ಭಾರತವಾಯ್ತು… ಈಗ ಚೀನಾ ಹಾಗೂ ಪೂರ್ವ ರಾಷ್ಟ್ರಗಳ ಮಾರುಕಟ್ಟೆ ಆಳಲು ಹೊರಟಿದೆ ರಾಮದೇವ್ ಅವರ ಪತಂಜಲಿ!

ಡಿಜಿಟಲ್ ಕನ್ನಡ ಟೀಮ್:

ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳಿಗೆ ಸಡ್ಡು ಹೊಡೆದು ನಿದ್ದೆಗೆಡಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪತಂಜಲಿ ಕಂಪನಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ಚೀನಾದ ದೈತ್ಯ ಮಾರುಕಟ್ಟೆಯಲ್ಲೂ ತನ್ನ ಬೇರನ್ನು ವಿಸ್ತರಿಸಲು ನಿರ್ಧರಿಸಿದೆ.

ಹೌದು, ಭಾರತದಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ಪತಂಜಲಿ ಕೇವಲ ಚೀನಾ ಮಾತ್ರವಲ್ಲ ಇತರೆ ಪೂರ್ವದ ರಾಷ್ಟ್ರಗಳಿಗೆ ಕಾಲಿಡುತ್ತಿದೆ. ಭಾರತ ಸರ್ಕಾರದ ಆ್ಯಕ್ಟ್ ಈಸ್ಟ್ ನೀತಿಯನ್ನು ಅನುಸರಿಸುತ್ತಾ ಪೂರ್ವ ಭಾಗದ ರಾಷ್ಟ್ರಗಳ ಮಾರುಕಟ್ಟೆಗೆ ಪತಂಜಲಿ ತನ್ನ ಉತ್ಪನ್ನವನ್ನು ರವಾನಿಸಲು ಮುಂದಾಗಿದೆ.

ಚೀನಾ ಹಾಗೂ ಇತರೆ ರಾಷ್ಟ್ರಗಳ ಮಾರುಕಟ್ಟೆಗೆ ಪತಂಜಲಿ ಪ್ರವೇಶಿಸಲು ಒಂದು ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಅದರ ಭಾಗವಾಗಿ, ಪಂತಂಜಲಿಯು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ, ಜಾರ್ಖಂಡಿನ ಸಹಿಬ್ಗಾಂಜ್ ಜಿಲ್ಲೆಯಲ್ಲಿ ದೊಡ್ಡ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಪತಂಜಲಿಯ ದೊಡ್ಡ ಘಟಕ ಜಾರ್ಖಂಡ್ ನ ಸಹಿಬ್ಗಾಂಜ್ ನಲ್ಲೇ ಏಕೆ ಆರಂಭವಾಗುತ್ತಿದೆ, ಅದರ ವಿಶೇಷ ಏನು ಎಂಬುದು ಕುತೂಹಲಕಾರಿ ಅಂಶ. ಇಲ್ಲಿ ಘಟಕ ಆರಂಭಿಸಲು ಮುಖ್ಯ ಕಾರಣ ಈ ಜಿಲ್ಲೆಯಲ್ಲಿ ಗಂಗಾ ನದಿ ಹರಿಯುತ್ತದೆ. ಜಾರ್ಖಂಡಿನಲ್ಲಿ ಗಂಗಾ ನದಿ ಹರಿಯುವ ಏಕೈಕ ಜಿಲ್ಲೆ ಸಹಿಬ್ಗಾಂಜ್. ತನ್ನ ಉತ್ಪನ್ನಗಳನ್ನು ಹಡಗುಗಳ ಮೂಲಕ ಗಂಗಾ ನದಿಯಲ್ಲೇ ಸಾಗಿಸಿ ಸಮುದ್ರ ಮಾರ್ಗವಾಗಿ ಚೀನಾ ಹಾಗೂ ಇತರೆ ಪೂರ್ವ ರಾಷ್ಟ್ರಗಳನ್ನು ಸೇರುವುದು ಇದರ ಹಿಂದಿನ ಉದ್ದೇಶ. ಜಾರ್ಖಂಡಿನಿಂದ ಗಂಗಾ ನದಿ ಮೂಲಕ ಹೋದರೆ ಬಾಂಗ್ಲಾದೇಶಕ್ಕೆ ತನ್ನ ಉತ್ಪನ್ನ ರವಾನಿಸುವುದು ಸುಲಭದ ಕೆಲಸ. ನಂತರ ಅದೇ ಮಾರ್ಗವಾಗಿ ಇತರೆ ದೇಶಗಳಿಗೆ ಸಾಗಬಹುದು.

ganga-river-frm-sahibganj-min

ಸಹಿಬ್ಗಾಂಜ್ ಜಿಲ್ಲೆಯಿಂದ ಬಾಂಗ್ಲಾ ಮಾರ್ಗವಾಗಿ ಸಮುದ್ರ ಸೇರುವ ಗಂಗಾ ನದಿಯ ನಕ್ಷೆ…

ಈ ವಿಚಾರವಾಗಿ ಪತಂಜಲಿಯು ಭಾರತೀಯ ಜಲ ಸಂಪರ್ಕ ಪ್ರಾಧಿಕಾರ ಮತ್ತು ಹಡಗು ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದೆ. ಆಂತರಿಕ ಜಲಮಾರ್ಗವಾಗಿ ಬೇರೆ ಬೇರೆ ದೇಶಗಳನ್ನು ಸೇರುವುದರಿಂದ ಕಂಪನಿಯು ತನ್ನ ಉತ್ಪನ್ನಗಳ ರಫ್ತಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲಿದೆ.

ಇಷ್ಟು ದಿನಗಳ ಕಾಲ ಚೀನಾ ತನ್ನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ತಂದು ಸುರಿಯುತಿತ್ತು. ಈಗ ಭಾರತ ಪತಂಜಲಿಯ ಮೂಲಕ ತನ್ನ ಉತ್ಪನ್ನಗಳನ್ನು ಚೀನಾ ಮಾರುಕಟ್ಟೆಗೆ ಬಿಡಲು ಎದುರು ನೋಡುತ್ತಿದೆ.

ಸದ್ಯ ಚೀನಾದ ಆರ್ಥಿಕತೆ ಕುಸಿಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಉತ್ಪನ್ನಗಳ ನಿರ್ಮಾಣದಲ್ಲಿ ಚೀನಾದಲ್ಲಿ ಕಾರ್ಮಿಕರ ವೆಚ್ಚ ದಿನೇ ದಿನೇ ದುಬಾರಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪತಂಜಲಿ ಚೀನಾ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಉತ್ತಮ ಸಮಯ ಎಂಬುದು ಪಂಡಿತರ ಲೆಕ್ಕಾಚಾರ. ಪತಂಜಲಿ ಚೀನಾ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಏಕಾಏಕಿ ನಮಗಿಂತಲೂ ಸಾಕಷ್ಟು ಮುಂದೆ ಇರುವ ಚೀನಾಗೆ ಸಡ್ಡು ಹೊಡೆದು ಬಿಡುತ್ತದೆ ಎಂಬುದು ವಾಸ್ತವಕ್ಕೆ ದೂರವಾದ ಮಾತು. ಆದರೆ ಹಂತ ಹಂತವಾಗಿ ನಮ್ಮ ಉತ್ಪನ್ನಗಳು ಚೀನಾ ಮಾರುಕಟ್ಟೆಯಲ್ಲಿ ಸಣ್ಣಮಟ್ಟದ ಸ್ಪರ್ಧೆಗಿಳಿಯುತ್ತಿರುವುದು ಸಮಾಧಾನಕರ ಸಂಗತಿ.

Leave a Reply