ಉತ್ತರ ವೈಭವದ ನಂತರ ಕರ್ನಾಟಕಮುಖಿಯಾಗಿರುವ ಬಿಜೆಪಿ ರಣತಂತ್ರಗಾರ ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್:

ಪಂಚರಾಜ್ಯಗಳ ಚುನಾವಣೆ ಪೈಕಿ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಪ್ರಧಾನಿ ಮೋದಿ ಸಹ ದೆಹಲಿಯ ಸಮಾರಂಭದಲ್ಲಿ ಶಾ ಅವರನ್ನು ಹೊಗಳಿದ್ದರು. ಈ ಹಿಂದೆ ಲೋಕಸಭೆ ಚುನಾವಣೆಯಲ್ಲೇ ಉತ್ತರ ಪ್ರದೇಶದ ಸಂಘಟನಾ ಚಾತುರ್ಯಕ್ಕೆ ಮುಖ್ಯವಾಗಿ ಅಮಿತ್ ಶಾ ಅವರಿಗೇ ಶ್ರೇಯಸ್ಸು ಸಂದಿತ್ತು.

ಇಂತಿಪ್ಪ ಅಮಿತ್ ಶಾ ಇದೀಗ ಕರ್ನಾಟಕದತ್ತ ಮುಖ ಮಾಡಿದ್ದಾರೆ ಎಂಬುದು ನಮಗೆ ಪ್ರಸ್ತುತವಾಗುವ ಸುದ್ದಿ. ಆ ನಿಟ್ಟಿನಲ್ಲಿ ಕೆಲಸ ಆರಂಭ ಎಂಬಂತೆ ಅವರು ಬುಧವಾರ ದೆಹಲಿಯಲ್ಲಿ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮೇ ತಿಂಗಳಲ್ಲಿ ಕರ್ನಾಟಕ ಪ್ರವಾಸ ಮಾಡುವುದಾಗಿಯೂ ಹೇಳಿರುವುದಾಗಿ ಪಕ್ಷದ ಮೂಲಗಳು ಹೇಳುತ್ತಿವೆ.

ಬುಧವಾರದ ಸಮಾಲೋಚನೆಯಲ್ಲಿ ರಾಜ್ಯದ ನಾಯಕರಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಆರ್ಥಿಕತೆ, ಸಮುದಾಯದ ಒಳವು ಸೇರಿದಂತೆ ಕರ್ನಾಟಕದ ಹಲವು ಆಯಾಮಗಳನ್ನು ಹಾಗೂ ಇವನ್ನಿಟ್ಟುಕೊಂಡು ಮಾಡಬೇಕಿರುವ ರಾಜಕೀಯ ಕೆಲಸವನ್ನು ವಿವರಿಸುತ್ತ ಹೋದರು ಎನ್ನಲಾಗಿದೆ.

ಯಾವ್ಯಾವ ಜಿಲ್ಲೆಗಳ ಯಾವ್ಯಾವ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೆವು, ಯಾವ್ಯಾವ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆವು, ಪಕ್ಷ ಒಡೆದದ್ದರಿಂದ ಎಷ್ಟು ನಷ್ಟವಾಯಿತು, ಪಕ್ಷದ ತಪ್ಪುಗಳಿಂದಲೇ ಯಾವ್ಯಾವ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದೆಲ್ಲ ವಿಶ್ಲೇಷಿಸಿರುವುದು ಒಂದೆಡೆ. ಅಲ್ಲದೇ, ನಾಳೆಯಿಂದಲೇ ಪ್ರಕ್ರಿಯೆಗಳೆಲ್ಲ ಶುರುವಾಗುತ್ತವೆ ಹಾಗೂ ರಣತಂತ್ರ ಕಾರ್ಯನೀತಿಯನ್ನು ಹೇಳಿದಂತೆ ಅನುಷ್ಠಾನಗೊಳಿಸಬೇಕೆಂದೂ ಆಕ್ರಮಣ ಮನೋಭಾವ ತೋರಿಸಿದರು ಎನ್ನಲಾಗಿದೆ.

‘ಗೆಲ್ಲುವ ಅಭ್ಯರ್ಥಿಗಳ ಕುರಿತು ಒಂದು ಪ್ರಾಥಮಿಕ ಪಟ್ಟಿ ನನ್ನ ಕೈಲಿದೆ. ಇದನ್ನು ನೀವು ಗಮನಿಸಿ.ಇವರಿಗಿಂತ ಉತ್ತಮ ಅಭ್ಯರ್ಥಿಗಳು ಇದ್ದರೆ ನನಗೆ ತಿಳಿಸಿ. ಸುಮ್ಮನೇ ಶಿಫಾರಸು ತಂದರಾಗಲಿಲ್ಲ. ಅದಕ್ಕೆ ಪೂರಕ ದಾಖಲೆ ನೀಡಬೇಕು. ತಮ್ಮವರು ತಮಗೆ ಬೇಡದವರು, ಎಂಬುದಂತೂ ಇಲ್ಲಿ ಬೇಡವೇ ಬೇಡ.’ ಎಂಬ ಖಡಕ್ ನುಡಿ ಅಮಿತ್ ಶಾರಿಂದ ಬಂದಿದೆ.

‘ಆರ್‍ಎಸ್‍ಎಸ್‍ನ ಕಾರ್ಯಕರ್ತರು, ಈಗಾಗಲೇ ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಂದ ಕೇಂದ್ರಕ್ಕೆ ನೇರವಾಗಿ ಮಾಹಿತಿ ಬರುತ್ತದೆ. ಇದು ನಿಮಗೆ ತಿಳಿದಿರಲಿ’ ಅಂತಲೂ ರಾಜ್ಯದ ನಾಯಕರನ್ನು ಹತೋಟಿಯಲ್ಲಿಡುವ ಅಸ್ತ್ರ ಪ್ರಯೋಗಿಸಿದ್ದಾರೆ ಅಮಿತ್ ಶಾ.

ಹೀಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬೆಳೆಸುವುದಕ್ಕೆ ಕರ್ನಾಟಕದ ಬಾಗಿಲನ್ನು ಮತ್ತೆ ತೆರೆಯುವ ಸರ್ವ ಪ್ರಯತ್ನದಲ್ಲಿದ್ದಾರೆ ಅಮಿತ್ ಶಾ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಹ, ಮಾಧ್ಯಮಗಳ ಕಣ್ಣಿಗೆ ಬೀಳದೇ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಇಬ್ಬರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಗುರುವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಮಿತ್ ಶಾ ಸಮ್ಮುಖದಲ್ಲೇ ಕೃಷ್ಣ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.

ಹೀಗೆಲ್ಲ ಅಮಿತ್ ಶಾ ನೇತೃತ್ವದ ರಣತಂತ್ರ ಸಮಿತಿಯೇ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಲಿದೆ ಎಂಬುದು ಕೇವಲ ಪಕ್ಷಮೂಲದಿಂದ ಬರುತ್ತಿರುವ ಮಾಹಿತಿ ಮಾತ್ರವೇ ಅಲ್ಲ. ಏಕೆಂದರೆ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಬಿ. ಎಸ್ ಯಡಿಯೂರಪ್ಪ ಹೇಳಿರುವುದು- ‘ಕೇಂದ್ರದಲ್ಲಿ ನರೇಂದ್ರ ಮೋದಿ ಸಾಧನೆಗಳು ಮತ್ತು ನೀತಿಗಳು ಹಾಗೂ ಅಮಿತ್ ಶಾ ಅವರ ಚಾಣಕ್ಯ ತಂತ್ರವೇ 2018ರಲ್ಲಿ ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲಿದೆ. ನಾನು ನೆಪ ಮಾತ್ರ.’

Leave a Reply