ಯೋಗಿ ನಿಂದನೆಗೈದ ಪ್ರಭಾ ವಿರುದ್ಧ ಎಫ್ಐಆರ್, ನಾಳೆ ಬಿಜೆಪಿಗೆ ಕೃಷ್ಣ ಪದಗ್ರಹಣ, ವಿಧಾನಸಭೆಯಲ್ಲಿ ಸದ್ದು ಮಾಡಿತು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ, ಬಿಜೆಪಿ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ಸಮರ್ಥಿಸಿಕೊಂಡ್ರು ಸಿದ್ದರಾಮಯ್ಯ

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮಂಗಳವಾರವೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮುಂದುವರಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು…

ಡಿಜಿಟಲ್ ಕನ್ನಡ ಟೀಮ್:

ಪ್ರಭಾ ವಿರುದ್ಧ ಪ್ರಕರಣ

ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಿಳೆಯೊಂದಿಗೆ ಅಕ್ರಮ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಅರ್ಥ ಬರುವಂತೆ ನಕಲು ಮಾಡಿರುವ ಚಿತ್ರವನ್ನು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪ್ರಭಾ ಬೆಲವಂಗಲ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಭಾ ಅವರು ನಕಲಿ ಹಾಗೂ ತಿರುಚಲಾಗಿರುವ ಫೋಟೊಗಳನ್ನು ಬಳಸಿಕೊಂಡು ಒಂದು ರಾಜ್ಯದ ಮುಖ್ಯಮಂತ್ರಿ ಅವರ ವಿರುದ್ಧ ಅಪಪ್ರಚಾರ ಮಾಡಿ ಅವರ ಘನತೆಗೆ ಧಕ್ಕೆ ಬರುವಂತೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಪ್ರಭಾ ಬೆಲವಂಗಲ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು ಪ್ರಭಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ನಾಳೆ ಕೃಷ್ಣ ಬಿಜೆಪಿ ಸೇರ್ಪಡೆ ಕಾರ್ಯಕ್ರಮ

ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಹೆಜ್ಜೆ ಹಾಕಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಾಳೆ ನವದೆಹಲಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬುಧವಾರ ಸಂಜೆ 5 ಗಂಟೆಗೆ ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಕೃಷ್ಣ ಅವರು ಬಿಜೆಪಿ ಸೇರಲಿದ್ದಾರೆ. ದೆಹಲಿಯಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಕೃಷ್ಣ ಅವರು ವಾಪಸ್ಸಾದಾಗ ಅವರನ್ನು ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿವರೆಗೂ ಬೃಹತ್ ಬೈಕ್ ಸಮಾವೇಶದ ಮೂಲಕ ಕರೆತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೃಷ್ಣ ಅವರು ತಮ್ಮ ಸಹೋದರಿ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ದಿನಾಂಕವನ್ನು ಏಪ್ರಿಲ್ 3ಕ್ಕೆ ಮುಂದೂಡಿದ್ದರು. ಆದರೆ ರಾಜ್ಯದ ಎರಡು ಕ್ಷೇತ್ರಗಳಲ್ಲಿನ ಉಪಚುನಾವಣೆಯಲ್ಲಿ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಯೋಜನೆ ಹೊಂದಿರುವ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಪಕ್ಷ ಸೇರ್ಪಡೆ ದಿನಾಂಕವನ್ನು ನಾಳೆಗೆ ನಿಗದಿಪಡಿಸಿದ್ದಾರೆ. ನವದೆಹಲಿಯಲ್ಲಿನ ಕಾರ್ಯಕ್ರಮಕ್ಕೆ ಬಿ.ಎಸ್ ಯಡಿಯೂರಪ್ಪನವರು ತೆರಳುತ್ತಿಲ್ಲ. ಹೀಗಾಗಿ ಇದರ ಜವಾಬ್ದಾರಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರಿಗೆ ವಹಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ: ವಿಧಾನಸಭೆಯಲ್ಲಿ ವಾಗ್ವಾದ

ಕಳೆದ ಕೆಲವು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆ ಇಂದು ವಿಧಾನ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಸಂಬಂಧ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಮುಂದಿಟ್ಟ ನಿಲುವಳಿ ಸೂಚನೆಗೆ ಉತ್ತರ ನೀಡುವ ಸಂರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

‘ಕೇಂದ್ರ ಸರ್ಕಾರದ ನೀತಿಯಿಂದಾಗಿ ಮಹಿಳೆಯರು, ಮಕ್ಕಳು, ದೇವದಾಸಿಯರು, ದುರ್ಬಲರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾತೆತ್ತಿದರೆ ರೈತರು, ಮಹಿಳೆಯರು ಎಂದು ಭಾಷಣ ಮಾಡುವ ನೀವು ಈ ವರ್ಗಕ್ಕೆ ಅನ್ಯಾಯ ಮಾಡಿದ್ದೀರಿ. ಇವರ ಬಗ್ಗೆ ಸಾರ್ವಜನಿಕವಾಗಿ ಚೀರಾಡುವುದನ್ನು ಹೊರತುಪಡಿಸಿದರೆ ಬೇರೇನೂ ಮಾಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ₹ 3 ಸಾವಿರ ಸಹಾಯ ಧನ ನೀಡಿ ಎಂದು ಹೇಳುತ್ತೀರಿ. 1975ರಲ್ಲಿ ಇಂದಿರಾಗಾಂಧಿ ಅವರ ಕಾಲದಲ್ಲಿ ಆರಂಭವಾದ ಯೋಜನೆ ಇದು. ಇದು ಕೇಂದ್ರ ಸರ್ಕಾರದ್ದೇ ಯೋಜನೆ. ಹೀಗಾಗಿ ಈ ಯೋಜನೆಯಲ್ಲಿ ಶೇ.90ರಷ್ಟು ಹಣವನ್ನು ಕೇಂದ್ರ ಸರ್ಕಾರ ಶೇ.10 ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ನಿಗದಿಯಾಗಿತ್ತು. ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇದರ ಪ್ರಮಾಣವನ್ನು ಶೇ.90 ರಿಂದ ಶೇ.60 ಕ್ಕೆ ಇಳಿಸಿತು. ನಾವು ಅಧಿಕಾರಕ್ಕೆ ಬಂದ ಮೇಲೆ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ವರ್ಷ ₹ 500 ಹಾಗೂ ಸಹಾಯಕಿಯರಿಗೆ ₹ 250 ನೀಡುತ್ತಾ ಬಂದಿದ್ದೇವೆ. ಇನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇವರಿಗೆ ಒಂದು ಪೈಸೆ ಸಹಾಯಧನವನ್ನು ಹೆಚಿಸಲಿಲ್ಲ. ಬಿಜೆಪಿಯವರು ಕೇವಲ ಬುರುಡೆ ಬಿಡುತ್ತಾ ಮಹಿಳೆಯರು, ಮಕ್ಕಳು, ದೇವದಾಸಿಯರು ಹಾಗೂ ರೈತರ ಬಗ್ಗೆ ಭಾಷಣ ಹೊಡೆಯುತ್ತಾರೆ’ ಎಂದರು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಧರಣಿಗೆ ಮುಂದಾದರು. ಪರಿಣಾಮ ಸಭಾಧ್ಯಕ್ಷರಾದ ಕೆ.ಬಿ ಕೋಳಿವಾಡ ಅವರು ಕಲಾಪವನ್ನು 90 ನಿಮಿಷಗಳ ಕಾಲ ಮುಂದೂಡಿದರು.

ಇನ್ನು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸಂಘದ ಮುಖಂಡರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ಈ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳು ಸಾಧ್ಯವಾಗಲಿಲ್ಲ. ಮುಂದಿನ ತಿಂಗಳು 19ರಂದು ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.

ವಿಧಾನಸಭೆಯಲ್ಲಿನ ಇತರೆ ಪ್ರಮುಖ ಅಂಶಗಳು…

  • ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಿ.ಟಿ ರವಿ, ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ‘ಕಾನೂನು ಸುವ್ಯವಸ್ಥೆ ಹಾಳು ಮಾಡುವ ಸಂದರ್ಭದಲ್ಲಿ ಪೊಲೀಸರು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದರು. ಆಗ ಬಿಜೆಪಿ ನಾಯಕರು ಪ್ರತಿಭಟಿಸಿ ಸಭಾತ್ಯಾಗ ಮಾಡಿದರು.
  • ರಾಜ್ಯದಲ್ಲಿ ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವನ್ನು ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಿಂದ ತರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಇದಕ್ಕಾಗಿ ವಿಶೇಷ ರೈಲ್ವೇ ಬೋಗಿ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ತಿಳಿಸಿದ್ದಾರೆ.
  • ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗವನ್ನು ಏಪ್ರಿಲ್ ನಲ್ಲಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಪ್ರಕಟಿಸಿದರು. ಎನ್.ಎಚ್.ಕೋನರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸುತ್ತಾ ‘2017-18ರ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷಕರಿಸಲು 7ನೇ ವೇತನ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯ ಇರುವುದು ಗಮನಕ್ಕೆ ಬಂದಿದೆ’ ಎಂದರು.

Leave a Reply