ಏ.1ರಿಂದ ನಗದು ವ್ಯವಹಾರಗಳ ಮಿತಿ ₹2 ಲಕ್ಷಕ್ಕೆ ಇಳಿಕೆ, ತೆರಿಗೆ ಪಾವತಿ ವೇಳೆ ಆಧಾರ್ ಕಡ್ಡಾಯ! ಹಣಕಾಸು ಮಸೂದೆಯ ಪ್ರಾಸ್ತಾವಿತ ತಿದ್ದುಪಡಿಗಳಿವು…

ಡಿಜಿಟಲ್ ಕನ್ನಡ ಟೀಮ್:

ಪ್ರತಿಪಕ್ಷಗಳ ವಿರೋಧದ ನಡುವೆಯೂ ಕಳೆದ ತಿಂಗಳು ಲೋಕಸಭೆಯಲ್ಲಿ ಜಾರಿಯಾದ ಹಣಕಾಸು ಮಸೂದೆ 2017 ರ ಕಾಯ್ದೆಗೆ ಕೇಂದ್ರ ಸರ್ಕಾರ ಈಗ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಮಸೂದೆ ಜಾರಿಯಾಗಿ ಕೇವಲ 7 ವಾರಗಳ ಕಳೆದಿದ್ದು, ಅದಾಗಲೇ ಸರ್ಕಾರ ಬರೋಬ್ಬರಿ 40 ತಿದ್ದುಪಡಿ ಮಾಡಲು ಪ್ರಸ್ತಾವನೆ ನೀಡಿದೆ. ಕಪ್ಪುಹಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನನ್ನು ಮತ್ತಷ್ಟು ಬಿಗಿಯಾಗಿಸಲು ಈ ತಿದ್ದುಪಡಿ ತರಲಾಗುತ್ತಿದೆ ಎಂಬುದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಸಮರ್ಥನೆ.

ಈ ಮಸೂದೆಯಲ್ಲಿ ಮಾಡಲಾಗುತ್ತಿರುವ ಹೊಸ ತಿದ್ದುಪಡಿಗಳ ಪೈಕಿ 2 ಅಂಶಗಳು ಗಮನ ಸೆಳೆದಿವೆ. ಅವುಗಳೆಂದರೆ, ಫೆಬ್ರವರಿ 1ರಂದು ₹ 3 ಲಕ್ಷ ಮಿತಿಗೆ ನಿಗದಿಪಡಿಸಿದ್ದ ನಗದು ವ್ಯವಹಾರವನ್ನು ಏಪ್ರಿಲ್ 1 ರಿಂದ ₹ 2 ಲಕ್ಷಕ್ಕೆ ಇಳಿಸುವುದು, ತೆರಿಗೆ ಪಾವತಿ ಮಾಡುವಾಗ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಸೇರಿಸಬೇಕು.

ಕಳೆದ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಈ ಮಸೂದೆ ಮಂಡನೆ ವೇಳೆ ಆರ್ ಎಸ್ಪಿ, ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆಯಾದರೂ ರಾಜ್ಯಸಭೆಯಲ್ಲಿ ಬಿಜೆಪಿ ಬಹುಮತ ಪಡೆಯದಿರುವ ಹಿನ್ನೆಲೆಯಲ್ಲಿ ಈ ಮಸೂದೆಗೆ ಅನುಮೋದನೆ ದೊರೆತಿಲ್ಲ.

ಈಗ ತಿದ್ದುಪಡಿಗಳ ಕುರಿತಾಗಿಯೂ ವಿರೋಧ ಪಕ್ಷಗಳು ಅಪಸ್ವರ ನುಡಿದಿದ್ದು, ಈ ತಿದ್ದುಪಡಿಗಳಿಂದ ರೈಲ್ವೇ ಸೇವೆ, ಹೆದ್ದಾರಿ ಹಾಗೂ ಸಿನಿಮಾ ತಯಾರಕರಿಗೆ ಈ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಹಿಂಬಾಗಿಲಿನ ಸೌಕರ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಆರೋಪಿಸಿವೆ.

ಈ ತಿದ್ದುಪಡಿಯಲ್ಲಿ ಪ್ರಮುಖವಾಗಿ ಗಮನಸೆಳೆದಿರುವ ಅಂಶ ಎಂದರೆ ₹ 2 ಲಕ್ಷ ನಗದು ವ್ಯವಹಾರ ಮಿತಿ ಇಳಿಸಿರುವುದು. ಇದರ ಜತೆಗೆ ‌₹ 2 ಲಕ್ಷದವರೆಗಿನ ನಗದು ವ್ಯವಹಾರದ ವೇಳೆ ಪ್ಯಾನ್ ಸಂಖ್ಯೆಯನ್ನು ಸಹ ಒದಗಿಸಬೇಕೆಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ, ‘ಈ ನಗದು ವ್ಯವಹಾರ ಮಿತಿಯ ನಿಯಮ ಉಲ್ಲಂಘನೆ ಮಾಡಿದರೆ, ಆ ವ್ಯಕ್ತಿ ಎಷ್ಟು ನಗದಿನ ವ್ಯವಹಾರ ನಡೆಸಿರುತ್ತಾನೋ ಅಷ್ಟು ಪ್ರಮಾಣದ ದಂಡ ವಿಧಿಸಲಾಗುವುದು’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು 2013ರ ಕಂಪನಿಗಳ ಕಾಯ್ದೆಯ ತಿದ್ದುಪಡಿಗೂ ಸರ್ಕಾರ ಮುಂದಾಗಿದ್ದು, ಚುನಾವಣೆ ಸಂದರ್ಭದಲ್ಲಿ ಕಂಪನಿಗಳು ನೀಡುವ ದೇಣಿಗೆ ಚೆಕ್, ಬ್ಯಾಂಕ್ ಡ್ರಾಫ್ಟ್ ಅಥವಾ ಡಿಜಿಟಲ್ ವರ್ಗಾವಣೆಯಲ್ಲೇ ನೀಡಬೇಕು. ಈ ನಿರ್ಧಾರದಿಂದ ಜೇಟ್ಲಿ ಅವರು ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕೆಂದುಕೊಂಡಿರುವ ಚುನಾವಣಾ ಬಾಂಡ್ ವ್ಯವಸ್ಥೆಗೆ ಸಂಪರ್ಕಿಸಲು ಅನುಕೂಲವಾಗಲಿದೆ. ಈ ಚುನಾವಣಾ ಬಾಂಡ್ ಎಂದರೆ, ಚುನಾವಣೆ ಸಂದರ್ಭಗಳಲ್ಲಿ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಾಗ ಆ ಕಂಪನಿಗಳು ಚೆಕ್ ಮೂಲಕ ಈ ಬಾಂಡ್ ಗಳನ್ನು ಖರೀದಿಸಿ ನಂತರ ಆ ಬಾಂಡ್ ಗಳನ್ನು ಚುನಾವಣೆಗಾಗಿ ನೀಡಲಾಗುವುದು. ಇದರಿಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಖಾತೆಗೆ ಜಮೆಯಾಗುವ ಹಣ ಪಾರದರ್ಶಕವಾಗಿರಲಿದೆ. ‘ರಾಜಕೀಯ ಹಣವನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ’ ಎಂಬುದು ಜೇಟ್ಲಿ ಅವರ ವಾದ.

Leave a Reply