ಪಾರಿಕರ್ ಪ್ರಮಾಣವಚನ ತಡೆಯಲು ಸುಪ್ರೀಂ ನಕಾರ, ಮಾ.16ಕ್ಕೆ ವಿಶ್ವಾಸಮತ ಸಾಬೀತಿಗೆ ಆದೇಶ

ಡಿಜಿಟಲ್ ಕನ್ನಡ ಟೀಮ್:

ಗೋವಾದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೂ ಅಲ್ಲಿಯೂ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಕಾರಣ, ಗೋವಾ ರಾಜ್ಯಪಾಲರು ಬಿಜೆಪಿಯ ಮನೋಹರ್ ಪಾರಿಕರ್ ಅವರಿಗೆ ಸರ್ಕಾರ ರಚಿಸಲು ನೀಡಿದ್ದ ಆಹ್ವಾನವನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಗುರುವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಲು ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪ್ರಮಾಣ ವಚನ ನಿಗದಿಯಂತೆ ಇಂದು ಸಂಜೆ ನಡೆಯಲಿದೆ. (ಅಪ್ಡೇಟೆಡ್- ಸಂಜೆ ಮನೋಹರ ಪಾರಿಕರ್ ಅವರು ತಮ್ಮ ಒಂಬತ್ತು ಸಂಪುಟ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.)

ಗೋವಾದ 40 ಸ್ಥಾನಗಳ ಪೈಕಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ನಂತರದ ಸ್ಥಾನದಲ್ಲಿ ಬಿಜೆಪಿ 13, ಗೋವಾ ಫಾರ್ವರ್ಡ್ 3, ಎಂಜಿಪಿ 3, ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೋವಾಗೆ ಆಗಮಿಸಿದ್ದ ಮನೋಹರ್ ಪಾರಿಕರ್, ಸ್ಥಳೀಯ ಪಕ್ಷಗಳು ಹಾಗೂ ಪಕ್ಷೇತ್ರರನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ನಿರತರಾದರು. ಈ ಹಂತದಲ್ಲಿ ಯಾಮಾರಿದ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳಲು ಆರಂಭಿಸಿತು. ಭಾನುವಾರ ಪಾರಿಕರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಬೆಂಬಲಿತ ಶಾಸಕರ ಪಟ್ಟಿಯನ್ನು ನೀಡಿ ಸರ್ಕಾರ ರಚಿಸಲು ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ರಾಜ್ಯಪಾಲರು ಸಮ್ಮತಿ ಸೂಚಿಸಿದರು.

ಈ ವೇಳೆ ಅತಿ ಹೆಚ್ಚು ಪಕ್ಷವಾಗಿರುವ ನಮಗೆ ಮೊದಲು ಸರ್ಕಾರ ರಚಿಸುವ ಅವಕಾಶ ನೀಡಬೇಕು. ಆದರೆ ರಾಜ್ಯಪಾಲರು ಕೇಂದ್ರದ ಲಾಭಿಗೆ ಮಣಿದು ಪ್ರಜಾಪ್ರಭುತ್ವದ ವಿರೋಧಿ ಹೆಜ್ಜೆ ಇಟ್ಟಿದ್ದಾರೆ ಎಂದು ಟೀಕೆ ಆರಂಭಿಸಿತು. ನಂತರ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ಇಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕಾಂಗ್ರೆಸ್ ಪಕ್ಷಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿತು. ‘ನೀವು ರಾಜ್ಯಪಾಲರಿಗೆ ನಿಮ್ಮ ಬೆಂಬಲಿತ ಶಾಸಕರ ಪಟ್ಟಿಯನ್ನು ನೀಡಿದ್ದೀರಾ? ಒಂದು ವೇಳೆ ನಿಮಗೆ ಬಹುಮತ ಇದ್ದಿದ್ದೇ ಆದರೆ, ರಾಜಭವನದ ಮುಂದೆ ಪ್ರತಿಭಟಿಸಬಹುದಿತ್ತಲ್ಲವೇ. ನಿಮಲ್ಲಿ ಸಾಕಷ್ಟು ಕಾಲಾವಕಾಶವಿದ್ದರೂ ಸರ್ಕಾರ ರಚಿಸಲು ನಿಮಗಿರುವ ಬೆಂಬಲಿತ ಶಾಸಕರಿಂದ ಒಂದೇ ಒಂದು ಅಫಿಡೆವಿಟ್ ಸಲ್ಲಿಕೆಯಾಗಲಿಲ್ಲ ಏಕೆ? ಸರ್ಕಾರ ರಚನೆಗಾಗಿ ನೀವು ರಾಜ್ಯಪಾಲರಿಗೆ ಮನವಿ ಸಲ್ಲಿಸಲಿಲ್ಲ ಏಕೆ?’

ಈ ವೇಳೆ ಕಾಂಗ್ರೆಸ್ ಇಂದೇ ಬಹುಮತ ಸಾಬೀತುಪಡಿಸಲು ನಿರ್ದೇಶನ ನೀಡಿ. ನಮಗೆ ಬಹುಮತವಿದೆ ನಾವು ಅದನ್ನು ಸಾಬೀತುಪಡಿಸುತ್ತೇವೆ ಎಂದು ಕೋರಿತು. ಆಗ ಈ ಬಗ್ಗೆ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಪ್ರಮಾಣವಚನ ಸಮಾರಂಭಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಜತೆಗೆ ಇಂದೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಆದೇಶ ನೀಡಿತು. ಈ ಬಹುಮತ ಸಾಬೀತು ಪ್ರಕ್ರಿಯೆ ವೇಳೆ ಅತ್ಯಂತ ಹಿರಿಯ ಶಾಸಕರು ಸ್ಪೀಕರ್ ಆಗಿ ಈ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದು ಸೂಚಿಸಿತು.

Leave a Reply