‘ಪಾಕಿಸ್ತಾನ ಭಯೋತ್ಪಾದಕರ ಕಾರ್ಖಾನೆ…’ ವಿಶ್ವಸಂಸ್ಥೆಯಲ್ಲಿ ಭಾರತ ಆರೋಪ, ಗಿಲ್ಗಿಟ್- ಬಲ್ಟಿಸ್ತಾನ್ ಕಾಯ್ದೆಬದ್ಧ ಪ್ರಾಂತ್ಯವಾಗಿಸಲು ಪಾಕ್ ನಿರ್ಧರಿಸಿರೋದು ಏಕೆ?

ಜಿನೆವಾದ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರತಿನಿಧಿ ನವನೀತ ಚಕ್ರವರ್ತಿ…

ಡಿಜಿಟಲ್ ಕನ್ನಡ ಟೀಮ್:

ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಟೀಕಾ ಪ್ರಹಾರ ಮುಂದುವರಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪರ ಮಾನವ ಹಕ್ಕು ಪ್ರತಿನಿಧಿಯಾಗಿ ಭಾಷಣ ಮಾಡಿದ ನವನೀತ ಚಕ್ರವರ್ತಿ, ‘ಪಾಕಿಸ್ತಾನ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದೊಂದು ಭಯೋತ್ಪಾದನೆಯ ಕಾರ್ಖಾನೆ. ಇಲ್ಲಿ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ದಾಳಿ ನಡೆಸಿದ್ದಾರೆ.

ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡಿದ ನವನೀತ ಚಕ್ರವರ್ತಿ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಾ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದ ನೀಚ ಬುದ್ಧಿಯನ್ನು ವಿಶ್ವದ ಮುಂದಿಡುವ ಪ್ರಯತ್ನ ಮುಂದುವರಿಸಿದರು. ಇದಕ್ಕೂ ಮುನ್ನ ಪಾಕಿಸ್ತಾನ ತನ್ನ ಭಾಷಣದಲ್ಲಿ ‘ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದ್ದು, ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ’ ಎಂದು ಆರೋಪಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ನವನೀತ ಅವರು ಹೇಳಿದಿಷ್ಟು…

‘ಪಾಕಿಸ್ತಾನವು ತನ್ನೊಳಗಿನ ಹಾಗೂ ಹೊರಗಿನ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸಲು ಉದ್ದೇಶಪೂರ್ವಕವಾಗಿ ನಿರ್ಲಕ್ಷ ವಹಿಸುತ್ತಿದೆ. ಜತೆಗೆ ಉಗ್ರರಿಗೆ ನೆರವು ನೀಡುತ್ತಾ ವಿಶ್ವದ ಅತಿದೊಡ್ಡ ಭಯೋತ್ಪಾದಕ ರಾಷ್ಟ್ರವಾಗಿದೆ. ಪಾಕಿಸ್ತಾನ ವಿಶ್ವದ ಭಯೋತ್ಪಾದಕರ ಕಾರ್ಖಾನೆಯಾಗುವುದರ ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಅಲ್ಲಿರುವ ಹಿಂದುಗಳು, ಕ್ರಿಶ್ಚಿಯನ್ನರು, ಶಿಯಾಗಳು, ಅಹ್ಮದಿಯಾಗಳು ಹಾಗೂ ಇತರೆ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಟ್ಟಿದೆ. ಭಯೋತ್ಪಾದನೆ ಎಂಬುದೇ ದೊಡ್ಡ ಮಾನವ ಹಕ್ಕು ಉಲ್ಲಂಘನೆ. ಭಾರತ ಸಾರ್ವಭೌಮ ಅಧಿಕಾರ ಹೊಂದಿರುವ ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗಡಿ ಪ್ರದೇಶದಲ್ಲಿ ತೊಂದರೆ ನೀಡುತ್ತಿದೆ.’

ಗಿಲ್ಗಿಟ್- ಬಲ್ಟಿಸ್ತಾನ್ ಪ್ರಾಂತೀಯ ಸ್ಥಾನಮಾನ!

ಮತ್ತೊಂದೆಡೆ ಪಾಕಿಸ್ತಾನ ಗಿಲ್ಗಿಟ್ ಹಾಗೂ ಬಲ್ಟಿಸ್ತಾನವನ್ನು ತನ್ನ ದೇಶದ ಕಾನೂನಿನ ಚೌಕಟ್ಟಿನಲ್ಲಿ ಐದನೇ ಪ್ರಾಂತ್ಯವನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ. ‘ವಿದೇಶಾಂಗ ಸಚಿವಾಲಯದ ಸಲಹೆಗಾರ ಸತ್ರಾಜ್ ಅಝೀಜ್ ಅವರ ನೇತೃತ್ವದ ಸಮಿತಿಯು ಗಿಲ್ಗಿಟ್-ಬಲ್ಟಿಸ್ತಾನಕ್ಕೆ ಪ್ರಾಂತ್ಯದ ಸ್ಥಾನಮಾನ ನೀಡುವ ಬಗ್ಗೆ ಶಿಫಾರಸ್ಸು ಮಾಡಿದ್ದು, ಇದಕ್ಕೆ ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದ್ದು, ಇದು ಉತ್ತರ ಪಾಕಿಸ್ತಾನದ ಐದನೇ ಕಾನೂನುಬದ್ಧ ಪ್ರಾಂತ್ಯವಾಗಲಿದೆ’ ಎಂದು ಪಾಕಿಸ್ತಾನದ ಆಂತರಿಕ ಪ್ರಾಂತೀಯ ಸಚಿವ ರಿಯಾಜ್ ಹುಸೇನ್ ಪಿರ್ಜಾದ ತಿಳಿಸಿದ್ದಾರೆ.

ಸಾಂವಿಧಾನಿಕ ತಿದ್ದುಪಡಿ ಮೂಲಕ ಈ ಪ್ರದೇಶಕ್ಕೆ ಪ್ರಾಂತೀಯ ಸ್ಥಾನಮಾನ ನೀಡಲು ಪಾಕ್ ಸರ್ಕಾರ ನಿರ್ಧರಿಸಿದೆ. ಸದ್ಯ ಪಾಕಿಸ್ತಾನ ಖಿಬರ್-ಪಖ್ತುಂಖ್ವಾ, ಸಿಂಧ್, ಪಂಜಾಬ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಎಂಬ ನಾಲ್ಕು ಪ್ರಾಂತ್ಯಗಳನ್ನು ಹೊಂದಿದೆ.

ಗಿಲ್ಗಿಟ್ಗ ಬಲ್ಟಿಸ್ತಾನ ಪ್ರದೇಶಗಳು ಪಾಕ್ ಆಕ್ರಮಿತ ಕಾಶ್ಮೀರ ಗಡಿ ಪ್ರದೇಶದಲ್ಲಿವೆ. ಭಾರತದ ಪಾಲಿಗೆ ಈ ಎರಡು ಪ್ರಾಂತ್ಯಗಳು ಅಖಂಡ ಜಮ್ಮು ಕಾಶ್ಮೀರದ ಭಾಗ. ಈಗ ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದಿಂದ ಈ ಪ್ರದೇಶಗಳನ್ನು ಬೇರ್ಪಡಿಸಲು ಮುಂದಾಗಿದೆ. ಈ ಪ್ರದೇಶದಲ್ಲಿ ಮಹತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸಾಗಲಿದ್ದು, ಇದೇ ಕಾರಣಕ್ಕಾಗಿ ಪಾಕಿಸ್ಥಾನ ಈಗ ಪ್ರಾಂತೀಯ ಸ್ಥಾನಮಾನ ನೀಡಿ ಈ ಯೋಜನೆಗೆ ಕಾನೂನಿನ ರಕ್ಷಣೆ ನೀಡಲು ಮುಂದಾಗಿದೆ. ಗಿಲ್ಗಿಟ್- ಬಲ್ಟಿಸ್ತಾನ ಪ್ರದೇಶಗಳ ಪ್ರಾಂತೀಯ ಅಸ್ಥಿರತೆ ಚೀನಾಗೆ ತಲೆನೋವಾಗಿ ಪರಿಣಿಮಿಸಿದ್ದು, ಇದನ್ನು ಪ್ರತ್ಯೇಕ ಪ್ರಾಂತ್ಯವನ್ನಾಗುವಂತೆ ಮಾಡಲು ಚೀನಾದ ಒತ್ತಡವೂ ಇದೆ ಎಂದು ಹೇಳಲಾಗುತ್ತಿದೆ.

ಅಖಂಡ ಕಾಶ್ಮೀರ ತನ್ನದು, ಅದರ ಮೇಲಿನ ಎಲ್ಲ ಹಕ್ಕು ತನಗೆ ಸೇರಬೇಕು ಎಂದು ಪ್ರತಿಪಾದಿಸುತ್ತಾ ಬಂದಿರುವ ಭಾರತ ಈಗ ಪಾಕಿಸ್ತಾನದ ಈ ನಿರ್ಧಾರವನ್ನು ಪ್ರಶ್ನಿಸಿ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಇದೇ ವೇಳೆ ಈ ಪ್ರಾಂತೀಯ ಸ್ಥಾನ ನೀಡುವ ನಿರ್ಧಾರದ ಬಗ್ಗೆ ಬಲೂಚಿಸ್ಥಾನದ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಈ ನಿರ್ಧಾರ ಜಾರಿಯಾದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯಲಿದೆ ಎಂದಿದ್ದಾರೆ.

Leave a Reply