ಇನ್ನೊಂದು ತುತ್ತು ಬೇಕೆನಿಸುತ್ತಿರುವಾಗಲೇ ಏಳುವುದರಲ್ಲಿದೆ ಊಟದ ಸೊಬಗು

author-geethaಬರೆಯಲು ವಿಷಯಗಳಿಲ್ಲವೆಂದಲ್ಲ… ಎರಡನೇ ಪಿ.ಯು. ಪರೀಕ್ಷೆಗಳು ಪ್ರಾರಂಭವಾಗಿವೆ. ಆ ಮಕ್ಕಳಿಗೆ, ಆ ಮಕ್ಕಳ ತಂದೆತಾಯಿಗೆ ಬುದ್ಧಿ, ಧೈರ್ಯ ಹೇಳಬಹುದು. ಪಿ.ಯು ಆದ ಮೇಲೆ ಏನು ಮಾಡಬಹುದು ಎಂದು ವಿಶ್ಲೇಷಿಸಬಹುದು.

ನಗರಗಳಲ್ಲಿ ರೇಪ್ ನಿರಂತರವಾಗಿ ನಡೆಯುತ್ತಲೇ ಇದೆ. ಹೆಣ್ಣು ಮಕ್ಕಳು ದೂರು ಕೊಡುವುದಿಲ್ಲ… ಕೊಟ್ಟರೂ ಕೇಸು ಬೇಗ ಮುಗಿಯುವುದಿಲ್ಲ. ರೇಪ್ ಮಾಡಿದವ ರಾಜಾರೋಷವಾಗಿ ಬೇಲ್ ಮೇಲೆ ಹೊರಬಂದು ಮತ್ತೊಂದು, ಮಗದೊಂದು ರೇಪ್ ಮಾಡುತ್ತಾನೆ. ಹೆಣ್ಣು ಮಕ್ಕಳು ಊರು ಬಿಟ್ಟು ಹೋಗುತ್ತಾರೆ. ಗೂಂಡಾ ಕಾಯಿದೆ ಅಡಿ, ಕಳ್ಳತನ ಮಾಡಿದ ಎಂಬ ಕೇಸು ಹಾಕಿ, ಅದೂ ನಡೆಯದೆ, ಆರೇಳು ತಿಂಗಳಿಗೆ ಅರೆಸ್ಟ್ ಆದವನು (ಆಗದೇ ಹೋಗಿದ್ದರೆ ಅದೂ ಇಲ್ಲ) ಜೈಲಿನಿಂದ ಆಚೆ ಬಂದಿರುತ್ತಾನೆ. ಪೊಲೀಸರು investigation ಮಾಡುತ್ತಲೇ ಇರುತ್ತಾರೆ. ಈ ವಿಷಯದ ಬಗ್ಗೆ ಬರೆಯಬಹುದು.

ಪ್ರೀನರ್ಸರಿ ಶಾಲೆಗಳಲ್ಲಿ ಎಳೇ ಮಕ್ಕಳ abuse ಆಗುತ್ತದೆ. ಊಟ ಮಾಡದ, ಚೇಷ್ಟೆ ಮಾಡುವ ಎಳೇ ಮಕ್ಕಳನ್ನು ಪಾಠ ಮಾಡುವ ಅಧ್ಯಾಪಕರೇ abuse ಮಾಡುವವನ ಬಳಿ ಶಿಕ್ಷೆಗೆ ಕಳುಹಿಸುತ್ತಾರೆ. ಒಂದೆರಡು ವರ್ಷಗಳ ಹಿಂದೆ ಶಾಲೆಯೊಂದರ ವ್ಯಾನಿನ ಚಾಲಕ ಹೀಗೆಯೇ abuse ಮಾಡಿದ್ದ. ಶಾಲೆಯ ಆಯಾ ಮಕ್ಕಳನ್ನು ಅವನ ಬಳಿ ಕರೆದೊಯ್ಯುತ್ತಿದ್ದಳು ಎಂಬುದು ಸುದ್ದಿಯಾಗಿತ್ತು. ನಂತರ ಗೊತ್ತಿಲ್ಲ. ಕೇಸ್ ಆಯಿತೇ? ಶಿಕ್ಷೆಯಾಯಿತೇ? ಗೊತ್ತಿಲ್ಲ. ಈಗಲೂ ಅಷ್ಟೇ ಶಾಲೆಯನ್ನೇ ಮುಚ್ಚಿಸಿ ಆಯಿತು. ಆದರೆ ಆ ವ್ಯಕ್ತಿಗಳಿಗೆ (abuse ಮಾಡಿದವನಿಗೆ, ಅವನ ಬಳಿ ಕಳುಹಿಸುತ್ತಿದ್ದ ಟೀಚರ್ರುಗಳಿಗೆ) ಶಿಕ್ಷೆ ಆಗುತ್ತದೆಯೇ? ಗೊತ್ತಿಲ್ಲ. ಈ ವಿಷಯದ ಬಗ್ಗೆ ಬರೆಯುವುದು.

Abuse ಆದ ಮಕ್ಕಳ ಅಪ್ಪ ಅಮ್ಮ ಏನು ಮಾಡುತ್ತಿದ್ದರು? ಮೂರು ವರ್ಷವೂ ಮೀರಿರದ ಮಕ್ಕಳಿಗೆ ಮನೆಯಲ್ಲಿ ಸ್ನಾನ ಮಾಡಿಸುವುದಿಲ್ಲವೇ? ಶಾಲೆಯಲ್ಲಿ ಏನಾಯಿತು ಎಂದು ಮಾತನಾಡಿಸುವುದಿಲ್ಲವೇ? ತಬ್ಬಿ, ಮುದ್ದು ಮಾಡುವುದಿಲ್ಲವೇ ಅಪ್ಪ ಅಮ್ಮ ಆಗುವುದು ಅವರ ಸಂತಸದ ಕ್ಷಣದ ಕ್ರಿಯೆಯ ಫಲ ಅಲ್ಲ. ಅದು ಜೀವನ ಉದ್ದಕ್ಕೂ ಹೊರಬೇಕಾಗಿರುವ ಜವಾಬ್ದಾರಿ. ಆ ಜವಾಬ್ದಾರಿ ನಿಭಾಯಿಸುವುದರ ಬಗ್ಗೆ ಬರೆಯಬಹುದು.

ಮದುವೆಯೆಂದರೆ, ಹೆಣ್ಣಿಗೆ ಒಬ್ಬ ಗಂಡಸು ಬಾಳುಕೊಡುವುದು, ಬಾಳು ಕೊಟ್ಟ ಮೇಲೆ ಮುದುಡಿದ ತಾವರೆ ಅರಳಿತು… ಎಂದೆಲ್ಲಾ ಬರೆಯುವ ಪತ್ರಕರ್ತರ ಬಗ್ಗೆ, ಅದನ್ನು ಪ್ರಸ್ತುತಪಡಿಸುವ ಟಿ.ವಿ. ವಾಹಿನಿಯ ಬಗ್ಗೆ ಬರೆಯುವುದು. ವಿದ್ಯಾವಂತರಾಗಿ ಹೆಣ್ಣಿನ ಬಗ್ಗೆ ಹೀಗೆ ಬರೆಯುವುದು ತರವೇ ಎಂದು ಪ್ರಶ್ನಿಸುವುದು.

ಗೇ ಆದರೂ ತಂದೆಯಾಗುವ ಹಂಬಲ ಪುರುಷನಿಗೆ ಸಹಜ… (ತಾಯಿಯಾಗಬೇಕು ಎಂಬ ಹಂಬಲ ಹೆಣ್ಣಿಗೆ ಇರುವಂತೆ) ಎಂಬುದರ ಬಗ್ಗೆ ಬರೆಯುತ್ತಾ ತಾಯಿ ಒಬ್ಬಳೇ ನ್ಯಾಚುರಲ್ ಗಾರ್ಡಿಯನ್ ಅಲ್ಲ… ತಂದೆ ಕೂಡ ಹೌದು ಎಂಬ ವಿಚಾರದ ಬಗ್ಗೆ ಗಹನವಾಗಿ ಬರೆಯಬಹುದು.

ನಡೆಯಲು ಫುಟ್ ಪಾತ್ ಇಲ್ಲದೆ, ಓಡಾಡಲು ಬಸ್ ಇಲ್ಲದೆ, ಬೈಕು, ಕಾರು ಇದ್ದರೆ ಅದನ್ನು ಹೊರಗೆ ತೆಗೆದು ಓಡಿಸಲು ಸರಿಯಾದ ರಸ್ತೆಗಳೂ ಇಲ್ಲದೆ ಇರುವ ಸ್ಥಿತಿಯಲ್ಲಿ ಬೆಂಗಳೂರು, ನಮ್ಮ ರಾಜ್ಯದ ರಾಜಧಾನಿ ಇರುವಾಗ ಬೇರೆ ಊರುಗಳ ಸ್ಥಿತಿಗತಿ ಏನು ಎಂದು ಬರೆಯಬಹುದು.

ಬರುವ ಬೇಸಿಗೆಯಲ್ಲಿ ಏಳಬಹುದಾದ ನೀರಿನ ಹಾಹಾಕಾರದ ಬಗ್ಗೆಯೂ ಬರೆಯಬಹುದು.

ಐದು ರಾಜ್ಯಗಳಲ್ಲಿ ನಡೆದ ಚುನಾವಣೆ, ಅದರ ಫಲಿತಾಂಶ ತೋರಿಸುತ್ತಿರುವ ಜನರ ಆಶಾಭಾವನೆಯ ಬಗ್ಗೆ ಬರೆಯಬಹುದು. ಬಿಜೆಪಿ ಆಡಳಿತ ವಹಿಸಿಕೊಳ್ಳುತ್ತದೆ… ಆದರೆ ನಾಲ್ಕು ಕೋಟಿ ಮುಸಲ್ಮಾನರನ್ನು ಪ್ರತಿನಿಧಿಸಲು ಒಬ್ಬ ಕೂಡ ಮುಸಲ್ಮಾನ ಪ್ರತಿನಿಧಿ ಇಲ್ಲ… ಎಂಬ ಕೆಲವರ ಕಳವಳವಾದರೆ, ಮುಸಲ್ಮಾನರು ಹಿಂದು ಪ್ರತಿನಿಧಿಗಳಿಗೆ ಮತ ಚಲಾಯಿಸಿ ಅವರನ್ನು ಹೆಚ್ಚು ಜವಾಬ್ದಾರಿಯುತರನ್ನಾಗಿ ಮಾಡಿದ್ದಾರೆ ಎಂದು ನನಗೇಕೆ ಅನ್ನಿಸುತ್ತದೆ ಎಂಬುದರ ಬಗ್ಗೆ ಬರೆಯಬಹುದು.

ಹೌದು ವಿಷಯಗಳಿಗೆ ಬರವಿಲ್ಲ. ವಾರಕ್ಕೆ ಎಂಟು ವಿಷಯಗಳು ಹುಟ್ಟಿಕೊಳ್ಳುತ್ತವೆ. ಲೇಖನಿಗೆ ವಿಶ್ರಾಂತಿಯಿಲ್ಲ. ಆದರೆ ಕೈಗೆತ್ತಿಕೊಂಡಿರುವ ಎರಡು ಕಾದಂಬರಿಗಳನ್ನು ಶೀಘ್ರವಾಗಿ ಮುಗಿಸಬೇಕಾಗಿದೆ. ಕಾಡುತ್ತಿರುವ ಕಥೆಗಳನ್ನು ಅಕ್ಷರಕ್ಕೆ ಇಳಿಸಬೇಕಾಗಿದೆ. Continuity ಇಲ್ಲದಿದ್ದರೆ ಮುಗಿಯುವ ಕೆಲಸವಲ್ಲ ಅವು. ಹಾಗಾಗಿ ಈ ಚೌಕಟ್ಟಿನಾಚೆ ಹೋಗಲು ನಿಮ್ಮೆಲ್ಲರ ಒಪ್ಪಿಗೆ (Permission) ಕೇಳುತ್ತಿದ್ದೇನೆ. ನನ್ನ ಲೇಖನಗಳನ್ನು ಓದಿದ, ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ನನ್ನ ವಂದನೆಗಳು.

ಈ ಅವಕಾಶ ಮಾಡಿಕೊಟ್ಟ ಡಿಜಿಟಲ್ ಕನ್ನಡದ ಶ್ರೀ.ತ್ಯಾಗರಾಜ್ ಅವರಿಗೆ ನಾನು ಅಭಾರಿ. ಕೈಬರಹದಲ್ಲಿ ಬರೆದ ಲೇಖನದ ಪುಟಗಳ ಫೋಟೋ ತೆಗೆದು ಕಳುಹಿಸಿದರೂ ಅದನ್ನು ಅಚ್ಚುಕಟ್ಟಾಗಿ ಟೈಪ್ ಮಾಡಿ ಪ್ರಕಟಿಸಿದ್ದಕ್ಕೆ ಡಿಜಿಟಲ್ ಕನ್ನಡದ ತಂಡಕ್ಕೆ ನನ್ನ ಕೃತಜ್ಞತೆಗಳು.

Leave a Reply