ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಸೂಫಿಗಳು ಪತ್ತೆ- ಸುಷ್ಮಾ ಸ್ವರಾಜರಿಗೆ ‘ಥ್ಯಾಂಕ್ ಯೂ…’ ಎಂದ ಸೂಫಿಯ ಪುತ್ರ

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ ಭೇಟಿ ವೇಳೆ ನಾಪತ್ತೆಯಾಗಿದ್ದ ಭಾರತದ ಇಬ್ಬರು ಸೂಫಿಗಳು ಪತ್ತೆಯಾಗಿದ್ದು ಶೀಘ್ರದಲ್ಲೇ ಭಾರತಕ್ಕೆ ಮರಳುತ್ತಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಪ್ರಕರಣ ಸುಖಾಂತ್ಯದಲ್ಲಿ ಅಂತ್ಯ ಕಾಣುತ್ತಿದೆ. ಈ ಇಬ್ಬರೂ ಸೂಫಿಗಳು ನಾಪತ್ತೆಯಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ವಿದೇಶಾಂಗ ಸಚಿವಾಲಯ ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಇಬ್ಬರ ಪತ್ತೆಗಾಗಿ ಸಾಕಷ್ಟು ಶ್ರಮವಹಿಸಲಾಗಿತ್ತು. ಈಗ ಈ ಇಬ್ಬರೂ ಸೂಫಿಗಳು ಸುರಕ್ಷಿತವಾಗಿ ತವರಿಗೆ ಮರಳುತ್ತಿರುವುಕ್ಕಾಗಿ ಸೂಫಿ ಅವರ ಪುತ್ರ ಅಮಿರ್ ನಿಜಾಮಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆಗೆ ಪ್ರತಿಕ್ರಿಯೆ ನೀಡಿದ ನಿಜಾಮಿ ಹೇಳಿದಿಷ್ಟು… ‘ಪಾಕಿಸ್ತಾನ ಮಾಧ್ಯಮಗಳಲ್ಲಿ ಇವರು ನಾಪತ್ತೆಯಾಗಿರುವ ಸುದ್ದಿ ಹರಿದಾಡಿದಾಗ ನಮಗೆ ಈ ವಿಷಯ ತಿಳಿಯಿತು. ಜತೆಗೆ ಭಾರತ ಸರ್ಕಾರ ಸಹ ನಮಗೆ ಕರೆ ಮಾಡಿ ಮಾಹಿತಿ ಪಡೆಯಿತು. ಈಗ ನಮ್ಮ ತಂದೆ ಸುರಕ್ಷಿತವಾಗಿ ಮರಳುತ್ತಿರುವುದು ಸಂತೋಷವಾಗಿದೆ. ಈಗ ಅವರ ಮೊಬೈಲ್ ಫೋನುಗಳು ಕಾರ್ಯನಿರ್ವಹಿಸುತ್ತಿವೆ. ಆದಷ್ಟು ಬೇಗ ಅವರೊಟ್ಟಿಗೆ ಮಾತನಾಡಲು ಎದುರುನೋಡುತ್ತಿದ್ದೇವೆ. ಇದಕ್ಕಾಗಿ ಶ್ರಮವಹಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಜತೆಗೆ ಪಾಕಿಸ್ತಾನ ಮಾಧ್ಯಮಕ್ಕೂ ಧನ್ಯವಾದ.’

ಇನ್ನು ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ, ಈ ಇಬ್ಬರು ಸೂಫಿಗಳು ಸಿಂಧ್ ಪ್ರಾಂತ್ಯದಲ್ಲಿರುವ ಭಕ್ತರನ್ನು ಭೇಟಿ ಮಾಡಲು ತೆರಳಿದ್ದರು. ಆ ಪ್ರದೇಶದಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಎಲ್ಲ ಗೊಂದಲಗಳು ಮೂಡಿದ್ದವು. ಈ ಇಬ್ಬರು ಸೂಫಿಗಳನ್ನು ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದ ಆಸಿಫ್ ನಿಜಾಮಿ ಮತ್ತು ನಜಿಮ್ ನಿಜಾಮಿ ಎಂದು ಗುರುತಿಸಲಾಗಿದೆ. ಇವರು ಮಾರ್ಚ್ 20ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ.

Leave a Reply