ಮೋದಿಯ ಗೆಲುವಿನ ನಾಗಾಲೋಟಕ್ಕೆ ಹತಾಶೆಯಾಗಿರೋದು ಕಾಂಗ್ರೆಸ್ ಮಾತ್ರವಲ್ಲ… ಚೀನಾ ಕೂಡ!

ಡಿಜಿಟಲ್ ಕನ್ನಡ ಟೀಮ್:

ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುತ್ತಿರುವುದಕ್ಕೆ ಕೇವಲ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಮಾತ್ರ ಆತಂಕಗೊಂಡಿಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಸಹ ಪೇಚಾಡುತ್ತಿದೆ. ನಮ್ಮ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಚೀನಾದವರಿಗೇಕೆ ತಲೆನೋವು ಎಂದು ನಿಮಗನಿಸಬಹುದು. ಅದಕ್ಕೆ ಕಾರಣ ಇದೆ. ‘ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿಚಾರವಾಗಿ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಸವಾಲಾಗಲಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಬಿಜೆಪಿ ತನ್ನ ಬೇರನ್ನು ಗಟ್ಟಿ ಮಾಡಿಕೊಂಡು ಅಧಿಕಾರದಲ್ಲಿ ಮುಂದುವರಿದರೆ ಮೋದಿ ಮುಂದಿನ ದಿನಗಳಲ್ಲೂ ಜಾಗತಿಕ ಮಟ್ಟದಲ್ಲಿ ಚೀನಾ ವಿಷಯವಾಗಿ ತಮ್ಮ ಬಿಗಿ ನಿಲುವುದು ಮುಂದುವರಿಸುತ್ತಾರೆ’ ಎಂಬುದು ಚೀನಾದ ಕಮ್ಯುನಿಷ್ಟ್ ಪಾರ್ಟಿಯ ನಿಯಂತ್ರಣದಲ್ಲಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆಯ ವಿಶ್ಲೇಷಣೆ.

ಹೌದು, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಮೋದಿ ಸರ್ಕಾರ ಅಂತಾರಾಷ್ಟ್ರೀಯ ವಿಷಯಗಳಲ್ಲಿ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಹೀಗಾಗಿ ಬಿಜೆಪಿಯ ಈ ಗೆಲವು ಚೀನಾ ಪಾಲಿಗೆ ಸಂತೋಷದ ವಿಚಾರವಲ್ಲ ಎಂದು ಅಭಿಪ್ರಾಯಪಟ್ಟಿದೆ ಗ್ಲೋಬಲ್ ಟೈಮ್ಸ್.

ಅಂತಾರಾಷ್ಟ್ರೀಯ ಮಟ್ಟದ ಹಲವು ವಿಷಯಗಳಲ್ಲಿ ನರೇಂದ್ರ ಮೋದಿ ಅವರ ಕಠಿಣ ನಿಲುವು ಚೀನಾಗೆ ತಲೆ ನೋವಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು ಎಂಬುದು ಚೀನಾದ ನಿರೀಕ್ಷೆ. ಆದರೆ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಿರುವುದರಿಂದ ಚೀನಾ ಆಸೆ ಈಡೇರುತ್ತಿಲ್ಲ. ಮೋದಿಯ ಬಿಗಿ ನಿಲುವು ಏನು? ಅದರಿಂದ ಚೀನಾಗೆ ಆಗುತ್ತಿರುವ ಹಿನ್ನಡೆಗಳೇನು? ಎಂಬುದನ್ನು ಗ್ಲೋಬಲ್ ಟೈಮ್ಸ್ ವಿಶ್ಲೇಷಿಸಿರುವುದು ಹೀಗೆ…

‘ಈ ಹಿಂದೆ ಜಾಗತಿಕ ಮಟ್ಟದಲ್ಲಿ ಹಲವು ವಿಷಯಗಳ ಕುರಿತು ಭಾರತ ಮೃದುವಾಗಿ ತನ್ನ ನಿಲುವು ತಾಳುತ್ತಿತ್ತು. ಬೇರೆ ರಾಷ್ಟಗಳನ್ನು ಎದುರು ಹಾಕಿಕೊಳ್ಳಲು ಹಿಂಜರಿಯುತ್ತಿತ್ತು. ಆದರೆ ಮೋದಿ ಪ್ರಧಾನ ಮಂತ್ರಿಯಾದ ನಂತರ ಭಾರತದ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ. ಭಾರತ ತನ್ನ ಅಭಿಪ್ರಾಯವನ್ನು ಗಟ್ಟಿ ಧ್ವನಿಯಲ್ಲಿ ವಿಶ್ವಕ್ಕೆ ಹೇಳುತ್ತಿದೆ. ಇನ್ನು ಚೀನಾ ವಿಚಾರವಾಗಿ ಮೋದಿ ಹಲವು ವಿಷಯಗಳಲ್ಲಿ ಕಠಿಣ ನಿಲುವು ತಾಳಿದ್ದಾರೆ. ಇದಕ್ಕೆ ಉದಾಹರಣೆಯನ್ನು ನೀಡುವುದಾದರೆ, ಭಾರತ ಮತ್ತು ಚೀನಾ ಗಡಿಯ ವಿಚಾರವಾಗಿ ತಕರಾರು ಇದ್ದರೂ, ಮೋದಿ ಅವರು ಈ ಗಡಿ ಪ್ರದೇಶದಲ್ಲಿ ತಮ್ಮ ಸೈನಿಕರ ಜತೆಗೆ ದೀಪಾವಳಿ ಹಬ್ಬ ಆಚರಿಸುವ ಮೂಲಕ ತನ್ನ ಬಿಗಿ ನಿಲುವನ್ನು ಬೀಜಿಂಗ್ ಗೆ ರವಾನಿಸಿದ್ದರು. ಚೀನಾ ಹಾಗೂ ಮಾಸ್ಕೊ ಜತೆ ಮಾತುಕತೆ ನಡೆಸಿ ಶಾಂಘೈ ಕೊಆಪರೇಷನ್ ಸಂಸ್ಥೆಯ ಸದಸ್ಯತ್ವ ಪಡೆಯಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಮೋದಿ ಪ್ರಧಾನಿಯಾಗಿ ಬಂದ ಮೇಲೆ ಭಾರತವು ಅಮೆರಿಕ ಹಾಗೂ ಜಪಾನ್ ಜತೆಗೆ ರಕ್ಷಣಾ ಒಪ್ಪಂದಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಏಷ್ಯಾ ಪೆಸಿಫಿಕ್ ಸಾಗರದ ವಿಷಯದಲ್ಲಿ ಅಮೆರಿಕಕ್ಕೆ ಬೆಂಬಲ ನೀಡುವ ಮೂಲಕ ಸೌತ್ ಚೀನಾ ಸಮುದ್ರ ವಿಷಯದಲ್ಲಿ ಅಮೆರಿಕದ ನಿರ್ಧಾರದ ಮೇಲೆ ಭಾರತ ಪ್ರಭಾವ ಬೀರುತ್ತಿದೆ.

ಹೀಗೆ ಹಲವು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಚೀನಾ ವಿರುದ್ಧ ಮೋದಿ ಬಿಗಿ ನಿಲುವು ತಾಳುತ್ತಿರುವ ಸಂದರ್ಭದಲ್ಲಿ ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸಿರುವುದು ಮೋದಿ ಅವರು ತಮ್ಮ ಬಿಗಿ ನಿಲುವುನ್ನು ಮತ್ತಷ್ಟು ಮುಂದುವರಿಸಿಕೊಂಡು ಹೋಗಲು ನೆರವಾಗಿದೆ. ಹೀಗಾಗಿ ಚೀನಾಕ್ಕೆ ಇದು ಸಂತೋಷದ ವಿಷಯವಲ್ಲ.

ಈ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ಪ್ರಭಾವ 2019ರ ಚುನಾವಣೆ ಮೇಲೂ ಬೀರಲಿದ್ದು, ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ ಎಂದು ಅನೇಕ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಒಂದು ವೇಳೆ ಮೋದಿ ಮುಂದಿನ ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ ಭಾರತ ಈಗ ತಾಳಿರುವ ಬಿಗಿ ನಿಲುವು ಹಾಗೇ ಮುಂದುವರಿಯಲಿದೆ. ಭಾರತದ ಜತೆಗಿನ ರಾಜಿ ಮತ್ತಷ್ಟು ಕಠಿಣವಾಗಲಿದೆ.’

ಹೀಗೆ ಮೋದಿ ಅವರ ಬಿಗಿ ನಿಲುವನ್ನು ವಿಶ್ಲೇಷಿಸುತ್ತಲೇ, ‘ಚೀನಾ ದೇಶವು ಭಾರತ ಜತೆಗಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ’ ಎಂದು ಹೇಳಲಾಗಿದೆ. ‘ಮೋದಿ ಬಿಗಿ ನಿಲುವು ತೋರುವುದರ ಜತೆಗೆ ಚೀನಾದೊಂದಿಗೆ ಹಲವು ಒಪ್ಪಂದಗಳಿಗೆ ಮುಂದಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಡಿ ಸೇರಿದಂತೆ ಇತರೆ ವಿಷಯಗಳಲ್ಲಿ ಭಾರತದ ಜತೆಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಅವಕಾಶ ಚೀನಾ ಮುಂದಿದೆ’ ಎಂದು ಗ್ಲೋಬಲ್ ಟೈಮ್ಸ್ ಆಶಾವಾದ ವ್ಯಕ್ತಪಡಿಸಿದೆ.

ಚೀನಾ ಸರ್ಕಾರದ ವಿದೇಶಾಂಗ ಇಲಾಖೆಯ ನಿಯಂತ್ರಣದಲ್ಲಿ ಈ ಗ್ಲೋಬಲ್ ಟೈಮ್ಸ್ ಪತ್ರಿಕೆ ಒಳಪಟ್ಟಿದ್ದು, ಮೋದಿ ಕುರಿತಾಗಿ ಚೀನಾದ ಕಳವಳ ಈ ಪತ್ರಿಕೆಯ ಲೇಖನದಲ್ಲಿ ವ್ಯಕ್ತವಾಗಿರುವುದು ನಿಜಕ್ಕೂ ಮಹತ್ವ ಪಡೆದುಕೊಂಡಿದೆ.

2 COMMENTS

Leave a Reply