ಬದಲಾದ ನಿವೃತ್ತಿ ವ್ಯಾಖ್ಯೆ: ನಲವತ್ತು ಹೊಸ ಅರವತ್ತು!

authors-rangaswamyಜಗತ್ತು ಹಿಂದಿಗಿಂತ ಇಂದು ಹೆಚ್ಚು ಸಂಕೀರ್ಣ. ಕಾರಣವಿಷ್ಟೇ ಹಿಂದೆ ಹತ್ತು ವರ್ಷದಲ್ಲಿ ಆಗುತಿದ್ದ ಬದಲಾವಣೆ ಇಂದು ವರ್ಷದಲ್ಲಿ ಆಗುತ್ತಿದೆ. ಇವುಗಳ ನೇರ ಪ್ರಭಾವ ಮನುಷ್ಯನ ಮೇಲೆ ಆಗುವುದು ಕೂಡ ಸಹಜ ತಾನೆ? ಹಿಂದೆ 60 ವಯೋಮಾನವನ್ನು ನಿವೃತ್ತಿ ವಯಸ್ಸು ಎಂದು ನಿಗದಿಪಡಿಸಲಾಗಿತ್ತು. ಗ್ರೀಸ್ ನಂತ ದೇಶದಲ್ಲಿ ನಿವೃತ್ತಿ ವಯಸ್ಸು 55 ಇತ್ತು. ಜಾಗತಿಕ ಹಣಕಾಸು ಬಿಕ್ಕಟ್ಟು ಯೂರೋಪಿನಂತ ದೇಶದಲ್ಲಿ ನಿವೃತ್ತಿ ವಯಸ್ಸು 65 ರಿಂದ 67ರ ವರೆಗೆ ಏರಿಕೆ ಕಾಣುವಂತೆ ಮಾಡಿದೆ. ಭಾರತದಂತ ದೇಶದಲ್ಲಿ 60 ನಿವೃತ್ತಿ ವಯಸ್ಸು ಸರಿ ಆದರೆ ಅಲ್ಲಿಯವರೆಗೆ ನಿಮ್ಮ ‘ಕೆಲಸ’ ಇರುತ್ತದೆಯೇ? ಎನ್ನುವುದು ಬಹು ದೊಡ್ಡ ಪ್ರಶ್ನೆ. ಭಾರದವೊಂದೇ ಅಲ್ಲ ವಿಶ್ವದಾದಂತ್ಯ ಅನಿಶ್ಚಿತತೆ ಕೆಲಸ ಮತ್ತು ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ವಸ್ತು ಸ್ಥಿತಿ ಹೀಗಿರುವಾಗ ಜಗತ್ತಿನ ಒಂದು ವರ್ಗ ನಲವತಕ್ಕೊ ಅಥವಾ ಐವತ್ತಕ್ಕೋ ಸ್ವಯಂ ನಿವೃತ್ತಿ ಪಡೆಯಲು ಬಯಸುತ್ತಿದೆ.ಇನ್ನೊಂದು ವರ್ಗ ವಿಧಿಯಿಲ್ಲದೇ ನಲವತ್ತು ಅಥವಾ ಐವತ್ತಕ್ಕೆ ಕೆಲಸಕ್ಕೆ ಬೈ ಹೇಳಬೇಕಿದೆ. ಆಟೋಮೈಸೇಶನ್ ಜೊತೆಗೆ ನಾವು ನಲವತ್ತು ಅಥವಾ ಐವತ್ತು ತಲುಪುವ ವೇಳೆಗೆ ಹೊಸದಾಗಿ ಕೆಲಸಕ್ಕೆ ಸಿದ್ದಗೊಂಡ ಯುವ ಪೀಳಿಗೆಯ ಪಡೆ ಕಾಯುತ್ತಿರುತ್ತದೆ.

ನಿವೃತ್ತಿ ಎಂದ ತಕ್ಷಣ ಬದುಕಿನಿಂದ ನಿವೃತ್ತಿ ಅಂತಲ್ಲ. ಹೊಟ್ಟೆಗಾಗಿ ದುಡಿಯುವ ವಾಡಿಕೆಯಿಂದ (ರೂಟೀನ್ ) ನಿವೃತ್ತಿ ಎಂದರ್ಥ. ಉಳಿದಂತೆ ತನಗಿಷ್ಟ ಬಂದ ಕಾಯಕದಲ್ಲಿ ವ್ಯಕ್ತಿ ತೊಡಗಿಕೊಳ್ಳಬಹುದು. ಹೀಗಾಗಿ ನಮ್ಮ ವಲಯದಲ್ಲಿ (ವೈಯಕ್ತಿಕ ಹಣಕಾಸು ಯೋಜಕ- ಪರ್ಸನಲ್ ಫೈನಾನ್ಸ್ ಪ್ಲಾನ್ನರ್ಸ್) ನಲವತ್ತು ಅಂದರೆ ಹೊಸ ಅರವತ್ತು ಎನ್ನುವ ಹೊಸ ವ್ಯಾಖ್ಯೆಯಿದೆ. ಅಂದರೆ ಅರವತ್ತರ ಬದಲು ನಲವತ್ತಕ್ಕೆ ಬದುಕಲು ದುಡಿಯುವುದರಿಂದ ಮುಕ್ತಿ ಪಡೆಯುವುದು. ಹೀಗೆ ನಲವತ್ತಕ್ಕೆ ಅಥವಾ ಐವತ್ತಕ್ಕೆ ನಿವೃತ್ತಿ ಪಡೆಯಲು ಏನು ಮಾಡಬೇಕು? ಎಷ್ಟು ಉಳಿಸಬೇಕು? ಹೇಗೆ ಹೂಡಿಕೆ ಮಾಡಬೇಕು? ನೀವೀಗಾಗಲೇ ನಲವತ್ತೋ ಅಥವಾ ಐವತ್ತರ ವಯೋಮಾನದವರಾದರೆ ಮತ್ತು ನೀವು ನಿವೃತ್ತಿ ಪಡೆಯಲು ಯೋಚಿಸುತ್ತಿದ್ದರೆ ನೀವು ನಿವೃತ್ತಿ ಪಡೆಯುವಷ್ಟು ಉಳಿಸಿದ್ದೀರಾ? ನೀವು ಉಳಿಸಿರುವುದು ಮುಂದಿನ ನಿಮ್ಮ ಜೀವನಕ್ಕೆ ಸಾಕೆ? ಇನ್ನು ಮುಂತಾದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ನೋಡೋಣ ಬನ್ನಿ.

ಎಲ್ಲದಕ್ಕೂ ಮೊದಲು ಇಲ್ಲಿ ಒಂದು ವಿಷಯ ನೇರವಾಗಿ ಹೇಳಿಬಿಡುತ್ತೇನೆ. ಬದುಕಲು ತಿಂಗಳಿಗೆ ಎಷ್ಟು ಹಣ ಬೇಕು? ಎನ್ನುವುದು ಪ್ರತಿ ವ್ಯಕ್ತಿ ಮತ್ತು ಕುಟುಂಬವನ್ನು ಅವಲಂಬಿಸುತ್ತದೆ. ಬೆಂಗಳೂರಿನಂತ ನಗರದಲ್ಲಿ ತಿಂಗಳಿಗೆ ಹತ್ತು ಸಾವಿರ ರೂಪಾಯಿಯಲ್ಲಿ ಬದುಕುವ ಕುಟುಂಬಗಳು ಎಷ್ಟೋ ಇವೆ ಹಾಗೆಯೇ ಅದೇ ಹತ್ತು ಸಾವಿರವನ್ನು ಒಪ್ಪತ್ತಿನ ಊಟಕ್ಕೆ ವ್ಯಯಿಸುವ ಕುಟುಂಬಗಳೂ ಬೇಕಾದಷ್ಟಿವೆ. ಇದು ವಿಶ್ವದ ಎಲ್ಲಾ ನಗರಗಳಿಗೂ ಅನ್ವಯ. ಹಾಗಾಗಿ ನಾನು ನಾಲ್ಕು ಜನ ಇರುವ ಒಂದು ಕುಟುಂಬಕ್ಕೆ ಬದುಕಲು ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಬೇಕು ಎಂದು ಊಹಿಸಿಕೊಂಡಿದ್ದೇನೆ. ಓದುಗರು ಅವರವರ ಖರ್ಚಿಗೆ ತಕ್ಕಂತೆ ಲೆಕ್ಕ ಮಾಡಿಕೊಳ್ಳಬಹುದು.

hana class

ವಯೋಮಾನ 24 ರಿಂದ 40 ಏನು ಮಾಡಬೇಕು?

24 ರಿಂದ 30 ಮುಕ್ಕಾಲು ಪಾಲು ಜನ ಇನ್ನು ತಮ್ಮ ಬ್ಯಾಚುಲರ್ ಜೀವನದಲ್ಲಿ ಇರುತ್ತಾರೆ. ಈ ಸಮಯದಲ್ಲಿ ಹೆಚ್ಚು ಮೋಜು ಮಾಡದೆ ಶಿಸ್ತುಬದ್ದ ಜೀವನ ನೆಡೆಸಿದ್ದೆ ಆದರೆ ತಮ್ಮ ಗಳಿಕೆಯ ಐವತ್ತಕ್ಕೂ ಹೆಚ್ಚು ಭಾಗ ಉಳಿಸಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಕಾಂಟ್ರಿಬ್ಯುಶನ್ ಟು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್. ನ್ಯಾಷನಲ್ ಪೆನ್ಷನ್ ಫಂಡ್ ಅಲ್ಲದೆ ಒಂದಷ್ಟು ಅಳೆದು ತೂಗಿ ಈಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡಿದರೆ ನಲವತ್ತಕ್ಕೋ ಅಥವಾ ಐವತ್ತಕ್ಕೋ ನಿವೃತ್ತಿ ಪಡೆಯುವುದು ಕಷ್ಟವೇನಲ್ಲ. 30 ರ ನಂತರ ಮದುವೆ ನಂತರ ಮಕ್ಕಳು ಹೀಗೆ ಖರ್ಚು ಹೆಚ್ಚಾಗುತ್ತದೆ. ಮನೆಯಲ್ಲಿ ಇಬ್ಬರೂ ದುಡಿಯುತ್ತಿದ್ದರೆ ಇಬ್ಬರ ವೇತನದಲ್ಲಿ ಕನಿಷ್ಟ ತಲಾ 20 ರಿಂದ 30 ಭಾಗ ಉಳಿಸುವ ಮತ್ತು ಹೂಡಿಕೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹೀಗೆ ಮಾಡಿದ್ದೆ ಆಗಿದ್ದಲ್ಲಿ ಇಬ್ಬರಲ್ಲಿ ಒಬ್ಬರು ನಲವತ್ತಕ್ಕೂ ಇನ್ನೊಬ್ಬರು ಐವತ್ತಕ್ಕೂ ನಿವೃತ್ತಿ ಹೊಂದಬಹುದು. ಮತ್ತೆ ಇಬ್ಬರಲ್ಲಿ ಯಾರು ಮೊದಲು ನಿವೃತ್ತಿ ಪಡೆಯಬೇಕು ಎನ್ನವುದು ಅವರ ನಡುವೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಬದಲಾದ ಸನ್ನಿವೇಶದಲ್ಲಿ ಗಂಡು ಹೆಣ್ಣು ಎನ್ನುವುದು ದೈಹಿಕ ವ್ಯತ್ಯಾಸವಾಗಿ ಉಳಿದಿದೆಯಷ್ಟೆ.

ನೀವೀಗಾಗಲೇ ನಲವತ್ತೋ ಅಥವಾ ಐವತ್ತರ ವಯೋಮಾನದವರಾದರೆ ಮತ್ತು ನೀವು ನಿವೃತ್ತಿ ಪಡೆಯಲು ಯೋಚಿಸುತ್ತಿದ್ದರೆ ನೀವು ನಿವೃತ್ತಿ ಪಡೆಯುವಷ್ಟು ಉಳಿಸಿದ್ದೀರಾ? ನೀವು ಉಳಿಸಿರುವುದು ಮುಂದಿನ ನಿಮ್ಮ ಜೀವನಕ್ಕೆ ಸಾಕೆ? ಎನ್ನುವುದನ್ನು ನಿಖರವಾಗಿ ಹೇಳಲು ಈ ಕೆಳಗಿನ ಸೂತ್ರ ಬಳಸಿ. ಭಾಗಲಬ್ಧ 1000 ಕ್ಕಿಂತ ಹೆಚ್ಚಾಗಿದ್ದರೆ ನೀವು ನಿವೃತ್ತಿ ಹೊಂದಲು ಅರ್ಹರು! ನಿಮ್ಮ ಮನಸ್ಸು ಬಯಸುವ ಕೆಲಸದಲ್ಲಿ ತೊಡಗಿಕೊಳ್ಳಿ. ಬನ್ನಿ ಸೂತ್ರ ನೋಡೋಣ…

ನಿಮ್ಮ ಒಟ್ಟು ಹಣಕಾಸು ಮೌಲ್ಯವನ್ನು ನಿಮ್ಮ ವಯಸ್ಸಿನಿಂದ ಗುಣಿಸಿ ಬರುವ ಮೊತ್ತವನ್ನ ನಿಮ್ಮ ವಾರ್ಷಿಕ ಖರ್ಚಿನಿಂದ ಭಾಗಿಸಿ ಭಾಗಲಬ್ಧ 1000 ಕ್ಕಿಂತ ಹೆಚ್ಚಾಗಿದ್ದರೆ ನೀವು ಸರಿಯಾದ ಹಾದಿಯಲ್ಲಿ ನಡೆದಿದ್ದೀರಿ ಎಂದರ್ಥ. ಗಂಡ ಹೆಂಡತಿ ಇಬ್ಬರೂ ನಿವೃತ್ತಿಯಲ್ಲೂ ಪಾಲುದಾರರು ಎಂದಾದರೆ ಇಬ್ಬರ ವಯಸ್ಸಿನ ಆವರೇಜ್ ತೆಗೆದುಕೊಳ್ಳಬೇಕು.  ಇದನ್ನು ಒಂದು ಉದಾಹರಣೆ ಮೂಲಕ ನೋಡೋಣ…

ರಾಮನ ವಯಸ್ಸು 42. ಆತನ ಹೆಂಡತಿ ಸೀತೆಯ ವಯಸ್ಸು 37. ಇವರಿಬ್ಬರ ಒಟ್ಟು ಆಸ್ತಿ ಮೊತ್ತ ಐದು ಕೋಟಿ. ತಿಂಗಳಿಗೆ ಐವತ್ತು ಸಾವಿರದಂತೆ ಅವರಿಗೆ ವಾರ್ಷಿಕ 6 ಲಕ್ಷ ಖರ್ಚಿಗೆ ಬೇಕು. ಇವರಿಬ್ಬರು ನಿವೃತ್ತಿ ಹೊಂದಲು ಅರ್ಹರೇ ನೋಡೋಣ ಬನ್ನಿ.

ವಯೋಮಾನ 42+37= 79 ಇದನ್ನು ಎರಡರಿಂದ ಭಾಗಿಸಿ. ಭಾಗಲಬ್ಧ 39.5

ಒಟ್ಟು ಆಸ್ತಿ ಮೊತ್ತ ಐದು ಕೋಟಿ ಇದನ್ನು 39.5 ರಿಂದ ಗುಣಿಸಿ ಬಂದ ಮೊತ್ತವನ್ನು ವಾರ್ಷಿಕ ಖರ್ಚು ಆರು ಲಕ್ಷದಿಂದ ಭಾಗಿಸಿ ಭಾಗಲಬ್ಧ 3291. ಅಂದರೆ 1000 ಕ್ಕಿಂತ ಬಹುಪಾಲು ಹೆಚ್ಚು. ಹೀಗಾಗಿ ರಾಮ ಮತ್ತು ಸೀತೆ ನಿವೃತ್ತಿ ಹೊಂದಬಹುದು. ನೆನಪಿಡಿ ಇಂದು ಐವತ್ತು ಸಾವಿರ ಇನ್ನು ಹತ್ತು ವರ್ಷದ ನಂತರ ಲಕ್ಷ ಬೇಕಾಗಬಹದು. ಭಾಗಲಬ್ಧ 1000 ಎನ್ನುವುದು ಕೇವಲ ಒಂದು ಸೂಚ್ಯಾಂಕವಷ್ಟೇ. ಅಲ್ಲದೆ ನೀವು ನಿಮ್ಮ ಮಕ್ಕಳಿಗೆ ಏನಾದರು ಆಸ್ತಿ ಬಿಟ್ಟು ಹೋಗಬೇಕೆ? ಅಥವಾ ಬೇಡೆವೇ? ಎನ್ನುವುದನ್ನು ಕೂಡ ಪರಿಗಣೆನೆಗೆ ತೆಗೆದುಕೊಳ್ಳಬೇಕು. ನನ್ನ ಪ್ರಕಾರ ಸಾವಿರ ಅತ್ಯಂತ ನಿರ್ಭಿಡೆಯಿಂದ ಜೀವಿಸುವ ಪಾಶ್ಚಾತ್ಯ ದೇಶದ ಜನರಿಗೆ ಹೊಂದುತ್ತದೆ. ಭಾರತೀಯ ಸ್ಥಿತಿಗತಿಯಲ್ಲಿ ಭಾಗಲಬ್ಧ 3000 ಕ್ಕಿಂತ ಹೆಚ್ಚಿದ್ದರೆ ನೀವು ನಿವೃತ್ತಿಯಾಗಿ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಲು ಅಡ್ಡಿಯಿಲ್ಲ.

ಉಳಿದವರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಶಿಸ್ತಿನಿಂದ ಉಳಿಕೆ -ಹೂಡಿಕೆ ಮಾಡುತ್ತಾ ಹೋಗಿ. ಡೌಟ್ಸ್ ಇದ್ದರೆ ಡಿಜಿಟಲ್ ಕನ್ನಡ ಹಣಕಾಸು ಅಂಕಣಕ್ಕೆ ಮಿಚಂಚೆ ಕಳಿಸಿ.

(ಹಣಕ್ಲಾಸು ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತದೆ. ಹಣಕಾಸು ಜಗತ್ತಿನಲ್ಲಿ ಇದೇಕೆ ಹೀಗೆ ಎಂಬ ಕೌತುಕದ ಯಾವುದೇ ಪ್ರಶ್ನೆಗಳನ್ನು ಓದುಗರೂ ಕೇಳಬಹುದು. ಅದೇಕೆ ಒಂದು ರುಪಾಯಿಗೆ ಒಂದು ಡಾಲರ್ ಸಮವಲ್ಲ? ಸರ್ಕಾರಗಳಿಗೆ ಹಣದ ಕೊರತೆಯಾದರೆ ಹೆಚ್ಚು ನೋಟುಗಳನ್ನು ಮುದ್ರಿಸಿದರಾಗದೇ? .. ಈ ಮಾದರಿಯ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಕೇಳುವುದಕ್ಕೆ ಮುಜುಗರವೂ ಆಗಿದ್ದಿರಬಹುದು. ಅಂಥ ಎಲ್ಲ ಸಂದೇಹಗಳನ್ನೂ ನೀವು ಲೇಖಕ ರಂಗಸ್ವಾಮಿಯವರಿಗೆ ನೇರವಾಗಿ ಕೇಳಿಬಿಡಿ.. ಮಿಂಚಂಚೆ- muraram@yahoo.com)

Leave a Reply