‘ನಿಮಗೆ ಯಾವ ಸಮಯದಲ್ಲಿ ಬೇಕಾದರು ಕರೆಮಾಡಿಯೇನು’- ಕಲಾಪಕ್ಕೆ ಗೈರಾಗುತ್ತಿರುವ ಬಿಜೆಪಿ ಸಂದಸರಿಗೆ ಪ್ರಧಾನಿ ಮೋದಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ಮೋದಿ ಸಂಸದರ ವಿರುದ್ಧ ಗರಂ ಆಗಿದ್ದಾರೆ… ಯಾಕೆ ಗೊತ್ತಾ? ಕಾರಣ ಏನಂದ್ರೆ, ಕೇಂದ್ರ ಬಜೆಟ್ ಅಧಿವೇಶನದ ವೇಳೆಯಲ್ಲಿ ಬಿಜೆಪಿಯ ಬಹುತೇಕ ಸಂಸದರು ಹಾಗೂ ಸಚಿವರುಗಳು ಗೈರಾಗಿರುವುದು.

ಹೌದು, ಸೋಮವಾರದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳಲ್ಲಿ ಪ್ರತಿಪಕ್ಷಗಳ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದ ಸಚಿವರುಗಳು ಹಾಜರಿರದ ಕಾರಣ ಆ ಪ್ರಶ್ನೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕೆಲವು ವಿಚಾರವಾಗಿ ಪ್ರಶ್ನೆ ಎತ್ತಿದ್ದ ಸಂಸದರೇ ಚರ್ಚೆ ಮಾಡುವ ಸಂದರ್ಭದಲ್ಲಿ ಉಪಸ್ಥಿತರಿರಲಿಲ್ಲ. ಪ್ರಶ್ನೋತ್ತರ ಅವಧಿಯ ಅಂತ್ಯದಲ್ಲಿ ನಿರ್ಮಲಾ ಸೀತರಾಮನ್, ಸಂಜೀವ್ ಬಲ್ಯಾಣ್ ನಂತಹ ಕೆಲವು ಸಹಾಯಕ ಸಚಿವರು ಹಾಜರಿದ್ದರೂ ಅವರು ಸಂಪುಟ ದರ್ಜೆಯ ಸಚಿವರಾಗಿರಲಿಲ್ಲ.

ತಮ್ಮ ಪಕ್ಷದ ನಾಯಕರ ಈ ನಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಂದು ನವದೆಹಲಿಯಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಸಂಸದರು ಮತ್ತು ನಾಯಕರಿಗೆ ವಾರ್ನಿಂಗ್ ಸಹ ಕೊಟ್ಟಿದ್ದಾರೆ.

ಇಂದು ನಡೆದ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ‘ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಿಜೆಪಿ ಸದಸ್ಯರ ಹಾಜರಾತಿ ಕಡಿಮೆಯಾಗುತ್ತಿದೆ. ಪರಿಣಾಮ ಪ್ರತಿಪಕ್ಷಗಳ ಪ್ರಶ್ನೆಗಳ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ’ ಎಂದು ಈ ಅಂಶವನ್ನು ಎಲ್ಲರ ಮುಂದಿಟ್ಟರು. ಆಗ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ‘ಕಲಾಪಕ್ಕೆ ಹಾಜರಾಗಬೇಕಿರುವುದು ನಿಮ್ಮ ಜವಾಬ್ದಾರಿ. ಜನವರಿ 31ರಿಂದ ಆರಂಭವಾಗಿರುವ ಬಜೆಟ್ ಅಧಿವೇಶನ ಏಪ್ರಿಲ್ 12ರಂದು ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೂ ಪಕ್ಷದ ಸಂಸದರು ತಮ್ಮ ಹಾಜರಾತಿಯ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ನಾನು ಈ ವಿಚಾರವಾಗಿ ನಿಮಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಕರೆ ಮಾಡಬಹುದು’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಬಿಜೆಪಿಯ ಸಚಿವರುಗಳ ಗೈರಿನ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಅಲ್ಲದೆ ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಅವರಿಗೆ ಈ ಕುರಿತಾಗಿ ದೂರನ್ನು ಕೊಡಲಾಗಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಅಜಾದ್, ‘ಇದು ಪರಿಣಾಮಕಾರಿ ಆಡಳಿತದ ಲಕ್ಷಣವಲ್ಲ. ಅತಿಹೆಚ್ಚು ಸಚಿವರು ಹಾಗೂ ಕಡಿಮೆ ಗುಣಮಟ್ಟದ ಆಡಳಿತಕ್ಕೆ ಸಾಕ್ಷಿ ಇದು’ ಎಂದು ಹರಿಹಾಯ್ದಿದ್ದಾರೆ.

ಸರ್ಕಾರದ ವಿರುದ್ಧ ದಾಳಿ ಮಾಡಲು ವಿನಾ ಕಾರಣ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಮೋದಿ ಸಿಟ್ಟಾಗಿದ್ದು, ಇದೇ ಮೊದಲ ಬಾರಿಗೆ ತಮ್ಮ ಸಂಸದರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Leave a Reply