ಸಿದ್ದರಾಮಯ್ಯ ಆಯವ್ಯಯದಲ್ಲಿ ಅಂಕಿಅಂಶಗಳಾಚೆ ಜನಪ್ರಿಯ ದೃಷ್ಟಿಗೆ ಸಿಲುಕಬಹುದಾದ ಅಂಶಗಳು ಇಷ್ಟು…

 

ಡಿಜಿಟಲ್ ಕನ್ನಡ ಟೀಮ್:

 2017-18ನೇ ಸಾಲಿಗೆ 1,86,561 ಕೋಟಿ ರುಪಾಯಿಗಳ ರಾಜ್ಯ ಆಯವ್ಯಯ ಮಂಡಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 14.16ರ ಹೆಚ್ಚಳ.

ಕೃಷಿಗೆಷ್ಟು, ಕೈಗಾರಿಕೆಗೆಷ್ಟು ಎಂದೆಲ್ಲ ವಿಭಾಗಿಸುವ ಮೊದಲು ಜನಕ್ಕೆ ತಟ್ಟಂಥ ಆಕರ್ಷಣೆ ಎನಿಸುವ ಅಂಶಗಳನ್ನು ಹೀಗೆ ಗುರುತಿಸಬಹುದು.

– ತಮಿಳುನಾಡಿನ ಜನಪ್ರಿಯ ರಾಜಕಾರಣವನ್ನು ಅನುಸರಿಸಿರುವ ಸಿದ್ದರಾಮಯ್ಯ ಬೆಂಗಳೂರಿನಲ್ಲಿ 198 ಸ್ಥಳಗಳಲ್ಲಿ ಅಗ್ಗದ ನಮ್ಮ ಕ್ಯಾಂಟೀನ್ ಆರಂಭಿಸುವ ಘೋಷಣೆ ನೀಡಿದ್ದಾರೆ. 5 ರುಪಾಯಿಗೆ ತಿಂಡಿ ಮತ್ತು 10 ರುಪಾಯಿಗೆ ಊಟ ಎಂಬ ಈ ಯೋಜನೆ ಜನಪ್ರಿಯ ಮತ ಸೆಳೆಯುವಲ್ಲೂ ಸಹಾಯಕಾರಿಯಾಗುವುದರಲ್ಲಿ ಸಂಶಯವಿಲ್ಲ.

– ಗರ್ಭಿಣಿಯರಿಗೆ ಪೌಷ್ಟಿಕಾಂಶದ ಮಧ್ಯಾಹ್ನದ ಊಟ ನೀಡುವ ಯೋಜನೆಯೂ ಜನರನ್ನು ಭಾವನಾತ್ಮಕವಾಗಿ ಸೆಳೆಯುವುದರಲ್ಲಿ ಆಶ್ಚರ್ಯವಿಲ್ಲ. ಕೇಂದ್ರ ಸಹ ಸಹಾಯಧನದ ಯೋಜನೆಯನ್ನು ಜಾರಿಗೆ ತಂದಿದೆಯಾದ್ದರಿಂದ ಇದನ್ನು ಹೀಗಳೆಯುವ ಸ್ಥಿತಿಯಲ್ಲೂ ಬಿಜೆಪಿ ಇಲ್ಲ.

ಹೀಗೆ ಜನರನ್ನು ಭಾವನಾತ್ಮಕವಾಗಿ ಸೆಳೆಯಬಲ್ಲ ಜನಪ್ರಿಯ ಯೋಜನೆಗಳ ನಂತರ, ಇವತ್ತಿನ ರಾಜಕಾರಣದಲ್ಲಿ ಟ್ರೆಂಟ್ ಆಗುತ್ತಿರುವ ‘ಅಭಿವೃದ್ಧಿಶೀಲ’ ಎಂಬುದಕ್ಕೆ ಹೊಂದಿಕೊಳ್ಳುವಂತೆ ಜನಮಾನಸಕ್ಕೆ ತಟ್ಟನೇ ಸ್ಪರ್ಶಿಸಬಲ್ಲ ಯೋಜನೆಗಳನ್ನು ನೋಡೋಣ.

– ಬಸ್ ಹೆಚ್ಚಿನ ಸಂಖ್ಯೆಯಲ್ಲಿ ಬೇಕು ಎಂಬುದು ಇತ್ತೀಚೆಗೆ ಗಟ್ಟಿಯಾಗಿ ಕೇಳಿಬರುತ್ತಿದ್ದ ಬೇಡಿಕೆ. ಕೆಎಸ್ ಆಟಿಸಿಗೆ 3250 ಬಸ್ ಗಳು ಹಾಗೂ ಬೆಂಗಳೂರು ನಗರಕ್ಕೆ 150 ಎಲೆಕ್ಟ್ರಿಕ್ ಬಸ್ಗಳು ಎನ್ನಲಾಗಿದೆ. ಅಲ್ಲದೇ ಬಿಎಂಟಿಸಿಯಿಂದ 3 ಸಾವಿರ ಬಸ್ಸು ಖರೀದಿಗೆ ಸಹಕಾರ ನೀಡುವ ಭರವಸೆ ಇದೆ. ಇದು ಮುಂದಿನ ದಿನಗಳಲ್ಲಿ ಸರಿಯಾಗಿ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಜನರಿಗೆ ಈ ಸುಖಾನುಭವ ಮುಟ್ಟುತ್ತದೆ. ಆಯವ್ಯಯದ ಅಂಕಿ ಅಂಶಗಳಾಚೆಗೆ ನೇರವಾಗಿ ಜನರನ್ನು ಮುಟ್ಟಬಲ್ಲಂಥ ಶಕ್ತಿ ಇರುವ ಯೋಜನೆಗಳ ಪೈಕಿ ಇದೊಂದು.

– ಸೂಕ್ತ ಅನುಷ್ಠಾನದ ಮೂಲಕ ಜನರ ಹೃದಯಗಳನ್ನು ತಾಗಬಲ್ಲ ಇನ್ನೊಂದು ಕನಸೆಂದೆರೆ ‘ಕೆರೆ ಸಂಜೀವಿನಿ.’ ಮಲೆನಾಡಿನ ಹಳ್ಳಿಗಳಲ್ಲೂ ಕಳೆದೆರಡು ವರ್ಷಗಳಿಂದ ನೀರಿನ ಸಮಸ್ಯೆ ಶುರುವಾಗಿದೆ. ಕಾರಣ ಕಡಿಮೆ ಮಳೆ. ನೀರನ್ನು ಹಿಡಿದಿಡುವ ದೊಡ್ಡ ಆಕರಗಳೆಂದರೆ ಕೆರೆಗಳು. ನದಿ-ಕಾಲುವೆಗಳೆಲ್ಲ ಅವು ಹರಿದಿರುವ ಪ್ರದೇಶಕ್ಕಷ್ಟೇ ಸಮಾಧಾನ ತರಬಲ್ಲವು. ಆದರೆ ಕೆರೆಗಳು ಎಲ್ಲ ಊರುಗಳ ಜೀವ ಖಜಾನೆಗಳು. ಈ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವುದಕ್ಕೆ ಆಯವ್ಯದಲ್ಲಿ ವಿಶೇಷ ಗಮನ ನೀಡಿರುವುದು ಸ್ವಾಗತಾರ್ಹ. ರಾಜ್ಯದ ಎಲ್ಲ ಕೆರೆಗಳನ್ನು ಅಳತೆ ಮಾಡುವುದಕ್ಕೆಂದೇ 10 ಕೋಟಿ ರುಪಾಯಿಗಳ ವೆಚ್ಚದಲ್ಲಿ ಜಿಲ್ಲಾವಾರು ಕಾರ್ಯಪಡೆ ನೇಮಕದ ಘೋಷಣೆ ಆಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಡೆಯಲಿರುವ ಈ ಕಾರ್ಯಕ್ಕೆ ನೂರು ಕೋಟಿ ರುಪಾಯಿಗಳನ್ನು ಎತ್ತಿಡಲಾಗಿದೆ. ನೀರಿನ ಸಮಸ್ಯೆ ಎಲ್ಲೆಡೆ ತೀವ್ರವಾಗುತ್ತಿರುವ ದಿನಗಳಲ್ಲಿ ಇದು ಉತ್ತಮ ಯೋಜನೆ. ಆದರೆ ಫಲ ನೀಡಿಕೆಗೆ ವರ್ಷ-ಎರಡು ವರ್ಷ ತೆಗೆದುಕೊಳ್ಳುತ್ತದೆ. ನಿಜಕ್ಕೂ ಆಸ್ತೆ ವಹಿಸಿ ಮಾಡಿದಲ್ಲಿ ಗ್ರಾಮೀಣರ ಬದುಕನ್ನು ಸಹನೀಯಗೊಳಿಸುವ ಶಕ್ತಿ ಇದಕ್ಕಿದೆ. ಇದಕ್ಕೆ ಪೂರಕವಾಗಿ ಏತ ನೀರಾವರಿ ಮೂಲಕ ಯಾದಗಿರಿ, ಬಸವಕಲ್ಯಾಣ, ರಾಯಭಾಗ, ರಾಣೆಬೆನ್ನೂರು, ಹಿರೇಕೆರೂರು, ಇಟಗಿ ಇಲ್ಲೆಲ್ಲ ಕೆರೆ ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿರುವುದು ವಿಕಾಸದ ನಡೆ.

– ಮುಂದಾಗುವುದೋ ಬಿಡುವುದೋ ಆದರೆ ಮಹಾತ್ವಾಕಾಂಕ್ಷಿಗಳಾಗಿರುವುದು ಇವತ್ತಿನ ಟ್ರೆಂಡ್. ಈ ಮಹಾತ್ವಾಕಾಂಕ್ಷೆ ಹಾಗೂ ಇಂಗ್ಲಿಷ್ ಕಲಿಕೆ ಒಂದನ್ನೊಂದು ಬೆಸೆದುಕೊಂಡಿದೆ. ಈ ನಿಟ್ಟಿನಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ಒತ್ತು ಎಂಬ ಘೋಷಣೆ ಸಹ ಪಾಲಕರ ಪಾಲಿಗೆ ಹಿತಾನುಭವ.

ಆಡಳಿತಾತ್ಮಕ ಮುಖ್ಯಾಂಶ- ರಾಜ್ಯದಲ್ಲಿ ಹೊಸದಾಗಿ 49 ತಾಲೂಕುಗಳ ರಚನೆ.

ಭಾವನಾತ್ಮಕ ಹಕ್ಕು- ರಾಜ್ಯದ ಮಲ್ಟಿಫ್ಲೆಕ್ಸ್ ಚಿತ್ರಮಂದಿರದ ಒಂದು ಪರದೆಯಲ್ಲಿ ಮಧ್ಯಾಹ್ನ 1.30ರಿಂದ 7.30ರವರೆಗಿನ ಅವಧಿಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಲನಚಿತ್ರ ಕಡ್ಡಾಯ ಎಂದಿರುವುದು ಕನ್ನಡಿಗರ ಹೆಮ್ಮೆಗೆ ಕಾರಣವಾಗುವ ಅಂಶ. ಆದರೆ ಮೇಲೆ ಹೇಳಲಾದ ಅವಧಿ ‘ಮುಖ್ಯ ಅವಧಿ’ ಎನ್ನಿಸಿರುವುದರಲ್ಲೂ ಮಾರುಕಟ್ಟೆ ಶಕ್ತಿಯನ್ನು ತೀರ ಎದುರುಹಾಕಿಕೊಳ್ಳದ ಜಾಣತನವಿದೆ. ಸಂಜೆ ಏಳೂವರೆ ನಂತರವೇ ಅಲ್ಲವೇ ಪ್ರೈಮ್ ಟೈಮ್? ಹಾಗೊಂದು ಕಟುಪ್ರಶ್ನೆ ಕೆಲವರ ಮನದಲ್ಲಿ ಮೂಡಬಹುದು. ಎಲ್ಲ ಚಿತ್ರಮಂದಿರಗಳಿಗೆ ಗರಿಷ್ಠ 200 ರುಪಾಯಿಗಳ ಪ್ರವೇಶದರದ ಮಿತಿ ಎನ್ನಲಾಗಿದೆ. ಕೇಳಲಿಕ್ಕೇನೋ ಆಕರ್ಷಕವಾಗಿದೆ. ಆದರೆ ಬ್ಲಾಕ್ಬಸ್ಟರ್ ಚಿತ್ರಗಳು ಬಂದಾಗಲೆಲ್ಲ 350-400ರವರೆಗೂ ಟಿಕೆಟ್ ದರ ನಿಗದಿ ಮಾಡುವ ಮಲ್ಟಿಫ್ಲೆಕ್ಸ್ ಗಳ ವಿಷಯದಲ್ಲಿ ಈ ನಿಯಮವನ್ನು ನಿಜಕ್ಕೂ ಬಿಗಿಯಾಗಿ ಜಾರಿ ಮಾಡಲಾಗುವುದೇ? ಅನುಮಾನ.

ಉಳಿದಂತೆ ಕೃಷಿಭಾಗ್ಯ, ಹಿಂದುಳಿದವರ ಅಭಿವೃದ್ಧಿ, ಕೌಶಲ ಅಭಿವೃದ್ಧಿಯ ಮಾತು ಇವೆಲ್ಲವೂ ಬಜೆಟ್ಟಿನಲ್ಲಿ ಪ್ರಸ್ತಾಪವಾಗಿವೆ.

Leave a Reply