ತೈಲ ರಫ್ತನ್ನೇ ನಂಬಿದ್ದ ನೈಜೀರಿಯಾಗೆ ಆಶಾಕಿರಣವಾಗಿದೆ ಮನರಂಜನಾ ಕ್ಷೇತ್ರದಲ್ಲಿನ ಯಶಸ್ಸು!

ನೈಜೀರಿಯಾದ ‘ದ ವೆಡ್ಡಿಂಗ್ ಪಾರ್ಟಿ’ ಚಿತ್ರದ ಫೋಟೊ…

ಡಿಜಿಟಲ್ ಕನ್ನಡ ಟೀಮ್:

ಸದ್ಯ ಇಡೀ ವಿಶ್ವವೇ ನವೀಕರಿಸಬಹುದಾದ ಇಂಧನ ಮೂಲಗಳತ್ತ ಮುಖ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತೈಲ ಇಂಧನದಿಂದಲೇ ಆರ್ಥಿಕತೆ ಅವಲಂಬಿಸಿರುವ ರಾಷ್ಟ್ರಗಳ ಕಥೆ ಏನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಹೀಗೆ ತೈಲ ರಫ್ತಿನಿಂದಲೇ ಶೇ.90 ರಷ್ಟು ಆರ್ಥಿಕತೆಯ ಅವಲಂಬಿತವಾಗಿರೋ ನೈಜಿರಿಯಾ ಈಗ ಪರ್ಯಾಯ ಉದ್ಯಮವನ್ನು ಹುಡುಕಿಕೊಳ್ಳುತ್ತಿರುವುದು ಆಸಕ್ತಿಕರ ವಿಷಯ. ಆ ಹೊಸ ಉದ್ಯಮ ಯಾವುದೆಂದರೆ ಮನರಂಜನಾ ಉದ್ಯಮ.

ಹೌದು, ಇತ್ತೀಚಿನ ದಿನಗಳಲ್ಲಿ ನಾಲಿವುಡ್ (ನೈಜೀರಿಯಾ ಚಿತ್ರರಂಗ) ಚಿತ್ರಗಳು ಸಾಕಷ್ಟು ಗಮನ ಸಳೆಯುತ್ತಿದ್ದು, ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಇಷ್ಟು ದಿನಗಳ ಕಾಲ ಅಸ್ಥಿತ್ವದಲ್ಲೇ ಇಲ್ಲದಂತಿದ್ದ ಮನರಂಜನಾ ಉದ್ಯಮ ಈಗ ಕ್ರಮೇಣವಾಗಿ ಬೆಳೆಯುತ್ತಿರುವುದು ನೈಜೀರಿಯಾ ಪಾಲಿಗೆ ನಿಜಕ್ಕೂ ಉತ್ತಮ ಸಂಗತಿ.

ದ ವೆಡ್ಡಿಂಗ್ ಪಾರ್ಟಿ ಎಂಬ ಚಿತ್ರ ಇತ್ತೀಚೆಗೆ 400 ಮಿಲಿಯನ್ ನೈರಾ ಅಂದರೆ 1.3 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬಾಕ್ಸ್ ಆಫೀಸ್ ಗಳಿಕೆ ಮಾಡಿದೆ. 2016ರಲ್ಲಿ ನಾಲಿವುಡ್ ಚಿತ್ರಗಳ ಒಟ್ಟು ಆದಾಯ 3.5 ಬಿಲಿಯನ್ ನೈರಾ ಅಂದರೆ 11.5 ಮಿಲಿಯನ್. ಹಾಲಿವುಡ್ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ಚಿಕ್ಕ ಮೊತ್ತ ಎನಿಸುವುದು ಸಹಜ. ಆದರೆ ಮನರಂಜನಾ ಕ್ಷೇತ್ರದಲ್ಲಿ ಏನನ್ನೂ ಸಾಧಿಸದ ಪರಿಸ್ಥಿತಿಯಲ್ಲಿ ನೈಜೀರಿಯಾ ಚಿತ್ರಗಳು, ಕುಸಿದಿರುವ ಆರ್ಥಿಕತೆ ಹಾಗೂ ಪೈರಸಿ ಸಿಡಿಗಳ ಸವಾಲುಗಳನ್ನು ಮೆಟ್ಟಿನಿಂತು ಇಷ್ಟು ಗಳಿಕೆ ಮಾಡುತ್ತಿರುವುದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ ಅಂತಲೇ ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ದ ವೆಡ್ಡಿಂಗ್ ಪಾರ್ಟಿ ಚಿತ್ರ ಪ್ರತಿಷ್ಠಿತ ಟೊರಾಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವಿಮರ್ಶಕರ ಪ್ರಶಂಸೆಗೂ ಪಾತ್ರವಾಗಿತ್ತು. ನೈಜೀರಿಯಾ ಚಿತ್ರರಂಗ ಬೆಳೆಯುತ್ತಿರುವ ರೀತಿ ಇಡೀ ವಿಶ್ವದ ಗಮನ ಸೆಳೆದಿದೆ. ನಾಲಿವುಡ್ಡಿನ ಈ ಚಿತ್ರಣಕ್ಕೆ ಹೊಸ ರೂಪ ಕೊಡಲು ನ್ಯೂಯಾರ್ಕಿನ ಕಲಾವಿದ ಐಕೆ ಯುಡೆ ಮುಂದಾಗಿದ್ದು, ‘ನಾಲಿವುಡ್ ಪೊರ್ಟ್ರೇಟ್ಸ್: ಎ ರ್ಯಾಡಿಕಲ್ ಬ್ಯೂಟಿ’ ಎಂಬ ಪುಸ್ತಕ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಪುಸ್ತಕದಲ್ಲಿ ನಾಲಿವುಡ್ಡಿನ 66 ಖ್ಯಾತ ತಾರೆಯರನ್ನು ಒಳಗೊಂಡಿದೆ. ಯುಡೆ ಅವರು 1980ರ ದಶಕದಲ್ಲೇ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದವರು. ನೈಜೀರಿಯಾ ಚಿತ್ರಗಳ ಮೇಲೆ ಆಸಕ್ತಿ ಇರಲಿಲ್ಲ. ಆದರೆ ಇತ್ತೀಚೆಗೆ ನೈಜೀರಿಯಾದ ಚಿತ್ರಗಳನ್ನು ನೋಡಿ, ತಮ್ಮ ಸಂಬಂಧಿಕರು ಹಾಗೂ ಚಿತ್ರ ತಾರೆಯರನ್ನು ಭೇಟಿ ಮಾಡಿದ ನಂತರ ಅವರು ನಾಲಿವುಡ್ ಚಿತ್ರಗಳ ಅಭಿಮಾನಿಯಾಗಿದ್ದು, ಇಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ದ ವೆಡ್ಡಿಂಗ್ ಪಾರ್ಟಿ ಜತೆಗೆ ಕಳೆದ ವರ್ಷ ತೆರೆ ಕಂಡ ಎ ಟ್ರಿಪ್ ಟು ಜಮೈಕಾ, 76, ವೈಫ್ಸ್ ಆನ್ ಸ್ಟ್ರೈಕ್, ದ ಸಿಇಒ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಯಶಸ್ಸು ಕಂಡ ಚಿತ್ರಗಳಾಗಿವೆ. ಒಟ್ಟಿನಲ್ಲಿ ತೈಲ ವ್ಯಾಪಾರವನ್ನೇ ಅವಲಂಬಿಸಿದ್ದ ನೈಜೀರಿಯಾ ಈಗ ಮನರಂಜನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಗುರುತು ಮೂಡಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.

Leave a Reply