ಮಣಿಪುರದಲ್ಲಿ ಬಿಜೆಪಿ ಬೆಳವಣಿಗೆ ಏಕಾಏಕಿ ಹೇಗಾಯ್ತು ಎಂಬುದಕ್ಕೆ ಉತ್ತರ ಮುಖ್ಯಮಂತ್ರಿ ಬಿರೇನ್ ಸಿಂಗ್ ಪರಿಚಯ

ಡಿಜಿಟಲ್ ಕನ್ನಡ ಟೀಮ್:

ಗೋವಾದ ಜತೆಗೆ ಮಣಿಪುರದಲ್ಲೂ ಭಾರತೀಯ ಜನತಾ ಪಕ್ಷ ಸರ್ಕಾರವನ್ನು ರಚಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಮೊದಲ ಬಾರಿಗೆ ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು, ಬಿಜೆಪಿಯ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಗೆ ನಂಗ್ತೊಂಬಮ್ ಬಿರೇನ್ ಸಿಂಗ್ ಪಾತ್ರರಾಗಿದ್ದಾರೆ.

ಬಿರೇನ್ ಸಿಂಗ್ ಅವರ ವ್ಯಕ್ತಿಪರಿಚಯ ಓದಿಕೊಂಡರೆ ಸಾಕು, ಬಿಜೆಪಿ ತನ್ನ ಅಸ್ತಿತ್ವವೇ ಇರದಿದ್ದ ಮಣಿಪುರದಲ್ಲಿ ಗಣನೀಯ ಸ್ಥಾನಗಳನ್ನು ಏಕಾಏಕಿ ಗಳಿಸುವುದಕ್ಕೆ ಸಾಧ್ಯವಾಗಿದ್ದು ಹೇಗೆ ಅಂತ. ಮೊದಲನೆಯ ಗಣನೀಯ ಅಂಶವೇ ಈ ಬಿರೇನ್ ಸಿಂಗ್ ಮಾಜಿ ಕಾಂಗ್ರೆಸ್ಸಿಗರು ಹಾಗೂ ನಿರ್ಗಮಿತ ಮುಖ್ಯಮಂತ್ರಿ ಇಬೊಬಿ ಸಿಂಗ್ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ಇವರೊಬ್ಬರು ಅಂತಲ್ಲ, ಮಣಿಪುರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಗೆದ್ದವರಲ್ಲಿ ಬಹುತೇಕರು ಮಾಜಿ ಕಾಂಗ್ರೆಸ್ಸಿಗರೇ.

ಇವೇನೇ ಇದ್ದರೂ ಗೆಲುವೆಂಬುದು ಗೆಲುವೇ. ಆದರೆ ದೇಶದ ಉಳಿದೆಡೆಗಳಲ್ಲಿ ಬಿಜೆಪಿ ತನ್ನ ಬೆಳವಣಿಗೆಗೆ ಬೇರುಮಟ್ಟದ ಕಾರ್ಯಕರ್ತರನ್ನು ಅವಲಂಬಿಸಿದ ರೀತಿಯಲ್ಲಿ, ಮಣಿಪುರದಲ್ಲಿ ತಾನೇ ತಾನಾಗಿ ಬೆಳೆದುದಲ್ಲ. ಇದೊಂದು ‘ಆಮದು ಬೆಳವಣಿಗೆ’. ಹಾಗೆ ನೋಡಿದರೆ, ಈಶಾನ್ಯ ಭಾರತವನ್ನು ಬಿಜೆಪಿ ಆಕ್ರಮಿಸಿಕೊಳ್ಳುತ್ತಿರುವುದೇ ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ. ಆದರೆ ಅಸ್ಸಾಮಿನಂಥ ರಾಜ್ಯಗಳಲ್ಲಿ ಬಿಜೆಪಿ ಮೊದಲೇ ಇತ್ತು, ಅದರ ಜತೆಗೆ ಮೈತ್ರಿ ರಾಜಕಾರಣ ಮಾಡಿದ್ದು ಅಧಿಕಾರ ಹಿಡಿಯುವಲ್ಲಿ ಸಹಕಾರಿಯಾಯಿತು.

ಆದರೆ ಮಣಿಪುರದ ವಿಷಯದಲ್ಲಿ ಮಾತ್ರ ದೇಶದ ಇತರೆಡೆ ಮೊಳಗುವ ರಾಷ್ಟ್ರವಾದ, ಸಾಂಸ್ಕೃತಿಕ ಹೆಮ್ಮೆ ಇವ್ಯಾವವೂ ಕೆಲಸಕ್ಕೆ ಬರುವುದಿಲ್ಲ. ಕಾಂಗ್ರೆಸ್ಸಿನ 15 ವರ್ಷಗಳ ಆಳ್ವಿಕೆ ದಣಿವನ್ನೇ ಬಿಜೆಪಿ ಸದ್ಯಕ್ಕೆ ಬಂಡವಾಳ ಮಾಡಿಕೊಂಡಿರುವುದು ಸ್ಪಷ್ಟ.

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ವ್ಯಕ್ತಿಪರಿಚಯ ಓದಿಕೊಂಡರೆ ಇವೆಲ್ಲವೂ ಸ್ಪಷ್ಟವಾಗುತ್ತವೆ.

1961ರ ಜನವರಿ 1ರಂದು ಜನಿಸಿದ ಬಿರೇನ್ ಸಿಂಗ್ ಒಂದು ಕಾಲದಲ್ಲಿ ಫುಟ್ಬಾಲ್ ಆಟಗಾರನಾಗಿ ಮಿಂಚಿದ್ದರು. ಫುಟ್ಬಾಲ್ ಆಟಗಾರನಾಗಿ ವೃತ್ತಿ ಆರಂಭಿಸಿದ್ದ ಇವರು ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದರು. ಬಿಎಸ್ಎಫ್ ಫುಟ್ಬಾಲ್ ತಂಡದಲ್ಲಿ ಆಟ ಮುಂದುವರಿಸಿದ ಬಿರೇನ್ ಸಿಂಗ್ 1981ರ ಡುರಾಂಡ್ ಕಪ್ ಗೆದ್ದ ತಂಡದ ಭಾಗವಾಗಿದ್ದರು.

ಬಿಎಸ್ಎಫ್ ಸೇವೆಗೆ ರಾಜಿನಾಮೆ ನೀಡಿದ ಅವರು ಸ್ವಂತ ಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿದರು. 1992 ರಲ್ಲಿ ‘ನಹರೊಲ್ಗಿ ಥೌದಂಗ್’ ಎಂಬ ದಿನಪತ್ರಿಕೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ತರಬೇತಿ ಪಡೆಯದಿದ್ದರೂ ಬಿರೇನ್ ಸಿಂಗ್ ಈ ಸಾಹಸಕ್ಕೆ ಕೈ ಹಾಕಿದ್ದದ್ದು ಮಾತ್ರವಲ್ಲ ಇದರಲ್ಲಿ ಯಶಸ್ಸನ್ನು ಕಂಡರು. ಸುಮಾರು ದಶಕಗಳ ಕಾಲ ಅಂದರೆ 2001ರ ವರೆಗೂ ಈ ಪತ್ರಿಕೆಯ ಸಂಪಾದಕರಾಗಿ ದೊಡ್ಡ ಹೆಸರು ಸಂಪಾದಿಸಿದರು. 2002ರಲ್ಲಿ ತೀವ್ರವಾದಿಗಳಿಗೆ ಬೆಂಬಲಿಸುವ ಲೇಖನ ಪ್ರಕಟಿಸಿದ್ದಾರೆ ಎಂಬ ಕಾರಣ ಕೊಟ್ಟು ಇವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಯಿತು. ಬಿಡುಗಡೆಯಾಗಿ ಬಂದ ಬಿರೇನ್ ಅವರು ರಾಜಕೀಯದತ್ತ ಮುಖಮಾಡಿದರು. ಅದೇ ವರ್ಷ ಡೆಮಕ್ರಾಟಿಕ್ ರೆವೊಲ್ಯೂಷನರಿ ಪೀಪಲ್ಸ್ ಪಾರ್ಟಿಯಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದು ರಂಗ ಪ್ರವೇಶಿಸಿದರು. ಇದಾದ ಒಂದೇ ವರ್ಷದ ಬಳಿಕ 2003ರಲ್ಲಿ ಅವರು ಕಾಂಗ್ರೆಸ್ ಸೇರಿದರು. ವಿಕ್ರಮ್ ಇಬೊಬಿ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2007ರ ಚುನಾವಣೆಯಲ್ಲೂ ಜಯ ಸಾಧಿಸಿ ಮತ್ತೊಮ್ಮೆ ಸಚಿವರಾಗಿ ಅಧಿಕಾರ ನಡೆಸಿದರು.

2016ರಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಬಂಡಾಯದ ಧ್ವನಿ ಎತ್ತಿದ ಬಿರೇನ್ ಸಿಂಗ್ 42 ಶಾಸಕರ ಪೈಕಿ 25 ಶಾಸಕರ ಬೆಂಬಲವನ್ನು ಗಿಟ್ಟಿಸಿಕೊಂಡರು. ಇವರ ಒತ್ತಡಕ್ಕೆ ಪಕ್ಷ ಮಣಿದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಿಸುವುದರ ಜತೆಗೆ ಸಚಿವ ಸಂಪುಟದಲ್ಲಿ ಒಬ್ಬರಿಗೆ ಒಂದು ಹುದ್ದೆಯ ಸೂತ್ರ ಜಾರಿಗೆ ಬರುವಂತೆ ನೋಡಿಕೊಂಡರು. ನಂತರವೂ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಹೆಚ್ಚಾದ ಕಾರಣ ಬಿರೇನ್ ಸಿಂಗ್ ಕಳೆದ ಅಕ್ಟೋಬರ್ ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಬಿರೇನ್ ಸಿಂಗ್ ರಾಜಕೀಯಕ್ಕೆ ಬಂದು ಕೇವಲ 15 ವರ್ಷಗಳಾಗಿದ್ದರು, ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದಾರೆ. ತಮ್ಮ ಈವರೆಗಿನ ಹಾದಿಯಲ್ಲಿ ಸಾಕಷ್ಟು ವೈವಿಧ್ಯಮಯತೆ ಕಂಡಿರುವ ಬಿರೇನ್ ಸಿಂಗ್ ಅವರ ಮುಂದಿನ ಹಾದಿ ಹೇಗೆ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply