ರಾಂಚಿ ಟೆಸ್ಟ್ ಡ್ರಾ: ಆಸೀಸ್ ಪಡೆಗೆ ಆಸರೆಯಾದ ಮಾರ್ಷ್- ಪೀಟರ್, 10 ಸಾವಿರ ಮಂದಿಯನ್ನು ಕೆಲಸದಿಂದ ಕಿತ್ತು ಹಾಕುತ್ತಿದೆ ಕಾಗ್ನಿಸೆಂಟ್ ಕಂಪನಿ

ಡಿಜಿಟಲ್ ಕನ್ನಡ ಟೀಮ್:

ಸಮಬಲದ ಪೈಪೋಟಿಯಿಂದ ಕೂಡಿದ್ದ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ರಾಂಚಿಯಲ್ಲಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಸೋಮವಾರ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲವಾದರು.

ಇಂದು ಬೆಳಗ್ಗೆ ಆಟ ಮುಂದುವರಿಸಿದ ನಾಯಕ ಸ್ಟೀವನ್ ಸ್ಮಿತ್ (21), ರೇನ್ ಶಾ (15) ಆರಂಭಿಕ ಒಂದು ಗಂಟೆಗಳ ಕಾಲ ರಕ್ಷಣಾತ್ಮಕ ಆಟವಾಡುವಲ್ಲಿ ಸಫಲರಾದರು. ಈ ವೇಳೆ ಇಶಾಂತ್ ಎಲ್ಬಿ ಬಲೆಗೆ ರೇನ್ ಶಾ ಬಿದ್ದರೆ, ಜಡೇಜಾ ಸ್ಪಿನ್ ಅರಿಯಲು ವಿಫಲರಾದ ಸ್ಮಿತ್ ಬೌಲ್ಡ್ ಆದರು. ಆಗ ಭಾರತದ ಪಾಳೆಯದಲ್ಲಿ ಗೆಲುವಿನ ಆಸೆ ಹೆಚ್ಚಿತು.

ನಾಲ್ಕನೇ ವಿಕೆಟಿಗೆ ಜತೆಯಾದ ಶಾನ್ ಮಾರ್ಷ್ (53) ಹಾಗೂ ಪೀಟರ್ ಹ್ಯಾಂಡ್ಸ್ ಕಾಂಬ್ (ಅಜೇಯ 72) ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥ್ಯವಾಗಿ ಎದುರಿಸಿದ ಈ ಜೋಡಿ ತಂಡಕ್ಕೆ 124 ರನ್ ಕಲೆ ಹಾಕಿದರು. ದಿನದ ಎರಡನೇ ಅವಧಿಯಲ್ಲಿ ವಿಕೆಟ್ ನೀಡದೇ ಅಜೇಯವಾಗುಳಿದ ಈ ಇಬ್ಬರು ಭಾರತೀಯರ ಜಯದ ಹಾದಿಗೆ ಅಡ್ಡಗೋಡೆಯಾದರು. ಪಂದ್ಯದ ಅಂತಿಮ ಅವಧಿಯಲ್ಲಿ ಮಾರ್ಷ್ ವಿಕೆಟ್ ಪಡೆಯುವಲ್ಲಿ ಜಡೇಜಾ ಯಶಸ್ವಿಯಾದರು. ನಂತರ ಬಂದ ಮ್ಯಾಕ್ಸ್ ವೆಲ್ ಗೆ ಅಶ್ವಿನ್ ಪೆವಿಲಿಯನ್ ಹಾದಿ ತೋರಿದರು. ಆದರೆ ಅಂತಿಮ ಹಂತದಲ್ಲಿ ವೇಡ್ (9) ಹಾಗೂ ಪೀಟರ್ ಅಜೇಯವಾಗುಳಿದು ಪಂದ್ಯವನ್ನು ಡ್ರಾದತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಮುಂದುವರಿದಿದೆ. ಅಂತಿಮ ಪಂದ್ಯ ಮಾರ್ಚ್ 25 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.

ಕಾಗ್ನಿಸೆಂಟ್ 10 ಸಾವಿರ ಮಂದಿ ನೌಕರಿಗೆ ಕುತ್ತು

ಅಮೆರಿಕ ಮೂಲಕ ಐಟಿ ಕಂಪನಿ ಕಾಂಗ್ನಿಸೆಂಟ್ ತನ್ನ ನೌಕರರ ಪ್ರಮಾಣವನ್ನು ಶೇ.5ರಷ್ಟು ಕಡಿಮೆ ಮಾಡಿಕೊಳ್ಳು ನಿರ್ಧರಿಸಿದ್ದು, ಸುಮಾರು 10 ಸಾವಿರ ಭಾರತೀಯರು ತಮ್ಮ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕಂಪನಿ ಜಾಗತಿಕವಾಗಿ ಒಟ್ಟು 2,60,000 ನೌಕರರಿದ್ದಾರೆ. ಈ ಪೈಕಿ ಶೇ.75 ರಷ್ಟು ನೌಕರರು ಭಾರತೀಯರಾಗಿದ್ದಾರೆ. ಕಂಪನಿಯು ಸಾಂಪ್ರದಾಯಿಕ ಐಟಿಯಿಂದ ಡಿಜಿಟಲ್ ಸೇವೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿ ತನ್ನ ನೌಕರರ ಪ್ರಮಾಣ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ವರದಿಗಳು ಹೇಳಿವೆ.

Leave a Reply