ಕೇಂದ್ರದ ವಿರುದ್ಧ ಸಿದ್ದರಾಮಯ್ಯ- ಡಿಕೆಶಿ ಆರೋಪ ಏನು? ಸದಾನಂದ ಗೌಡ್ರ ಪ್ರತ್ಯುತ್ತರ ಏನು?, ಉ.ಪ್ರ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್, ಉತ್ತರಾಖಂಡ ಸಿಎಂ ಆಗಿ ತ್ರಿವೇಂದ್ರ ಪ್ರಮಾಣ ವಚನ, 3ನೇ ಟೆಸ್ಟ್: ಪೂಜಾರ ಶತಕ

ರಾಂಚಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸಿ ಟೀಂ ಇಂಡಿಯಾಗೆ ಆಸರೆಯಾದ ಚೇತೇಶ್ವರ ಪೂಜಾರ…

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ವಿರುದ್ಧ ಆರೋಪ…

ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ತೆರಿಗೆ ಇಲಾಖೆ ದಾಳಿ ಮೂಲಕ ಕೇಂದ್ರ ಸರ್ಕಾರ ಬಲ ಪ್ರಯೋಗ ಮಾಡುತ್ತಿದೆ ಎಂಬ ಹಳೇ ವಾದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುನರುಚ್ಛರಿಸಿದ್ದಾರೆ. ಮತ್ತೊಂದೆಡೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ದೂರವಾಣಿ ಕರೆಗಳನ್ನು ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎಂಬ ಹೊಸ ಆರೋಪ ಮಾಡಿದ್ದಾರೆ.

‘ರಾಜ್ಯದಲ್ಲಿ ನಡೆದ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಆದಾಯ ತೆರಿಗೆ ಕಟ್ಟುವವರು ಕಟ್ಟದವರು ಬಿಜೆಪಿಯಲ್ಲಿ ಇಲ್ಲವೇ? ಐಟಿ ಅಧಿಕಾರಿಗಳಿಗೆ ಕೇವಲ ಕಾಂಗ್ರೆಸ್ ಶಾಸಕರು, ಮುಖಂಡರು, ಸಚಿವರು ಮಾತ್ರ ಕಾಣಿಸುವರೇ? ಇದು ಖಂಡನೀಯ. ಐಟಿ ಅಧಿಕಾರಿಗಳು ದಾಳಿ ನಡೆಸಲಿ, ಆದರೆ ನಿರ್ದಿಷ್ಟ ಪಕ್ಷವನ್ನು ಗುರಿಯಾಗಿಸುವುದು ತಪ್ಪು’ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ.

‘ಐಟಿಯಲ್ಲಿ ಅತ್ಯುತ್ತಮ ಅಧಿಕಾರಿಗಳಿದ್ದಾರೆ. ಆದರೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ದೂರವಾಣಿ ಕದ್ದಾಲಿಸುತ್ತಿದ್ದಾರೆ ಎಂಬ ಗುಮಾನಿ ಇದೆ. ಯುಪಿಎ ಸರ್ಕಾರ ಇರುವ ಸಂದರ್ಭದಲ್ಲಿ ಸಿಬಿಐ, ಐಟಿ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳನ್ನು ಈ ರೀತಿಯಾಗಿ ದುರುಪಯೋಗ ಮಾಡಿಕೊಂಡಿರಲಿಲ್ಲ. ಆದರೆ ಬಿಜೆಪಿ ಈ ಸಂಸ್ಥೆಗಳನ್ನು ತನಗೆ ಬೇಕಾದಂತೆ ದುರುಪಯೋಗ ಮಾಡಿಕೊಳ್ಳುತ್ತಿದೆ. ನನ್ನ ಕರೆಗಳು ಪದೇ ಪದೇ ಕಟ್ ಆಗುತ್ತಿದ್ದು, ಕಿರಿ ಕಿರಿ ಆಗುತ್ತಿದೆ. ಅದೇ ವೇಳೆ ರಾಜಕೀಯ ನಾಯಕರ ದೂರವಾಣಿ ಕರೆ ಕದ್ದಾಲಿಕೆಯಾಗುತ್ತಿದೆ ಎಂಬ ಮಾಧ್ಯಮಗಳ ವರದಿ ನೋಡಿದ್ದೇನೆ. ಹೀಗಾಗಿ ನನಗೆ ಈ ಬಗ್ಗೆ ಅನುಮಾನವಿದೆ’ ಎಂದರು ಡಿಕೆಶಿ.

ಈ ಇಬ್ಬರು ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ‘ದೂರು ನೀಡಿದ ಮಾತ್ರಕ್ಕೆ ಯಾರೂ ದಾಳಿ ಮಾಡಲ್ಲ. ತನಿಖೆಯಾದ ಬಳಿಕವೇ ಖಚಿತ ಮಾಹಿತಿ ಪಡೆದು ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ರಾಷ್ಟ್ರದ ಎಲ್ಲೆಡೆ ದಾಳಿ ನಡೆದಿವೆ. ಕೇವಲ ಕಾಂಗ್ರೆಸ್ ಮೇಲೆ ದಾಳಿ ಆಗಿಲ್ಲ. ಮುಖ್ಯಮಂತ್ರಿ ಈ ರೀತಿಯಾಗಿ ಹೇಳುವುದು ಸರಿಯಲ್ಲ. ಅವರು ಮಾತನಾಡುವಾಗ ಹುಷಾರಾಗಿ ಮಾತನಾಡಲಿ. ಹಳದಿ ರೋಗ ಬಂದವರಿಗೆ ಜಗತ್ತೆಲ್ಲಾ ಹಳದಿಯಾಗೇ ಕಾಣುತ್ತದೆ. ದಾಖಲೆ ಇಲ್ಲದೆ ಯಾವುದೇ ದಾಳಿ ನಡೆಯುವುದಿಲ್ಲ. ರಾಜ್ಯ ಸರ್ಕಾರ ತಲೆ ದಿಂಬಿನಿಂದ ಹಿಡಿದು, ಸ್ಟೀಲ್ ಬ್ರಿಡ್ಜ್ ವರೆಗೂ ನುಂಗಿದೆ. ಇವರಿಗೆಲ್ಲಾ ಈಗ ಹೆದರಿಕೆ ಶುರುವಾಗಿದ್ದು, ರಾತ್ರಿ ನಿದ್ದೆ ಬರುತ್ತಿಲ್ಲ. ಸಚಿವ ಡಿ.ಕೆ ಶಿವಕುಮಾರ್ ಅವರಿಗೂ ರಾತ್ರಿ ಕನಸಲ್ಲಿ ಸಿಬಿಐ ಗುಮ್ಮ ಕನಸ್ಸಲ್ಲಿ ಬಂದಿರಬೇಕು ಅದಕ್ಕೆ ಅವರು ಗಾಬರಿಯಾಗಿದ್ದಾರೆ’ ಎಂದು ಲೇವಡಿ ಮಾಡಿದರು.

ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಆಯ್ಕೆ ಕುರಿತಾಗಿ ಮೂಡಿದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಶನಿವಾರ ಲಖನೌನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ನಿನ್ನೆಯವರೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮನೋಜ್ ಸಿನ್ಹಾ ಅವರು ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಶನಿವಾರ ನಡೆದ ಸಭೆಯಲ್ಲಿ ಸಂಪೂರ್ಣ ಚಿತ್ರಣ ಬದಲಾಗಿ ಸಂಜೆ ವೇಳೆಗೆ ಯೋಗಿ ಆದಿತ್ಯನಾಥ್ ಅವರ ಹೆಸರು ಅಂತಿಮವಾಯಿತು.

ಕಾರು ಅಪಘಾತ- ರೇಸರ್ ಅಶ್ವಿನ್ ಸಾವು

ಭಾರತದ ವೃತ್ತಿಪರ ಮೋಟಾರ್ ರೇಸರ್ ಆಗಿದ್ದ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಶನಿವಾರ ಬೆಳಗ್ಗೆ ಚೆನ್ನೈನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದಂಪತಿಗಳು ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಸಾಗುವಾಗ ಮರಕ್ಕೆ ಡಿಕ್ಕಿ ಹೊಡೆದರು. ಆಗ ಕಾರಿನೊಳಗೆ ಹೊಗೆ ಆವರಿಸಿತು. ಕಾರಿನಿಂದ ಹೊರಬರಲು ಸಾಧ್ಯವಾಗದಂತೆ ಸಿಲುಕಿಕೊಂಡರು. ಅದೇ ವೇಳೆ ಕಾರಿನಲ್ಲಿ ಬೆಂಕಿ ಹೊತ್ತುಕೊಂಡು ನೋಡ ನೋಡುತ್ತಿದ್ದಂತೆ ಬೆಂಕಿ ಸಂಪೂರ್ಣ ಕಾರನ್ನು ಆವರಿಸಿತು. ಪರಿಣಾಮ ಈ ಇಬ್ಬರೂ ಸಜೀವ ದಹನವಾದರು. ಅಶ್ವಿನ್ ಸುಂದರ್ ಅವರು ಮಾಜಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದು, ನಾಲ್ಕು ಬಾರಿ ಫಾರ್ಮುಲಾ 4 ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಜತೆಗೆ ಎಂಆರ್ಎಫ್ ಫಾರ್ಮುಲಾ 1600 ಇಂಟರ್ ನ್ಯಾಷನಲ್ ಚಾಲೆಂಜ್ ಪ್ರಶಸ್ತಿಯನ್ನು ಗೆದ್ದಿದ್ದರು. ಇನ್ನು ಅಶ್ವಿನ್ ಸುಂದರ್ ಅವರ ಪತ್ನಿ ವೈದ್ಯರು ಎಂದು ಹೇಳಲಾಗಿದೆ. ಅಶ್ವಿನ್ ಅವರ ಸಾವಿಗೆ ಅಂತಾರಾಷ್ಟ್ರೀಯ ರೇಸಿಂಗ್ ಕ್ಷೇತ್ರ ಕಂಬನಿ ಮಿಡಿದಿದೆ.

ಉತ್ತರಾಖಂಡ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ಪ್ರಮಾಣ ವಚನ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಶನಿವಾರ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ತ್ರಿವೇಂದ್ರ ಅವರ ಜತೆಗೆ ಸತ್ಪಾಲ್ ಮಹರಾಜ್, ಪ್ರಕಾಶ್ ಪಂತ್, ಹರಕ್ ಸಿಂಗ್ ರಾವತ್, ಮದನ್ ಕೌಶಿಕ್, ಯಶ್ಪಾಲ್ ಆರ್ಯ, ಅರವಿಂದ್ ಪಾಂಡೆ, ಸುಬೋಧ್ ಉನಿಯಾಲ್, ರೇಖಾ ಆರ್ಯ, ಧನ್ ಸಿಂಗ್ ರಾವತ್ ಸಹ ಪ್ರಮಾಣ ಸ್ವೀಕರಿಸಿ ಸಂಪುಟದಲ್ಲಿ ಸ್ಥಾನ ಪಡೆದರು.

ಟೀಂ ಇಂಡಿಯಾಗೆ ಪೂಜಾರ ಶತಕದಾಸರೆ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಚೇತೇಶ್ವರ ಪೂಜಾರ ಆಸರೆಯಾಗಿ ನಿಂತಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 451 ರನ್ ಗಳಿಗೆ ನಿಯಂತ್ರಿಸಿದ್ದ ಭಾರತ ತಂಡ ಎರಡನೇ ದಿನದಾಟ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 120 ರನ್ ಕಲೆ ಹಾಕಿತ್ತು. ಈ ಉತ್ತಮ ಆರಂಭದ ನಂತರ ಮೂರನೇ ದಿನ ಆಟ ಮುಂದುವರಿಸಿದ ಭಾರತ ಮುರಳಿ ವಿಜಯ್ ಅವರ ಅರ್ಧಶತಕದ ನೆರವಿನಿಂದ ಉತ್ತಮ ಹಾದಿಯಲ್ಲಿ ಸಾಗಿತು. ಆದರೆ ವಿಜಯ್ ವಿಕೆಟ್ ಬಿದ್ದ ನಂತರ ಬಂದ ನಾಯಕ ವಿರಾಟ್ ಕೊಹ್ಲಿ (6), ಅಜಿಂಕ್ಯ ರಹಾನೆ (14), ಕರುಣ್ ನಾಯರ್ (23), ಅಶ್ವಿನ್ (3) ಬೇಗನೆ ವಿಕೆಟ್ ಒಪ್ಪಿಸಿದ್ದು ಭಾರತ ಒತ್ತಡಕ್ಕೆ ಸಿಲುಕುವಂತಾಯಿತು. ಆದರೆ ಮತ್ತೊಂದು ತುದಿಯಲ್ಲಿ ಆಸ್ಟ್ರೇಲಿಯನ್ನರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪೂಜಾರ (ಅಜೇಯ 130) ತಮ್ಮ ಟೆಸ್ಟ್ ವೃತ್ತಿ ಜೀವನದ 11ನೇ ಶತಕ ಬಾರಿಸಿದರು. ಸದ್ಯ ಭಾರತ ಮೂರನೇ ದಿನದಾಟ ಮುಕ್ತಾಯಕ್ಕೆ 6 ವಿಕೆಟ್ ಗೆ 360 ರನ್ ಪೇರಿಸಿದ್ದು, ಇನ್ನು 91 ರನ್ ಗಳ ಹಿನ್ನಡೆಯಲ್ಲಿದೆ. ನಾಳಿನ ಆಟದಲ್ಲಿ ಭಾರತ ಈ ರನ್ ಪೇರಿಸಿದರೆ, ಪಂದ್ಯ ಉಭಯ ತಂಡಗಳ ನಡುವಣ ಪೈಪೋಟಿಯನ್ನು ಹೆಚ್ಚಿಸಲಿದೆ. ಪಿಚ್ ಹಳೆಯದಾಗುತ್ತಿದ್ದಂತೆ ಬೌಲರ್ ಗಳ ಪ್ರಾಬಲ್ಯ ಹೆಚ್ಚುವ ಸಾಧ್ಯತೆ ಇದ್ದು, ರೋಚಕ ಹಣಾಹಣಿ ಎದುರಾಗುವ ನಿರೀಕ್ಷೆ ಇದೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 451

ಭಾರತ ಮೊದಲ ಇನಿಂಗ್ಸ್ 360ಕ್ಕೆ 6

ಪೂಜಾರ ಅಜೇಯ 130, ವಿಜಯ್ 82, ರಾಹುಲ್ 67, ನಾಯಕ್ 23: ಕಮಿನ್ಸ್ 59ಕ್ಕೆ 4, ಹ್ಯಾಜೆಲ್ ವುಡ್ 66ಕ್ಕೆ 1

Leave a Reply