ರಾಜಸ್ಥಾನದ ಕಳ್ಳ ಸಾಗಣಿಕೆಗಾರರು, ಅಪರಾಧಿಗಳ ಎದೆ ನಡುಗಿಸುತ್ತಿದ್ದಾರೆ ಲೇಡಿ ಸಿಂಗಂ ಖ್ಯಾತಿಯ ಲಲಿತಾ ಖಿಂಚಿ

ಡಿಜಿಟಲ್ ಕನ್ನಡ ಟೀಮ್:

ಓದಿದ್ದು ಎಂಬಿಎ ಜತೆಗೆ ಕಿರಿಯ ಸಂಶೋಧಕರಾಗಿ ಪಿಎಚ್ಡಿ ವ್ಯಾಸಂಗ ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಸರಿಯೇ ಶಿಕ್ಷಕರಾಗಿಯೋ ಅಥವಾ ಕಾರ್ಪೊರೇಟ್ ಕ್ಷೇತ್ರದ ಕೆಲಸವನ್ನೊ ಆಯ್ಕೆ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುವತ್ತ ಆಲೋಚಿಸುವುದು ಸಹಜ. ಆದರೆ ನಾವಿಂದು ಹೇಳಲು ಹೊರಟಿರುವ ಸಾಧಕಿ ಸಂಚಾರಿ ಪೊಲೀಸ್ ಅಧಿಕಾರಿಯಾಗಿ ತನ್ನ ಕಾರ್ಯವೈಖರಿ ಮೂಲಕ ಎಲ್ಲ ಮಹಿಳೆಯರಿಗೂ ಮಾದರಿಯಾಗುವ ಮೂಲಕ ಗಮನಸೆಳೆದಿದ್ದಾರೆ.

ಯಾರ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಎಂದು ನೀವು ಯೋಚಿಸುತ್ತಿದ್ದೀರಾ? ಆಕೆ ರಾಜಸ್ಥಾನ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದಯಪುರ ವಿಭಾಗದ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಲಲಿತಾ ಖಿಂಚಿ. ಹೌದು, ಸಾಮಾನ್ಯವಾಗಿ ಸೇನೆ, ಪೊಲೀಸ್ ಇಲಾಖೆ, ಅದರಲ್ಲೂ ಸಂಚಾರಿ ಪೊಲೀಸ್ ಕೆಲಸ ಮಹಿಳೆಯರಿಗಲ್ಲ ಎಂದು ಮೂಗುಮುರಿಯುವವರೆ ಹೆಚ್ಚಿರುವ ನಮ್ಮ ಸಮಾಜದಲ್ಲಿ, ಮಹಿಳೆಯು ಎಂತಹುದೇ ಒತ್ತಡದ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದನ್ನು ಲಲಿತಾ ಸಾಬೀತುಪಡಿಸಿದ್ದಾರೆ.

ಲಲಿತಾ ಅವರ ಕಾರ್ಯವೈಖರಿ ಎಷ್ಟು ಮಟ್ಟಿಗೆ ಖ್ಯಾತಿ ಪಡೆದಿದೆ ಎಂದರೆ ಈಕೆಯನ್ನು ಲೇಡಿ ಸಿಂಗಂ ಅಂತಲೇ ಕರೆಯುವುದುಂಟು. ಮಧ್ಯಾಹ್ನ 3 ಗಂಟೆಯ ಬಿರು ಬಿಸಿಲಿರಲಿ, ಮಧ್ಯರಾತ್ರಿ 1 ಗಂಟೆಯ ಕಗ್ಗತ್ತಲಿರಲಿ, ಈಕೆ ತನ್ನ ಕರ್ತವ್ಯದಿಂದ ಹಿಂದೆ ಹೆಜ್ಜೆ ಇಟ್ಟವರಲ್ಲ. ಇವರು ಅಚ್ಚರಿಯ ದಾಳಿ ನಡೆಸುವುದಕ್ಕೆ ಹೆಸರುವಾಸಿ. ದಿನದ 24 ಗಂಟೆಗಳಲ್ಲಿ ಯಾವಾಗ ಬೇಕಾದರು ಇವರು ರಸ್ತೆಗಿಳಿದು ವಾಹನಗಳ ಪರಿಶೀಲನೆಗೆ ನಿಲ್ಲುತ್ತಾರೆ. ಇದರಿಂದ ಕಳ್ಳರು ಹಾಗೂ ಕಳ್ಳ ಸಾಗಾಣೆಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಲ್ಲಿನ ಬಸ್ ಚಾಲಕರೇ ಈಕೆಯ ಕಾರ್ಯವೈಖರಿಯನ್ನು ಕಂಡು ಬೆರಗಾಗಿರುವುದು ಹೀಗೆ… ‘ಇವರು ಯಾವುದೇ ತಪ್ಪಿತಸ್ಥರನ್ನು ಮುಲಾಜಿಗೆ ತೆಗೆದುಕೊಳ್ಳುವುದಿಲ್ಲ. ಹಲವು ಬಾರಿ ಇದ್ದಕ್ಕಿದ್ದಂತೆ ಮಧ್ಯ ರಾತ್ರಿ 2 ಗಂಟೆಗೂ ವಾಹನಗಳ ಪರಿಶೀಲನೆಗೆ ಮುಂದಾಗುತ್ತಾರೆ. ಇವರ ಕಠಿಣ ಹಾಗೂ ಧೈರ್ಯದ ನಿರ್ಧಾರ ಕೇವಲ ರಾಜಸ್ಥಾನ ಮಾತ್ರವಲ್ಲ, ದೆಹಲಿ, ಮಧ್ಯಪ್ರದೇಶ, ಹರ್ಯಾಣ, ಗುಜರಾತ್ ಹಾಗೂ ಇತರೆ ರಾಜ್ಯಗಳಲ್ಲೂ ಚರ್ಚೆಯಾಗುತ್ತಿದೆ.’

ಕೇವಲ ಒಂದೇ ದಿನದಲ್ಲಿ 46 ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಇವರ ಅತ್ಯುತ್ತಮ ಕೆಲಸದ ಕುರಿತು ಸರಾಸರಿ 20 ವರದಿಗಳು ದಾಖಲಾಗುತ್ತವೆ. ಹೀಗೆ ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಲಲಿತಾ ಅವರು ಚಿಕ್ಕ ವಯಸ್ಸಿಲ್ಲೇ ತನ್ನ ಇಲಾಖೆಯಲ್ಲಿರು ಮಹಿಳೆಯರಿಗೆ ಮಾತ್ರವಲ್ಲದೆ ಇತರರಿಗೂ ಮಾದರಿಯಾಗಿ ನಿಂತಿದ್ದಾರೆ.

Leave a Reply