಯ ಕಾಂಗ್ರೆಸ್ ಮುಕ್ತ ಭಾರತ ಸಂಕಲ್ಪದತ್ತ ಹೊರಳುವುದಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಖಂಡರ ಸೆಳೆಯುವ ಅಭಿಯಾನದಲ್ಲಿ, ಸಂಪುಟದಿಂದ ಕೈಬಿಟ್ಟ ಕಾರಣಕ್ಕೆ ಮುನಿದಿದ್ದ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಬಂದು ಮರುಚುನಾವಣೆಗೆ ನಿಂತಾಗಿದೆ. ಪರಿಶಿಷ್ಟ ಸಮುದಾಯ ಪ್ರತಿನಿಧಿಸುವ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಮುಖಂಡರನ್ನು ಹಾದಿ ಬೀದಿಯಲ್ಲಿ ಹರಾಜು ಹಾಕಿಕೊಂಡು ತಿರುಗುತ್ತಿದ್ದಾರೆ. ಅವರಂತೆಯೇ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿರುವ ಒಕ್ಕಲಿಗ ಸಮುದಾಯದ ಅಂಬರೀಶ್ ಪತ್ನಿ ಸುಮಲತಾ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಭಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗ ಈಡಿಗ ಸಮುದಾಯದ ಕುಮಾರ್ ಬಂಗಾರಪ್ಪ ಬಂದಾಗಿದೆ.

ಈಗ ಚುನಾವಣೆ ನಡೆದ ಪಂಚರಾಜ್ಯಗಳ ಪೈಕಿ ಎರಡು ಕಡೆ ನಿಚ್ಚಳ ಬಹುಮತ ಪಡೆದಿರುವ ಬಿಜೆಪಿ ಅತಂತ್ರ ಪರಿಸ್ಥಿತಿ ಇರುವ ಗೋವಾ ಮತ್ತು ಮಣಿಪುರದಲ್ಲೂ ಅನ್ಯರ ಬೆಂಬಲ ಪಡೆದು ಸರಕಾರ ರಚಿಸುವ ಯತ್ನದಲ್ಲಿದೆ. ದೇಶಾದ್ಯಂತ ಬೀಸುತ್ತಿರುವ ಮೋದಿ ಆಲೆ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಅನ್ಯರು ಅತ್ತಿತ್ತ ನೋಡದಂತೆ ಮಾಡಿಟ್ಟಿದೆ. ಹೀಗಾಗಿ ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಇತರರು ಬಿಜೆಪಿಯತ್ತಲೇ ಮೈತ್ರಿಗೆ ಕೈಚಾಚಿದ್ದಾರೆ. ಅಂದರೆ ಮೋದಿ ಅಲೆ ಎಷ್ಟು ಪ್ರಬಲವಾಗಿದೆ ಎಂಬುದರ ದ್ಯೋತಕವಿದು. ಈ ಅಲೆಯ ಅಬ್ಬರ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ ಬೀರುವುದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತಷ್ಟು ಕಾಂಗ್ರೆಸ್ ನಾಯಕರು ಸರದಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ನಿಚ್ಚಳವಾಗಿದೆ.

ಯಾವುದೇ ಒಂದು ಪಕ್ಷದ ಅವನತಿಗೆ ಆಂತರಿಕ ಮತ್ತು ಬಾಹ್ಯ ಕಾರಣಗಳಿರುತ್ತವೆ. ಕಾಂಗ್ರೆಸ್ ಮಟ್ಟಿಗೆ ದುರ್ಬಲ ನಾಯಕತ್ವ ಆಂತರಿಕ ಕಾರಣವಾದರೆ, ನೋಟ್ಯಂತರದ ಆರ್ಥಿಕ ಪಲ್ಲಟಗಳ ನಡುವೆಯೂ ಚುನಾವಣೆ ಪಾರಮ್ಯ ಮೆರೆದಿರುವ ಮೋದಿ ನಾಯಕತ್ವ ಒಡ್ಡಿರುವ ಸವಾಲು ಬಾಹ್ಯದ್ದು. ಈ ಎರಡನ್ನೂ ಅರಗಿಸಿಕೊಳ್ಳುವ ಶಕ್ತಿ ಸದ್ಯಕ್ಕಂತೂ ಕಾಂಗ್ರೆಸ್ಸಿಗೆ ಇಲ್ಲ. ಹೀಗಾಗಿ ಕೃಷ್ಣ ಅವರಂಥ ಅನೇಕ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಒಳಕಾರಣಗಳು ಏನೇ ಇರಲಿ ನಷ್ಟ ಮಾತ್ರ ಕಾಂಗ್ರೆಸ್ಸಿಗೇ.

ಲಗೋರಿ : ಮುಳುಗುವವನಿಗೆ ಆಳದ ಪರಿವೆ ಇರುವುದಿಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply