ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಸಡ್ಡೆ ಏಕೆ? ಈ ಬಾರಿಯ ಬಜೆಟ್ ನಿಜಕ್ಕೂ ಸಮಾಧಾನ ನೀಡಿದೆಯೆ?

author-ssreedhra-murthyಚಿತ್ರರಂಗದ ಕುರಿತಾಗಿ ಬಜೆಟ್ ನಲ್ಲಿ ತಾತ್ವಿಕ ನೆಲೆಗಟ್ಟಿನ ನಿರ್ಧಾರಗಳು ಪ್ರಕಟವಾಗುವುದು ತೀರಾ ಅಪರೂಪ. ಅದರಲ್ಲೂ ಚುನಾವಣೆಯ ಹೊಸ್ತಿಲಿನಲ್ಲಿ ಜನಪ್ರಿಯತೆಯ ನೆಲೆ ಸಹಜವೇ. ಆದರೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬಜೆಟ್ ಎಂದಿಗೂ ಭಾವುಕ ನೆಲೆಯಲ್ಲಿಯೇ ಸಾಗಿದೆ ಅಮೃತೋತ್ಸವ ಭವನ, ಜನತಾ ಚಿತ್ರಮಂದಿರ ಹೀಗೆ ಈ ಹಿಂದೆ ಘೋಷಿತವಾದ ಯೋಜನೆಗಳು ಕಾರ್ಯರೂಪಕ್ಕೆ ಬಾರದೇ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಈ ವರ್ಷದ ಬಜೆಟ್ ನಲ್ಲಿ ಇಂತಹ ಘೋಷಣೆಗಳ ಬದಲು ಮಲ್ಟಿಪ್ಲೆಕ್ಸ್ ಗಳಲ್ಲಿ ಮಧ್ಯಾಹ್ನದ ಪ್ರೈಮ್ ಟೈಂ ಎನ್ನಬಹುದಾದ 1.30 ರಿಂದ 7.30 ರೊಳಗೆ ಒಂದು ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ ಮತ್ತು ಟಿಕೆಟ್ ಬೆಲೆಯನ್ನು ₹ 200 ಒಳಗೆ ಸೀಮಿತಗೊಳಿಸುವ ಪ್ರಾಯೋಗಿಕ ಎನ್ನಬಹುದಾದ ನಿರ್ಧಾರ ಉಲ್ಲೇಖಿತವಾಗಿದೆ. ಇವೆರಡೂ ಚಿತ್ರನೀತಿಯಲ್ಲಿ ಪ್ರಸ್ತಾಪಿತವಾಗಿದ್ದರಿಂದ ಈ ಘೋಷಣೆ ನಿರೀಕ್ಷಿತವೇ ಆಗಿತ್ತು. ವಿಶೇಷವೆಂದರೆ ಚಲನಚಿತ್ರ ನೀತಿಯ ಕುರಿತೇ ಬಜೆಟ್ ನಲ್ಲಿ ಉಲ್ಲೇಖವಿಲ್ಲ.

ಕರ್ನಾಟಕದ ವಿಶೇಷವೆಂದರೆ ಯಾವ ಸರ್ಕಾರವೇ ಬರಲಿ ಚಿತ್ರರಂಗಕ್ಕೆ ಅನುಕೂಲಕರ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾ ಬಂದಿವೆ. ಆದರೆ ಚಿತ್ರರಂಗಕ್ಕೇ ತನಗೇನು ಬೇಕು ಎನ್ನುವುದು ಗೊತ್ತಿಲ್ಲ. ಕಾಲದಿಂದ ಕಾಲಕ್ಕೆ ಸೋಲಿಗೆ ಬೇರೆ ಬೇರೆ ಕಾರಣಗಳನ್ನು ಹುಡುಕಿಕೊಳ್ಳುತ್ತಾ ಬರಲಾಗುತ್ತದೆ. ಇತ್ತೀಚೆಗಂತೂ ಟಿ.ವಿ ಪರದೆಯ ಮೇಲೆ ನಾಯಕರು ಕಾಣಿಸಿಕೊಳ್ಳುವುದೂ ಒಂದು ಪ್ರಮಖ ಕಾರಣ ಎಂದು ಹೇಳಲಾಯಿತು. ಇದರಂತೆ ಇತ್ತೀಚಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶಿತವಾಗದಿರುವುದು ಒಂದು ಪ್ರಮುಖ ಕಾರಣ ಎಂದು ನಂಬಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರರಂಗದ ಶತ್ರುಗಳು ಎಂಬ ಭಾವಾವೇಶದ ಮಾತುಗಳೂ ಕೂಡ ಕೇಳಿ ಬಂದಿದೆ. ಇದರ ಹಿನ್ನೆಲೆಯನ್ನು ಅರಿಯಲು ಕನ್ನಡ ಚಿತ್ರರಂಗದ ವಾಣಿಜ್ಯಿಕ ನೆಲೆಗಳ ಕುರಿತು ಅರಿಯಬೇಕು. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಎನ್ನುವ ಮೂರು ವಾಣಿಜ್ಯಿಕ ಘಟಕಗಳಿವೆ. ಪ್ರದರ್ಶಕ ಎಂದರೆ ಒಂದು ಕಾಲದಲ್ಲಿ ಸಂಚಾರಿ ಚಿತ್ರಮಂದಿರದಿಂದ ಹಿಡಿದು ಸಿಂಗಲ್ ಸ್ಕ್ರೀನ್ ವರೆಗೆ ಹಲವು ನೆಲೆಗಳ ಘಟಕವಾಗಿತ್ತು. ಇವುಗಳು ವಾಣಿಜ್ಯಮಂಡಳಿಯ ಭಾಗವೂ ಆಗಿತ್ತು.

ಆದರೆ ಮಲ್ಟಿಪ್ಲೆಕ್ಸ್ ಗಳು ಬಂದ ನಂತರ ಈ ಸಮೀಕರಣ ಬದಲಾಯಿತು ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಈ ವ್ಯವಸ್ಥೆಯ ಮೇಲೆ ವಾಣಿಜ್ಯಮಂಡಳಿಗೆ ನೇರ ಹಿಡಿತವಿರಲಿಲ್ಲ ಇದೇ ಅಸಮಧಾನದ ಮೊದಲ ಕಾರಣ. ಮಲ್ಟಿಪ್ಲೆಕ್ಸ್ ಗಳು ಹಂಚಿಕೆಯ ಆರ್ಥಿಕ ಸೂತ್ರದ ಮೇಲೆ ಕೆಲಸ ಮಾಡಲು ಆರಂಭಿಸಿದವು. ಡಿಜಿಟಲ್ ವ್ಯವಸ್ಥೆಯನ್ನೂ ಅಳವಡಿಸಿಕೊಂಡವು. ಇದು ಗಾಂಧಿನಗರದ ಅದುವರೆಗಿನ ಸೂತ್ರಕ್ಕಿಂತ ಭಿನ್ನವಾಗಿತ್ತು. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಕನ್ನಡ ಚಿತ್ರರಂಗದ ಪ್ರಮುಖರಿಗೆ ಇಂದಿಗೂ ಸಾಧ್ಯವಾಗಿಲ್ಲ. ಹೀಗಾಗಿ ತಿಕ್ಕಾಟದ ಮಾತುಗಳು ಕೇಳಿ ಬರುತ್ತಲೇ ಇವೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಒಂದು ಗಟ್ಟಿಯಾದ ಮಾರುಕಟ್ಟೆ ಸೃಷ್ಟಿಯಾಗಿಲ್ಲ ನಿಜ, ಬುಕ್ ಮೈ ಷೋದಂತಹ ವ್ಯವಸ್ಥೆಗಳಲ್ಲಿ ಕನ್ನಡ ವಿರೋಧಿ ಮನೋಭಾವ ಇರುವುದೂ ನಿಜ, ಆದರೆ ಕನ್ನಡ ಚಿತ್ರಗಳು ಪ್ರದರ್ಶಗೊಳ್ಳದಿರಲು ಇದೊಂದೇ ಕಾರಣವಲ್ಲ. ಮಲ್ಟಿಪ್ಲೆಕ್ಸ್ ಗಳು ಸುಸಜ್ಜಿತ ತಾಂತ್ರಿಕ ವ್ಯವಸ್ಥೆಯೊಂದಿಗೆ ಕೆಲಸ ಮಾಡುತ್ತವೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಲ್ಲಿ ತಾಂತ್ರಿಕ ಬದಲಾವಣೆಗಳು ನಡೆಯುತ್ತವೆ. ಹಾಲಿವುಡ್ ಚಿತ್ರಗಳು ಪಡೆಯುತ್ತಿರುವ ತಾಂತ್ರಿಕ ಬೆಳವಣಿಗೆ ಅದಕ್ಕೆ ಕಾರಣ. ಆದರೆ ಕನ್ನಡ ಚಿತ್ರರಂಗ ಇಂದಿಗೂ ತಾಂತ್ರಿಕ ಅಂಶಗಳ ಕುರಿತು ಗಮನವನ್ನು ನೀಡುವುದು ಕಡಿಮೆ. ಮಲ್ಟಿಪ್ಲೆಕ್ಸ್ ನ ಸುಸಜ್ಜಿತ ವ್ಯವಸ್ಥೆಯಲ್ಲಿ ಕನ್ನಡ ಚಿತ್ರಗಳ ದೋಷಗಳು ಎದ್ದು ಕಾಣುತ್ತವೆ. ಇದರ ಜೊತೆಗೆ ಬಹುತೇಕ ಕನ್ನಡ ಚಿತ್ರಗಳು ರೀಮೇಕ್ ಆಗಿರುತ್ತವೆ. ಕೆಲವೇ ತಿಂಗಳುಗಳ ಕೆಳಗೆ ಈ ಚಿತ್ರಗಳ ಮೂಲವನ್ನು ಮಲ್ಟಿಪ್ಲೆಕ್ಸ್ ಪ್ರೇಕ್ಷಕರು ತಾಂತ್ರಿಕವಾಗಿ ಸುಸಜ್ಜಿತವಾದ ಮೂಲ ಭಾಷೆಯ ಪ್ರತಿಯಲ್ಲಿಯೇ ನೋಡಿರುತ್ತಾರೆ. ಈಗ ದುರ್ಬಲ ಚಿತ್ರವನ್ನು ಏಕೆ ನೋಡುತ್ತಾರೆ.

ಗಮನಿಸಲೇ ಬೇಕಾದ ಸಂಗತಿ ಎಂದರೆ ಜಾಗತೀಕರಣದ ಇಂದಿನ ದಿನಗಳಲ್ಲಿ ಕಡ್ಡಾಯದ ಪರಿಭಾಷೆ ಗೆಲ್ಲುವುದು ಕಷ್ಟ. ಈ ಹಿಂದೆ ಕೂಡ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎನ್ನುವ ನಿಯಮಗಳು ನ್ಯಾಯಾಲಯದ ಕಟೆಕಟೆಯಲ್ಲಿ ಬಿದ್ದು ಹೋಗಿವೆ. ಈ ಬಜೆಟ್ ಪ್ರಸ್ತಾಪವೂ ಅದೇ ಸಾಲಿಗೇ ಸೇರಲಿದೆ. 1973ರಲ್ಲಿ ಪಂಜಾಬ್ ಮತ್ತು ತಮಿಳು ನಾಡು ಸರ್ಕಾರಗಳು ಚಿತ್ರಮಂದಿರಗಳನ್ನು ರಾಷ್ಟ್ರೀಕರಣಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದವು. ಲೋಕಸಭೆಯಲ್ಲಿ ಈ ಕುರಿತು ನಡೆದ ಚರ್ಚೆಗೆ ಆಗಿನ ಕೇಂದ್ರ ವಾರ್ತಾ ಸಚಿವ ಐ.ಕೆ.ಗುಜ್ರಾಲ್ ಪ್ರದರ್ಶಕರು ‘ನಿಮ್ಮ ಶತ್ರುಗಳು ಎನ್ನುವ ಭಾವ ಕೈ ಬಿಡಿ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಹೇಳಿದ್ದರು. ಈ ಮಾತು ಇಲ್ಲಿಗೂ ಅನ್ವಯಿಸುತ್ತದೆ ಎಲ್ಲಿಯವರೆಗೆ ಮಲ್ಟಿಪ್ಲಕ್ಸ್ ಗಳು ಕನ್ನಡ ವಿರೋಧಿಗಳು ಎನ್ನುವ ಭಾವದಿಂದಲೇ ಹೊರಡುತ್ತೇವೆಯೋ ಅಲ್ಲಿಯವರೆಗೆ ಇದಕ್ಕೆ ಪರಿಹಾರ ದೊರಕುವುದಿಲ್ಲ. ಒಂದೊಂದೇ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಇತಿಹಾಸದ ಪುಟಗಳನ್ನು ಸೇರುತ್ತಿರುವಾಗ ಮಲ್ಟಿಪ್ಲೆಕ್ಸ್ ಗಳೇ ಚಿತ್ರರಂಗದ ಭವಿಷ್ಯವಾಗಿದೆ. ಯೋಜಿತವಾಗಿ ಅವುಗಳನ್ನು ವ್ಯವಸ್ಥೆಯ ಭಾಗವಾಗಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರಕಬಲ್ಲದು.

ಅದರಂತೆ ₹ 5 ರಿಂದ ₹ 300 ರವರೆಗೆ ಕಾಫಿ ದೊರಕುವ ಇಂದಿನ ಬಹುಗ್ರಾಹಕ ಸಂಸ್ಕೃತಿಯ ಕಾಲದಲ್ಲಿ ಟಿಕೆಟ್ ದರವನ್ನು ನಿಯಂತ್ರಿಸುವುದೂ ಅಸಾಧ್ಯವೇ. ಸರ್ಕಾರದಿಂದ ಸಹಾಯಧನ ಪಡೆಯದ ಮಲ್ಟಿಪ್ಲೆಕ್ಸ್ ಗಳ ಮೇಲೆ ನಿಯಂತ್ರಣ ಸಾಧ್ಯವೇ ಎನ್ನುವುದು ಇನ್ನೊಂದು ಕಾನೂನಿನ ಸಮಸ್ಯೆ. ತಮಿಳು ನಾಡು ಕೇರಳಕ್ಕಿಂತಲೂ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳ ಹಿನ್ನೆಲೆ ಭಿನ್ನವಾಗಿದೆ ಎನ್ನುವುದು ಮರೆಯ ಬಾರದ ಸತ್ಯ. ಒಂದು ಮಾತಂತೂ ನಿಜ ರಂಗಿ ತರಂಗ, ಯೂ ಟರ್ನ್, ತಿಥಿಯಂತಹ ಕನ್ನಡ ಚಿತ್ರಗಳು ಇಂತಹ ಯಾವುದೇ ಕಾನೂನಿನ ನೆರವಿಲ್ಲದೆ ಮಲ್ಟಿಪ್ಲೆಕ್ಸ್ ಗಳಲ್ಲಿ ಗೆದ್ದಿವೆ. ಸೋಲಿಗೆ ತಮ್ಮ ಚಿತ್ರದಲ್ಲಿನ ಸಮಸ್ಯೆಯ ಕುರಿತು ಕಾರಣಗಳನ್ನು ಹುಡುಕಿಕೊಳ್ಳದೆ ಅನ್ಯರನ್ನು ದೂರುವ ಮನೋಭಾವ ಕೊಟ್ಟ ಕುದುರೆಯ ಏರಲರಿಯದೆ ಎನ್ನುವ ಅಲ್ಲಮನ ನುಡಿಯಂತಾದೀತು.

Leave a Reply