ಆನೆಕಲ್ ಬಿಜೆಪಿ ನಾಯಕನ ಬರ್ಬರ ಹತ್ಯೆ, ವ್ಯವಹಾರ- ರಾಜಕೀಯ ದ್ವೇಷದ ಶಂಕೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಮಂಗಳವಾರ ಬೆಳಗಿನ ಜಾವ ಆನೆಕಲ್ ತಾಲೂಕಿನ ಬಿಜೆಪಿ ನಾಯಕನ ಶ್ರೀನಿವಾಸ್ ಪ್ರಸಾದ್ ಬರ್ಬರವಾಗಿ ಕೊಲೆಯಾಗಿದ್ದಾರೆ. ದಲಿತ ಸಮುದಾಯದ ನಾಯಕರಾಗಿರುವ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಬೊಮ್ಮಸಂದ್ರ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬೆಳಗಿನ ಜಾವ 5.30ರ ಸುಮಾರಿಗೆ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ಕಿಟ್ಟಗನಹಳ್ಳಿ ವಾಸು ತಮ್ಮ ಇನೊವಾ ಕಾರಿನಲ್ಲಿ ಬೊಮ್ಮಸಂದ್ರದ ಬಿಟಿಎಲ್ ಕಾಲೇಜಿನ ಸಮೀಪಕ್ಕೆ ಆಗಮಿಸಿದಾಗ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದೆ. ಕೊಲೆಯ ಹಿಂದಿರುವ ಕಾರಣ ಏನು ಎಂಬುದು ಇನ್ನು ಪತ್ತೆಯಾಗಿಲ್ಲ. ಈ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.

ಶ್ರೀನಿವಾಸ್ ಅವರ ಪತ್ನಿ ಶೈಲಜಾ ಅವರೂ ರಾಜಕೀಯವಾಗಿ ಸಕ್ರಿಯವಾಗಿದ್ದು, ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ಸದಸ್ಯೆಯಾಗಿದ್ದಾರೆ. ಈ ಕೊಲೆಯ ಪ್ರಕರಣವನ್ನು ಹೆಬ್ಬಗೋಡಿ ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ನೀಡಿರುವ ಮಾಹಿತಿ ಹೀಗಿದೆ… ‘ಶ್ರೀನಿವಾಸ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿಯಾಗಿದೆ. ಶ್ರೀನಿವಾಸ್ ಅವರ ಕಾರನ್ನು ನಿಲ್ಲಿಸಿ ಅವರನ್ನು ಹೊರಗೆ ಎಳೆದು ಮಚ್ಚುಗಳಿಂದ ಹಲ್ಲೆ ಮಾಡಲಾಗಿದೆ. ಎದೆ ಹಾಗೂ ತಲೆ ಭಾಗಕ್ಕೆ ದೊಡ್ಡ ಪ್ರಮಾಣದ ಏಟು ಬಿದ್ದ ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಶ್ರೀನಿವಾಸ್ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಸಕ್ರಿಯವಾಗಿದ್ದರು. ಜತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ಈ ಪ್ರದೇಶದಲ್ಲಿ ರಾಜಕೀಯವಾಗಿಯೂ ಬೆಳೆಯಲು ಆರಂಭಿಸಿದ್ದರು. ಹೀಗಾಗಿ ವ್ಯವಹಾರ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟು ವೈರಿಗಳನ್ನು ಹೊಂದಿದ್ದರು. ಈ ಕೃತ್ಯದ ಹಿಂದೆ ವ್ಯವಹಾರ ಅಥವಾ ರಾಜಕೀಯ ದ್ವೇಷದ ಕಾರಣಗಳಿರಬಹುದು ಎಂದು ಊಹಿಸಲಾಗುತ್ತಿದೆ. ಈ ಎರಡು ಅಂಶಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.’

ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ದೊಡ್ಡ ಮಟ್ಟದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply