ಮೋದಿ ವಿನಮ್ರತೆಯ ಮಾತು ಹೇಳುತ್ತಿರುವಾಗಲೇ ಬಿಜೆಪಿ ಸಂಸದನ ಅಹಂಕಾರದ ಅವತಾರ

ಡಿಜಿಟಲ್ ಕನ್ನಡ ಟೀಮ್:

‘ಗೋಲುವಿರಲಿ, ಸೋಲಿರಲಿ ವಿನಮ್ರತೆ ಯಾವತ್ತೂ ಒಳ್ಳೆಯದು’ ಹಾಗಂತ ನಿನ್ನೆಯಷ್ಟೇ ಟ್ವೀಟಿಸಿದ್ದರು ಪ್ರಧಾನಿ ಮೋದಿ. ಆದರೆ ಅವರದೇ ಪಕ್ಷದ ಸಂಸದ ಮನೋಜ್ ತಿವಾರಿಗೆ ಮಾತ್ರ ಅಹಂಕಾರ ನೆತ್ತಿಗೇರಿದೆ.

ಈಶಾನ್ಯ ದೆಹಲಿಯನ್ನು ಪ್ರತಿನಿಧಿಸುತ್ತಿರುವ ಈ ಸಂಸದ ಇತ್ತೀಚೆಗೆ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅದು ಶಾಲಾ ಆವರಣವೊಂದರಲ್ಲಿ ನಡೆದಿದೆ. ಆ ವೇದಿಕೆಯಲ್ಲಿ ಸಂಸದ ತಿವಾರಿ ಅವರಿಗೆ ಹಾಡೊಂದನ್ನು ಹಾಡುವಂತೆ ವಿನಂತಿಸಿಕೊಂಡ ಶಿಕ್ಷಕಿಯೊಬ್ಬರಿಗೆ ತಿವಾರಿ ಯಾವ ಪರಿ ಅವಮಾನಿಸಿದ್ದಾರೆಂದರೆ, ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿರುವ ಇದರ ವಿಡಿಯೋ ನೋಡಿದ ಯಾರಿಗಾದರೂ ಶಿಕ್ಷಕಿಯ ಬಗ್ಗೆ ಮನಕರಗದಿರದು. ಹಾಗೆಯೇ ಮನೋಜ್ ತಿವಾರಿ ಎಂಬ ಅಹಂಕಾರಿಯ ಬಗ್ಗೆ ಆಕ್ರೋಶ ಮೂಡದೇ ಇರದು. ಇದೇ ಸಂಸದ ಈ ಹಿಂದೆ ನೋಟು ಅಮಾನ್ಯದ ಸಂದರ್ಭದಲ್ಲಿ ಸರತಿಯಲ್ಲಿ ನಿಂತಿರುವ ನಾಗರಿಕರನ್ನು ಆಡಿಕೊಂಡಿದ್ದ ವಿಡಿಯೋ ಸಹ ಬಿತ್ತರವಾಗಿತ್ತು.

‘ಒಬ್ಬ ಸಂಸದನಿಗೆ ಹಾಡಲು ಕೇಳುತ್ತಿದ್ದೀಯಾ? ಏನಂದುಕೊಂಡಿದ್ದೀಯಾ? ನಡೀ ಆಕಡೆ. ನಿನ್ನ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದೆಲ್ಲ ವೇದಿಕೆಯ ಮೇಲೆಯೇ ಹರಿಹಾಯ್ದಿದ್ದಾರೆ.

ನಮಗೆ ಗೊತ್ತಿರಬೇಕು. ಮನೋಜ್ ತಿವಾರಿ ಒಬ್ಬ ಗಾಯಕ, ಕಲಾಕಾರನಾಗಿ ಗುರುತಿಸಿಕೊಂಡವರು. ಹೀಗಾಗಿ ಶಿಕ್ಷಕಿಯ ಹಾಡಿನ ವಿನಂತಿ ಅಸಂಬದ್ಧವೇನಲ್ಲ. ಆದರೆ ಅದನ್ನು ಮನ್ನಿಸಬೇಕು ಅಂತೇನಿಲ್ಲ. ‘ಇಲ್ಲಮ್ಮ, ನನ್ನ ಹಾಡುಗಾರಿಕೆಗೆ ಇದು ವೇದಿಕೆಯಲ್ಲ’ ಎಂದಿದ್ದರೆ ತಪ್ಪೇನಿರಲಿಲ್ಲ. ಆದರೆ, ಒಬ್ಬ ಸಂಸದನ ಜತೆ ನಡೆದುಕೊಳ್ಳುವುದು ಗೊತ್ತಿಲ್ಲವಾ ಅಂತೆಲ್ಲ ವೇದಿಕೆಯಲ್ಲೇ ಅಬ್ಬರಿಸಿ ಆಕೆಯನ್ನು ಅವಮಾನಿಸಿದ ಮನೋಜ್ ತಿವಾರಿ ಅಷ್ಟಕ್ಕೇ ನಿಲ್ಲದೇ, ‘ಈಕೆಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.ಇದು ಕ್ಷಮಿಸುವ ತಪ್ಪೇ ಅಲ್ಲ’ ಎನ್ನುತ್ತಾರೆ!

ಅಬ್ಬಾ, ತಾನು ಸಂಸದನೆಂಬ ಅಹಂಕಾರ ಅದ್ಯಾವ ಪರಿ ನೆತ್ತಿಗೇರಿದೆ ಈ ಮನುಷ್ಯನಿಗೆ! ಇಂಥವರನ್ನು ದೆಹಲಿ ಬಿಜೆಪಿಯ ಅಧ್ಯಕ್ಷ ಹುದ್ದೆಯಲ್ಲಿರಿಸಿಕೊಂಡು ಇನ್ನು ಮುಂದೆ ವಿನಮ್ರತೆಯ ಬಗ್ಗೆ ಮಾತನಾಡಿದರೆ ಅರ್ಥವಿರದು.

Leave a Reply