ಭ್ರಷ್ಟಾಚಾರ ವಿಷಯವಾಗಿ ವಿಧಾನಸಭೆಯಲ್ಲಿ ಶೆಟ್ಟರ್- ಸಿದ್ದರಾಮಯ್ಯ ನಡುವೆ ವಾಗ್ವಾದ, ಕಲಾಪದ ಇತರೆ ಪ್ರಮುಖ ಅಂಶಗಳು…

orgivie ment beteew cm siddu and jagdeesh shtter at assembble

ಡಿಜಿಟಲ್ ಕನ್ನಡ ಟೀಮ್:

ಇಂದಿನ ವಿಧಾನ ಸಭೆ ಕಲಾಪದಲ್ಲೂ ಭ್ರಷ್ಟಾಚಾರ ಹಾಗೂ ಡೈರಿ ವಿಚಾರ ಪ್ರತಿಧ್ವನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರು. ಪರಿಣಾಮ ಯಾರ ಆಡಳಿತದಲ್ಲಿ ಎಷ್ಟು ಲೂಟಿಯಾಗಿವೆ, ಎಷ್ಟು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ ಎಂಬ ಕೆಸರೆರೆಚಾಟಕ್ಕೆ ಸಾಕ್ಷಿಯಾಯಿತು.

ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ನೀಡಿರುವ ಮಾಹಿತಿ ಹೊಂದಿರುವ ಡೈರಿಯ ವಿಚಾರವಾಗಿ ಚರ್ಚೆ ನಡೆಸಬೇಕು ಎಂದು ಬಿಜೆಪಿ ನಡೆಸುತ್ತಿದ್ದ ಧರಣಿ ಹಿಂಪಡೆಯುವ ಸಂದರ್ಭದಲ್ಲಿ ಸಂದರ್ಭದಲ್ಲಿ ಈ ಇಬ್ಬರು ನಾಯಕರ ಮಧ್ಯೆ ಮಾತಿನ ಚಕಮಕಿ ಆರಂಭವಾಯಿತು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಜನರ ಬಗ್ಗೆ ನಿಮಗೆ ಕಳಕಳಿ ಇಲ್ಲ. ಪ್ರಚಾರಕ್ಕಾಗಿ ಧರಣಿ ಮಾಡಿದ್ದೀರಿ. ಡೈರಿ ದಾಖಲೆಯಾಗುವುದಿಲ್ಲ ಎಂದು ಸುಪ್ರೀಂ ಮತ್ತು ಹೈಕೋರ್ಟ್ ತೀರ್ಪುಗಳಿದ್ದರೂ ಪ್ರಚಾರಕ್ಕಾಗಿ ಧರಣಿ ಮಾಡಿದ್ದೀರಿ. ಜನ ನಿಮ್ಮನ್ನು ನಿಂದಿಸುತ್ತಿದ್ದಾರೆ. ಆ ಕಾರಣಕ್ಕಾಗಿ ನೀವು ಧರಣಿ ಕೈಬಿಟ್ಟಿದ್ದೀರಿ’ ಎಂದು ಟೀಕಿಸಿದರು. ಆಗ ಪ್ರತಿಕ್ರಿಯೆ ನೀಡಿದ ಶೆಟ್ಟರ್, ‘ನಿಮ್ಮ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಬೇಕು’ ಎಂದರು.

ಮತ್ತೆ ಮಾತು ಮುಂದುವರಿಸಿದ ಸಿಎಂ, ‘ಲೂಟಿಕೋರರು ನೀವು, ಕರ್ನಾಟಕವನ್ನು ಲೂಟಿ ಮಾಡಿದ್ದೀರಿ. ರಾಜ್ಯವನ್ನು ಹಾಳು ಮಾಡಿದ್ದೀರಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದದಾಗ ತಾವು ಭ್ರಷ್ಟಾಚಾರ ಮಾಡಿದರೆ ಸಾಲದು ಎಂದು ತಮ್ಮ ಕುಟುಂಬದವರನ್ನು ಸೇರಿಸಿಕೊಂಡು ಲೂಟಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಜೈಲಿಗೂ ಹೋಗಿ ಬಂದಿದ್ದಾರೆ’ ಎಂದರು.

ಇಂದಿನ ಅಧಿವೇಶನದ ಪ್ರಮುಖ ಅಂಶಗಳು…

  • ಕಾವೇರಿ, ಕೃಷ್ಣ ನದಿ ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕಳೆದ ಮೂರು ವರ್ಷದಿಂದ 570163 ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೇತ್ತರ ವೇಳೆಯಲ್ಲಿ ಹಂಪನಗೌಡ ಬದರ್ಲಿ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹ 25 ಸಾವಿರ ಕೋಟಿ ವೆಚ್ಚ ಮಾಡಿ ಲಕ್ಷಾಂತರ ಭೂಮಿಗೆ ನೀರು ಹರಿಸಲು ಯೋಜನೆ ರೂಪುಗೊಳ್ಳುತ್ತಿದೆ’ ಎಂದರು. ಮೇಕೆದಾಟು ಸಮೀಪ ಜಲಾಶಯ ನಿರ್ಮಾಣ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾವೇರಿ ನದಿಗೆ ಮೇಕೆದಾಟು ಸಮೀಪ ಸಮತೇಲನ ಜಲಾಶಯ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟಿಗೆ ಯೋಜನೆಯ ಮಾಹಿತಿ ಸಲ್ಲಿಸಿ ಅನುಮತಿ ಪಡೆಯಲು ರಾಜ್ಯ ಸಂರ್ಕಾರ ಸಕಲ ಸಿದ್ಧತೆ ನಡೆಸಿದೆ’ ಎಂದರು.
  • ಮುಂಗಡ ಪತ್ರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಗದೀಶ್ ಶೆಟ್ಟರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೇ ಸಾಲಿಗೆ ಮಂಡಿಸಿರುವ ಬಜೆಟ್ ಎಲ್ಲಾ ಹಂತಗಳಲ್ಲೂ ವಿಫಲವಾಗಿದೆ. ಕೃಷಿಸಾಲ ಮನ್ನಾ ಮಾಡದೇ ರೈತರಿಗೆ ನಿರಾಸೆ ಮೂಡಿಸಲಾಗಿದೆ. ಸಣ್ಣಪುಟ್ಟ ಯೋಜನೆ ಪ್ರಕಟಿಸಿ ಜನರ ಬಾಯಿಗೆ ತುಪ್ಪ ಸವರಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸಮುದಾಯಗಳ ನಡುವೆ ದ್ವೇಶವನ್ನು ಬಿತ್ತುತ್ತಿದೆ. ಸರ್ಕಾರದ ಒಳಗೆ ಜಿಲೇಬಿ (ಗೌಡರು, ಲಿಂಗಾಯತರು, ಬ್ರಾಹ್ಮಣರು) ಹಾಗೂ ನಾನ್ ಜಿಲೇಬಿ ಎಂಬ ಕೋಡ್ ವರ್ಡ್ ನಲ್ಲಿ ಫೈಲುಗಳನ್ನು ಪ್ರತ್ಯೇಕಿಸಲಾಗುತ್ತದೆ. ಜಿಲೇಬಿ ಫೈಲ್ ಗಳನ್ನು ಪಾಸ್ ಮಾಡುವುದಿಲ್ಲ. ನಾನ್ ಜಿಲೇಬಿ ಫೈಲ್ ಗಳನ್ನು ಶೀಘ್ರವೇ ಪಾಸ್ ಮಾಡುತ್ತಾರೆ. ಆ ಮೂಲಕ ಈ ಸರ್ಕಾರ ತಾರತಮ್ಯ ಮಾಡುತ್ತಿದೆ’ ಎಂದು ಟೀಕಿಸಿದರು.
  • ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1065 ತಜ್ಞರು ಹಾಗೂ 365 ಸಾಮಾನ್ಯ ವೈದ್ಯಾಧಿಕಾರಿಗಳನ್ನು ವಿಶೇಷ ನೇಮಕಾತಿ ಅಡಿ ಭರ್ತಿ ಮಾಡುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಚೈನೀಸ್ ರೆಸ್ಟೊರೆಂಟ್ ಮತ್ತು ಬೀದಿ ಬದಿಯಲ್ಲಿ ಮಾರಾಟ ಮಾಡುವ ಗೋಬಿ ಮಂಚೂರಿ, ಫ್ರೈಡ್ ರೈಸ್ ಆಹಾರ ಪದಾರ್ಥಗಳಿಗೆ ಮೋನೋ ಸೋಡಿಯಂ, ಗುಲ್ಟಾ ಮೇಟ್ ರಾಸಾಯನಿಕ ಪೌಡರ್ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅಂಶವನ್ನು ಸಚಿವರು ಪ್ರಸ್ತಾಪಿಸಿದರು.
  • ರಾಜ್ಯದಲ್ಲಿ ಹೆಚ್ಚುತ್ತಿರುವ ಕೇಬಲ್ ದರ ಮಾಫಿಯಾಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಸಮಗ್ರ ಕಾನೂನು ಜಾರಿ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. ಜೆಡಿಎಸ್ ನ ಪುಟ್ಟಣ್ಣ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಪರಮೇಶ್ವರ್ ಅವರು, ‘ಕೇಬಲ್ ದರ ಮಾಫಿಯಾಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಆದಷ್ಟು ಶೀಘ್ರದಲ್ಲಿ ಸಮಗ್ರ ಕಾನೂನು ಜಾರಿ ಮಾಡಲಾಗುವುದು. ಕೇಂದ್ರ ಸರ್ಕಾರ ನಿಗದಿ ಮಾಡುವ ದರಕ್ಕಿಂತ ಹೆಚ್ಚಿನ ಹಣ ಪಡೆದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಚ್ಚರಿಸಿದರು.

Leave a Reply