ಪೆಪ್ಸಿ, ಕೋಲಾ, ನೆಸ್ಲೆಯಂತಹ ದೈತ್ಯ ಕಂಪನಿಗಳನ್ನು ಎದುರುಹಾಕಿಕೊಂಡು ಭಾರತೀಯರ ಆರೋಗ್ಯ ಕಾಪಾಡಲು ಹೊರಟ ಮೋದಿ!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರದತ್ತ ಹೆಜ್ಜೆ ಇಟ್ಟಿದೆ. ಅದೇನೆಂದರೆ, ಮುಂದಿನ ಒಂದು ತಿಂಗಳ ಒಳಗಾಗಿ ತಂಪು ಪಾನೀಯ ಹಾಗೂ ಜಂಕ್ ಫುಡ್ ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಅದರಲ್ಲಿ ಬಳಸಲಾಗಿರುವ ಕೊಬ್ಬು, ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಎಷ್ಟಿದೆ ಎಂಬುದನ್ನು ಪ್ರಕಟಿಸಬೇಕು. ಜತೆಗೆ ಇವುಗಳ ಆಧಾರದ ಮೇಲೆ ತೆರಿಗೆ ವಿಧಿಸುವ ಬಗ್ಗೆ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಗಮನಹರಿಸಿದೆ.

ಸಕ್ಕರೆ ಪ್ರಮಾಣ ಹೆಚ್ಚಾಗಿರುವ ಪಾನೀಯ ಹಾಗೂ ಜಂಕ್ ಫುಡ್ ಗಳಿಂದಾಗುವ ಆರೋಗ್ಯ ಹಾನಿಯ ಬಗ್ಗೆ ಜನರಲ್ಲಿ ನಿಧಾನವಾಗಿ ಜಾಗೃತಿ ಮೂಡುತ್ತಿರುವ ಸಂದರ್ಭದಲ್ಲಿ ಕೇಂದ್ರದ ಈ ಹೆಜ್ಜೆ ನಿಜಕ್ಕೂ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಪೆಪ್ಸಿ ಕಂಪನಿಯ ಸಿಇಓ ಇಂದ್ರಾ ನೂಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಈ ಸಭೆಯ ನಂತರ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮಾಧ್ಯಮಗಳಲ್ಲಿ ‘ಪ್ರಧಾನಿ ಮೋದಿ ಪೆಪ್ಸಿ ಸೇರಿದಂತೆ ಇತರೆ ಎಲ್ಲಾ ಪಾನೀಯಗಳಲ್ಲಿ ಇರುವ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಒತ್ತಡ ಹೇರಿದ್ದಾರೆ’ ಎಂಬ ಚರ್ಚೆ ನಡೆದಿದ್ದವು.

ಪ್ರತಿ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ಸರಿಯಾಗಿ ನಮೂದಿಸಬೇಕು. ಅದರ ಆಧಾರದ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಈ ಕಂಪನಿಗಳ ಮೇಲೆ ಒತ್ತಡ ಹೇರುತ್ತಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಬಹುರಾಷ್ಟ್ರೀಯ ಕಂಪನಿಗಳು ಸಹಜವಾಗಿಯೇ ಇಕ್ಕಟ್ಟಿಗೆ ಸಿಲುಕಿವೆ.

ಭಾರತದ ಆಹಾರ ಉತ್ಪನ್ನ ಮಾರುಕಟ್ಟೆಯಲ್ಲಿ ನೆಸ್ಲೆ, ಪೆಪ್ಸಿ, ಕೋಲಾ, ಐಟಿಸಿಯಂತಹ ಕಂಪನಿಗಳು ಪ್ರತಿಸ್ಪರ್ಧಿಗಳಾಗಿದ್ದರು, ಈಗ ಸರ್ಕಾರದ ಒತ್ತಡಕ್ಕೆ ಪ್ರತಿರೋಧ ನೀಡಲು ಆಂತರಿಕ ಮಟ್ಟದಲ್ಲಿ ಸಭೆ ನಡೆಸುತ್ತಿವೆ. ಸರ್ಕಾರದ ಈ ನಿರ್ಧಾರವನ್ನು ಹೇಗೆ ಎದುರಿಸಬೇಕು ಹಾಗೂ ಮುಂದಿನ ದಿನಗಳಲ್ಲಿ  ಯಾವ ರೀತಿಯ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲು ಆರಂಭಿಸಿವೆ ಎಂದು ಮೂಲಗಳು ಮಾಹಿತಿ ಕೊಟ್ಟಿವೆ.

ಈ ಕಂಪನಿಗಳು ಎಷ್ಟೇ ಪ್ರತಿರೋಧ ನೀಡಿದರು ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಬಿಗಿ ನಿಲುವು ತಾಳಿದೆ ಎಂಬ ಮಾತುಗಳು ಕೇಳಿಬಂದಿವೆ. ಸರ್ಕಾರ ಈ ಕಠಿಣ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಎಂದರೆ, 1975ರಲ್ಲಿ ದೇಶದಲ್ಲಿ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದವರ ಸಂಖ್ಯೆ 1.2 ಮಿಲಿಯನ್ ನಷ್ಟಿತ್ತು. ಆದರೆ ಇದರ ಪ್ರಮಾಣ 2014ರ ವೇಳೆಗೆ 30 ಮಿಲಿಯನ್ ಗೆ ಏರಿಕೆಯಾಗಿದೆ ಎಂಬ ಆಘಾತಕಾರಿ ಅಂಶ ಬ್ರಿಟೀಷ್ ಮೆಡಿಕಲ್ ಜರ್ನಲ್ ನ ವರದಿಯಲ್ಲಿ ಪ್ರಕಟವಾಗಿದೆ. ಇದರ ಜತೆಗೆ ಜಂಕ್ ಫುಡ್ ಮತ್ತು ಸಕ್ಕರೆ ಪ್ರಮಾಣವಿರುವ ಪಾನೀಯಗಳ ಬೇಡಿಕೆ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳು ಇವೆ. 2017 ರಿಂದ 2021ರ ವರೆಗೆ ಭಾರತದಲ್ಲಿ ತಂಪು ಪಾನೀಯಗಳ ಪ್ರಮಾಣ ಪ್ರತಿ ವರ್ಷ ಶೇ.3.7 ರಷ್ಟು ಏರಿಕೆಯಾಗಲಿದ್ದು, ಜಂಕ್ ಫುಡ್ ಬೇಡಿಕೆ ಪ್ರಮಾಣ ಪ್ರತಿ ವರ್ಷ ಶೇ.8 ರಷ್ಟು ಹೆಚ್ಚಾಗಲಿದೆ ಎಂದು ಅಧ್ಯಯನಗಳ ಅಂಕಿ ಅಂಶಗಳು ಹೇಳುತ್ತಿವೆ. ಹೀಗೆ ಇವುಗಳ ಪ್ರಮಾಣ ಹೆಚ್ಚಾದಂತೆ ಸಹಜವಾಗಿಯೇ ಭಾರತದಲ್ಲಿ ಮಧುಮೇಹ, ಬೊಜ್ಜಿನ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಗಣನೀಯ ಏರಿಕೆಯಾಗಲಿದೆ. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಕಂಪನಿಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಇಷ್ಟು ದಿನಗಳ ಕಾಲ ‘ಮೋದಿ ಅವರು ಕಾರ್ಪೋರೇಟ್ ಸ್ನೇಹಿ’ ಎಂದೆಲ್ಲಾ ಟೀಕಿಸುತ್ತಾ ವಿರೋಧ ಪಕ್ಷಗಳು ತಿರುಗುತಿದ್ದವು. ಆದರೆ ಇಂತಹ ಪ್ರಮುಖ ವಿಷಯಗಳಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಮೋದಿ ಮಣೆ ಹಾಕುವುದಿಲ್ಲ ಎಂಬುದು ಈ ನಿರ್ಧಾರದಿಂದ ಸಾಬೀತಾಗುತ್ತಿದೆ.

ಕೇಂದ್ರ ಸರ್ಕಾರ ಈ ವಿಚಾರವಾಗಿ ಬಿಗಿ ಪಟ್ಟಿನ ಮುಂದೆ ತಮ್ಮ ಪ್ರತಿರೋಧ ಹೆಚ್ಚು ದಿನ ನಡೆಯುವುದಿಲ್ಲ ಎಂಬುದನ್ನು ಅರಿತಿರುವ ಕಂಪನಿಗಳು ಈಗ ಭಾರತದಲ್ಲಿ ತಮ್ಮ ಕಾರ್ಯತಂತ್ರವನ್ನೇ ಬದಲಾಯಿಸಲು ಮುಂದಾಗಿವೆ. ಆ ಪೈಕಿ ಪೆಪ್ಸಿ ಕಂಪನಿಯು ತನ್ನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಆರೋಗ್ಯ ಪಾನೀಯ ನಮ್ಮ ಮುಂದಿನ ಕಾರ್ಯಸೂಚಿ ಎಂದು ಹೇಳಲು ಆರಂಭಿಸಿದೆ. ಇನ್ನು ನೆಸ್ಲೆ ಕಂಪನಿಯು ತನ್ನ ಖ್ಯಾತ ಉತ್ಪನ್ನ ಮ್ಯಾಗಿಯ ಪ್ರಚಾರಕ್ಕಾಗಿ ಹಣ ಹಾಗೂ ಸಮಯವನ್ನು ವ್ಯಯಿಸುವ ಬದಲಿಗೆ, ಆರೋಗ್ಯ ಕೇಂದ್ರಿತ ಆಹಾರ ಪದಾರ್ಥಗಳ ಕಾರ್ಯಸೂಚಿಯನ್ನು ರೂಪಿಸಿಕೊಳ್ಳುತ್ತಿದೆ.

ಒಟ್ಟಿನಲ್ಲಿ ಈ ದೊಡ್ಡ ದೊಡ್ಡ ಕಂಪನಿಗಳು ನಿಧಾನವಾಗಿ ತಮ್ಮ ಕಾರ್ಯಸೂಚಿಯನ್ನು ಬದಲಿಸುತ್ತಾ ಸರ್ಕಾರದ ಒತ್ತಡಕ್ಕೆ ಮಣಿಯುತ್ತಿರುವುದು, ದೇಶದ ಜನರ ಆರೋಗ್ಯ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆ ಅಂತಲೇ ಪರಿಗಣಿಸಬಹುದು.

Leave a Reply