ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಇಳಯರಾಜ ನೋಟಿಸ್ ಕೊಟ್ಟಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಭಾರತದ ಚಲನಚಿತ್ರ ಸಂಗೀತ ಕ್ಷೇತ್ರದ ಇಬ್ಬರು ದಂತಕತೆಗಳಾದ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಗಾಯನ ದಿಗ್ಗಜ ಎಸ್.ಪಿ ಬಾಲಸುಬ್ರಮಣ್ಯಂ ನಡುವೆ ಬಿರುಕು ಬಿಟ್ಟಿದೆಯೇ? ಈಗೊಂದು ಪ್ರಶ್ನೆ ಸದ್ಯ ಚಿತ್ರರಸಿಕರನ್ನು ಕಾಡುತ್ತಿದೆ. ಕಾರಣ ಏನಂದ್ರೆ, ಇಳಯರಾಜ ಅವರು ತಮ್ಮ ಅನುಮತಿ ಇಲ್ಲದೆ ಇನ್ನುಮುಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡಬಾರದೇಂದು ಎಸ್ಪಿಬಿ ಅವರಿಗೆ ನೋಟಿಸ್ ನೀಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಸ್ವತಃ ಎಸ್.ಪಿ ಬಾಲಸುಬ್ರಮಣ್ಯಂ ಅವರು ತಮ್ಮ ಫೇಸ್ ಬುಕ್ ನಲ್ಲಿ ಇನ್ನು ಮುಂದೆ ತಾವು ಇಳಯರಾಜ ಅವರ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು. ಇದರಿಂದ ಸಹಜವಾಗಿಯೇ ಎಸ್ಪಿಬಿ ಅವರ ಅಭಿಮಾನಿಗಳಿಗೆ ಆಘಾತವಾಗಿದೆ.

ಹಿನ್ನಲೆ ಗಾಯಕರಾಗಿ ಚಿತ್ರರಂಗದ ಸೇವೆಯಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಾಲಸುಬ್ರಮಣ್ಯಂ ಅವರು ‘ಎಸ್ಪಿಬಿ50’ ಎಂಬ ಕಾರ್ಯಕ್ರಮದ ಮೂಲಕ ವಿಶ್ವ ವಿಶ್ವ ಪರ್ಯಟನೆ ಮಾಡುತ್ತಾ ಕಾರ್ಯಕ್ರಮ ನಡೆಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಟೊರಾಂಟೊದಲ್ಲಿ ಆರಂಭವಾದ ಈ ಕಾರ್ಯಕ್ರಮ, ರಷ್ಯಾ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ದುಬೈ ಸೇರಿದಂತೆ ಭಾರತದಲ್ಲೂ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನಡೆಸಿದ್ದಾರೆ.

ಇಳಯರಾಜ ಹಾಗೂ ಎಸ್ಪಿಬಿ ಜೋಡಿ ದಶಕಗಳಿಂದ ಭಾರತೀಯ ಚಿತ್ರರಂಗದ ಸಿನಿ ರಸಿಕರನ್ನು ರಂಜಿಸಿದೆ. ಈಗ ಈ ಬೆಳವಣಿಗೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಎಸ್ಪಿ ಬಾಲಸುಬ್ರಮಣ್ಯಂ ಅವರು ತಮ್ಮ ಅನುಮತಿ ಇಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡುತ್ತಿದ್ದಾರೆ ಎಂಬುದು ಇಳಯರಾಜ ಅವರ ನೋಟಿಸ್ ನಲ್ಲಿ ಬಂದಿರುವ ಆರೋಪ. ಈ ಕುರಿತು ಎಸ್ಪಿಬಿ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ…

‘ನಾನು ಈ ಕಾರ್ಯಕ್ರಮಗಳನ್ನು ಆರಂಭಿಸಿದಾಗ ಇಳಯರಾಜ ಅವರಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ. ಈಗ ಅಮೆರಿಕದಲ್ಲಿ ನಮ್ಮ ಕಾರ್ಯಕ್ರಮ ಆರಂಭವಾಗುವ ಹೊತ್ತಲ್ಲಿ ಈ ರೀತಿಯಾದ ಆಕ್ಷೇಪ ಬಂದಿರುವುದಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ. ನಾನು ಕಾನೂನಿಗೆ ತಲೆಬಾಗುತ್ತೇನೆ. ಕಾನೂನಿನ ಪ್ರಕಾರ ನಾನು ಹಾಡಬಾರದು ಎಂದಾದರೆ ನಾನು ಅವರ ಸಂಗೀತ ಸಂಯೋಜನೆಯ ಗೀತೆಗಳನ್ನು ಹಾಡುವುದಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಹಾಗೂ ನಮ್ಮ ತಂಡ ಇಳಯರಾಜ ಅವರ ಹಾಡನ್ನು ಪ್ರದರ್ಶಿಸಲು ಅವರಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅವರ ಹಾಡನ್ನು ಹಾಡುವುದಿಲ್ಲ. ನನ್ನ ಕಾರ್ಯಕ್ರಮಗಳು ಮುಂದುವರಿಯಲೇಬೇಕಿದೆ. ದೇವರ ಕೃಪೆಯಿಂದಾಗಿ ನಾನು ಇತರೆ ಸಂಗೀತ ಸಂಯೋಜಕರ ಜತೆಗೂ ಹಾಡಿದ್ದು, ಮುಂದಿನ ಕಾರ್ಯಕ್ರಮಗಳಲ್ಲಿ ಆ ಹಾಡುಗಳನ್ನೇ ಹಾಡುತ್ತೇನೆ. ಇಷ್ಟು ದಿನಗಳಂತೆ ಮುಂದಿನ ಕಾರ್ಯಕ್ರಮಗಳನ್ನು ನೀವು ಪ್ರೋತ್ಸಾಹಿಸುತ್ತೀರಿ ಎಂಬ ಭರವಸೆ ಇದೆ.

ನಾನು ಈ ಬಗ್ಗೆ ಇಳಯರಾಜ ಅವರ ಜತೆ ಮಾತನಾಡಲು ಸಾಧ್ಯವಾಗಿಲ್ಲ. ನನಗೆ ಈಗ ಕಾನೂನಿನ ನೋಟಿಸ್ ಬಂದಿದ್ದು, ನನ್ನ ಮುಂದೆ ಎರಡು ಆಯ್ಕೆಗಳಿವೆ. ಇಳಯರಾಜ ಅವರಿಗೆ ನಾನು ಕಾನೂನಿನ ಮೂಲಕವೇ ಉತ್ತರಿಸಬಹುದು ಆದರೆ ಅದು ನನಗೆ ಇಷ್ಟವಿಲ್ಲ. ಮತ್ತೊಂದು ಕಾನೂನಿಗೆ ತಲೆ ಬಾಗುವುದು. ನನಗೂ ಸಹ ಆತ್ಮ ಗೌರವ ಎಂಬುದು ಇದೆ. ಹೀಗಾಗಿ ಈ ಬಗ್ಗೆ ಚರ್ಚೆಯನ್ನು ಮುಂದುವರಿಸದೇ ಮುಂದಿನ ಹಾದಿಯಲ್ಲಿ ಸಾಗೋಣ. ನನ್ನ ಹಾಡಿನ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂಬ ಕಾರಣಕ್ಕಾಗಿ ಮಾತ್ರ ನಾನು ಈ ವಿಷಯವನ್ನು ಬಹಿರಂಗಪಡಿಸಿದ್ದೇನೆ. ನನ್ನ ಆತ್ಮೀಯ ಸ್ನೇಹಿತರಾದ ಇಳಯರಾಜ ಅವರಿಗೆ ತೊಂದರೆ ನೀಡಲು ಅಥವಾ ನನ್ನ ಕಾರ್ಯಕ್ರಮಕ್ಕೆ ಪ್ರಾಯೋಜಿಸಿರುವವರಿಗೆ ನಷ್ಟವಾಗಬಾರದು ಎಂಬುದು ನನ್ನ ಉದ್ದೇಶ. ಧನ್ಯವಾದಗಳು…’

ಹಿನ್ನೆಲೆಗಾಯಕರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಖ್ಯಾತ ಹಾಡುಗಳನ್ನು ಹಾಡುವ ಮೂಲಕ ಹಣ ಪಡೆಯುತ್ತಿದ್ದಾರೆ. ಆದರೆ ಇದರಿಂದ ಹಾಡಿನ ಮೂಲ ಕತೃಗಳಾದ ಸಂಗೀತ ಸಂಯೋಜಕರಿಗೆ ಬಿಡಿಗಾಸು ಕೂಡ ಸಿಗುತ್ತಿಲ್ಲ. ಹೀಗಾಗಿ ಇಳಯರಾಜ ಅವರು ತಮ್ಮ ಹಾಡುಗಳನ್ನು ಹಾಡದಂತೆ ನೋಟಿಸ್ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply