ಮೋದಿಯ ಅಶ್ವಮೇಧ ತಡೆಯುತ್ತೇನೆಂದು ಕುಮಾರಸ್ವಾಮಿ ತುಳಿದಿರುವ ಡಿಜಿಟಲ್ ಮಾರ್ಗ, ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಡೌಟ್? ಬಿ.ಕೆ.ಹರಿಪ್ರಸಾದ್ ರಾಜಿನಾಮೆ, ನಾಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕರೆದ ಅಮಿತ್ ಶಾ

ಬೆಂಗಳೂರಿನಲ್ಲಿ ಹೋಲಿ ಹಬ್ಬದ ಸಂಭ್ರಮದಲ್ಲಿ ಯುವಕ ಯುವತಿಯರು ಬಣ್ಣ ಹಚ್ಚಿ ಸಂಭ್ರಮಿಸಿದ ಕ್ಷಣ…

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಗೆ ಕುಮಾರಸ್ವಾಮಿ ಸವಾಲ್

‘ದೇಶದ 13 ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಶ್ವಮೇಧ ಕುದುರೆಯನ್ನು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಟ್ಟಿಹಾಕುವ ಸಾಮರ್ಥ್ಯ ಕೇವಲ ಜೆಡಿಎಸ್ ಗೆ ಮಾತ್ರ ಇದೆ ಎಂದಿದ್ದಾರೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ.

ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರನ್ನು ನೇರವಾಗಿ ತಲುಪುವ ದೃಷ್ಟಿಯಿಂದ ‘ನಮ್ಮ ಕುಮಾರಣ್ಣ’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹೆಚ್ಡಿಕೆ ಪ್ರವೇಶಿಸಿದ್ದಾರೆ. ಫೇಸ್ ಬುಕ್, ಟ್ವಿಟರ್, ಗೂಗಲ್ ಪ್ಲಸ್, ಯೂಟ್ಯೂಬ್ ಹಾಗೂ ಸೌಂಡ್ ಕ್ಲೌಡ್ಸ್ ಮೂಲಕ ಜನರ ಜತೆ ಸಂಪರ್ಕದಲ್ಲಿರಲು ನಿರ್ಧರಿಸಿದ್ದು, ಸೋಮವಾರ ಇವುಗಳನ್ನು ಉದ್ಘಾಟಿಸಿದರು.

2014ರ ಲೋಕ ಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಡಿಜಿಟಲ್ ಮಾಧ್ಯಮಗಳ ಮೂಲಕ ಜನರನ್ನು ತಲುಪಿ ಕಾರ್ಯತಂತ್ರ ರೂಪಿಸಿದ ಮಾದರಿಯಲ್ಲೇ ಈಗ ಕುಮಾರಸ್ವಾಮಿ ಹೆಜ್ಜೆ ಇಟ್ಟಿದ್ದಾರೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರ 20 ತಿಂಗಳ ಕಾಲಾವಧಿಯಲ್ಲಿ ಮಾಡಿರುವ ಕೆಲಸದಿಂದ ಹಿಡಿದು ಇತರ ವಿಷಯಗಳನ್ನು ಜನರೊಟ್ಟಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ.

ಈ ಸಾಮಾಜಿಕ ಜಾಲತಾಣಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾಡನಾಡಿದ ಕುಮಾರಸ್ವಾಮಿ ಹೇಳಿದಿಷ್ಟು…

‘ಕರ್ನಾಟಕಕ್ಕೂ ಇತರೆ ರಾಜ್ಯಗಳಿಗೂ ತುಂಬಾ ವ್ಯತ್ಯಾಸವಿದೆ. ಹಿಂದುತ್ವ, ಜಾತಿ ರಾಜಕಾರಣದ ಟ್ರಂಪ್ ಕಾರ್ಡ್ ಇಲ್ಲಿ ನಡೆಯುವುದಿಲ್ಲ. ಬಿಜೆಪಿಯವರು ಚುನಾವಣೆಯನ್ನು ಗೆಲ್ಲಲು ಅನುಸರಿಸುವ ಮಾರ್ಗವೇ ಬೇರೆ. ಕೋಮುವಾದ ಬಿಜೆಪಿಯವರ ಪ್ರಮುಖ ಅಸ್ತ್ರ. ಅದಕ್ಕೆ ರಾಜ್ಯದಲ್ಲಿ ಅವಕಾಶವಿಲ್ಲ. ಚುನಾವಣೆಯ ನಂತರ ಆಡುವ ಮಾತೇ ಬೇರೆ. ಒಳಗೆ ಒಡಕಿನ ರಾಜಕಾರಣ, ಬಹಿರಂಗವಾಗಿ ಕಟ್ಟುವ ರಾಜಕಾರಣ ಅದರ ನೀತಿ. ಐದು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಬಿಜೆಪಿ ಯಾವ ಕಾರಣಗಳಿಂದ ಗೆದ್ದಿವೆ ಎಂಬುದನ್ನು ಹೇಳಲು ಹೋಗುವುದಿಲ್ಲ. ಆದರೆ ಮೋದಿ ಅವರ ಆಡಳಿತ ಮೇಚ್ಚಿ ಜನ ನೀಡಿರುವ ಆದೇಶವಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ಮೋದಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಕುತ್ತೇನೆ. ಮೋದಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು ಅಂತಲೂ ಹೇಳಬೇಕಲ್ಲ. ಮಹದಾಯಿ ನದಿ ನೀರಿನ ವಿವಾದ, ಕಾವೇರಿ ವಿವಾದ ಅಥವಾ ಇತರೆ ವಿಷ್ಯ ಇರಬಹುದು ಕರ್ನಾಟಕಕ್ಕೆ ಬಂದು ಮತ ಕೇಳಲು ಅವರಿಗೆ ಯಾವ ವಿಷಯವೂ ಇಲ್ಲ. ಜೆಡಿಎಸ್ ಪಕ್ಷವನ್ನು ದೂರಲು ಕಾರಣವೂ ಇಲ್ಲ’ ಎಂದರು.

ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲ?

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಜೆಡಿಎಸ್ ನಿರ್ಧರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಉಭಯ ಕ್ಷೇತ್ರಗಳಲ್ಲಿ ತಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಸೋತು, ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದರೆ ಅಥವಾ ಸೋತರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳೇನು ಆಗುವುದಿಲ್ಲ. ಆದರೆ ಒಂದುವೇಳೆ ಬಿಜೆಪಿ ಗೆದ್ದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಇದನ್ನೇ ಮೆಟ್ಟಿಲಾಗಿ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಗೆಲುವು ಇಷ್ಟವಿಲ್ಲದಿದ್ದರೂ ಬಿಜೆಪಿ ಪ್ರತಿಬಂಧಿಸುವ ದೃಷ್ಟಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಉತ್ತಮ ಎಂದು ಪಕ್ಷ ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಈ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಮಾರ್ಚ್ 15ರಂದು ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಶಾಸಕರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ನಮಗೆ ಉಪಚುನಾವಣೆಗಳು ಹೊಸದಲ್ಲ ಆದರೆ, ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ಸ್ಪರ್ಧೆ ಮಧ್ಯೆ ನಾವು ಹೋಗಬೇಕೆ ಎಂಬುದರ ಬಗ್ಗೆ ಚರ್ಚಿಸುತ್ತಿದ್ದೇವೆ’ ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ರಾಜಿನಾಮೆ

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ರಾಜಿನಾಮೆ ನೀಡಿದ್ದಾರೆ. ಒಡಿಶಾ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕಾರಣಿ ಹುದ್ದೆಗೆ  ರಾಜಿನಾಮೆ ನೀಡಿರುವುದಾಗಿ ಹರಿಪ್ರಸಾದ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ‘ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಜಯಗಳಿಸಿರುವುದನ್ನು ದೊಡ್ಡ ಜಯವೆಂದು ಬಿಜೆಪಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಗೋವಾ ಮಣಿಪುರದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಗೋವಾದಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಲಾಬಿಗೆ ಮಣಿದು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಗೆ ಸರ್ಕಾರ ರಚನೆಗೆ ಮೊದಲು ಅವಕಾಶ ನೀಡಬೇಕಿತ್ತು. ಆದರೆ ಬಿಜೆಪಿಗೆ ಅವಕಾಶ ನೀಡಿ ಜನಾದೇಶವನ್ನು ಧಿಕ್ಕರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಗಳು…

  • ರಾಜ್ಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಹಾಗೂ ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಳೆ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಸಭೆ ಕರೆದಿದ್ದಾರೆ. ನಾಳೆ ನವದೆಹಲಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಿವಾಸದಲ್ಲಿ ಈ ಸಭೆ ಕರೆಯಲಾಗಿದೆ. ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಮಹತ್ವ ಪಡೆದುಕೊಂಡಿದ್ದು, ಇಲ್ಲಿ ಜಯ ಸಾಧಿಸುವ ಮೂಲಕ ರಾಜ್ಯದಲ್ಲಿ ತಮ್ಮ ಗೆಲುವಿನ ಯಾತ್ರೆ ಆರಂಭಿಸಲು ಬಿಜೆಪಿ ಎದುರು ನೋಡುತ್ತಿದೆ.
  • ಮಹಿಳೆಯರು ಮತ್ತು ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳ್ಳುತ್ತಿದೆ. ಮೊದಲ ಹಂತದಲ್ಲಿ ಮೈಸೂರಿನ ಹೆಗ್ಗಡದೇವನಕೋಟೆ, ತುಮಕೂರಿನ ಮಧುಗಿರಿ, ರಚೂರು ಜಿಲ್ಲೆಯ ಮಾನ್ವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇದು ಅನುಷ್ಟಾನಗೊಳ್ಳಲಿದೆ. ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು.
  • ಉತ್ತರ ಭಾರತದ ರಾಜ್ಯಗಳಲ್ಲಿನ ಜನರು ಬಿಜೆಪಿಯ ಅಧಿಕಾರವನ್ನು ಕಂಡಿಲ್ಲ. ಹೀಗಾಗಿ ಅಲ್ಲಿನ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಆದರೆ. ಕರ್ನಾಟಕದ ಜನತೆ ಬಿಜೆಪಿಯ ಆಡಳಿತ ಕರ್ಮಕಾಂಡವನ್ನು ನೋಡಿದ್ದಾರೆ. ಹೀಗಾಗಿ ಮತ್ತೆ ಬಿಜೆಪಿಗೆ ಅವಕಾಶ ಕೊಡುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

Leave a Reply