ನಾಳೆ ರಾಜ್ಯ ಬಜೆಟ್- ಗರಿಗೆದರಿದ ನಿರೀಕ್ಷೆಗಳು, ಅಂಗನವಾಡಿ ಕಾರ್ಯಕರ್ತೆ- ಸಹಾಯಕಿಯರ ಸಹಾಯ ಧನ ಹೆಚ್ಚಳ, ಲೋಕಸಭೆಯಲ್ಲಿ ಪಾಸಾಯ್ತು ವೈರಿ ಆಸ್ತಿ ತಿದ್ದುಪಡಿ ವಿಧೇಯಕ

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಬೆಳೆ ನಷ್ಟ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ “ಸಂರಕ್ಷಣೆ ತಂತ್ರಾಂಶ” ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಈ ಮಾದರಿಯ ತಂತ್ರಾಂಶವನ್ನು ರೂಪಿಸಿದ್ದು, ಈ ಕಾರ್ಯಕ್ರಮದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್ ಕೆ ಪಾಟೀಲ್ ಮತ್ತು ಕೃಷ್ಣ ಬೈರೇಗೌಡ ಉಪಸ್ಥಿತರಿದ್ದರು.

ಡಿಜಿಟಲ್ ಕನ್ನಡ ಟೀಮ್:

ನಾಳೆ ರಾಜ್ಯ ಬಜೆಟ್

ರೈತರ ಸಾಲ ಮನ್ನಾ, ಬಡವರಿಗೆ ಉಚಿತ ಚಿಕಿತ್ಸೆ, ಆರ್ಥಿಕ ದುರ್ಬಲರಿಗೆ ವ್ಯಾಸಂಗಕ್ಕೆ ನೆರವು ಸೇರಿದಂತೆ 25ಕ್ಕೂ ಹೆಚ್ಚು ಜನಪ್ರಿಯ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಂಡಿಸಲಿರುವ ಬಜೆಟ್ ನಲ್ಲಿ ಘೋಷಿಸುವ ನಿರೀಕ್ಷೆ ಇದೆ.

ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾಗಲಿದ್ದು, ಇದರ ಗಾತ್ರ ಸುಮಾರು ₹2 ಲಕ್ಷ ಕೋಟಿ ಆಸುಪಾಸಿನಲ್ಲಿರುವ ನಿರೀಕ್ಷೆ ಇದೆ. ಬಜೆಟ್ ಹೇಗಿರಬೇಕು ಎಂಬುದರ ಕುರಿತು ಮಂತ್ರಿ ಮಂಡಲದ ಹಲವು ಸಚಿವರ ತಂಡದ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪಕ್ಷದ ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ ಜಯಚಂದ್ರ, ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್ ಸೇರಿದಂತೆ ಹಲವು ಸಚಿವರಿದ್ದ ತಂಡ ಸುಮಾರು 27 ಯೋಜನೆಗಳನ್ನು ಬಜೆಟ್ ನಲ್ಲಿ ಮಂಡಿಸಲು ಶಿಫಾರಸ್ಸು ನೀಡಿದೆ. ಆ ಮೂಲಕ ರಾಜ್ಯದ ಎಲ್ಲ ಜನಸಮುದಾಯಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ತಲುಪುವ ಯೋಜನೆಗಳನ್ನು ಬಜೆಟ್ ನಲ್ಲಿ ಸೇರಿಸಿರುವುದಾಗಿ ಮೂಲಗಳು ತಿಳಿಸಿವೆ. ಕಳೆದ ವರ್ಷ ₹ 1.63 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, ಈ ಬಾರಿ ನೋಟು ಅಮಾನ್ಯ ನಿರ್ಧಾರದಿಂದ ನಷ್ಟ ಆಗಿರುವುದರಿಂದ ಈ ಗಾತ್ರವನ್ನು ದೊಡ್ಡ ಪ್ರಮಾಣಕ್ಕೆ ವಿಸ್ತರಿಸಲು ಸಿದ್ದರಾಮಯ್ಯನವರು ಮನಸ್ಸು ಮಾಡಿಲ್ಲ ಎಂದು ಹೇಳಲಾಗಿದೆ. ಮುಂದಿನ ವರ್ಷ ಚುನಾವಣೆ ಹಿನ್ನೆಲೆಯಲ್ಲಿ ಈ ಬಜೆಟ್ ಸರ್ಕಾರದ ಪಾಲಿಗೆ ಮಹತ್ವದ್ದಾಗಿದ್ದು, ಹೀಗಾಗಿ ನಾಳಿನ ಬಜೆಟ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ.

ಬಜೆಟ್ ಪೂರ್ವಭಾವಿ ತಯಾರಿ ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪತ್ರಿಕಾ ಸಂಪಾದಕರೊಟ್ಟಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚರಾಜ್ಯ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದರು. ‘ಈ ಐದು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದಿಯೇ ಹೊರತು ಮೋದಿ ಅಲೆಯಲ್ಲ. ಬಿಜೆಪಿಯ ಸವಾಲಿಗೆ ಪ್ರತ್ಯುತ್ತರ ನೀಡಲು ಸಜ್ಜಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ನಮ್ಮ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದೆ ಇಟ್ಟು ಮತಯಾಚಿಸುತ್ತೇವೆ. ಬಿಜೆಪಿ ಅವರು ಹೇಳಿಕೊಂಡು ತಿರುಗುವಂತೆ ಚುನಾವಣೆಯಲ್ಲಿ 150 ಕ್ಷೇತ್ರಗಳನ್ನು ಗೆಲ್ಲುವುದು ಕಡ್ಲೇಪುರಿ ತಿಂದಷ್ಟು ಸುಲಭವಲ್ಲ. ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯುತ್ತದೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ’ ಎಂದರು.

ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಚಿಕಿತ್ಸೆಗೆ ಧನ ಸಹಾಯ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇವೆಯಲ್ಲಿರುವಾಗ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದರೆ ಅವರಿಗೆ ₹ 50 ಸಾವಿರ ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತ ಆದೇಶವನ್ನು ಇಂದು ಪ್ರಕಟಿಸಿದ್ದು, ಇವರು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟರೆ ಅವರ ಅಂತಿಮ ಸಂಸ್ಕಾರಕ್ಕೆಂದು ಕುಟುಂಬದವರಿಗೆ ನೀಡಲಾಗುತ್ತಿದ್ದ ನೆರವಿನ ಪ್ರಮಾಣವನ್ನು ₹ 1 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸಲಾಗಿದೆ.

20 ವರ್ಷದಿಂದ ಸಂತ್ರಸ್ತರಿಗೆ ಸಿಗದ ಪರಿಹಾರ

ಆಲಮಟ್ಟಿ ಜಯಾಶಯ ನಿರ್ಮಾಣದಿಂದ ಜಮೀನು ಕಳೆದುಕೊಂಡ ಸಂತ್ರಸ್ತರು ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಈವರೆಗೂ ಅವರಿಗೆ ಪರಿಹಾರ ಸಿಕ್ಕಿಲ್ಲ. ಭೂಮಿ ಕಳೆದುಕೊಂಡಿರುವ ಸಂತ್ರಸ್ಥರಿಗೆ ತಕ್ಷಣವೇ ಪರಿಹಾರ ನೀಡಬೇಕು, ಮುಂದಿನ 50 ವರ್ಷಗಳ ಜನಸಂಖ್ಯಾ ಬೆಳವಣಿಗೆಗೆ ಅನುಗುಣವಾಗಿ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಬೇಕೆಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ. ಈ ಸಂತ್ರಸ್ಥರಿಗೆ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಬೇಕು. ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಮಾನದಂಡವಾಗಿಟ್ಟುಕೊಂಡು ಪ್ರತಿ ಎಕರೆಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ 40 ಲಕ್ಷ ನಿಗದಿ ಮಾಡಿ ಏಕರೂಪ ಬೆಲೆ ನೀಡಬೇಕು ಎಂದು ಆಗ್ರಹಿಸಿತು.

ಲೋಕಸಭೆಯಲ್ಲಿ ಪಾಸ್ ಆಯ್ತು ವೈರಿ ಆಸ್ತಿ ವಿಧೇಯಕ

ದೇಶ ವಿಭಜನೆ ಸಂದರ್ಭದಲ್ಲಿ ಭಾರತವನ್ನು ತೊರೆದು ಪಾಕಿಸ್ತಾನ ಹಾಗೂ ಚೀನಾಕ್ಕೆ ವಲಸೆ ಹೋದವರ ಆಸ್ತಿಯನ್ನು ಅವರ ತಲೆಮಾರಿನವರು ಕೇಳುವಂತಿಲ್ಲ ಎಂಬ ವೈರಿ ಆಸ್ತಿ ವಿಧೇಯಕವನ್ನು ಲೋಕಸಭೆಯಲ್ಲಿ ಇಂದು ಪಾಸ್ ಮಾಡಲಾಯಿತು. ಇದು 1968 ರಲ್ಲಿ ಜಾರಿಗೆ ಬಂದಿದ್ದ ವೈರಿ ಆಸ್ತಿ ಕಾಯ್ದೆಯ ತಿದ್ದುಪಡಿ ಮಸೂದೆಯಾಗಿದೆ. ಈ ಮಸೂದೆ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಕೆಲವು ತಿದ್ದುಪಡಿಗಳಿಗೆ ಶಿಫಾರಸ್ಸು ಮಾಡಲಾಗಿತ್ತು. ಅದನ್ನು ಸರಿಪಡಿಸಿದ ನಂತರ ಇಂದು ಈ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.

ಇನ್ನು ಲೋಕಸಭೆಯಲ್ಲಿ ಮಾತನಾಡಿದ ಕೋಲಾರದ ಸಂಸದ ಕೆ.ಎಚ್ ಮುನಿಯಪ್ಪ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಸರ್ಕಾರ ರಚನೆ ವಿಷಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ತಿಕ್ಕಾಟದ ವಿಷಯವನ್ನು ಪ್ರಸ್ತಾಪಿಸಿದರಲ್ಲದೇ, ಕರ್ನಾಟಕದಲ್ಲಿ ರೈಲ್ವೇ ಸಂಪರ್ಕ ಅಭಿವೃದ್ಧಿ, ಮೀಟರ್ ಗೇಜ್ ರೈಲ್ವೈ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವ ವಿಷಯವನ್ನು ಮಂಡಿಸಿದರು. ‘ಬಿಜೆಪಿಯವರ ದೂರದೃಷ್ಟಿಯನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಆದರೆ ಆ ದೂರದೃಷ್ಟಿ ಫಲಿತಾಂಶದಾಯಕವಾಗಿರಲಿ. ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧವಿದ್ದು, ಕರ್ನಾಟಕದಲ್ಲಿನ ಯೋಜನೆಗಳ ಬಗ್ಗೆ ಗಮನ ಹರಿಸಿ. ಇನ್ನು ಇಂದು ಸಂಸತ್ತಿನಲ್ಲಿ ಕಪ್ಪು ದಿನವಾಗಲಿದೆ. ಗೋವಾ ಮತ್ತು ಮಣಿಪುರದಲ್ಲಿ ಹೆಚ್ಚಿನ ಜನರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ. ನಾವು ಜನಾದೇಶವನ್ನು ಗೌರವಿಸಬೇಕು. ಆದರೆ ಅದು ಆಗುತ್ತಿಲ್ಲ. ನಾವು ಉತ್ತರ ಪ್ರದೇಶದಲ್ಲಿನ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಗೋವಾ ಮತ್ತು ಮಣಿಪುರದಲ್ಲಿ ಅಲ್ಲ’ ಎಂದರು. ಆಗ ಸಂಸತ್ತಿನಲ್ಲಿದ್ದ ಇತರೆ ಕಾಂಗ್ರೆಸ್ ಸದಸ್ಯರು ‘ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ಕೂಗಿದರು.

ಬಿಜೆಪಿ ನಾಯಕನ ಹತ್ಯೆ

ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಮಂಗಳವಾರ ಬೆಳಗಿನ ಜಾವ ಆನೆಕಲ್ ತಾಲೂಕಿನ ಬಿಜೆಪಿ ನಾಯಕನ ಶ್ರೀನಿವಾಸ್ ಪ್ರಸಾದ್ ಬರ್ಬರವಾಗಿ ಕೊಲೆಯಾಗಿದ್ದಾರೆ. ದಲಿತ ಸಮುದಾಯದ ನಾಯಕರಾಗಿರುವ ಶ್ರೀನಿವಾಸ್ ಪ್ರಸಾದ್ ಬಿಜೆಪಿಯಿಂದ ಬೊಮ್ಮಸಂದ್ರ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಬೆಳಗಿನ ಜಾವ 5.30ರ ಸುಮಾರಿಗೆ ಶ್ರೀನಿವಾಸ್ ಪ್ರಸಾದ್ ಅಲಿಯಾಸ್ ಕಿಟ್ಟಗನಹಳ್ಳಿ ವಾಸು ತಮ್ಮ ಇನೊವಾ ಕಾರಿನಲ್ಲಿ ಬೊಮ್ಮಸಂದ್ರದ ಬಿಟಿಎಲ್ ಕಾಲೇಜಿನ ಸಮೀಪಕ್ಕೆ ಆಗಮಿಸಿದಾಗ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದೆ. ಕೊಲೆಯ ಹಿಂದಿರುವ ಕಾರಣ ಏನು ಎಂಬುದು ಇನ್ನು ಪತ್ತೆಯಾಗಿಲ್ಲ. ಈ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಈ ಕುರಿತ ವಿವರವಾದ ವರದಿ ಇಲ್ಲಿ ಓದಿ.

Leave a Reply