ಕುಡ್ಕಂಡು ತಿನ್ಕಂಡು ಚೆನ್ನಾಗಿರಿ, ಸಿಟ್ಟಾಗಿ ಸರ್ಕಾರ ಬಯ್ಯದಿರಿ: ಸಿದ್ದರಾಮಯ್ಯ ಆಯವ್ಯಯ ಗಾನ!

ಡಿಜಿಟಲ್ ಕನ್ನಡ ಟೀಮ್:

ಚಿಯರ್ಸ್.. ಹೆಂಡದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ತೆಗೆದುಹಾಕಲಾಗಿದೆ. ವೈನ್, ಬಿಯರ್ ಮತ್ತು ಹಾರ್ಡ್ ಲಿಕ್ಕರ್ ಮೇಲಿನ ಮೌಲ್ಯ ವರ್ಧಿತ ತೆರಿಗೆಯನ್ನೂ ತೆಗೆದುಹಾಕುವ ಪ್ರಸ್ತಾಪ ಆಯವ್ಯಯದಲ್ಲಿದೆ. ಮದ್ಯದ ರಫ್ತಿನ ಮೇಲಿದ್ದ ಲೀಟರಿಗೆ 2 ರು. ಆಡಳಿತಾತ್ಮಕ ತೆರಿಗೆ, ಸ್ಪಿರಿಟ್ (ಎಥೆನಾಲ್ ಹೊರತುಪಡಿಸಿ) ಮೇಲಿದ್ದ ರು1 ತೆರಿಗೆ ಇವನ್ನೂ ರದ್ದುಪಡಿಸಲಾಗಿದೆ.

ಈ ಘೋಷಣೆಗಳು ಹೊರಬೀಳುತ್ತಿದ್ದಂತೆ ಯುನೈಟೆಟ್ ಸ್ಪಿರಿಟ್ ಸೇರಿದಂತೆ ಹಲವು ಮದ್ಯ ಕಂಪನಿಗಳ ಶೇರು ಚಿಗಿತುಕೊಂಡಿದ್ದಾಗಿ ಮಾರುಕಟ್ಟೆ ವರದಿ ಸಾರಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪ್ರಾರಂಭವಾಗಲಿರುವ ನಮ್ಮ ಕ್ಯಾಂಟೀನ್ ಯೋಜನೆಯನ್ನೂ ಇಲ್ಲಿ ಬೆಸುಗೆ ಹಾಕೋಣ. ₹5ರ ಬೆಳಗಿನ ತಿಂಡಿ, ₹10 ಊಟ…

ಆಯವ್ಯಯ ಪುಸ್ತಕದ ತೆರಿಗೆ ಪ್ರಸ್ತಾಪದಲ್ಲಿ ಆಹಾರ ಲೆಕ್ಕಾಚಾರಕ್ಕೆ ತಳುಕುಹಾಕಿಕೊಂಡಿರುವ ಇನ್ನೊಂದೆರಡು ಘೋಷಣೆಗಳೂ ಇವೆ. ಭತ್ತ, ಅಕ್ಕಿ, ಗೋದಿ, ಬೇಳೆಕಾಳುಗಳು, ಸಂಸ್ಕರಿಸಿದ ರಾಗಿ ಹಾಗೂ ಗೋದಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯತಿ ಎಂದು ಸಾರಲಾಗಿದೆ.

ಇತ್ತೀಚೆಗೆ ಆರೋಗ್ಯ ಕಾಳಜಿ ಕಾರಣದಿಂದ ಸಿರಿಧಾನ್ಯಗಳು ಸುದ್ದಿಯಲ್ಲಿವೆಯಷ್ಟೆ. ನವಣೆ, ಸಾಮೆ, ಆರಕ, ಬರಗು ಇವುಗಳ ಹಿಟ್ಟಿಗೆ ತೆರಿಗೆ ವಿನಾಯತಿ ನೀಡಿರುವುದಾಗಿ ಘೋಷಿಸಲಾಗಿದೆ. ದ್ವಿದಳ ಧಾನ್ಯಗಳಿಗೂ ತೆರಿಗೆ ವಿನಾಯತಿ ಎನ್ನಲಾಗಿದೆ.

ಇನ್ನು, ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಆಹಾರಧಾನ್ಯ ಪ್ರಮಾಣ ಪ್ರತಿವ್ಯಕ್ತಿಗೆ ₹7 ಕೆಜಿ ಏರಿಕೆ.

ಹೇಳಿಕೇಳಿ ಮುಂದಿರುವುದು ಚುನಾವಣಾ ವರ್ಷ. ಅದಾಗಿಲ್ಲ, ಇದು ಸರಿಯಿಲ್ಲ ಎಂದೆಲ್ಲ ಸರ್ಕಾರದ ಮೇಲೆ ಸಿಟ್ಟಾಗದೇ ಕುಡ್ಕಂಡು- ತಿನ್ಕಂಡು ಆರಾಮಾಗಿರು ಎಂದರಾ ಸಿದ್ದರಾಮಯ್ಯ?

Leave a Reply