ಯಶಸ್ಸಿನ ಅಮಲಿನಲ್ಲಿರುವ ಕಪಿಲ್ ಶರ್ಮಾಗೆ ಸುನೀಲ್ ಗ್ರೋವರ್ ಕಿವಿಮಾತು…

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಹಿಂದಿಯ ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮಾ, ಕುಡಿದ ಅಮಲಿನಲ್ಲಿ ತನ್ನ ಸಹೊದ್ಯೋಗಿ ಸುನೀಲ್ ಗ್ರೊವರ್ ಮೇಲೆ ಹಲ್ಲೆ ನಡೆಸಿದ್ದ ಎಂಬ ಸುದ್ದಿ ನಿಮಗೆ ತಿಳಿದಿದೆ. ಕಪಿಲ್ ಶರ್ಮಾ ಅವರಿಗೆ ಯಶಸ್ಸಿನ ಅಹಂಕಾರ ತಲೆಗೆ ಹತ್ತಿದೆಯೇ ಎಂಬ ಮಾತುಗಳಿಗೂ ಈ ಪ್ರಕರಣ ಅವಕಾಶ ಮಾಡಿಕೊಟ್ಟಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಸುನೀಲ್ ಗ್ರೋವರ್ ತಮ್ಮ ಮೌನ ಮುರಿದಿದ್ದು, ಟ್ವೀಟರ್ ಮೂಲಕ ಕಪಿಲ್ ಶರ್ಮಾಗೆ ಕಿವಿಮಾತು ಹೇಳಿದ್ದಾರೆ.

ನಡೆದಿದ್ದೇನು…?

ಇತ್ತೀಚೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ‘ದ ಕಪಿಲ್ ಶರ್ಮಾ ಶೋ’ ತಂಡ ವಾಪಸ್ ಮರಳುವಾಗ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ ಆಗಮಿಸುವ ವೇಳೆ ಕಪಿಲ್ ಶರ್ಮಾ ಕುಡಿದ ಅಮಲಿನಲ್ಲಿ ತಮ್ಮ ತಂಡದ ಚಂದನ್ (ಪ್ರಭಾಕರ್) ಎಂಬುವವರಿಗೆ ನಿಂದಿಸಲು ಆರಂಭಿಸಿದರು. ನಂತರ ಸುನೀಲ್ ಗ್ರೋವರ್ ಅವರು ಆರಂಭಿಸಿದ್ದ ಮತ್ತೊಂದು ಕಾರ್ಯಕ್ರಮ ಮ್ಯಾಡ್ ಇನ್ ಇಂಡಿಯಾ ಕುರಿತಂತೆ ಕಪಿಲ್ ಲಘುವಾಗಿ ಮಾತನಾಡಲು ಆರಂಭಿಸಿದರು. ಆಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಪಿಲ್ ಶರ್ಮಾರಿಗೆ ಸರಿಯಾಗಿ ವರ್ತಿಸುವಂತೆ ಎಚ್ಚರಿಕೆ ನೀಡಿದ್ದರು. ಆಗ ಕಪಿಲ್ ರನ್ನು ಸಮಾಧಾನಗೊಳಿಸಲು ಸುನೀಲ್ ಮಧ್ಯಪ್ರವೇಶಿಸಿದರು. ಈ ವೇಳೆ ಕಪಿಲ್ ಶರ್ಮಾ ಸುನೀಲ್ ವಿರುದ್ಧ ಬೈಯಲು ಆರಂಭಿಸಿದರು. ಈ ವೇಳೆ ಬೇಸರಗೊಂಡ ಸುನೀಲ್ ಅಲ್ಲಿಂದ ತೆರಳಿ ಬೇರೆಡೆಕೂರಲು ಹೋದರು. ಹಿಂದೆಯೇ ಹೋದ ಕಪಿಲ್, ಸುನೀಲ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳು ಮಾಧ್ಯಮಗಳಿಗೆ ವಿವರಿಸಿದೆ.

ಕಪಿಲ್ ಶರ್ಮಾ ಅವರಿಗೆ ಸಿಕ್ಕಿರುವ ಯಶಸ್ಸು ಅವರ ತಲೆಗೆ ಏರಿದೆಯೇ ಎಂಬ ಚರ್ಚೆಗೆ ಈ ಪ್ರಕರಣ ದಾರಿ ಮಾಡಿಕೊಟ್ಟಿದೆ. ಈ ಪ್ರಕರಣದ ಬಗ್ಗೆ ಈಗಾಗಲೇ ಕಪಿಲ್ ಶರ್ಮಾ ಅವರು ‘ಇದು ನಮ್ಮ ಕುಟುಂಬದ ವಿಷಯವಿದ್ದಂತೆ ಇದನ್ನು ನಾವೇ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಬಂದಿರುವ ಸಾವಿರಾರು ಪ್ರತಿಕ್ರಿಯೆಗಳಲ್ಲಿ ಬಹುತೇಕರು ಸುನೀಲ್ ಗ್ರೋವರ್ ಪರ ನಿಂತಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಕಾರ್ಯಕ್ರಮದ ಯಶಸ್ಸಿನಲ್ಲಿ ಸುನೀಲ್ ಗ್ರೋವರ್ ಪಾತ್ರ ಮಹತ್ವದ್ದಾಗಿದೆ ಎಂದು ಕಪಿಲ್ ಶರ್ಮಾರಿಗೆ ಬಿಸಿ ಮುಟ್ಟಿಸಿದ್ದಾರೆ.

ಕಪಿಲ್ ಗೆ ಸುನೀಲ್ ಗ್ರೋವರ್ ಕಿವಿಮಾತು…

ಇದರ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ಗ್ರೋವರ್ ಮಂಗಳವಾರ ಬೆಳಗ್ಗೆ ನೀಡಿರುವ ಪ್ರತಿಕ್ರಿಯೆ ಬಹಳ ಆಪ್ತವಾಗಿದೆ. ಇವರು ನೀಡಿರುವ ಕಿವಿಮಾತು ಕೇವಲ ಕಪಿಲ್ ಶರ್ಮಾ ಅವರಿಗೆ ಮಾತ್ರವಲ್ಲ ಯಶಸ್ಸಿನ ಅಮಲಿನಲ್ಲಿ ಮೆರೆಯುವ ಅನೇಕರಿಗೆ ಅನ್ವಯವಾಗುವ ಸಂದೇಶವಾಗಿದೆ.

ಟ್ವಿಟರ್ ನಲ್ಲಿ ‘ಒಬ್ಬ ಪ್ರೀತಿಯ ಸ್ನೇಹಿತನಿಂದ’ ಎಂಬ ಸಂದೇಶದೊಂದಿಗೆ ಕಪಿಲ್ ಶರ್ಮಾ ಅವರಿಗೆ ಸುನೀಲ್ ಗ್ರೋವರ್ ಹೇಳಿರುವ ಕಿವಿಮಾತು ಹೀಗಿದೆ…

‘ಭಾ ಜೀ! ನೀವು ನನಗೆ ತುಂಬಾ ನೋವು ಮಾಡಿದ್ದೀರಿ. ನಿಮ್ಮೊಂದಿಗೆ ಕೆಲಸ ಮಾಡುವುದು ನನಗೆ ಕಲಿಕೆಯ ಅನುಭವವಾಗಿದೆ. ಈ ಸಂದರ್ಭದಲ್ಲಿ ನಿಮಗೆ ಒಂದು ಸಲಹೆ ನೀಡಲು ಬಯಸುತ್ತೇನೆ. ಕೇವಲ ಪ್ರಾಣಿಗಳನ್ನಷ್ಟೇ ಅಲ್ಲ, ಮನುಷ್ಯರನ್ನು ಗೌರವಿಸಲು ಆರಂಭಿಸಿ. ಎಲ್ಲರೂ ನಿಮ್ಮಂತೆ ಯಶಸ್ವಿಯಾಗಲು ಸಾಧ್ಯವಿಲ್ಲ. ಎಲ್ಲರೂ ನಿಮ್ಮಷ್ಟೇ ಪ್ರತಿಭಾವಂತರೂ ಅಲ್ಲ. ಒಂದು ವೇಳೆ ಎಲ್ಲರೂ ನಿಮ್ಮಂತೆಯೇ ಪ್ರತಿಭಾವಂತರಾಗಿ ಬಿಟ್ಟರೆ ನಿಮಗೆ ಇಷ್ಟು ಗೌರವ ಹೇಗೆ ಸಿಗುತ್ತದೆ. ಹೀಗಾಗಿ ಇತರರ ಬಗೆಗೂ ಸ್ವಲ್ಪ ಗೌರವವನ್ನು ತೋರಿ. ಯಾರಾದರೂ ನಿಮ್ಮ ತಪ್ಪನ್ನು ಸರಿ ಮಾಡಲು ಬಂದರೆ ಅವರನ್ನು ನಿಂದಿಸಬೇಡಿ. ಒಂದು ಮಹಿಳೆಯ ಮುಂದೆ ಅಸಭ್ಯ ಪದಗಳಿಂದ ಮಾತನಾಡುವುದು ಸರಿಯಲ್ಲ. ನಿಮ್ಮ ತಾರಾ ಪಟ್ಟ ಆಕೆಗೆ ಲೆಕ್ಕಕ್ಕೆ ಇಲ್ಲ. ಇದೇ ವೇಳೆ ಇದು ಕೇವಲ ನಿಮ್ಮ ಕಾರ್ಯಕ್ರಮ, ಈ ಕಾರ್ಯಕ್ರಮದ ಮೇಲೆ ನಿಮಗೆ ಮಾತ್ರ ಅಧಿಕಾರವಿದೆ. ನೀವು ಯಾರನ್ನು ಯಾವಾಗಬೇಕಾದರೂ ಕಿತ್ತೊಗೆಯಬಹುದು ಎಂಬುದನ್ನು ನನಗೆ ಅರ್ಥ ಮಾಡಿಸಿದಕ್ಕೆ ಧನ್ಯವಾದಗಳು. ಈ ಕ್ಷೇತ್ರದಲ್ಲಿ ನೀವು ಅಸಮಾನ್ಯರಾಗಿರಬಹುದು. ಆದರೆ ನೀವು ದೇವರಂತೆ ವರ್ತಿಸುವುದು ಸರಿಯಲ್ಲ. ನಿಮ್ಮ ಬಗ್ಗೆ ಕಾಳಜಿ ಇರಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಹಾಗೂ ಕೀರ್ತಿ ನಿಮ್ಮದಾಗಲಿ…’

Leave a Reply