ಇಂಟರ್ನೆಟ್ ಸಂಚಲನ: ಬಾಹುಬಲಿ-2 ಟ್ರೈಲರ್ ನಮಗುಣಬಡಿಸುತ್ತಿರುವ ರೋಚಕ ಸತ್ಯವೇನು?

ಡಿಜಿಟಲ್ ಕನ್ನಡ ಟೀಮ್:

ಬಾಹುಬಲಿ- 2 ಚಿತ್ರದ ಟ್ರೈಲರ್ ಯೂಟ್ಯೂಬಿನಲ್ಲಿ ಅನಾವರಣಗೊಂಡ ಕೇವಲ 6 ತಾಸುಗಳಲ್ಲಿ 80 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಮುನ್ನುಗ್ಗುತ್ತಿದೆ. ತೆಲುಗು ಮತ್ತು ಹಿಂದಿ ಅವತರಣಿಕೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಎರಡನೇ ಭಾಗದ ಜಲಕು 2 ನಿಮಿಷ 25 ಸೆಕೆಂಡುಗಳದ್ದು. ತೆಲುಗು ಒಂದರಲ್ಲೇ 60 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ, ಹಿಂದಿಯನ್ನೂ ಸೇರಿಸಿಕೊಂಡರೆ 80 ಲಕ್ಷ ಮೀರಿ ಮುನ್ನುಗ್ಗುತ್ತಿರುವ ಟ್ರೈಲರ್ ಭಾರತೀಯ ಚಿತ್ರರಂಗದ ತಾಕತ್ತನ್ನು ಹೇಳುತ್ತಿದೆ ಎಂದರೆ ತಪ್ಪಾಗಲಾರದು.

ರಾಜರ ಕತೆಗಳು, ಮಾಯಾಲೋಕದಂಥ ರಮ್ಯತಾಣಗಳ ಚಿತ್ರಣಗಳು, ಮೈರೋಮ ಸೆಟೆಸಿ ನಿಲ್ಲಿಸುವ ಯುದ್ಧದೃಶ್ಯಗಳು… ಇವೆಲ್ಲ ಬಜೆಟ್ ಮತ್ತು ತಾಂತ್ರಿಕತೆ ದೃಷ್ಟಿಯಿಂದ ಹಾಲಿವುಡ್ ಮಾತ್ರ ಮಾಡಲು ಸಾಧ್ಯ ಎಂಬ ಗ್ರಹಿಕೆಯನ್ನೇ ಹೊಡೆದುಹಾಕಿದೆ ಬಾಹುಬಲಿ. ನಿಜ… ಇದರಲ್ಲಿ ವಿದೇಶಿ ತಂತ್ರಜ್ಞರೇ ಕೆಲಸ ಮಾಡಿರಬಹುದು, ಬಾಲಿವುಡ್ ನ ಧರ್ಮ ನಿರ್ಮಾಣ ಸಂಸ್ಥೆಯಂಥವು ಹಣ ಹೂಡಿದ್ದಿರಬಹುದು. ಆದರೆ ಇದು ಹಾಲಿವುಡ್ ಚಿತ್ರವೂ ಅಲ್ಲ, ಬಾಲಿವುಡ್ ಶ್ರೇಯಸ್ಸು ಪಡೆಯುವಂಥದ್ದೂ ಅಲ್ಲ. ರಾಜಮೌಳಿ ಎಂಬ ದಕ್ಷಿಣ ಭಾರತದ ನಿರ್ದೇಶಕನ ತಲೆಯಲ್ಲರಳಿ, ಹೆಚ್ಚಿನ ಸಂಖ್ಯೆಯಲ್ಲಿ ದಕ್ಷಿಣ ಭಾರತದ ನಟರೇ ನಟಿಸಿರುವ ಕಲಾಕೃತಿ ಇದು ಎಂಬುದು ಖಂಡಿತ ಉಲ್ಲೇಖಾರ್ಹ.

ಸೃಜನಶೀಲನೊಬ್ಬ ಅದ್ಭುತ ಕ್ಯಾನ್ವಾಸ್ ಹರಡಿ ಇಡುವುದಕ್ಕೆ ಆತ ಮುಂಬೈನ ಥಳಕಿನಲ್ಲೋ, ಲಾಸ್ ಏಂಜಲೀಸ್ ದಂತಗೋಪುರದಲ್ಲೋ ಇರಬೇಕಾಗಿಲ್ಲ. ಹಾಗೆಯೇ ನಮ್ಮ ಚಿತ್ತದಲ್ಲಿ ಬೆರಗುಗಟ್ಟುವುದಕ್ಕೆ ಲಾರ್ಡ್ ಆಫ್ ದ ರಿಂಗ್ಸ್, ಹ್ಯಾರಿ ಪಾಟರ್ ಕಥಾನಕಗಳೇ ಆಗಬೇಕಿಲ್ಲ. ಈ ಮಣ್ಣಲೂ ಅಂಥ ಬೆರಗಿದೆ ಎನ್ನುವುದನ್ನು ಬಾಹುಬಲಿ ಸಾರುತ್ತಿದೆಯಲ್ಲವೇ?

Leave a Reply