ತ್ರಿಶಂಕು ಸ್ವರ್ಗದ ಅಬ್ಬೆಪಾರಿಗಳು ಜೆಡಿಎಸ್‌ನ ಈ ಸಪ್ತಶಾಸಕರು!

author-thyagaraj-4ಗೆದ್ದೆತ್ತಿನ ಬಾಲ ಹಿಡಿದವರಿಗೆ ಅಮರಿಕೊಳ್ಳುವ ಭ್ರಮೆಯೇ ಅಂಥದು. ಆ ಭ್ರಮೆಯಲ್ಲಿ ಪ್ರಜ್ಞಾವಂತಿಕೆ ಮಸುಕಾಗಿ ಹೋಗುತ್ತದೆ. ಹೀಗಾಗಿ ಅವರಿಂದ ಎಂಥ ಕೆಲಸ ಬೇಕಾದರೂ ಮಾಡಿಸಿಬಿಡುತ್ತದೆ. ಉಂಡ ಮನೆಗೆ ದ್ರೋಹ ಬಗೆಸುತ್ತದೆ. ಬೆಂದ ಮನೆಯ ಗಳ ಹಿರಿಸುತ್ತದೆ. ಕೊನೆಗೊಮ್ಮೆ ಭ್ರಮೆ ಕಳಚಿಬಿದ್ದು, ವಾಸ್ತವ ಸ್ಥಿತಿಗೆ ಮರಳಿದಾಗ ಕಾಲ ಬಹಳ ದೂರ ಸರಿದಿರುತ್ತದೆ. ಸುತ್ತಮುತ್ತ ಯಾರೂ ಇಲ್ಲದೆ ಶೂನ್ಯಭಾವ ಆವರಿಸಿಕೊಂಡಿರುತ್ತದೆ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ವೇಳೆ ಆಮಿಷಕ್ಕೊಳಗಾಗಿ, ಅಡ್ಡಮತದಾನದ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಪರಾಭವಗೊಳಿಸಿ, ಜಾತ್ಯತೀತ ಜನತಾ ದಳದಿಂದ ಅಮಾನತುಗೊಂಡಿರುವ ಸಪ್ತಶಾಸಕರ ಪ್ರಸ್ತುತ ಸ್ಥಿತಿ ಇದು. ಜೆಡಿಎಸ್‌ಗೆ ವಾಪಸ್ ಬರಬೇಕೆಂದು ಏನೆಲ್ಲ ನವರಂಗಿ ಆಟ ಆಡಿದರೂ ಗೌಡರು, ಕುಮಾರಸ್ವಾಮಿ ಜಪ್ಪಯ್ಯ ಅನ್ನುತ್ತಿಲ್ಲ. ಬೇಕಾದಾಗ ಇವರನ್ನು ಬಳಸಿಕೊಂಡು, ಅಟ್ಟಿಕ್ಕುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದ ಕಾಂಗ್ರೆಸ್ ಆಕಾಶ- ಭೂಮಿ ತೋರಿಸುತ್ತಲೇ ಕಾಲ ದೂಡುತ್ತಿದೆ. ಬಿಜೆಪಿಗೆ ಕೊಟ್ಟ ಟ್ರೈ ಕೂಡ ವರ್ಕ್ ಔಟ್ ಆಗಿಲ್ಲ. ಹೀಗಾಗಿ ಈ ಸಪ್ತಶಾಸಕರು ಇದೀಗ ರಾಜಕೀಯ ತ್ರಿಶಂಕು ಸ್ವರ್ಗದ ಅಬ್ಬೆಪಾರಿಗಳು.

ಒಂಬತ್ತು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ರಾಜ್ಯಸಭೆ ಅಭ್ಯರ್ಥಿ ಎಫ್.ಎಂ. ಫಾರೂಕ್, ವಿಧಾನ ಪರಿಷತ್ ಅಭ್ಯರ್ಥಿ ಎಸ್.ಎಂ. ವೆಂಕಟಪತಿ ವಿರುದ್ಧ ಕಾಂಗ್ರೆಸ್ ಬೆಂಬಲಿತ ಕೆ.ಸಿ. ರಾಮಮೂರ್ತಿ ಹಾಗೂ ಬಿಜೆಪಿಯ ಲೆಹರ್ ಸಿಂಗ್ ಪರ ಮತ ಚಲಾಯಿಸಿ ‘ಪಕ್ಷನಿಷ್ಠೆ’ ಮೆರೆದ ಜಮೀರ್ ಅಹಮದ್, ಚಲುವರಾಯ–ಸ್ವಾಮಿ, ಬಾಲಕೃಷ್ಣ, ಅಖಂಡ ಶ್ರೀನಿವಾಸ ಮೂರ್ತಿ, ಗೋಪಾಲಯ್ಯ, ಭೀಮಾ ನಾಯಕ್, ರಮೇಶ್ ಬಂಡಿಸಿದ್ದೇಗೌಡ ಹಾಗೂ ಇಕ್ಬಾಲ್ ಅನ್ಸಾರಿ ಅವರ ಅವತ್ತಿನ ಗತ್ತು, ಗೈರತ್ತೇ ಬೇರೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಕಡೆ ಸಚಿವ ಡಿ.ಕೆ. ಶಿವಕುಮಾರ್ ಕೈಗೊಂಬೆಗಳಾಗಿದ್ದ ಈ ಶಾಸಕರಿಗೆ ಆ ಕ್ಷಣದ ಋಣವೇ ಮಿಗಿಲಾಗಿತ್ತು. ಆಮಿಷಗಳು ಬುದ್ಧಿಯನ್ನು ಮಂಕಾಗಿಸಿದ್ದವು. ಇವತ್ತಿನದನ್ನು ನೋಡಿಕೊಳ್ಳೋಣ, ಮುಂದಿನದನ್ನು ಬಂದಾಗ ನೋಡಿಕೊಂಡರಾಯಿತು ಎಂಬ ಉಡಾಫೆ ರಾಜಕೀಯ ಜಾಣ್ಮೆಯನ್ನು ನುಂಗಿ ನೀರು ಕುಡಿದಿತ್ತು.

ರಾಜಕೀಯ ಅಂದುಕೊಂಡತೆ ಇಲ್ಲ, ಅಂದುಕೊಂಡಿದ್ದೆಲ್ಲವೂ ರಾಜಕೀಯದಲ್ಲಿ ನಡೆಯುವುದಿಲ್ಲ ಎಂಬುದನ್ನು ರಾಜಕೀಯ ಗಾರುಡಿಗ ದೇವೇಗೌಡರ ಗರಡಿಯಲ್ಲಿ ಅಷ್ಟೆಲ್ಲ ಕಾಲ ಪಳಗಿದರೂ ಅರ್ಥ ಮಾಡಿಕೊಳ್ಳಲು ಹೋಗಲಿಲ್ಲ. ತತ್ಪರಿಣಾಮವಾಗಿ, ಇದ್ದುದರಲ್ಲೇ ಸ್ವಲ್ಪ ಮಿದುಳಿಗೆ ಕೆಲಸ ಕೊಟ್ಟು, ದೇವೇಗೌಡರ ಕೈಕಾಲು ಹಿಡಿದು ಒಳಮನೆ ಸೇರಿಕೊಂಡ ಗೋಪಾಲಯ್ಯ ಹೊರತುಪಡಿಸಿ ಉಳಿದವರೆಲ್ಲ ರಾಜಕೀಯ ನೆಲೆಗಾಗಿ ಅಲೆದಾಡುತ್ತಿದ್ದಾರೆ.

ರಾಜಕೀಯ ಸಮರ ಇದ್ದಕ್ಕಿದ್ದಂತೆ ಸೃಷ್ಟಿ ಆಗುವುದಿಲ್ಲ. ಒಂದೇ ತಟ್ಟೆಯಲ್ಲಿ ಉಂಡವರು ಗುದ್ದಾಡಿ ಸಂಬಂಧ ಮುರಿದುಕೊಳ್ಳಲು ಕಾರಣಗಳೇ ಸರಮಾಲೆ ಆಗಿರುತ್ತವೆ. ಅನುಮಾನ, ಅಪಮಾನ, ಮೋಸ, ವಂಚನೆ, ಸ್ವಾರ್ಥ, ಲಾಭ-ನಷ್ಟದ ಲೆಕ್ಕಾಚಾರವಿರುತ್ತದೆ. ಜೆಡಿಎಸ್ ಭಿನ್ನಮತಕ್ಕೂ ಇದು ಹೊರತಲ್ಲ. 2013ರ ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ಸಂದರ್ಭ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ ಮುನಿದು ಬಿದ್ದರು.

ಆದರೆ ಕುಮಾರಸ್ವಾಮಿ ಆಪ್ತವಲಯದಲ್ಲಿ ಇದ್ದುಕೊಂಡೇ ರಾಜಕೀಯ ಮತ್ತು ರಾಜಕೀಯೇತರ ‘ಸವಲತ್ತು’ ಅನುಭವಿಸಿದ್ದ ಅವರಿಗೆ ಮುಖಕ್ಕೆ ಹೊಡೆದಂತೆ ಹೇಳಲು ಆಗುತ್ತಿರಲಿಲ್ಲ. ಆದರೂ ಅಸಮಾಧಾನ ಹೊರಹಾಕಲೇ ಬೇಕಲ್ಲ. ದೇವೇಗೌಡರ ಮೇಲೆ ಗೂಬೆ ಕೂರಿಸಲು ಶುರು ಮಾಡಿದರು. ಇಷ್ಟು ವಯಸ್ಸಾದರೂ ಗೌಡರು ಪಕ್ಷದ ಮೇಲಿನ ಹಿಡಿತವನ್ನು ಕುಮಾರಸ್ವಾಮಿಗೇ ಬಿಟ್ಟುಕೊಟ್ಟಿಲ್ಲ ಎಂದು ವರಾತ ತೆಗೆದವರು ಕೊನೆಗೆ ‘ಜೆಡಿಎಸ್ ಅಪ್ಪಮಕ್ಕಳ ಪಾರ್ಟಿ’ ಎಂಬ ಕೂಗಿಗೆ ಧ್ವನಿ ಸೇರಿಸುವಲ್ಲಿಗೆ ಬಂದು ನಿಂತರು. ಈ ಮಾತನ್ನು ಬೇರೆಯವರು ಆಡುವುದಕ್ಕೂ ಪಕ್ಷದವರೇ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ. ಸ್ವಂತ ಮನೆಯವರ ಆಪಾದನೆ ಗಟ್ಟಿಯಿರುತ್ತದೆ. ಅಷ್ಟೊತ್ತಿಗೆ ಜೆಡಿಎಸ್ ಮೂಲದ ಸಿಎಂ ಸಿದ್ದರಾಮಯ್ಯ ಆಪ್ತವಲಯ ಸೇರಿದ್ದ ಅವರಿಗೆ ಮನಸು ಮತ್ತು ನಾಲಗೆ ಮೇಲಿನ ಹಿಡಿತ ತಪ್ಪಿತ್ತು.

ಗೌಡರು, ಕುಮಾರಸ್ವಾಮಿ ಅವರನ್ನು ನಿಂದಿಸಿ ಸಿದ್ದರಾಮಯ್ಯನವರ ಮನ ಸಂತೋಷ ಪಡಿಸಿದ ಕಾರಣಕ್ಕಾಗಿ ಸರಕಾರದ ಮಟ್ಟದಲ್ಲಿ ಅವರು ಹೇಳಿದ ಕೆಲಸಗಳಾದವು. ಸ್ವಂತ ಕ್ಷೇತ್ರಾಭಿವೃದ್ಧಿಗೆ ನೆರವು, ಅನುದಾನ ಹರಿದು ಬಂದವು. ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ಎಂಬ ಆಶ್ವಾಸನೆ ಜತೆ ಜತೆಗೆ. ಇನ್ನು ಇವರನ್ನು ಹಿಡಿಯುವವರು ಯಾರು? ಅಷ್ಟೊತ್ತಿಗೆ ಬಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಇವರ ಬಹಿರಂಗ ಪಕ್ಷದ್ರೋಹ ಅನಾವರಣಗೊಳಿಸಿತು. ಅಭ್ಯರ್ಥಿಗಳ ಹತ್ತಿರ ಗೌಡರ ಕುಟುಂಬ ಪಡೆದ ಪಾರ್ಟಿ ಫಂಡಲ್ಲಿ ಪಾಲು ದೊರೆಯಲಿಲ್ಲ ಎಂಬುದನ್ನೇ ಇದಕ್ಕೆ ಇಂಬು ಮಾಡಿಕೊಂಡರು. ಜೆಡಿಎಸ್‌ನ ಇನ್ನೂ ಐವರು ‘ಹಸಿದ’ ಶಾಸಕರನ್ನು ಒಟ್ಟುಮಾಡಿಕೊಂಡು ಅನ್ಯಪಕ್ಷಗಳ ಅಭ್ಯರ್ಥಿಗಳಿಗೆ ವೋಟು ಹಾಕಿ ಆಗಿದ್ದ ‘ನಷ್ಟ’ ಭರ್ತಿ ಮಾಡಿಕೊಂಡರು. ಅದಕ್ಕೆ ಜೆಡಿಎಸ್‌ನಲ್ಲಿ ಸಿಕ್ಕ ಭಕ್ಷೀಸು ಅಮಾನತು. ಇಲ್ಲಿಂದಾಚೆಗೆ ಶುರು ಅವರ ರಾಜಕೀಯ ನೆಲೆ ಅರಸಾಟ. ಅದಿನ್ನೂ ನಿಂತಿಲ್ಲ.

ಇದಕ್ಕೆ ಕಾರಣ ಅನಿರೀಕ್ಷಿತ ರಾಜಕೀಯ ತಿರುವುಗಳು. ಯಾರನ್ನೂ ಹೇಳಿ, ಕೇಳಿ ಬರದ ಈ ತಿರುವುಗಳು ಯಾರನ್ನು, ಎಲ್ಲಿ, ಯಾವಾಗ, ಹೇಗೆ ಗಿರಿಗಟ್ಟಲೆಯಂತೆ ತಿರುಗಿಸಿ ಬಿಸಾಡುತ್ತವೆ ಎಂಬುದನ್ನು ಹೇಳಲಾಗದು. ಪುತ್ರ ರಾಕೇಶ್ ಸಾವು ಸಂದರ್ಭ ಮನೆಗೇ ಬಂದು ಸಾಂತ್ವನ ಹೇಳಿದ, ಕಾವೇರಿ ವಿಷಯದಲ್ಲಿ ತಮ್ಮ ಬೆನ್ನಿಗೇ ನಿಂತ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬೆಂಬಲ ಮುಂದುವರಿಸಿದ ದೇವೇಗೌಡರ ಬಗ್ಗೆೆ ಸಿದ್ದರಾಮಯ್ಯ ಮೃದುಧೋರಣೆ ರೂಢಿಸಿಕೊಂಡರು. ಅವರ ಪಕ್ಷದ ಉಸಾಬರಿ ತಮಗೇಕೆ? ಅದರಿಂದ ತಮಗೇನಾಗಬೇಕಿದೆ? ಹೇಗೂ ಮುಖ್ಯಮಂತ್ರಿ ಆಗಿದ್ದಾಗಿದೆ, ಗೌಡರ ಜತೆ ವೈಷಮ್ಯ ಮುಂದುವರಿಸಿ ಸಾಧಿಸುವುದೇನು? ನಾಳೆ ರಾಜಕೀಯ ಪರಿಸ್ಥಿತಿ ಏನಾಗುತ್ತದೋ ಗೊತ್ತಿಲ್ಲ ಎಂದೆಲ್ಲ ಚಿಂತನೆ ನಡೆಸಿದ ಸಿದ್ದರಾಮಯ್ಯ ಈ ಸಪ್ತಶಾಸಕರಿಂದ ಒಂದಿನಿತು ಅಂತರ ಕಾಯ್ದುಕೊಳ್ಳಲು ಶುರು ಮಾಡಿದರು. ಹಿಂದೆ ಅವರು ಮಾಡಿದ ಸಹಾಯಕ್ಕೆ ಪ್ರತಿಸಹಾಯ ಮಾಡಿಯಾಗಿದೆ. ಹೇಳಿದ ಕೆಲಸಗಳನ್ನು ಮಾಡಿಕೊಡಲಾಗಿದೆ. ಕೇಳಿದ ಹಾಗೆ ನೆರವು ಕೊಡಲಾಗಿದೆ. ಅವರ ಯಾವ ಋಣವೂ ತಮ್ಮ ಮೇಲೆ ಇಲ್ಲ ಎಂದು ತಮ್ಮನ್ನು ತಾವೇ ಸಂತೈಸಿಕೊಂಡರು. ವಿಧಾನಸಭೆ ಚುನಾವಣೆ ಟಿಕೆಟ್ ವಿಚಾರ ಬಂದಾಗಲೆಲ್ಲ ಮಾತು ತೇಲಿಸಲು ಆರಂಭಿಸಿದರು. ಇದರಿಂದ ಜೆಡಿಎಸ್ ಭಿನ್ನರು ತೇಲುಗಣ್ಣು, ವಾಲುಗಣ್ಣಾದರು. ಯಾಕೋ ಹಳಿ ತಪ್ಪುತ್ತಿದೆ ಎಂದೆನ್ನಿಸಿ, ದಿಗಿಲುಗೊಂಡರು.

ಈ ಮಧ್ಯೆ, ಅಮಾನತುಗೊಂಡಿದ್ದ ಶಾಸಕರ ಪೈಕಿ ಗೋಪಾಲಯ್ಯ ಆದಿಚುಂಚನಗಿರಿ ಶ್ರೀಗಳ ಮೂಲಕ ಗೌಡರ ಜತೆ ರಾಜಿ ಕುದುರಿಸಿಕೊಂಡರು. ಪತ್ನಿ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರನ್ನು ಗೌಡರ ಕಾಲಿಗೆ ಅಡ್ಡಬೀಳಿಸಿ, ತಪ್ಪಾಯ್ತು ಅಂತ ಕೇಳಿಕೊಂಡರು. ಇದಕ್ಕೆ ಮೇಯರ್ ಚುನಾವಣೆ ಸಂದರ್ಭ ಬಳಸಿಕೊಂಡರು. ಗೌಡರು ಕ್ಷಮಿಸಿದರು. ಗೋಪಾಲಯ್ಯ ಅಮಾನತು ರದ್ದಾಯಿತು. ಸರಿ, ಉಳಿದ ಸಪ್ತರು ಇದೇ ತಂತ್ರದ ಮೊರೆ ಹೋದರು. ಆದರೆ ದೇವೇಗೌಡರು ಮತ್ತು ಕುಮಾರಸ್ವಾಮಿ ಮಾತ್ರ ರಾಜಿಗೆ ಬಿಲ್‌ಕುಲ್ ಒಪ್ಪಿಲ್ಲ. ಅದೇನಾಗಿ ಬಿಡುತ್ತದೋ ನೋಡಿಯೇ ಬಿಡೋಣ ಎಂದು ಹಠಕ್ಕೆ ಬಿದ್ದಿದ್ದಾರೆ. ‘ಪಕ್ಷದ ಉಳಿದ ನಾಯಕರು ಮತ್ತು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳೋದು ಬೇಡ ಅಂತ ಹೇಳಿದ್ದಾರೆ. ಹೀಗಾಗಿ ಅವರಿಗೆ ಜಾಗವಿಲ್ಲ’ ಎಂದು ತತ್ತ್ವ, ಸಿದ್ಧಾಂತದ ನೆಲೆಗಟ್ಟಲ್ಲಿ ಗೌಡರು ಈ ಪ್ರಸ್ತಾಪ ತಳ್ಳಿಹಾಕಿದ್ದರೆ, ಕುಮಾರಸ್ವಾಮಿ ನಿರಾಕರಣೆ ಹಿಂದಿರುವುದು ವೈಯಕ್ತಿಕ ವಿಚಾರಗಳು. ತಮ್ಮ ಜತೆ ಅಷ್ಟೆಲ್ಲ ಆತ್ಮೀಯರಾಗಿದ್ದವರು ತಮ್ಮನ್ನೇ ಬ್ಲಾಕ್‌ಮೇಲ್ ಮಾಡಲು ನೋಡಿದರೆಂಬ ಸಿಟ್ಟು ಅವರಲ್ಲಿ ಕೊತಕೊತನೆ ಕುದಿಯುತ್ತಿದೆ. ‘ದುಬೈ ಬಿಜಿನೆಸ್ ಬಹಿರಂಗ ಮಾಡ್ತೀವಿ. ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ ಅಂತ ಹೇಳ್ತೀವಿ. ನಿಮ್ ಪರ್ಸನಲ್ ವಿಷಯ ಲೀಕ್ ಮಾಡ್ತೀವಿ. ನಮ್ ಸಪೋರ್ಟ್ ಇಲ್ಲದೇ ರಾಮನಗರದಲ್ಲಿ ಅದೆಂಗೆ ಗೆಲ್ತಾರೋ ನೋಡ್ತೀವಿ…’ ಅಂತೆಲ್ಲ ಸಿಕ್ಕಸಿಕ್ಕಲ್ಲಿ ಹೇಳಿಕೊಂಡು ತಿರುಗಿರುವುದು ಕುಮಾರಸ್ವಾಮಿ ರೊಚ್ಚು ಹೆಚ್ಚಿಸಿದೆ. ಬೇಕಾದ್ದಾಗಲಿ, ಇವರನ್ನು ಯಾವುದೇ ಕಾರಣಕ್ಕೂ ಪಕ್ಷದೊಳಕ್ಕೆ ಬಿಟ್ಟುಕೊಳ್ಳಬಾರದು ಅಂತ ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ ಸಪ್ತ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ತಯಾರಿ ಮಾಡುತ್ತಿದ್ದಾರೆ.

ಆದರೂ ಚಲುವರಾಯಸ್ವಾಮಿ, ಜಮೀರ್ ಅಹಮದ್ ಅವರ ‘ಭಾವನಾತ್ಮಕ ಬ್ಲಾಕ್‌ಮೇಲ್’ ತಂತ್ರಗಳು ಇನ್ನೂ ನಿಂತಿಲ್ಲ. ಹೇಮಲತಾ ಗೋಪಾಲಯ್ಯ ಗೌಡರ ಕಾಲಿಗೆ ಬಿದ್ದಿದ್ದಕ್ಕೆ ಗೋಪಾಲಯ್ಯನ್ನ ಪಕ್ಷದ ಒಳಕ್ಕೆ ಬಿಟ್ಟುಕೊಂಡರು ಅನ್ನೋ ಮಾದರಿ ಮೊರೆ ಹೋದ ಚಲುವರಾಯಸ್ವಾಮಿಗೆ ಫಲ ಸಿಕ್ಕಿಲ್ಲ. ಇಪ್ಪತ್ತು ದಿನಗಳ ಹಿಂದೆ ಮೈಸೂರು ಕಡೆ ಹೊರಟಿದ್ದ ಗೌಡರು ವಿಶ್ರಾಂತಿಗಾಗಿ ಕೆಲಕಾಲ ಶ್ರೀರಂಗಪಟ್ಟಣದಲ್ಲಿ ತಂಗಿದ್ದರು. ಅಲ್ಲಿಗೆ ಬಂದ ಚಲುವರಾಯಸ್ವಾಮಿ ದಂಪತಿ ಪೈಕಿ ಪತ್ನಿಧನಲಕ್ಷ್ಮಿ ಗೌಡರ ಕಾಲಿಗೆ ಬಿದ್ದರು. ಆದರೂ ಚಲುವ ರಾಯಸ್ವಾಮಿಗೆ ಪಕ್ಷದ ರೀಎಂಟ್ರಿ ಸಿಕ್ಕಿಲ್ಲ. ಇನ್ನು ಜಮೀರ್ ಅಹಮದ್ ರಾಮನಗರ, ತುಮಕೂರಿನಲ್ಲಿ ಮುಸ್ಲಿಮರ ಸರಣಿ ಸಭೆ ನಡೆಸಿ, ಜೆಡಿಎಸ್‌ಗೆ ತಾವು ಅನಿವಾರ್ಯ ಅನ್ನೋ ಚಿತ್ರಣ ಕೊಡಲು ಯತ್ನಿಸಿದರೂ ಗೌಡರು, ಕುಮಾರಸ್ವಾಮಿ ಮಾತ್ರ ‘ಕ್ಯಾರೇ…’ ಅಂದಿಲ್ಲ.

ಒಂದು ಕಡೆ ಸಿದ್ದರಾಮಯ್ಯನವರ ಅನಾದಾರ, ಇನ್ನೊಂದೆಡೆ ಹಾಕಿದ ಪ್ಲಾನ್‌ಗಳೆಲ್ಲ ಬೋರಲು ಬಿದ್ದಿದ್ದರಿಂದ ಕಂಗೆಟ್ಟ ಸಪ್ತ ಶಾಸಕರು ಇದೀಗ ಕಾಂಗ್ರೆಸ್‌ನ ಮತ್ತೊಬ್ಬ ಪ್ರಬಲ ನಾಯಕ ಡಿ.ಕೆ. ಶಿವಕುಮಾರ್ ಅವರ ಅಂಗಿ ಚುಂಗು ಹಿಡಿದು ಅಡ್ಡಾಡುತ್ತಿದ್ದಾರೆ. ಪಕ್ಷದ ಒಕ್ಕಲಿಗ ನಾಯಕ ಶಿವಕುಮಾರ್ ಅವರಿಗೆ ಇಂದಲ್ಲ ನಾಳೆ ಸಿಎಂ ಆಗಬೇಕೆಂಬ ಕನಸಿದೆ. ಆ ಕನಸಿಗೆ ಅಡ್ಡಿ ಕುಮಾರಸ್ವಾಮಿ. ಆ ಅಡ್ಡಿ ನಿವಾರಣೆಗೆ ತಮ್ಮೆಲ್ಲ ಶ್ರಮ ಧಾರೆ ಎರೆವ ಆಶ್ವಾಸನೆಯನ್ನು ಜೆಡಿಎಸ್ ಭಿನ್ನರು ಕೊಟ್ಟಿದ್ದಾರೆ. ಶಿವಕುಮಾರ್ ಸಹ ಅಷ್ಟೇ ಧಾರಾಳವಾಗಿ ಕಾಂಗ್ರೆಸ್ ಟಿಕೆಟ್ ಮತ್ತಿತರ ನೆರವಿನ ಭರವಸೆ ನೀಡಿದ್ದಾರೆ. ಹೀಗಾಗಿ ಇವರೀಗ ಪರಸ್ಪರ ಸಹಕಾರ ತತ್ತ್ವದ ಸ್ನೇಹಿತರು.

ಆದರೆ ಈ ಮಧ್ಯೆ ಇನ್ನೊಂದು ಯಡವಟ್ಟಾಗಿ ಹೋಗಿದೆ. ಕಾಂಗ್ರೆಸ್ ತೊರೆದಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿಗೆ ಹೋಗುತ್ತಿರುವುದು ಹಳೇ ಮೈಸೂರು ಭಾಗದ ಜೆಡಿಎಸ್ ಭಿನ್ನರ ಮತರಾಜಕೀಯದ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಕೃಷ್ಣ ಅವರನ್ನು ಬೆಂಬಲಿಸುವ ಮತಗಳು ಬಿಜೆಪಿಗೆ ವರ್ಗವಾಗುತ್ತವೆ. ಜತೆಗೆ ಒಂದೆಡೆ ಆಡಳಿತ ವಿರೋಧಿ ಅಲೆ, ಇನ್ನೊಂದೆಡೆ ನರೇಂದ್ರ ಮೋದಿ ಅಲೆ ಬೇರೆ. ಇವೆರಡರ ಮಧ್ಯೆ ಕಾಂಗ್ರೆಸ್ ದುರ್ಬಲವೇ. ಇದು ಕಾಂಗ್ರೆಸ್ ಟಿಕೆಟ್‌ಗೆ ಟವೆಲು ಹಾಸಿರುವವರ ಪೈಕಿ ವಿಶೇಷವಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ, ನಾಗಮಂಗಲದ ಚಲುವರಾಯಸ್ವಾಮಿ ಹಾಗೂ ರಾಮನಗರ ಜಿಲ್ಲೆ ಮಾಗಡಿಯ ಬಾಲಕೃಷ್ಣ ಅವರನ್ನು ಆತಂಕಕ್ಕೆ ಈಡು ಮಾಡಿದೆ. ಇಲ್ಲಿ ಬಿಜೆಪಿಗೆ ಲಾಭವಾಗುತ್ತದೋ, ಜೆಡಿಎಸ್ ಬಲ ಮತ್ತಷ್ಟು ಹಿಗ್ಗುತ್ತದೋ ಎನ್ನುವುದಕ್ಕಿಂತ ಮುಖ್ಯ ಕಾಂಗ್ರೆಸ್ಸಿಗೆ ಆಗುವ ಅನಾಹುತ. ಸಹಜವಾಗಿಯೇ ಆ ಪಕ್ಷದಿಂದ ಚುನಾವಣೆಗೆ ನಿಲ್ಲುವವನನ್ನು ಕಾಡುವ ಸಂಗತಿ ಇದು.

ಎಲ್ಲಕ್ಕಿಂತ ಮಿಗಿಲಾಗಿ ಪಾರಂಪರಿಕ ರಾಜಕೀಯ ಶತ್ರುಗಳಾಗಿದ್ದ ದೇವೇಗೌಡರು ಮತ್ತು ಕೃಷ್ಣ ನಡುವಣ ಸಂಬಂಧ ಇತ್ತೀಚೆಗೆ ಸುಧಾರಿಸಿದೆ. ಅನೇಕ ಕಡೆ ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ. ಪರಸ್ಪರ ಹೊಗಳಿಕೊಂಡಿದ್ದಾರೆ. ತಮ್ಮ ಶತ್ರುಗಳನ್ನು ಸದೆಬಡಿಯಲು ಭೂಮಿಗಿಳಿದು ರಣತಂತ್ರ ಹೊಸೆವ ಗೌಡರು ಯಾವಾಗ, ಯಾರನ್ನು, ಹೇಗೆ ಬಳಸಿಕೊಳ್ಳುತ್ತಾರೆ, ಎಂಥ ಅಸ್ತ್ರಗಳನ್ನು ಬಳಕೆ ಮಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಚುನಾವಣೆ ರಾಜಕೀಯದಲ್ಲಿ ಪಕ್ಷದ ಹಿತಾಸಕ್ತಿಯನ್ನೇ ಪಣಕ್ಕಿಟ್ಟು, ಪಕ್ಷದ ಅಭ್ಯರ್ಥಿಗಳನ್ನೇ ಬಲಿಕೊಟ್ಟು ಶತ್ರುಗಳನ್ನು ನಿರ್ನಾಮ ಮಾಡುವುದರಲ್ಲಿ ಅವರು ನಿಸ್ಸೀಮರು. ಗೌಡರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವವರು ಹತ್ತು ಬಾರಿ ತಲೆ ಕೆಡಿಸಿಕೊಳ್ಳಬೇಕಾದ ವಿಚಾರವಿದು. ಚಲುವರಾಯಸ್ವಾಮಿ ಬಳಗವನ್ನು ಇನ್ನಿಲ್ಲದಂತೆ ಕಾಡುತ್ತಿರುವ ವಿಷಯವಿದು.

ಚುನಾವಣೆಗೆ ವರ್ಷ ಬಾಕಿ ಉಳಿದಿದೆ. ಭಿನ್ನ ಶಾಸಕರ ಪೈಕಿ ಇಕ್ಬಾಲ್ ಅನ್ಸಾರಿ ಅವರಿಗೆ ರಾಜಕೀಯ ಬೇಕು ಅಂದರೆ ಬೇಕು, ಬೇಡ ಅಂದರೆ ಬೇಡ. ಉಳಿದವರಿಗೆ ರಾಜಕೀಯ ಒಂದು ಅನಿವಾರ್ಯ. ಆದರೆ ಸ್ವಂತ ಶಕ್ತಿ ಮೇಲೆ ರಾಜಕೀಯ ಮಾಡಲು, ಗೆದ್ದು ಬರಲು ಇವರಿಗಾಗದು. ಯಾವುದಾದರೂ ಪಕ್ಷ ಬೇಕೇ ಬೇಕು. ಜೆಡಿಎಸ್‌ನಲ್ಲಿ ಜಾಗವಿಲ್ಲ. ಕಾಂಗ್ರೆಸ್ ನಂಬುವಂತಿಲ್ಲ. ಬಿಜೆಪಿಗೆ ಹೋಗುವಂತಿಲ್ಲ. ಹೀಗಾಗಿ ಸದ್ಯಕ್ಕೆ ಅವರೀಗ ಅತಂತ್ರರು.

ಲಗೋರಿ: ಒಮ್ಮೊಮ್ಮೆ ಅತಿ ಲೆಕ್ಕಾಚಾರ ಗ್ರಹಚಾರವಾಗಿಯೂ ಮಾರ್ಪಡುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply