ಮೋದಿ ಹೊಸಭಾರತ ಪ್ರಯಾಣ: ವಿಕಾಸ…ವಿಕಾಸ…ವಿಕಾಸ… ಹೇ, ಲಕ್ನೊ ಬಂತು… ‘ಬೋಲೊ ಜೈಶ್ರೀರಾಂ’!

ಡಿಜಿಟಲ್ ಕನ್ನಡ ಟೀಮ್:

 ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಆಯ್ಕೆಯಾಗುವುದರೊಂದಿಗೆ ಸಸ್ಪೆನ್ಸ್ ಮುಗಿದಿದೆ. ಜತೆಗೆ ಈ ಕೆಳಗಿನ ವಿಶ್ಲೇಷಣೆಗಳೂ…

‘ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಮುಖವನ್ನೇ ಎದುರಿಗಿಟ್ಟು ಸೆಣೆಸಿದ್ದರಿಂದ ಮುಖ್ಯಮಂತ್ರಿ ಆಯ್ಕೆಯಲ್ಲಿ ಅವರ ಮಾತೇ ಫೈನಲ್. ಹೀಗಾಗಿ ರೇಸಿನಲ್ಲಿರುವವರನ್ನೆಲ್ಲ ಬದಿಗಿರಿಸಿ ಆಶ್ಚರ್ಯಕರ ಚಹರೆಯೊಂದನ್ನು ಮುಂದುಮಾಡುತ್ತಾರೆ. ಮನೋಜ್ ಸಿನ್ಹಾ ಥರದ ಸದ್ದಿಲ್ಲದ ಕೆಲಸಗಾರರನ್ನು ಮುಖ್ಯಮಂತ್ರಿಯಾಗಿ ತರುವ ಯೋಚನೆಯಿದೆ. ಈ ಬಾರಿ ಜಾತಿ- ಧಾರ್ಮಿಕ ವರ್ಚಸ್ಸು ಇತ್ಯಾದಿಗಳೆಲ್ಲ ಲೆಕ್ಕಕ್ಕೆ ಬರುವುದಿಲ್ಲ…’ ಇತ್ಯಾದಿ ಮಾತುಗಳಿಕೂ ಮುಕ್ತಾಯ ಸಮಯ.

ಪ್ರಸ್ತುತ ಗೋರಖಪುರದ ಸಂಸದರಾಗಿರುವ ಯೋಗಿ ಆದಿತ್ಯನಾಥ ಹಿಂದುತ್ವದ ಬೆಂಕಿಚೆಂಡು. ಉತ್ತರ ಪ್ರದೇಶದ ಪೂರ್ವಭಾಗದಲ್ಲಿ ತಮ್ಮ ಕ್ಷೇತ್ರವಷ್ಟೇ ಅಲ್ಲದೇ ಇಡೀ ಪ್ರಾಂತ್ಯದ ಸ್ಥಾನಗಳನ್ನೆಲ್ಲ ಗೆಲ್ಲಿಸಿಕೊಂಡು ಬರುವ ತಾಕತ್ತು-ಜನಪ್ರಿಯತೆ ಅವರದ್ದು. ‘ಹಿಂದುಗಳಿಗೆ ಪೀಡೆ ಇಲ್ಲದಿರುವ ಜಾಗದಲ್ಲಿ ಅಲ್ಪಸಂಖ್ಯಾತರು ಸುಖವಾಗಿಯೇ ಇರುತ್ತಾರೆ. ಚಪ್ಪಾಳೆ ಒಂದೇ ಕೈಯಿಂದ ಸಾಧ್ಯವಿಲ್ಲ’ ಎಂಬಂತಹ ಮಾತುಗಳಲ್ಲೆಲ್ಲ ಆದಿತ್ಯನಾಥರ ನಿಲುವು ಸ್ಪಷ್ಟವಾಗಿದೆ. ಭಾರತ ಸರಿ ಇಲ್ಲ ಎನ್ನುವವರು ಬೇರೆ ಕಡೆ ಹೋಗಲಿ ಎಂಬಂತಹ ಮಾತುಗಳನ್ನಾಡುವುದಕ್ಕೂ ಯೋಗಿ ಹಿಂದೆಳೆದವರಲ್ಲ. ಈ ಎಲ್ಲ ಹಿನ್ನೆಲೆಗಳಲ್ಲಿ ಯೋಗಿ ಆದಿತ್ಯನಾಥ ಕೋಮು ಧ್ರುವೀಕರಣ ಚಹರೆ ಎಂಬುದು ಪ್ರತಿಪಕ್ಷಗಳು ಮತ್ತು ಉದಾರವಾದಿಗಳೆಲ್ಲದರ ಪ್ರತಿಪಾದನೆ. ಹಿಂದೂ ಪರ ಧರಣಿಯ ವಿಷಯ ಬಂದಾಗ ಕಾನೂನನ್ನೂ ಮುರಿದು ಭಾಗವಹಿಸಿದವರು ಯೋಗಿ.

ಉತ್ತರ ಪ್ರದೇಶದ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗಿ ಆದಿತ್ಯನಾಥರ ಪರವಾಗಿದ್ದಾರೆ ಎಂಬುದು ಉತ್ಪ್ರೇಕ್ಷೆಯ ವಿಷಯವೇನೂ ಅಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಈ ಪರಿ ಬಹುಮತ ಬರಬೇಕಿದ್ದರೆ ನಮಗೆ ಎಲ್ಲ ವರ್ಗಗಳೂ ಮತ ಹಾಕಿರಬೇಕಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದ ಬಿಜೆಪಿ, ಕಟ್ಟರ್ ವಾದಕ್ಕೆ ಮಣೆ ಹಾಕಿದಂತಾಯಿತಲ್ಲವೇ ಎಂಬುದು ಪ್ರಶ್ನೆ.

ಮುಖ್ಯಮಂತ್ರಿ ಸ್ಪರ್ಧೆಯಲ್ಲಿದ್ದ ಒಬಿಸಿ ನಾಯಕ ಹಾಗೂ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಗೊಂಡಿದ್ದರೆ, ದಿನೇಶ್ ಶರ್ಮ ಅವರನ್ನೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ತರಲಾಗಿದೆ.

ಈ ಎಲ್ಲ ಆರೋಪ ಹಾಗೂ ಆತಂಕಗಳ ನಡುವೆ ಯೋಗಿ ಆದಿತ್ಯನಾಥರ ನಿಜ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಈಗಿರುವ ಕುತೂಹಲ ಎಂದರೆ ‘ಮಂದಿರವನಲ್ಲೇ ಕಟ್ಟುವೆವು’ ಎಂಬ ಬಿಜೆಪಿಯ ಹಳೆಘೋಷವನ್ನು ಹಾಗೂ ‘ಎಲ್ಲರ ಜತೆ, ಎಲ್ಲರ ವಿಕಾಸ’ ಎಂಬ ಹೊಸಭಾರತ ಘೋಷವನ್ನೂ ಹೇಗೆ ಸಮತೋಲನ ಮಾಡುತ್ತಾರೆ ಎಂಬುದರಲ್ಲಿ.

ಉಳಿದಂತೆ ಯೋಗಿ ಆದಿತ್ಯನಾಥ ಜನಪ್ರಿಯ ನೇತಾರ ಎಂಬುದರಲ್ಲಿ ಅನುಮಾನವಿಲ್ಲ.

– ಆದಿತ್ಯನಾಥ ಲೋಕಸಭೆ ಪ್ರವೇಶಿಸಿದ್ದು 26ನೇ ವಯಸ್ಸಿನಲ್ಲಿ. 1998ರಿಂದ ಈವರೆಗಿನ ಎಲ್ಲ ಲೋಕಸಭೆ ಚುನಾವಣೆಗಳಲ್ಲಿ ಗೋರಖಪುರದಿಂದ ಗೆಲ್ಲುತ್ತಲೇ ಬಂದಿದ್ದಾರವರು.

– ಗೋರಖನಾಥ ದೇವಾಲಯದ ಮುಖ್ಯ ಪುರೋಹಿತರೂ ಇವರೇ.

– 2002ರಲ್ಲಿ ‘ಹಿಂದು ಯುವ ವಾಹಿನಿ’ ಕಟ್ಟಿದ ಆದಿತ್ಯನಾಥರು ಹಿಂದುತ್ವದ ಮುಖ್ಯ ಸಂಗತಿಗಳಾದ ಗೋವು ರಕ್ಷಣೆ, ಲವ್ ಜಿಹಾದ್ ವಿರುದ್ಧ ಹೋರಾಟಗಳಲ್ಲಿ ತೊಡಗಿಸಿಕೊಂಡವರು.

– ಕಟ್ಟರ್ ವರ್ಚಸ್ಸಿನ ಆದಿತ್ಯನಾಥ ಮತ್ತೆಲ್ಲೂ ಸಲ್ಲದೇ ಕೇಸರಿ ತೊಟ್ಟವರಲ್ಲ. ಗಣಿತದ ಪದವೀಧರರು.

Leave a Reply