ನಾರದಾ ಸ್ಟಿಂಗ್ ಆಪರೇಷನ್: ಪೊಲೀಸರು ಸರ್ಕಾರದ ಕೈಗೊಂಬೆ, ಸಿಬಿಐ ಈ ತನಿಖೆ ನಡೆಸಲಿ- ಕೋಲ್ಕತಾ ಹೈಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ತೃಣಮೂಲ ಕಾಂಗ್ರೆಸ್ ನಾಯಕರು ಲಂಚ ಪಡೆದಿದ್ದು ನಾರದಾ ಸುದ್ದಿ ವಾಹಿನಿಯ ಕುಟುಕು ಕಾರ್ಯಾಚರಣೆ ಮೂಲಕ ಬೆಳಕಿಗೆ ಬಂದ ಪ್ರಕರಣ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂದಿದೆ, ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಪ್ರಶ್ನೆಯಾಗೇ ಉಳಿದಿತ್ತು. ಈಗ ಈ ಪ್ರಕರಣದ ಕುರಿತಾಗಿ ಬಂದಿರುವ ಮಾಹಿತಿ ಏನೆಂದರೆ, ಇಷ್ಟು ದಿನಗಳ ಕಾಲ ಕೋಲ್ಕತಾ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿ ಕೋಲ್ಕತಾ ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಮಮತಾ ಬ್ಯಾನರ್ಜಿ ಅವರ ಸಂಪುಟದ ಪ್ರಮುಖ ಸಚಿವರುಗಳು ಲಂಚ ಪಡೆಯುತ್ತಿರುವುದನ್ನು ಈ ನಾರದಾ ಕುಟುಕು ಕಾರ್ಯಾಚರಣೆ ಮೂಲಕ ಬಹಿರಂಗವಾದ ನಂತರ ಪಶ್ಚಿಮ ಬಂಗಾಳದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೋಲ್ಕತಾ ಪೊಲೀಸ್ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದು, ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ನ್ಯಾಯಾಲಯ ಸೂಚಿಸಿದೆ.

ಈ ಬಗ್ಗೆ ಸಿಬಿಐಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ‘ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಮುಂದಿನ 24 ಗಂಟೆಗಳಲ್ಲಿ ನ್ಯಾಯಾಲಯದಿಂದಲೇ ಪಡೆದು, ಮುಂದಿನ 72 ಗಂಟೆಗಳಲ್ಲಿ ತನಿಖೆ ಆರಂಭಿಸಬೇಕು’ ಎಂದು ಹೇಳಿದೆ.

ಇತ್ತ ಸುಪ್ರೀಂ ಕೋರ್ಟಿನ ತೀರ್ಪಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ‘ಕೋಲ್ಕತಾ ಪೊಲೀಸ್ ವಿಶ್ವದಲ್ಲೇ ಅತ್ಯುತ್ತಮ ಪೊಲೀಸ್ ಪಡೆ. ಈ ವಿಷಯದಲ್ಲಿ ನಾವು ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟವನ್ನು ನಡೆಸುತ್ತೇವೆ. ನಾವು ಈ ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರಿಗೆ ವಹಿಸಿದ್ದು, ನ್ಯಾಯಾಲಯ ಪೊಲೀಸ್ ಅಧಿಕಾರಿಗಳಿಗೆ ತನಿಖೆ ನಡೆಸಲು ಅವಕಾಶವನ್ನೇ ಕೊಟ್ಟಿಲ್ಲ. ಈ ತೀರ್ಪಿನ ವಿರುದ್ಧ ನಾವು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದರು.

ಆರಂಭದಲ್ಲಿ ಈ ಕುಟುಕು ಕಾರ್ಯಾಚರಣೆ ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣದ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋಲ್ಕತಾ ಪೊಲೀಸರಿಗೆ ವಹಿಸಿದಲ್ಲದೇ, ಸಿಬಿಐಗೆ ಹಸ್ತಾಂತರಿಸುವುದರ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಜತೆಗೆ ಈ ವಿಡಿಯೋ ಬಹಿರಂಗಗೊಳಿಸಿದ ನಾರದಾ ನ್ಯೂಸ್ ನ ಮ್ಯಾಥ್ಯೂ ಸ್ಯಾಮುಯೆಲ್ ವಿರುದ್ಧ ಫೋರ್ಜರಿ ಪ್ರಕರಣವನ್ನು ದಾಖಲಿಸಲಾಗಿತ್ತು. ಈಗ ಹೈಕೋರ್ಟ್ ತೀರ್ಪಿನಿಂದ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

Leave a Reply