ಉಪಗ್ರಹ ಚಿತ್ರ ಬಳಸಿ ನೀವೂ ಗುರುತಿಸಬಹುದು ಮರೆಯಾದ ಸಾಂಸ್ಕೃತಿಕ ನೆಲೆಗಳನ್ನು: ಇದು ಹುಡುಗಾಟವಲ್ಲ- ನಿಜದ ಹುಡುಕಾಟ

author-ananthramuನಮ್ಮ ಮೊಬೈಲ್ ಫೋನು ರಿಂಗಣ ಮಾಡುತ್ತಿದ್ದರೆ, ಟಿ.ವಿ.ಯಲ್ಲಿ ಕಾರ್ಯಕ್ರಮ ಮೂಡುತ್ತಿದ್ದರೆ, ದಾರಿ ಗೊತ್ತಿಲ್ಲದ ಭಾಷೆ ಬರದ ಕಾರಿನ ಡ್ರೈವರ್ ಜಿ.ಪಿ.ಎಸ್. ಹಾಕಿ ನಮ್ಮನ್ನು ನಿರ್ದಿಷ್ಟ ಸ್ಥಳಕ್ಕೆ ಕರೆದೊಯ್ಯುತ್ತಿದ್ದರೆ ಅದು ಉಪಗ್ರಹಗಳ ಕೃಪೆ. ಬರ ಪ್ರದೇಶಗಳ ವ್ಯಾಪ್ತಿ ತಿಳಿಯಬೇಕೆ? ಮೀನುಗಾರರಿಗೆ ಎಚ್ಚರಿಗೆ ನೀಡಬೇಕೆ? ಗುಡುಗುಸಹಿತ ಮಳೆ ಬೀಳುತ್ತದೆ ಎಂದು ಮುನ್ನುಡಿಯಬೇಕೆ? ಚಂಡಮಾರುತ ಇನ್ನೆಷ್ಟು ನಿಮಿಷಗಳಲ್ಲಿ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ಕೊಡಬೇಕೆ? ಇಲ್ಲಿ ಎಲ್ಲೆಲ್ಲೂ ನಾವು ಕಾಣುವುದು ಉಪಗ್ರಹಗಳ ಸೇವೆ. ಅವು ಇಂಥದೊಂದೇ ಕ್ಷೇತ್ರಕ್ಕೆ ಸಂಬಂಧಿಸಿದುದಲ್ಲ. ನಮ್ಮ ನಿತ್ಯ ಬದುಕನ್ನು ಈ `ಬಾನಿನ ಹದ್ದುಗಣ್ಣು’ಗಳೇ ಪ್ರಭಾವಿಸುತ್ತಿವೆ. ಕವಿ ಗೋಪಾಲಕೃಷ್ಣ ಅಡಿಗರ ನುಡಿಯಲ್ಲಿ `ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು; ಬೇಕಾದದ್ದು ಬೆಳೆದುಕೋ ಬಂಧು’.

ಇಂಥ ಬಂಧುವೊಬ್ಬಳು ಜಗತ್ತಿಗೀಗ ಹೊಸ ಹುರುಪು ತುಂಬಿದ್ದಾಳೆ, ನವಮಾರ್ಗ ತೆರೆದಿದ್ದಾಳೆ. ಈಕೆ ಸಾರಾ ಫರ್ ನ್ಯಾಕ್. ಉಪಗ್ರಹಗಳ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ ಈಜಿಪ್ಟಿನಲ್ಲಿ ಎಲ್ಲೋ ಪೊದೆಗಳಲ್ಲಿ ಮರೆಯಾಗಿದ್ದ, ಎಲ್ಲೋ ಮಣ್ಣಲ್ಲಿ ಹೂತುಹೋಗಿ ದಿಬ್ಬವಾಗಿದ್ದ ಹದಿನೇಳು ಪಿರಮಿಡ್ಡುಗಳ ಚಿತ್ರಗಳನ್ನು ಹೆಕ್ಕಿ ತೆಗೆದಿದ್ದಾಳೆ. ಎಂದೋ ಮರೆಯಾಗಿ ಹೋದ ಸುಮಾರು 3,000 ನೆಲೆಗಳನ್ನು ಗುರುತಿಸಿದ್ದಾಳೆ. ಈಜಿಪ್ಟಿನ ಸಾವಿರ ಸಮಾಧಿಗಳನ್ನು ಬಗೆದಿದ್ದಾಳೆ. ಅವಳನ್ನು ಈಗ `ಅಂತರಿಕ್ಷದ ಪುರಾತತ್ತ್ವ ತಜ್ಞೆ’ ಎನ್ನುವುದುಂಟು. ಅದಕ್ಕೆ ಜವಾಬಾಗಿ `ಕಣ್ಣು ಆಕಾಶದಿಂದ ತೆಗೆದ ಚಿತ್ರಗಳ ಮೇಲೆ, ನನ್ನ ಕಾಲು ಮಾತ್ರ ನೆಲದ ಮೇಲೆ’ ಎನ್ನುತ್ತಾಳೆ ಈ ಸಾಹಸಗಿತ್ತಿ. ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಈಕೆ ಈಜಿಪ್ಟ್ ಪರಿಣತೆ. ಪುರಾತತ್ತ್ವ ತಜ್ಞೆ. ಮಾನವ ವಿಜ್ಞಾನ ಕುರಿತು ಪಾಂಡಿತ್ಯಪೂರ್ಣವಾಗಿ ಮಾತನಾಡಬಲ್ಲಳು. ಇವೆಲ್ಲವನ್ನೂ ಮೀರಿಸುವಂತೆ ದೂರಸಂವೇದಿ- `ರಿಮೋಟ್ ಸೆನ್ಸಿಂಗ್’ ಉಪಗ್ರಹಗಳು ತೆಗೆದ ಛಾಯಾಚಿತ್ರಗಳನ್ನು ಅತ್ಯಂತ ಅರ್ಥಪೂರ್ಣವಾಗಿ ವಿಶ್ಲೇಷಿಸಬಲ್ಲಳು. ಈ ಕುರಿತು ಒಂದು ಪುಸ್ತಕವನ್ನೂ ಬರೆದಿದ್ದಾಳೆ. ಈಜಿಪ್ಟ್ ಬಿಟ್ಟರೆ ಇಟಲಿ ಆಕೆಯ ಆಡುಂಬೊಲ. ಇಲ್ಲೂ ಇನ್ನೂ ಬೆಳಕಿಗೆ ಬಾರದ ಸಾವಿರಾರು ಸ್ಮಾರಕಗಳಿವೆ ಎನ್ನುವುದು ಅವಳ ಅಧ್ಯಯನದ ಫಲ.

satellite-2-min

ಸಾರಾ ತನ್ನ ಗುಮಾನಿ ಕೆಲಸ ಪ್ರಾರಂಭಿಸುವುದೇ `ಗೂಗಲ್ ಅರ್ಥ್’ ಬಳಸಿ. ಮೊದಲು ಅನುಮಾನ ಬಂದ ಸ್ಥಳಗಳನ್ನು ವೀಕ್ಷಿಸುತ್ತಾಳೆ-ಹಿಗ್ಗಿಸಿ ನೋಡುತ್ತಾಳೆ, ಅನಂತರ `ಡಿಜಿಟಲ್ ಗ್ಲೋಬ್’ ಎಂಬ ಖಾಸಗಿ ಉಪಗ್ರಹ ಕಂಪನಿಗೆ ಸಾವಿರಾರು ಡಾಲರ್ ತೆತ್ತು ಆ ಜಾಗದ ಉತ್ಕೃಷ್ಟ ಉಪಗ್ರಹ ಛಾಯಾಚಿತ್ರಗಳನ್ನು ಕೊಳ್ಳುತ್ತಾಳೆ. ಈ ಚಿತ್ರಗಳೇನೂ ಸಾಧಾರಣ ಚಿತ್ರಗಳಲ್ಲ. ಒಂದು ಫ್ರೇಮ್ ಎಂದರೆ ಕನಿಷ್ಠ ಎರಡು ಲಕ್ಷ ಚದರ ಕಿಲೋ ಮೀಟರ್ ನೆಲವನ್ನು ಅದು ಬಿಂಬಿಸುತ್ತದೆ. ನಾವು ನೋಡಲು ಸಾಧ್ಯವಾಗಿರುವುದು ವಿದ್ಯುತ್ ಕಾಂತೀಯ ವರ್ಣಪಟಲದ ಒಂದು ಭಾಗವಾದ ಗೋಚರ ಬೆಳಕಿನ ಮೂಲಕ. ಆದರೆ ನಮ್ಮ ಕಣ್ಣಿಗೂ ಕಾಣದ ಬೆಳಕಿದೆಯಲ್ಲ, ಉಪಗ್ರಹಗಳಲ್ಲಿ ವಿಶೇಷ ಕ್ಯಾಮೆರ ಬಳಸಿ (ಅವಕೆಂಪು ಕಿರಣಗಳನ್ನು) ನಮ್ಮ ಭೂಮಿಯ ಚಿತ್ರ ತೆಗೆದಾಗ, ಬರಿಗಣ್ಣಿಗೆ ಕಾಣಿಸದ ಅನೇಕ ಲಕ್ಷಣಗಳು ಅದರಲ್ಲಿ ಕಾಣುತ್ತವೆ. ಇಂಥ ಚಿತ್ರಗಳು ಸಾಧಾರಣವಾಗಿ ಬೆಳೆದ ವೃಕ್ಷಗಳನ್ನು ಕೆಂಪು ಬಣ್ಣದಲ್ಲೂ, ತೀರ ಕುಬ್ಜವಾಗಿ, ಬೆಳೆಯಲು ಹೋರಾಟ ನಡೆಸಿರುವ ವೃಕ್ಷಗಳು ಪಾಟಲ ವರ್ಣದಲ್ಲೂ ಕಾಣಿಸುತ್ತವೆ. ಇದಕ್ಕೆ ಇನ್ನಷ್ಟು ಬಣ್ಣ ಬೆರೆಸಿ ನೋಡಿದಾಗ ಇಂಥ ಪ್ರದೇಶಗಳು ನಿಚ್ಚಳವಾಗಿ ಕಾಣಿಸುತ್ತವೆ. ಕುಬ್ಜ ಸಸ್ಯವಿರುವ ಜಾಗಗಳಿಗೆ ಆಕೆ ಪರಿಶೋಧನೆಗೆ ಹೋಗುತ್ತಾಳೆ, ಅಲ್ಲಿ ಕಂಡಿರುವುದು ಕೋಟೆ-ಕೊತ್ತಲ, ಭಗ್ನಗೊಂಡ ಹಲವು ಬಗೆಯ ರಚೆನಗಳು, ಸಮಾಧಿ ಸೇರಿದಂತೆ ಪ್ರಾಚೀನ ಅವಶೇಷಗಳು. ಇದು ಸರಿ, ಆದರೆ ಮರಳುಗಾಡಿನಲ್ಲಿ? ಅಲ್ಲೂ ಉಪಗ್ರಹ ಚಿತ್ರದಲ್ಲಿ ಆದ್ರ್ರತೆ ಇರುವ ಸ್ಥಳಗಳನ್ನು ಗುರುತಿಸಬಹುದು ಎಂದು ತೋರಿಸಿಕೊಟ್ಟಿದ್ದಾಳೆ.

ಈಗ ಆಕೆಯೇ ಸ್ಥಾಪಿಸಿರುವ `ಗ್ಲೋಬ್ ಎಕ್ಸ್ ಫ್ಲೋರರ್’ ಎಂಬ ಶೋಧ ವೇದಿಕೆ ಜಗತ್ತಿನ ಲಕ್ಷ ಲಕ್ಷ ಮಂದಿಯ ಗಮನಸೆಳೆದಿದೆ. ಆನ್ ಲೈನಿನಲ್ಲೇ ನೀವೂ ಶೋಧಿಸಬಹುದಾದ ತಂತ್ರವನ್ನು ಆಕೆ ನೀಡಿದ್ದಾಳೆ. ಇದಕ್ಕೆ ಹಿನ್ನೆಲೆಯಾಗಿ ನ್ಯಾಷನಲ್ ಜಿಯೋಗ್ರಫಿಕ್, ಚಾರಿತ್ರಿಕ ಮಹತ್ವವನ್ನು ತಿಳಿಸಿಕೊಡುತ್ತದೆ. ಇದರಲ್ಲಿ ಮೊದಲು ನೀವು ಉಪಗ್ರಹ ಛಾಯಾಚಿತ್ರಗಳನ್ನು ಹೇಗೆ ಬಳಸಬೇಕು, ಅದರಲ್ಲಿ ಯಾವುದರ ಮೇಲೆ ಕಣ್ಣಿಡಬೇಕು ಎಂದು ಟಿಪ್ಸ್ ನೀಡುತ್ತಾಳೆ. ಇದನ್ನು ಗಮನಿಸಿಯೇ ಮುಂದೆ ಕೊಟ್ಟಿರುವ ನಕ್ಷೆಯಲ್ಲಿ ಅನುಮಾನ ಬರುವ ಸ್ಥಳಗಳನ್ನು ಗುರುತಿಸುತ್ತ ಹೋಗಬೇಕು. ಆಕೆ ಕೇಳುವುದು ಎರಡೇ ಪ್ರಶ್ನೆ. ಇತ್ತೀಚೆಗೆ ಈ ಸ್ಮಾರಕ ಬಳಿ ಲೂಟಿ ಮಾಡುವ ಗುಂಡಿ ತೋಡಿದ್ದಾರೆಯೆ? ಇಲ್ಲವೆ? ಎಂಬುದನ್ನು `ಟಿಕ್’ ಮಾಡಬೇಕು. ಪೆರುವಿನ ಜಗದ್ವಿಖ್ಯಾತ ಮಾಚುಪಿಚು ಇದೆಯಲ್ಲ, ಅದರ ಸುತ್ತಮುತ್ತ ಕಳ್ಳಕಾಕರು ನೆಲ ಬಗೆದು ಪ್ರಾಚ್ಯ ವಸ್ತುಗಳಿಗಾಗಿ ಗುಂಡಿ ತೆಗೆದಿರುವ ಅನೇಕ ಜಾಗಗಳಿವೆ. ಹಿಂದಿನ ದಿನದ ಚಿತ್ರದಲ್ಲಿ ಇದಿರುವುದಿಲ್ಲ, ಈಗ ನೋಡುತ್ತಿರುವುದರಲ್ಲಿ ಇದೆ ಅಂದರೆ ಅಂಥ ಜಾಗಗಳು ಲೂಟಿಯಾಗುತ್ತಿವೆ ಎಂದರ್ಥ. ಇದೊಂದು ಸಾಮಾನ್ಯ ತರ್ಕ.

satellite-4-min

ನಿಮಗೆ ಕನ್ನಡದ `ಲೂಸಿಯ’ ಚಲನಚಿತ್ರದ ಬಗ್ಗೆ ಗೊತ್ತಲ್ಲ? ಅದರ ಥೀಮ್ ಏನೇ ಇರಲಿ, ಇದನ್ನು ನಿರ್ಮಾಣಮಾಡಿದ್ದು `ಕ್ರೌಡ್ ಫಂಡಿಂಗ್’ನಲ್ಲಿ. ಅಂದರೆ ಆಸಕ್ತ ಜನರಿಂದ ದುಡ್ಡು ಎತ್ತಿ ಮಾಡಿದ ಚಿತ್ರ. ಹೆಚ್ಚು ಕಡಿಮೆ ಇದೇ ಉದ್ದೇಶ ಸಾರಾಳದ್ದು. ಇಲ್ಲಿ ದುಡ್ಡಿನ ಪ್ರಶ್ನೆ ಬರುವುದಿಲ್ಲ, ಬೇಕಾಗಿರುವುದು ಆಸಕ್ತಿ ಮಾತ್ರ. ಅವಳ ಲೆಕ್ಕಾಚಾರದಂತೆ ಪ್ರತಿದಿನ ಜಗತ್ತಿನಲ್ಲಿ ಹತ್ತು ಸಾವಿರ ಪ್ರಾಚ್ಯ ವಸ್ತುಗಳು ಲೂಟಿಯಾಗಿ ಕರಾಳ ಮಾರುಕಟ್ಟೆಗೆ ಹೋಗುತ್ತವೆ. ನಮ್ಮ ಜಾಗತಿಕ ಸಂಸ್ಕೃತಿಯನ್ನು, ಲೂಟಿಮಾಡುವ ಈ ಜನರಿಂದ ಕಾಪಾಡಲು ನಿಮ್ಮ ಸಹಾಯ ಹಸ್ತ ಬೇಕು ಎನ್ನುತ್ತಾಳೆ. ಸದ್ಯಕ್ಕೆ ಇನ್ನೂ ಮೂವತ್ತು ದಿನಗಳ ಕಾಲ ಆಕೆ ಪೆರು ನೆಲದ ಮೇಲೆ ಕಣ್ಣಿಟ್ಟಿದ್ದಾಳೆ. ಅಂದರೆ ನಿಮ್ಮ ಕಣ್ಣಮುಂದೆ ಬರುವ ಉಪಗ್ರಹ ಚಿತ್ರ ಆ ಜಾಗದ್ದು. ಈಗಾಗಲೇ 34 ಲಕ್ಷ ಗುರಿಗಳನ್ನು ಸಾರ್ವಜನಿಕರು ತೋರಿಸಿಕೊಟ್ಟಿದ್ದಾರೆ. ವಾಸ್ತವವಾಗಿ ಆಕೆಯ ಮಟ್ಟಿಗೆ ಇಂಥ ಪ್ರತಿ ಜಾಗವೂ ಒಂದಲ್ಲ ಒಂದು ಪುರಾತತ್ತ್ವ ವಸ್ತುಗಳಿಗೆ ಸಂಬಂಧಿಸಿದ್ದು.

ಯಾರೂ ಹಿಂದೆ ಕೈಗೊಂಡಿರದ ಅತಿ ಮುಖ್ಯವಾದ ಸಂಗತಿಯೊಂದನ್ನು ಕೈಗೆತ್ತಿಕೊಂಡು ಅದರಲ್ಲಿ ಸಫಲರಾದವರಿಗೆ `TED’ (Technology, Entertainment and Design) ಎಂಬ ಸಂಸ್ಥೆ ಭಾರಿ ಮೊತ್ತದ ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡುತ್ತದೆ. ಇಂಥ ಒಂದು ಪ್ರಶಸ್ತಿ ಸಾರಾಗೆ ಸಂದಿದೆ. ಮೊತ್ತ ಹತ್ತು ಲಕ್ಷ ಡಾಲರ್. ಈ ಮೊತ್ತವನ್ನು ಸಂಪೂರ್ಣವಾಗಿ ಆಕೆ ಪುರಾತತ್ತ್ವ ಅಧ್ಯಯನಕ್ಕೆ, ವಿಶೇಷವಾಗಿ ಕಣ್ಮರೆಯಾದ ಸಾಂಸ್ಕೃತಿಕ ನೆಲೆಗಳನ್ನು ಹುಡುಕಲು ವಿನಿಯೋಗಿಸಿದ್ದಾಳೆ. ಮನೆಯಲ್ಲೇ ಕೂತು ಪುರಾತತ್ವ ಶೋಧನೆ ಮಾಡಬಹುದೆಂದು ತೋರಿಸಿಕೊಟ್ಟಿರುವ ಈಕೆ ಮುಂದೆ ಪ್ರಾಚೀನ ಅವಶೇಷಗಳಿಗೆ ಹೆಸರಾಗಿರುವ ಜಗತ್ತಿನ ಎಲ್ಲ ಪ್ರಸಿದ್ಧ ಸ್ಥಳಗಳನ್ನೂ ಮರುಶೋಧಿಸುವ ಆಸೆ ಇಟ್ಟುಕೊಂಡಿದ್ದಾಳೆ.

Leave a Reply