ರಾಮಜನ್ಮಭೂಮಿ ವಿವಾದ ಸಂಧಾನದ ಮೂಲಕ ಪರಿಹಾರವಾಗಲಿ- ಸುಪ್ರೀಂ ಅಭಿಮತ

ಡಿಜಿಟಲ್ ಕನ್ನಡ ಟೀಮ್:

ರಾಮ ಮಂದಿರದ ವಿಷಯ ಸೂಕ್ಷ್ಮ ಹಾಗೂ ಭಾವನಾತ್ಮಕವಾದದ್ದು. ಸಂಬಂಧಪಟ್ಟ ಪಂಗಡಗಳೇ ಇದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದು ಒಳ್ಳೆಯದು.

ಇದು ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ಸಲಹೆ. ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಿರುವ ಅಡ್ಡಿ ನಿವಾರಿಸಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೆಹರ್ ಅವರ ನೇತೃತ್ವದ ನ್ಯಾಯಪೀಠ ಹೇಳಿದ್ದಿಷ್ಟು- ‘ಇದು ಧರ್ಮ ಹಾಗೂ ಭಾವನಾತ್ಮಕತೆಯ ವಿಷಯ. ಇದಕ್ಕೆ ಸಂಬಂಧಿಸಿದ ಎಲ್ಲ ಕಕ್ಷಿದಾರರು ಒಟ್ಟಿಗೆ ಕುಳಿತು ವಿವಾದ ಪರಿಹರಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರಕ್ಕೆ ಬನ್ನಿ,’ ಈ ಸಮಾಲೋಚನೆಗೆ ಮುಖ್ಯ ಸಂಧಾನಕಾರರೊಬ್ಬರನ್ನು ನ್ಯಾಯಾಲಯ ಕಳುಹಿಸಬಲ್ಲದು. ಯಾವುದಕ್ಕೂ ಇಂಥ ಪ್ರಯತ್ನವಾಗಲಿ. ಒಮ್ಮತದಲ್ಲಿ ಬಗೆಹರಿಯುವುದಕ್ಕೆ ಸಾಧ್ಯವಾಗದೇ ಇದ್ದಾಗ ಕಾನೂನು ಮಾರ್ಗವಿದೆ. ಈ ನಿಟ್ಟಿನಲ್ಲಿ ಎಲ್ಲ ಕಕ್ಷಿದಾರರ ಜತೆ ಸಮಾಲೋಚಿಸಿ ಮಾರ್ಚ್ 31ಕ್ಕೆ ಈ ಬಗ್ಗೆ ವಿವರ ನೀಡಿ ಎಂದು ಸುಬ್ರಮಣಿಯನ್ ಸ್ವಾಮಿ ಅವರನ್ನು ಸುಪ್ರೀಂಕೋರ್ಟ್ ಕೇಳಿದೆ.

2010ರಲ್ಲಿ ರಾಮಜನ್ಮಭೂಮಿ/ಬಾಬರಿ ಮಸೀದಿ ವಿವಾದದ ಬಗ್ಗೆ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್, ಆ ಜಾಗವನ್ನು ಮೂವರ ನಡುವೆ ಹಂಚಿತ್ತು. ಈಗ ರಾಮನ ಮೂರ್ತಿ ಪ್ರತಿಷ್ಠಾಪಿತವಾಗಿರುವ ಜಾಗವು ‘ರಾಮ ಲಲ್ಲಾ’ನದ್ದೇ. ಉಳಿದಂತೆ ಆ ಪ್ರದೇಶವು ನಿರ್ಮೋಹಿ ಅಖಾರ ಹಾಗೂ ಸುನ್ನಿ ವಕ್ಫ್ ಬೋರ್ಡ್ ನಡುವೆ ಹಂಚಿಕೆಯಾಗುವಂತೆ ಹೈಕೋರ್ಟ್ ನಿರ್ದೇಶಿಸಿತ್ತು.

ಇದು ಸುಪ್ರೀಂಕೋರ್ಟಿನಲ್ಲಿ ದೈನಂದಿನ ಆಲಿಕೆಗೆ ಒಳಪಟ್ಟು ಮಂದಿರ ನಿರ್ಮಾಣಕ್ಕಿರುವ ಅಡೆತಡೆಗಳು ಬೇಗ ನಿವಾರಣೆ ಆಗಬೇಕು ಎಂದು ಸುಬ್ರಮಣಿಯನ್ ಸ್ವಾಮಿಯವರ ದಾವೆಯ ತಿರುಳಾಗಿದೆ.

Leave a Reply