ಡೈರಿ ಗಲಾಟೆಗೆ ವಿಧಾನಸಭೆ ಕಲಾಪ ಮುಂದೂಡಿಕೆ, ಉತ್ತರಾಖಂಡಕ್ಕೆ ತ್ರಿವೇಂದ್ರ ಸಿಂಗ್ ಮುಮಂ, ಐಎಎಸ್ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು- ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ಮತ್ತೆ ಗದ್ದಲ ಸೃಷ್ಟಿಸಿದ ಡೈರಿ ವಿಚಾರ

ಕಾಂಗ್ರೆಸ್ ವರಿಷ್ಠರಿಗೆ ಕಪ್ಪ ನೀಡಿರುವ ವಿಚಾರ ವಿಧಾನಸಭೆಯ ಎರಡನೇ ದಿನದ ಕಲಾಪವನ್ನು ನುಂಗಿ ಹಾಕಿತು. ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಡೈರಿ ವಿಚಾರ ಬಗ್ಗೆ ಚರ್ಚೆ ಆಗಲೇಬೇಕು. ಶಾಸಕರಿಗೆ ಇದರ ಬಗ್ಗೆ ಚರ್ಚಿಸುವ ಅಧಿಕಾರವಿದೆ. ಇದೊಂದು ಸಾರ್ವಜನಿಕ ಮಹತ್ವದ ವಿಚಾರ. ಈ ಡೈರಿಯಲ್ಲಿ ಪಕ್ಷದ ವರಿಷ್ಠರಿಗೆ ದೇಣಿಗೆ ನೀಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಇದರಲ್ಲಿ ಕೆಲವು ಸಚಿವರ ಹೆಸರು ಸಹ ಪ್ರಸ್ತಾಪವಾಗಿವೆ. ಹೀಗಾಗಿ ನಮಗಿರುವ ಸಂಶಯ ನಿವಾರಣೆ ಮಾಡಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದರು. ಇದೇ ವೇಳೆ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಕ್ರಿಯೆ ನೀಡಿ, ‘ಗೋವಿಂದ ರಾಜು ಡೈರಿ ನಕಲಿ, ಲೆಹರ್ ಸಿಂಗ್ ಡೈರಿ ಅಸಲಿ,. ಹೀಗಿರುವಾಗ ಗೋವಿಂದರಾಜು ಅವರ ಹೆಸರಿನಲ್ಲಿ ಬಂದ ನಕಲಿ ಡೈರಿಯನ್ನು ಹಿಡಿದುಕೊಂಡು ಚರ್ಚಿಸುವ ಅಗತ್ಯವೇ ಇಲ್ಲ’ ಎಂದರು. ಆಗ ಗದ್ಧಲ ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಣ ತಪ್ಪಿದ ಪರಿಣಾಮ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹರಿಹಾಯ್ದರು. ‘ಜನಪರ ವಿಚಾರಗಳ ಮೇಲೆ ಚರ್ಚೆ ನಡೆಸದೇ ಪ್ರಚಾರಕ್ಕಾಗಿ ಇಂತಹ ವಿಷಯಗಳಿಂದ ಜನರ ದಾರಿ ತಪ್ಪಿಸಲು ಪ್ರಯತ್ನ ಪಡುತ್ತಿದ್ದೀರಿ. ನೀವು ಎಷ್ಟೇ ತಿಪ್ಪರಲಾಗ ಹಾಕಿದರೂ ನಿಮ್ಮನ್ನು ಜನ ನಂಬುವುದಿಲ್ಲ. ಸರ್ಕಾರದ ವಿರುದ್ಧ ಎಷ್ಟೇ ಸುಳ್ಳು ಕತೆ ಕಟ್ಟಿದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ’ ಎಂದರು.

ಉತ್ತರಾಖಂಡಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಸಿಎಂ

ಉತ್ತರಾಖಂಡದಲ್ಲಿ ಬಿಜೆಪಿಯಿಂದ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆಬಿದ್ದಿದೆ. ಆರೆಸ್ಸೆಸ್ ನ ಮಾಜಿ ಪ್ರಚಾರಕ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾ ತೆಗೆದುಕೊಳ್ಳಲಾಗಿದ್ದು, ರಾವತ್ ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ದೊಯ್ವಾಲ ಕ್ಷೇತ್ರದಿಂದ ಆಯ್ಕೆಯಾಗಿರುವ ರಾವತ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡವರು. 2014ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿ ಅಮಿತ್ ಶಾ ಜತೆ ಕೆಲಸ ಮಾಡಿದ ರಾವತ್, ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಸ್ಥಾನ ಪಡೆದುಕೊಂಡಿದ್ದರು. ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ನಮಾಮಿ ಗಂಗಾ ಯೋಜನೆ ಜವಾಬ್ದಾರಿ ಹೊತ್ತಿದ್ದು, ಜಾರ್ಖಂಡ್ ರಾಜ್ಯದ ಉಸ್ತುವಾರಿಯನ್ನು ಹೊತ್ತಿದ್ದಾರೆ. 2000ನೇ ಇಸವಿಯಲ್ಲಿ ಉತ್ತರಖಾಂಡವು ಉತ್ತರ ಪ್ರದೇಶದಿಂದ ಬೇರ್ಪಟ್ಟಾಗ ರಾವತ್ ಅವರು ಉತ್ತರಾಖಂಡ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ 2002 ಮತ್ತು 2007ರ ವಿಧಾನಸಭೆ ಚುನಾವಣೆಗಳಲ್ಲಿ ದೊಯ್ವಾಲ ಪ್ರದೇಶದಿಂದ ಆಯ್ಕೆಯಾಗಿದ್ದರು.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡವನ್ನೇ ಕಡ್ಡಾಯವಾಗಿ ಬಳಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಅವರು ಇಂಗ್ಲಿಷ್ ನಲ್ಲಿ ಕಡತ ಕಳುಹಿಸುವಂತೆ ಆದೇಶ ನೀಡಿರುವುದು ತಪ್ಪು. ಈ ಬಗ್ಗೆ ಮಾಹಿತಿ ಪಡೆದು ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ. ಹೊರಗಿನವರು ನಮ್ಮ ಭಾಷೆಗೆ ತಲೆಬಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ಎರಡು ಮಾತೇ ಇಲ್ಲ ಎಂದರು.
  • ಮುಂಬರುವ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮ ಪರಿಷ್ಕರಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಇದ್ದ ಪಠ್ಯಕ್ರಮವೇ 2017-18ನೇ ಸಾಲಿಗೂ ಮುಂದುವರಿಯಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಬೇಡ. ಈ ವಿಷಯವಾಗಿ ಯಾವುದೇ ಸಮಿತಿ ರಚಿಸಿಲ್ಲ ಎಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ರಾಮಚಂದ್ರೇಗೌಡ, ತಾರಾ ಅನುರಾಧ ಹಾಗೂ ಅರುಣ್ ಶಹಪೂರ್ ಅವರ ಪ್ರಶ್ನೆಗೆ ಉತ್ತರಿಸಿದರು.
  • ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಸ್ವರೂಪದಲ್ಲಿ ಅಭಿವೃದ್ಧಿಪಡಿಸುವ ಹಾಗೂ ಪಡಿಸುತ್ತಿರುವ ಮಾರ್ಗಗಳಲ್ಲಿ ಬಳಕೆದಾರರ ಶುಲ್ಕ (ಟೋಲ್) ಸಂಗ್ರಹಣೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಸಂಸ್ಥೆಗಳು ಈ ಟೋಲ್ ದರ ನಿಗದಿಪಡಿಸಲಿವೆ.

Leave a Reply