ಗೋವಾ ವಿಶ್ವಾಸಮತ ಪರೀಕ್ಷೆಯಲ್ಲಿ ಪಾರಿಕರ್ ಪಾಸ್!

ಡಿಜಿಟಲ್ ಕನ್ನಡ ಟೀಮ್:

ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮನೋಹರ್ ಪಾರಿಕರ್ ಇಂದು ಗೋವಾ ವಿಧಾನ ಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗುರುವಾರ ನಡೆದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಮನೋಹರ್ ಪಾರಿಕರ್ 22 ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಪಡೆದುಕೊಂಡರು.

ಕಳೆದ ಶನಿವಾರ ಪ್ರಕಟವಾದ ಚುನಾವಣ ಫಲಿತಾಂಶದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಗೋವಾ ಫಾರ್ವರ್ಡ್ 3, ಎಂಜಿಪಿ 3, ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದ್ದರು. ಚುನಾವಣಾ ಫಲಿತಾಂಶ ಅತಂತ್ರ ಸ್ಥಿತಿಯತ್ತ ಸಾಗುತ್ತಿದ್ದಂತೆ ಮನೋಹರ್ ಪಾರಿಕರ್ ಅವರು ಸ್ಥಳೀಯ ಪಕ್ಷ ಹಾಗೂ ಪಕ್ಷೇತರರನ್ನು ತಮ್ಮ ಕಡೆಗೆ ಸೆಳೆದುಕೊಂಡು ಅವರ ಹೆಸರಿನ ಪಟ್ಟಿಯೊಂದಿಗೆ ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆಗೆ ಮನವಿ ಮಾಡಿಕೊಂಡರು. ಮತ್ತೊಂದೆಡೆ ಎಚ್ಚರ ತಪ್ಪಿದ್ದ ಕಾಂಗ್ರೆಸ್ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಮನವಿ ಮಾಡಲಿಲ್ಲ. ಪರಿಣಾಮ ರಾಜ್ಯಪಾಲರು ಪಾರಿಕರ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಗಡವು ನೀಡಿದರು. ಆಗ ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿದ ಕಾಂಗ್ರೆಸ್, ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮೊದಲು ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಆದರೆ ರಾಜ್ಯಪಾಲರು ಪ್ರಜಾಪ್ರಭುತ್ವದ ವಿರುದ್ಧ ಹೆಜ್ಜೆ ಇಟ್ಟಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.

ಕಾಂಗ್ರೆಸ್ ಮನವಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಪಾರಿಕರ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿ, ಬಹುಮತ ಸಾಬೀತು ಪ್ರಕ್ರಿಯೆಯನ್ನು ಗುರುವಾರಕ್ಕೆ ನಿಗದಿಪಡಿಸಿತ್ತು.

ಈಗ ಬಿಜೆಪಿ ಈ ಪರೀಕ್ಷೆಯಲ್ಲಿ ಜಯ ಸಾಧಿಸಿದ್ದು, ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಮೈರೆತ ಕಾಂಗ್ರೆಸ್  ರಾಜ್ಯವನ್ನು ಕಳೆದುಕೊಂಡಿದೆ.

ಈ 22 ಶಾಸಕರ ಪೈಕಿ ಬಿಜೆಪಿಯ 13ರ ಜತೆಗೆ ಎಂಜಿಪಿಯ 3, ಗೋವಾ ಫಾರ್ವಡ್ ಪಕ್ಷದ 3, ಇಬ್ಬರು ಪಕ್ಷೇತರರು ಹಾಗೂ ಎನ್ ಸಿಪಿಯ ಚರ್ಚಿಲ್ ಅಲೆಮಾವ್ ಪಾರಿಕರ್ ಅವರಿಗೆ ಮತ ಹಾಕಿದರು. ಇನ್ನು ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಜಯ ಸಾಧಿಸಿತ್ತಾದರೂ ವಿಧಾನ ಸಭೆಯಲ್ಲಿ ತನ್ನ ಬಲವನ್ನು ಸಾಬೀತುಪಡಿಸಿದ್ದು ಮಾತ್ರ ಕೇವಲ 16. ವಿಶ್ವಜಿತ್ ರಾಣೆ ಎಂಬ ಶಾಸಕ ಮತ ಹಾಕಲು ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕುಸಿತ ಕಂಡಿತು.

Leave a Reply