ಯು ವಾಂಟ್ ಟು ಬಿ ರಿಚ್ ಆರ್ ವೆಲ್ತಿ? ನೀವು ಹಣವಂತರಾಗಬೇಕಾ ಅಥವಾ ಸ್ಥಿತಿವಂತರಾಗಬೇಕಾ?

 

authors-rangaswamyಅವು ನನ್ನ ಕಾಲೇಜು ದಿನಗಳು ಪೈಸೆ ಪೈಸೆಗೂ ಒದ್ದಾಡಿದ ದಿನಗಳವು. ಅಂದಿನ ನನ್ನ ಆಪ್ತ ಮಿತ್ರ ನಾಗರಾಜನ ನುಡಿ ಇಂದಿಗೂ ಕಿವಿಯಲ್ಲಿದೆ. ಅವನು ಹೇಳುತಿದ್ದ ‘ದುಡಿದು ಉಳಿಸಿ, ಹೂಡಿಕೆ ಮಾಡಿ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ, ಶ್ರೀಮಂತರಾಗಲು ಶ್ರೀಮಂತರ ಮನೆಯಲ್ಲಿ ಹುಟ್ಟಬೇಕು’. ನನ್ನ ಅವನ ನಡುವಿನ ಈ ಮಾತಿಗೆ ಎರಡು ದಶಕ ಕಳೆದಿದೆ. ಇಂದಿಗೆ ಆ ಮಾತುಗಳು ಎಷ್ಟು ಜಾಳು ಎನಿಸುತ್ತದೆ. ಇದು ನಮ್ಮಿಬ್ಬರ ಕಥೆಯಲ್ಲ ಜಗತ್ತಿನ ಮುಕ್ಕಾಲು ಪಾಲು ಜನ ಇಂದಿಗೂ ಹಣವಂತ (ರಿಚ್ RICH ) ಮತ್ತು ಸ್ಥಿತಿವಂತ (ವೆಲ್ತಿ WEALTHY) ಪದಗಳನ್ನು ಒಂದೇ ಎನ್ನುವಂತೆ ಬಳಸುತ್ತಾರೆ . ನಿಮ್ಮ ಗುರಿ ಸರಿಯಿಲ್ಲದ ಮೇಲೆ ನೀವು ಆ ಗುರಿ ತಲುಪಿ ತಾನೇ ಏನು ಪ್ರಯೋಜನ? ಜಗತ್ತಿನ ಯಾವುದೇ ವ್ಯಕ್ತಿಯನ್ನು ಕೇಳಿ ಆತ ಹೇಳುವುದು ‘ಐ ವಾಂಟ್ ಟು ಬಿ ರಿಚ್’. ಹಲವು ಹತ್ತು ಪುಸ್ತಕಗಳು ಮಾರುಕಟ್ಟೆಯಲ್ಲಿ ‘ಬೆಸ್ಟ್ ಸೆಲ್ಲರ್ ‘ ಹೆಸರಿನಲ್ಲಿ ಇರುವುದು ಕೂಡ ‘ಹೌ ಟು ಬಿ ರಿಚ್’ ಅಂತಲೋ ಅಥವಾ ‘ಥಿಂಕ್ ಅಂಡ್ ಗ್ರೋ ರಿಚ್’  ಹೀಗೆ ಇನ್ನು ಹಲವು ಹೆಸರಲ್ಲಿ ಲಭ್ಯವಿದೆ. ಅವುಗಳ ಸಾರ ಒಂದೇ ಹಣವಂತನಾಗುವುದೇ ಪರಮ ಗುರಿ ಎನ್ನುವುದು.

ಗೆಳೆಯರೇ ನಿಮಗೇನು ಬೇಕು? ಅಥವಾ ಯಾವುದು ಸರಿ? ಎನ್ನುವುದನ್ನು ತಿಳಿಯದೆ ನಿಮ್ಮ ಹಣವಂತರಾಗುವಂತೆ ಮಾಡುವುದು ವಿದ್ಯೆಯಲ್ಲ ಅದೊಂದು ಮಾರ್ಕೆಟಿಂಗ್ ತಂತ್ರ. ನೀವು ದಾರಿ ತಪ್ಪಿ ಅಲೆದಷ್ಟೂ ಹಣಕಾಸಿನ ಚಾವಟಿ ಹಿಡಿದು ಸಮಾಜ ನೆಡೆಸುವ ಖದೀಮರಿಗೆ ಅನುಕೂಲ. ಇದಕ್ಕಿರುವ ಮದ್ದು ಒಂದೇ ಆದಷ್ಟು ಹಣಕಾಸು ಸಾಕ್ಷರತೆ ಹೊಂದುವುದು. ಹಾಗಾದರೆ ತಡವೇಕೆ? ಬನ್ನಿ ಹಣವಂತ (rich ) ಮತ್ತು ಸ್ಥಿತಿವಂತ (wealthy) ಪದಗಳ ನಡುವಿನ ವ್ಯತ್ಯಾಸವೇನು ನೋಡೋಣ. ಹಾಗೆಯೇ ಶ್ರೀಮಂತರಾಗಲು ಶ್ರೀಮಂತರ ಮನೆಯಲ್ಲಿ ಹುಟ್ಟುವುದಷ್ಟೇ ದಾರಿಯೇ? ಅಥವಾ ಬೇರೆ ದಾರಿಗಳು ಇವೆಯೇ? ತಿಳಿಯೋಣ.

ರಿಚ್ ಅಥವಾ ಹಣವಂತ ಎಂದರೆ ತನ್ನ ಖರ್ಚಿಗಿಂತ ಹೆಚ್ಚು ಹಣ ಹೊಂದಿರುವನು ಎಂದು ವ್ಯಾಖ್ಯಾನಿಸಬಹುದು. ಉದಾಹರಣೆಗೆ, ರಾಮನಿಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಎಂದುಕೊಳ್ಳಿ ಆತನ ಬೇಸಿಕ್ ಖರ್ಚು ಇಪ್ಪತೈದು ಸಾವಿರ ತಿಂಗಳಿಗೆ ಎಂದುಕೊಂಡರೆ. ಆತ ತಿಂಗಳಿಗೆ ಎಪ್ಪತೈದು ಸಾವಿರ ಉಳಿಸಬಹುದು, ಹೂಡಿಕೆ ಮಾಡಬಹುದು. ಆದರೆ ರಾಮ ಕಾರು.. ಪಾರ್ಟಿ ಹೀಗೆ ಅತ್ಯಂತ ಐಷಾರಾಮಿ ಬದುಕಿಗೆ ಒಗ್ಗಿಕೊಂಡು ಉಳಿಕೆಯ ಬಗ್ಗೆ ಹೂಡಿಕೆಯ ಬಗ್ಗೆ ಗಮನ ನೀಡಲಿಲ್ಲ. ಆತನ ಜೀವನ ಶೈಲಿ ಸಮಾಜದಲ್ಲಿ ಆತನಿಗೆ ಹಣವಂತ ಎನ್ನುವ ಹೆಸರು ತಂದು ಕೊಟ್ಟಿದೆ. ಆತನಿಗೆ ಸಾಲವೇನು ಇಲ್ಲ. ಆದರೆ ೧೦ ವರ್ಷದ ನಂತರವೋ ಹದಿನೈದು ವರ್ಷದ ನಂತರವೋ ಯಾವುದೊ ಕಾರಣದಿಂದ ಆತನಿಗೆ ತಿಂಗಳಿಗೆ ಬರುತಿದ್ದ ಸಂಬಳ ನಿಂತು ಹೋದರೆ? ಮುಂದಿನ ತಿಂಗಳು ಆದೆ ಮಟ್ಟದ ಜೀವನ ಶೈಲಿ ಆತ ನಡೆಸಬಹುದೇ?  ಇದು ನಮ್ಮ ಸಮಾಜದ ಹಣವಂತರ ಕಥೆ. ವಿಶೇಷವಾಗಿ ಯುವಕರ, ಮಧ್ಯ ವಯಸ್ಕರ ಕಥೆ. ವಿದೇಶಿ ಜೀವನ ಶೈಲಿ ನೀಡಿರುವ ಬಳುವಳಿ. ಇರಲಿ.

ಸ್ಥಿತಿವಂತ ಅಥವಾ ವೆಲ್ತಿ ಎಂದರೆ ತನ್ನ ಖರ್ಚು ತಾನು ದುಡಿಯದೆ ಗಳಿಸುವನು ಎನ್ನುವ ಅರ್ಥ ಕೊಡುತ್ತೆ. ಉದಾಹರಣೆ ನೋಡೋಣ ಸೋಮನಿಗೆ ತಿಂಗಳಿಗೆ ಇಪ್ಪತೈದು ಸಾವಿರ ರೂಪಾಯಿ ಖರ್ಚಿಗೆ ಬೇಕು. ಆತನಿಗೆ ಆ ಇಪ್ಪತೈದು ಸಾವಿರ ಕೆಲಸಕ್ಕೆ ಹೋಗದೆ ತನ್ನ ಹೂಡಿಕೆ ಮೇಲಿನ ಆದಾಯದ ರೂಪದಲ್ಲಿ ಬಂದರೆ ಸೋಮನನ್ನು ಸ್ಥಿತಿವಂತ ಎಂದು ಕರೆಯಬಹುದು. ಅಂದರೆ ಅರ್ಥ ಇಷ್ಟೇ ದುಡಿಮೆ ಶುರು ಮಾಡಿದ ದಿನದಿಂದ ಸರಿಯಾದ ಹೂಡಿಕೆ ಮಾಡಿಕೊಂಡು ಬಂದರೆ ಮುಂದೊಂದು ದಿನ ಕೆಲಸದ ಕೊರತೆ ಬಂದರೂ ತಿಂಗಳ ಖರ್ಚನ್ನು ಹೂಡಿಕೆಯ ಮೇಲಿನ ಆದಾಯದಿಂದ ಸರಿದೂಗಿಸುವ ಮಟ್ಟಕ್ಕೆ ತಲುಪಬೇಕು. ಇಂತಹ ಮಟ್ಟ ತಲುಪಿದವರನ್ನು ಸ್ಥಿತಿವಂತ ಎನ್ನಲು ಅಡ್ಡಿಯಿಲ್ಲ.

ಹೀಗೆ ಸ್ಥಿತಿವಂತರಾಗಲು ಆಸ್ತಿ ಮತ್ತು ಹೊಣೆಗಾರಿಕೆ (ಅಸೆಟ್ ಅಂಡ್ ಲಿಯಬಿಲಿಟಿ ) ನಡುವಿನ ಅಂತರ ತಿಳಿದಿರಬೇಕಾದ ಅವಶ್ಯಕತೆ ಇದೆ. ಹಲವು ವಾರಗಳ ಹಿಂದೆ ಇಲ್ಲೇ ಡಿಜಿಟಲ್ ಕನ್ನಡಲ್ಲಿ ಆಸ್ತಿ ಮತ್ತು ಹೊಣೆಗಾರಿಕೆ ನಡುವಿನ ಅಂತರವನ್ನು ಓದುಗರಿಗೆ ನೀಡಿದ್ದೇವೆ. ಸ್ಥಿತಿವಂತನನ್ನು ಬುದ್ದಿವಂತ ಎನ್ನಬಹುದು. ಎಲ್ಲಿ ಯಾವಾಗ ಎಷ್ಟು ಹೂಡಿಕೆ ಮಾಡಬೇಕು ಎನ್ನುವ ಅರಿವು ಇರಬೇಕು. ಹೀಗೆ ಹಂತ ಹಂತವಾಗಿ ದೀರ್ಘಕಾಲ ತಾನು ದೈಹಿಕವಾಗಿ ದುಡಿಯದೆ ಹಣದ ಮೂಲ ಕಲ್ಪಿಸಿಕೊಂಡವನು ಸ್ಥಿತಿವಂತ.
hana class

ಶ್ರೀಮಂತ ಅಥವಾ ರಿಚ್ ಹಣದಲ್ಲಿ ಅಳೆಯಲಾಗುತ್ತದೆ. ರಾಮನ ಬಳಿ ಒಂದು ಲಕ್ಷ ಇದೆ ಎನ್ನುವುದು ಆತ ಲಕ್ಷ ಹಣದಷ್ಟು ರಿಚ್ ಎನ್ನುವುದನ್ನು ಸೂಚಿಸುತ್ತೆ. ಆದರೆ ವೆಲ್ತ್ ಸಮಯದಲ್ಲಿ ಅಂದರೆ ಟೈಮ್ ನಲ್ಲಿ ಅಳೆಯಲಾಗುತ್ತದೆ. ಉದಾಹರಣೆಗೆ, ತಿಂಗಳ ಖರ್ಚು ಇಪ್ಪತೈದು ಸಾವಿರ ಎಂದು ಕೊಂಡರೆ ಒಂದು ಲಕ್ಷವನ್ನು ಇಪ್ಪತೈದರಿಂದ ಭಾಗಿಸಿದರೆ ಬರುವುದು 4. ಅಂದರೆ ನಾಲ್ಕು ತಿಂಗಳು ಆತ ತೊಂದರೆ ಇಲ್ಲದೆ ಜೀವಿಸಬಹುದು. ರಾಮ ನಾಲ್ಕು ತಿಂಗಳ ಮಟ್ಟಿಗೆ ಸ್ಥಿತಿವಂತ.

ಕಷ್ಟ ಹಣವಂತ ಮತ್ತು ಸ್ಥಿತಿವಂತ ಇಬ್ಬರಿಗೂ ಬರುತ್ತದೆ. ಹಣವಂತ ಕುಸಿದರೆ ಸ್ಥಿತಿವಂತ ಜೀವನವನ್ನ ಸಂಭಾಳಿಸಬಲ್ಲ.  ಜಗತ್ತಿನ ಬಹುಪಾಲು ಜನ ಇವೆರಡನ್ನೂ ಒಂದೇ ಎನ್ನುವಂತೆ ಭಾವಿಸಿದ್ದಾರೆ. ಅದು ತಪ್ಪು. ಮೂಲಭೂತ (fundamental) ವಿಷಯಗಳ ಗ್ರಹಿಕೆ ಸರಿ ಇಲ್ಲದಿದ್ದರೆ ಅಡಿಪಾಯ ಭದ್ರವಿಲ್ಲದೆ ಮಹಡಿ ಮನೆ ಕಟ್ಟಿದಂತೆ. ಈಗ ನೀವೇ ನಿರ್ಧರಿಸಿ ಶ್ರೀಮಂತ (ರಿಚ್) ರಾಗಬೇಕೋ? ಅಥವಾ ಸ್ಥಿತಿವಂತನೋ (ವೆಲ್ತಿ)? ಆಯ್ಕೆ ನಿಮ್ಮದು.

ಶ್ರೀಮಂತರಾಗಲು ಶ್ರೀಮಂತರ ಮನೆಯಲ್ಲೇ ಹುಟ್ಟಬೇಕು ಎನ್ನುವುದು ಶುದ್ಧ ಸುಳ್ಳು. ಶ್ರೀಮಂತನಿಗಿಂತ ಸ್ಥಿತಿವಂತರಾಗುವುದು ಉತ್ತಮ ಆಯ್ಕೆ. ಸಂಖ್ಯೆಗಳು (ನಂಬರ್ಸ್) ನಮ್ಮ ಹಣೆಬರಹವನ್ನು ಬದಲಿಸಬಲ್ಲವು. ಕಾಂಪೌಂಡ್ ಇಂಟರೆಸ್ಟ್ ಎನ್ನುವುದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ತಿಳಿದರೆ ಮತ್ತು ನಿತ್ಯ ಸ್ನಾನ, ಸಂಧ್ಯಾವಂದನೆ, ಊಟ, ತಿಂಡಿ ಹೇಗೆ ತಪ್ಪದೆ ಮಾಡುತ್ತೇವೆಯೋ, ಸೇವಿಸುತ್ತೇವೋ ಹಾಗೆಯೇ ಒಂದಷ್ಟು ಉಳಿಸುವ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವ ಅಭ್ಯಾಸ ಬೆಳಿಸಿ ಕೊಂಡದ್ದೇ ಆದಲ್ಲಿ ಜಗತ್ತಿನ ಬಹುತೇಕರು ಕೋಟ್ಯಧಿಪತಿಗಳಾಗಬಹದು.

ನೀವು ಹಣವಂತರೋ ಅಥವಾ ಸ್ಥಿತಿವಂತರೋ ಎಂದು ನಿರ್ಧರಿಸಿಕೊಳ್ಳಲು ಹೀಗೆ ಮಾಡಿ.

ಆದಾಯ ಎಲ್ಲಾ ಮೂಲಗಳಿಂದವನ್ನು ತಿಂಗಳ ಖರ್ಚಿನಿಂದ ಭಾಗಿಸಿ ಉತ್ತರ ೧ ಕ್ಕಿಂತ ಕಡಿಮೆ ಇದ್ದರೆ ನೀವು ಹಣವಂತರಲ್ಲ. ಒಂದಕ್ಕಿಂತ ಹೆಚ್ಚಿದ್ದರೆ ನೀವು ಹಣವಂತರು. ಒಂದಕ್ಕಿಂತ ಹೆಚ್ಚಿದ್ದು ನಿಮ್ಮ ಆದಾಯ ನೀವು ದೈಹಿಕವಾಗಿ ದುಡಿಯದೆ ಬರುತ್ತಿದ್ದರೆ ನೀವು ಸ್ಥಿತಿವಂತರು. ಇದನ್ನು ಸರಳವಾಗಿ ಎಲ್ಲಾ ಸ್ಥಿತಿವಂತರು ಶ್ರೀಮಂತರೇ ಆದರೆ ಎಲ್ಲಾ ಶ್ರೀಮಂತರು ಸ್ಥಿತಿವಂತರಲ್ಲ ಎಂದು ಹೇಳಬಹುದು.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply